ಶರಣರಾದ ಈ. ಕೃಷ್ಣಪ್ಪನವರು ಮಾಜಿ ನಗರ ಸಭಾ ಸದಸ್ಯರಾಗಿದ್ದು, ಸಮಾಜ ಸೇವೆಯಲ್ಲಿ ಯುವ ಪ್ರಶಸ್ತಿ ವಿಜೇತರು, ಬಸವಭೂಷಣ ಪ್ರಶಸ್ತಿ ವಿಜೇತರು. ಬಸವ ಭಕ್ತರು ಆದ ಇವರು ಬಸವಧರ್ಮದ ಪ್ರಚಾರಕ್ಕಾಗಿ, ಹಲವಾರು ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ದೃಶ್ಯಮಾಧ್ಯಮಗಳ ಮೂಲಕ ಬಸವ ಧರ್ಮ ಪ್ರಚಾರ ಮಾಡದಿದ್ದರೆ ಬಸವ ಧರ್ಮ ಬೆಳವಣಿಗೆ ಕುಂಠಿತವಾಗುತ್ತದೆಂದು ಮನಗಂಡು ಟಿ.ವಿ. ಮಾಧ್ಯಮದ ಮೂಲಕ ಧರ್ಮ ಪ್ರಚಾರ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಹಲವಾರು ದೃಶ್ಯ ಮಾಧ್ಯಮಗಳನ್ನು ಗಮನಿಸಿದಾಗ ಯಾವ ಟಿ.ವಿ.ಯವರೂ ಬಸವ ಧರ್ಮದ ತತ್ವಗಳನ್ನು ಪ್ರಚಾರ ಮಾಡುತ್ತಿಲ್ಲ ಎಂಬುವುದನ್ನು ಮನಗಂಡಿದ್ದಾರೆ. ಟಿವಿ ನಡೆಸಲು ಕೋಟ್ಯಾಂತರ ರೂಗಳು ಬೇಕೆಂದು ತಿಳಿದಿದ್ದರೂ ಮತ್ತು ಪ್ರತಿ ತಿಂಗಳು ಟಿವಿ ನಡೆಸಲು ಲಕ್ಷಗಟ್ಟಲೆ ಹಣ ಅವಶ್ಯಕತೆ ಎಂದು ತಿಳಿದಿದ್ದರು ಧೈರ್ಯಗೆಡದೆ ದೃಢ ಮನಸ್ಸಿನಿಂದ ಬಸವಾದಿ ಶರಣರನ್ನು ನಂಬಿ ಅವರ ಮೇಲೆ ಭಾರ ಹಾಕಿ ಮತ್ತು ಬಸವ ಭಕ್ತರು ಈ ಟಿವಿ ಚಾನಲ್‍ನ್ನು ಕೈಹಿಡಿದು ನಡೆಸುತ್ತಾರೆಂಬ ದೃಢ ನಂಬಿಕೆಯಿಂದ ಶರಣರಾದ ಕೃಷ್ಣಪ್ಪನವರು ಮತ್ತು ಇವರ ಧರ್ಮಪತ್ನಿ ಶರಣೆ ಯಶೋದಮ್ಮನವರು ಶ್ರೀ ಬಸವ ಟಿ.ವಿ.ಯನ್ನು ಪ್ರಾರಂಭಿಸಿರುತ್ತಾರೆ.ನಂತರ ಇವರ ಧೀಕ್ಷಾ ಗುರುಗಳಾದ ಇಳಕಲ್ ಚಿತ್ತರಗಿ ವಿಜಯ ಮಹಾಂತೇಶ ಮಠದ ಪೂಜ್ಯ ಮಹಾಂತ ಸ್ವಾಮಿಗಳು ಮತ್ತು ಬಾಲ್ಕಿ ಹೀರೆಮಠದ ಪೂಜ್ಯ ಬಸವಲಿಂಗ ಪಟ್ಟದೇವರು ಹಾಗೂ ಬೀದರಿನ ಬಸವಮಹಾಮನೆ ಮಠದ ಪೂಜ್ಯ ಸಿದ್ಧರಾಮ ಶರಣರು ಬೆಲ್ದಾಳರವರು ಈ ಮೂವರು ಸ್ವಾಮಿಜಿಗಳು ಕೃಪೆಮಾಡಿ ಶ್ರೀ ಬಸವ ಟಿ.ವಿ. ವಾಹಿನಿಗೆ ಬೆಂಬಲವಾಗಿ ನಿಂತು ಬಸವ ಧರ್ಮ ಪ್ರಚಾರ ಪ್ರತಿಷ್ಠಾನಕ್ಕೆ ನಿರ್ದೇಶಕರಾಗಿರುತ್ತಾರೆ. ಶ್ರೀ ಬಸವ ಟಿ.ವಿ.ಯು ಬಸವ ಭಕ್ತರ, ಬಸವಾಭಿಮಾನಿಗಳ, ಬಸವ ತತ್ತ್ವನಿಷ್ಠರ ಸ್ವತ್ತಾಗಿದ್ದು ಶ್ರೀ ಬಸವ ಟಿ.ವಿ.ಯಲ್ಲಿ ಎಲ್ಲರಿಗೂ ಸಮಪಾಲು ಮತ್ತು ಸಹಭಾಗಿತ್ವ ಇರುತ್ತದೆ. ಶ್ರೀ ಬಸವ ಟಿ.ವಿ. ಇದು ಸಮಾಜದ ಸ್ವತ್ತು, ಬಸವಧರ್ಮಿಯರ ಸ್ವತ್ತು, ಇದು ಬೃಹದಾಕಾರವಾಗಿ ಬೆಳೆಯಬೇಕು. ರಾಜ್ಯ, ರಾಷ್ಟ್ರ, ವಿದೇಶಗಳಲ್ಲಿ ಬಸವ ಧರ್ಮ ಪ್ರಸಾರವಾಗಬೇಕು. ಶರಣ ಸಂಸ್ಕೃತಿ , ಸಂಸ್ಕಾರಗಳು ಮಾನವನ ನೈತಿಕ ಮೌಲ್ಯಗಳನ್ನು ಹೆಚ್ಚಿಸಬೇಕು. ಏಕದೇವೋಪಾಸನೆ, ಲಿಂಗಾಚಾರ, ಶಿವಾಚಾರ, ಜೀವನ ಶೈಲಿಯಾಗಬೇಕು.ಪೂಜೆ ಮತ್ತು ಶಿವಯೋಗದಲ್ಲಿ ಏಕರೂಪತೆ ಸಾಧಿಸಿ, ಆಚಾರ, ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಂಡು ಶರಣ ಸಮಾಜವನ್ನು ಲಿಂಗತತ್ತ್ವದ ಮೇಲೆ ಬಲಿಷ್ಠವಾಗಿ ಕಟ್ಟಬೇಕು. ವಿಶ್ವಭ್ರಾತೃತ್ವ, ವಿಶ್ವಪ್ರೇಮ, ಸಾಮಾಜಿಕ ಸಾಮರಸ್ಯ, ಮೈಗೂಡಬೇಕು. ಗುರುಲಿಂಗ ಜಂಗಮ ಸಾಕ್ಷಿಯಾಗಿ ಶುದ್ಧಕಾಯಕ ಮಾಡಿ ಶರಣರು ಬದುಕಬೇಕು. ಇಂತಹ ವಾತಾವರಣ ಜಗತ್ತಿನಲ್ಲಿ ನಿರ್ಮಾಣವಾಗಬೇಕಾದರೆ, ಬಸವಾದಿ ಶರಣರ ತತ್ತ್ವ ವಿಚಾರಗಳನ್ನು ಮಾನವರ ಹೃದಯದಲ್ಲಿ ಪ್ರತಿಷ್ಠಾಪಿಸಬೇಕು. ಅರಿವು, ಆಚಾರ, ಅನುಭಾವ, ತತ್ತ್ವದ ಮೇಲೆ ಪ್ರತಿಯೊಬ್ಬರನ್ನು ಪ್ರಯೋಗಕ್ಕೊಳಪಡಿಸಬೇಕು. ಈ ಎಲ್ಲಾ ಪ್ರಯತ್ನಗಳು ಬಸವ ಟಿ.ವಿ. ವಾಹಿನಿಯಲ್ಲಿ ಖಂಡಿತ ಸಾದ್ಯವಾಗುತ್ತದೆಂಬ ದೃಢ ಸಂಕಲ್ಪ ಶರಣರಾದ ಈ. ಕೃಷ್ಣಪ್ಪನವರದ್ದಾಗಿದೆ.

"ಬಸವ ತತ್ವ ಪ್ರಚಾರ ಪ್ರತಿಷ್ಠಾನಕ್ಕೆ ಸದಸ್ಯರಾಗಿ ಶ್ರೀ ಬಸವ ಟಿ.ವಿ.ಯನ್ನು ಬೆಂಬಲಿಸಿ ಧರ್ಮ ಪ್ರಚಾರಕ್ಕೆ ಕೈ ಜೋಡಿಸಿ".

ಬ್ರಹ್ಮಾಂಡವು ಪರಮಾತ್ಮನ ಮಹಾಮನೆ. ಎಲ್ಲವೂ ಅವನ ಇಚ್ಚೆಯಂತೆ ವ್ಯವಸ್ಥಿತವಾಗಿ ರೂಪುಗೊಂಡಿದೆ. ಪರಮಾತ್ಮನು ಸರ್ವಸಮಷ್ಟಿಯ ಒಡೆಯನಾಗಿದ್ದಾನೆ. ಮಾನವ ಮತ್ತು ಸಕಲ ಜೀವರಾಶಿಗಳಿಗಾಗಿ ಸುಂದರವಾದ ಜಗತ್ತನ್ನು ರಚಿಸಿದ್ದಾನೆ. ಸೂರ್ಯ ಚಂದ್ರರೆಂಬ ಬೆಳಕನ್ನು ಆಕಾಶದಲ್ಲಿಟು, ಸೂರ್ಯನ ಸುತ್ತ ಭೂಮಿ ಮತ್ತು ಗ್ರಹಗಳು ಸುತ್ತುವಂತೆ ಮಾಡಿ, ಹಗಲು ರಾತ್ರಿಯನ್ನು ಉಂಟುಮಾಡುವುದರ ಜೊತೆಗೆ ಋತುಮಾನಗಳನ್ನು ಸೃಷ್ಟಿಸುತ್ತಾನೆ. ಗುರುತ್ವಾಕರ್ಷಣ ಶಕ್ತಿಯಿಂದ ಭೂಮಿಯ ಮೇಲಿರುವ ಚರಾಚರ ವಸ್ತುಗಳನ್ನು ಭೂಮಿ ಹಿಡಿದಿಟ್ಟುಕೊಳ್ಳುವಂತೆ ಮಾಡಿದ್ದಾನೆ. ಮಾನವನಿಗೆ ಬೇಕಾಗುವ ಸಕಲ ವಸ್ತುಗಳನ್ನು ಪೂರೈಸಲು ಎಲ್ಲಾ ವ್ಯವಸ್ಥೆ ಮಾಡಿದ್ದಾನೆ. ಅವನ ಎಲ್ಲಾ ದಾನವನ್ನು ಉಂಡು ಅವನನ್ನೇ ಮರೆಯುತ್ತಿರುವ ಮರುಳು ಮಾನವರನ್ನು ಎಚ್ಚರಿಸಲು ಯುಗಯುಗದಿಂದ ಧರ್ಮಬೋಧಕರು, ಪ್ರವಾದಿಗಳು, ಸಂದೇಶವಾಹಕರು ಭೂಲೋಕದಲ್ಲಿ ದೇವರ ಇಚ್ಛೆಯಂತೆ ಜನ್ಮತಾಳುತ್ತಾರೆ. ಜ್ಯೋತಿ ಮುಟ್ಟಿ ಜ್ಯೋತಿಯಾಗುವಂತೆ ಅಜ್ಞಾನದ ಕತ್ತಲನ್ನು ಕಳೆದು ಸುಜ್ಞಾನವನ್ನು ಜಗತ್ತಿಗೆ ನೀಡುತ್ತ ಬಂದಿದ್ದಾರೆ. ಪರಮಾತ್ಮನು ನಿರಾಕಾರ, ನಿರ್ಗುಣ, ಪರವಸ್ತು, ಪರಬ್ರಹ್ಮ, ಜ್ಯೋತಿರೂಪ, ಬ್ರಹ್ಮಾಂಡವ್ಯಾಪಿ ಸಚ್ಚಿದಾನಂದ ನಿತ್ಯ ಪರಿಪೂರ್ಣನಾಗಿದ್ದಾನೆ. ಅವನು ಸೃಷ್ಟಿಕರ್ತ, ಲೋಕಪಾಲಕ, ವಿಶ್ವಚೈತನ್ಯ, ಅನಾದಿ, ಅನಂತ, ಸತ್ಯ, ನಿತ್ಯ ನಿರಂತರನಾಗಿದ್ದಾನೆ. ಇಷ್ಟಲಿಂಗರೂಪಿಯಾದ ಏಕೈಕ ಪರಮಾತ್ಮನು ಪರಮ ದಯಾಮಯನಾಗಿದ್ದು, ಶರಣು ಬಂದವರ ಪಾಪಗಳನ್ನು ಕಳೆದು ಅಪ್ಪಿಕೊಳ್ಳುವ ಕ್ಷಮಾನಿಧಿಯಾಗಿದ್ದಾನೆ.

ವಿಶ್ವಗುರು ಜಗಜ್ಯೋತಿ ಬಸವಣ್ಣನವರು 12ನೇ ಶತಮಾನದಲ್ಲಿ ಜನ್ಮತಾಳಿ ಮಾನವಕುಲಕ್ಕೆ ನೈತಿಕ ಮೌಲ್ಯಗಳನ್ನು ಬೋಧಿಸಿ, ಸಕಲಜೀವಾತ್ಮರಿಗೆ ಲೇಸನ್ನೇ ಬಯಸುವ ಸಮಾಜ ನಿರ್ಮಾಣ ಮಾಡಿದರು.

ಎಂದು ಹೇಳಿ ಮಾನವಕುಲವನ್ನು ತಬ್ಬಿಕೊಂಡರು. ಭೂಮಿಯೊಂದೆ ಸಕಲ ಜೀವಿಗೆ, ದೇವನೊಬ್ಬನೆ ಜಗದ ಜನಕೆ ಎಲ್ಲರೂ ಅವನ ಮಕ್ಕಳು ಎಂದು ಸಾರಿದರು. ಇಡೀ ವಿಶ್ವವನ್ನು ಒಂದು ಮಾಡಿದ ಮಹಾನ್ ಮಾನವತಾವಾದಿ ಬಸವಣ್ಣನವರು ಸಮಾಜದಲ್ಲಿನ ಮೇಲು-ಕೀಳು, ವರ್ಗ-ವರ್ಣ ಭೇದವನ್ನು ತೆಗೆದು, ಮಡಿವಂತಿಕೆ ಮತ್ತು ಮೂಢನಂಬಿಕೆಗಳ ಕಟ್ಟುಪಾಡುಗಳನ್ನು ಬೇರು ಸಮೇತ ಕಿತ್ತು ಹಾಕಿ ಮಾನವ ಘನತೆಯನ್ನು ಹೆಚ್ಚಿಸಿದ್ದಾರೆ. ಅಂತರ್ಜಾತಿ ವಿವಾಹಗಳನ್ನು ಮಾಡುವಂತಹ ಕ್ರಾಂತಿಕಾರಿ ಬದಲಾವಣೆಗಳಿಗೆ ನಾಂದಿ ಹಾಡಿದ್ದಾರೆ.

ರೇವಣಸಿದ್ದೇಶ್ವರರು, ಮಹಾವೀರ, ಭಗವಾನ್‍ಬುದ್ಧ, ಮುಹಮ್ಮದ್ ಪೈಗಂಬರ್, ಏಸುಕ್ರಿಸ್ತ, ಸಿದ್ಧರು, ಮಹರ್ಷಿಗಳು, ಯೋಗಿಗಳು, ದಾಸಶ್ರೇಷ್ಠರು, ಆಚಾರ್ಯರು, ಆರಾಧ್ಯರು ಮತ್ತು ದಾರ್ಶನಿಕರು ಕೂಡ ಬೇರೆ ಬೇರೆ ಕಾಲಘಟ್ಟದಲ್ಲಿ ಜನ್ಮವೆತ್ತಿ ಮಾನವಕುಲದ ಒಳಿತಿಗಾಗಿ ತಮ್ಮದೇ ಆದ ರೀತಿಯಲ್ಲಿ ಧರ್ಮಕ್ರಾಂತಿ ಮಾಡಿ ಸಮಾಜದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣೆಗಳನ್ನು ತಂದಿದ್ದಾರೆ.

ಬಸವಣ್ಣನವರು ವಿಶೇಷವಾಗಿ ದಲಿತ, ಹಿಂದುಳಿದ ಮತ್ತು ಮಹಿಳಾ ಸಮುದಾಯಕ್ಕೆ ಧಾರ್ಮಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯವನ್ನು ಕೊಟ್ಟು ಮಾನವಹಕ್ಕುಗಳನ್ನು ಎತ್ತಿ ಹಿಡಿದಿದ್ದಾರೆ. ಸಮಾಜದ ಕಟ್ಟ ಕಡೆಯ ಕುಲ-ವೃತ್ತಿ ಕಾಯಕಗಳ ಶರಣರನ್ನು ಗೌರವಿಸಿ, ಕಾಯಕ ಶ್ರೇಷ್ಠತೆಯನ್ನು ಕೈಲಾಸಕ್ಕೆ ಹೋಲಿಸಿದ್ದಾರೆ. ದಲಿತ ಮತ್ತು ಹಿಂದುಳಿದ ಸಮಾಜದಿಂದ ಬಂದಂತಹ ಬಸವಣ್ಣನವರ ಸಮಕಾಲೀನ ವಚನಕಾರರು ಲೋಕದ ಲೋಪದೋಷಗಳನ್ನು ಸರಿಪಡಿಸುವಂತ ಜ್ಞಾನದ ವಚನರತ್ನಗಳನ್ನು ಅಚ್ಚಗನ್ನಡದಲ್ಲಿ ರಚಿಸಿದ್ದಾರೆ. ವಚನಗಳು ಬದುಕಿನ ದಿನನಿತ್ಯದ ನೀತಿಪಾಠಗಳಾಗಿದ್ದು, ಮುಕ್ತಿ ಸಾಧನೆಯ ಮಾರ್ಗಗಳಾಗಿವೆ.

ಬಸವಣ್ಣನವರು ಹೇಳುವ ಹಾಗೆ ಮಾನವನ ಅಂತರಂಗ ಶುದ್ಧಿ ಮತ್ತು ಬಹಿರಂಗ ಶುದ್ಧಿ ಆದಾಗ ಮಾತ್ರ ಮಾನವನ ಸರ್ವಾಂಗೀಣ ಅಭಿವೃದ್ಧಿಯಾಗಿ ಮೌಲ್ಯಾಧಾರಿತ ಸಮಾಜ ನಿರ್ಮಾಣವಾಗುತ್ತದೆ. ಗುಣ, ನೀತಿ, ದೇವರ ಪ್ರೀತಿ ಮತ್ತು ಧರ್ಮದ ಸಂಸ್ಕಾರಗಳು ಸಮಾಜದ ಬೇರುಗಳಾಗಬೇಕು.

21ನೇ ಶತಮಾನದ ಈ ಕಾಲಘಟ್ಟದಲ್ಲಿ ವಿಪರೀತ ಸ್ವೇಚ್ಛಾಚಾರದ ಫಲವಾಗಿ ಸಮಾಜವು ದಿಕ್ಕೆಟ್ಟಿದ್ದು, ಕೆಲ ದಾರಿತಪ್ಪಿದ ಪ್ರಜೆಗಳು ದುಶ್ಚಟ-ದುರಾಚಾರ, ಕೊಲೆ-ಸುಲಿಗೆ, ಮೋಸ-ಧಗಾ-ವಂಚನೆ, ಭ್ರಷ್ಟಾಚಾರ ಮತ್ತು ಅತ್ಯಾಚಾರ ಮಾಡುತ್ತ ಸದಾಚಾರಗಳನ್ನು ಮರೆಯುತ್ತಿದ್ದಾರೆ. ಸ್ವೇಚ್ಛಾಚಾರವೇ ಉನ್ನತ ಮಟ್ಟದ ಸಂಸ್ಕøತಿಯಾಗಿ ಪರಿವರ್ತನೆಯಾಗುತ್ತಿದೆ. ಭ್ರಷ್ಟಾಚಾರ, ಲಂಚಾವತಾರಗಳು ಉದಾಸೀನ ಮಾಡುವ ಲೋಕ ಸುದ್ದಿಗಳಾಗಿವೆ.

ಆಧುನಿಕ ಜಗತ್ತಿನ ವಿಶ್ವಕ್ರಾಂತಿ ಎನಿಸಿರುವ ದೃಶ್ಯ ಮಾಧ್ಯಮಗಳು ವಿಸ್ಮಯಕಾರಿ ಜಾಲಗಳಾಗಿವೆ. ದೃಶ್ಯ ಮಾಧ್ಯಮದಲ್ಲಿ ಅನೇಕ ಟಿ.ವಿ. ಸಂಸ್ಥೆಗಳು ಕೆಲಸ ಮಾಡುತ್ತಿದ್ದು, ಸುದ್ದಿ ಮತ್ತು ಮನರಂಜನೆ ಮಾತ್ರ ಜನರಿಗೆ ಸಿಗುತ್ತಿವೆ.

ಇಂತಹ ಸನ್ನಿವೇಶದಲ್ಲಿ ಸಮಾಜವನ್ನು ತಿದ್ದುವ, ಶುದ್ಧೀಕರಣ ಮಾಡುವ, ಮಾನವೀಯ ಮೌಲ್ಯಗಳನ್ನು ಪುನರ್ ಸ್ಥಾಪಿಸುವ, ಜನರಲ್ಲಿ ನೈತಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ತುಂಬುವ, ಸ್ವೇಚ್ಛಾಚಾರಕ್ಕೆ ಕಡಿವಾಣ ಹಾಕುವ, ದೇವರ ಮತ್ತು ಧರ್ಮದ ಬಗ್ಗೆ ಆಸಕ್ತಿ ಹುಟ್ಟಿಸುವ, ಸನ್ನಡತೆಯ ಪ್ರಭಾವ ಬೀರುವ, ಧಾರ್ಮಿಕ ಸಂಸ್ಕಾರ ಕೊಡುವ ಟಿ.ವಿ. ವಾಹಿನಿಯ ಅಗತ್ಯವಿದ್ದು, ಈ ಎಲ್ಲಾ ಜವಾಬ್ದಾರಿಗಳನ್ನು ಹೊತ್ತು "ಶ್ರೀ ಬಸವ ಟಿ.ವಿ." ಅಸ್ತಿತ್ವಕ್ಕೆ ಬಂದಿದೆ.

ಪ್ರತಿದಿನದ ಕಾರ್ಯಕ್ರಮಗಳಲ್ಲಿ ಬಸವ ಧರ್ಮ ಪ್ರಧಾನವಾದ ದೈಹಿಕ ಆರೋಗ್ಯ, ವಚನ ಗಾಯನ, ಶಿವಯೋಗ, ಲಿಂಗಪೂಜೆ, ದೇವರ ಸ್ವರೂಪ ಇಷ್ಟಲಿಂಗವಿಜ್ಞಾನ, ಸಂಗೀತ, ನೃತ್ಯ, ಅಷ್ಟಾವರಣ, ಷಟ್‍ಸ್ಥಲ, ಪಂಚಾಚಾರ, ವಚನ-ಪ್ರವಚನ, ವಚನ ಸ್ಪರ್ಧೆ, ಪ್ರಚಲಿತ ವಿಧ್ಯಮಾನಗಳ ಸುದ್ದಿ ಮುಂತಾದ ಕಾರ್ಯಕ್ರಮಗಳನ್ನು ಬಿತ್ತರಿಸಲಾಗುವುದು. ಸಮಾಜದಲ್ಲಿ ಧರ್ಮ ಮತ್ತು ಸಂಸ್ಕಾರದ ಜಾಗೃತಿ ಮಾಡುವ ಕಾರ್ಯಕ್ರಮಗಳಿಗೆ ಕರ್ನಾಟಕದ ಜನತೆ ಮತ್ತು ಮಠ- ಮಂದಿರಗಳು, ಸಂಘಸಂಸ್ಥೆಗಳು, ಅಧಿಕಾರವರ್ಗ, ಜನ ಪ್ರತಿನಿಧಿಗಳು, ರೈತಾಪಿವರ್ಗ, ಯುವಜನತೆ, ವಿದ್ವಾಂಸರು, ಸಾಹಿತಿಗಳು, ಕಾರ್ಮಿಕವರ್ಗದವರು, ಉದ್ಯಮಿಗಳು ಮತ್ತು ವ್ಯಾಪಾರಸ್ಥರು ಭಾಗಿಗಳಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ತಯಾರಿಸಲು ಪ್ರಯೋಜಕರಾಗಿ ಮತ್ತು ಜಾಹೀರಾತುದಾರರಾಗಿ ನಿಂತು, ಸಹಕಾರ ನೀಡಬೇಕು ಮತ್ತು ಶ್ರೀಬಸವ ಟಿ.ವಿ.ಗೆ ಪ್ರತಿಯೊಬ್ಬರು ಸದಸ್ಯರಾಗಬೇಕೆಂದು ಶ್ರೀ ಬಸವ ಟಿ.ವಿ ಬಳಗವು ವಿನಂತಿಸಿಕೊಳ್ಳುತ್ತದೆ.

E. Krishnappa(MD)