ಶ್ರೀ ಬಸವ ಟಿವಿ ಉದ್ದೇಶಗಳು ಮತ್ತು ಬಸವ ಧರ್ಮ ಆಜ್ಞೆಗಳು

 • 1 ಯುಗದ ಉತ್ಸಾಹ ಗುರು ಬಸವಣ್ಣನವರು.
 • 2 ಮಂತ್ರಪುರುಷ ಗುರು ಬಸವಣ್ಣನವರು.
 • 3 ಅನುಭವ ಮಂಟಪದ ರೂವಾರಿ ಗುರು ಬಸವಣ್ಣನವರು.
 • 4 ದಲಿತೋದ್ಧಾರಕ ಪತಿತಪಾವನ ಗುರು ಬಸವಣ್ಣನವರು.
 • 5 ಪರಮಾತ್ಮ ಅಪ್ರಮಾಣ ಅಗೋಚರನು.
 • 6 ಪರಮಾತ್ಮನಿಗೆ ತಂದೆ-ತಾಯಿಗಳಿಲ್ಲ, ಬಂಧು-ಬಾಂಧವರಿಲ್ಲ, ಕುಲ ಗೋತ್ರವಿಲ್ಲ, ಹೆಸರಿಲ್ಲ, ಹುಟ್ಟಿಲ್ಲ-ಸಾವಿಲ್ಲ.
 • 7 ಕವಿಯ ಕಲ್ಪನೆಗೆ ತರ್ಕಿಯ ತರ್ಕಕ್ಕೆ ನಿಲುಕದ ದೇವ.
 • 8 ಪರಮಾತ್ಮ ನಿತ್ಯ ನಿರಂಜನನು.
 • 9 ಪರಮಾತ್ಮ ಕೋಟಿಸೂರ್ಯ ಪ್ರಭೆಯ ಬೆಳಗಿನ ಸಹಸ್ರಕಿರಣದ ಅಗ್ರಪಟಲದ ಬೆಳಗು.
 • 10 ಬಟ್ಟಬರಿಯ ಬಯಲು ಪರಮಾತ್ಮನು.
 • 11 ಪರಮಾತ್ಮನು ವಿಶ್ವವ್ಯಾಪಿಯಾಗಿದ್ದಾನೆ, ಆದರೆ ವಿಶ್ವವು ಪರಮಾತ್ಮನಲ್ಲ.
 • 12 ಪರಮಾತ್ಮನ ನಿಲವು ಗೌಪ್ಯವಾಗಿರುವುದು.
 • 13 ದೇಹವೇ ದೇವಾಲಯ, ಮನವೇ ದೇವರು.
 • 14 ತನ್ನ ತಾನರಿದಡೆ ತಾನೇ ದೇವ.
 • 15 ಗುರುಬಸವಣ್ಣನವರ ವಚನಾಮೃತವ ಸವಿದರೆ ಕೋಟಿ ಪಾತಕ ಪರಿಹಾರ.
 • 16 ಲಿಂಗಭಕ್ತರಿಗೆ ವೇದಾಗಮ, ಶಾಸ್ತ್ರ, ಪುರಾಣಗಳು ಪ್ರಮಾಣವಲ್ಲ.
 • 17 ವೇದಶಾಸ್ತ್ರಾಗಮವನೋದಿದವರು ಶರಣರ ಹಾದಿಯನರಿಯರು.
 • 18 ಇಷ್ಟಲಿಂಗದಾರಿಗಳು ಸ್ಥಾವರಲಿಂಗ ಪೂಜೆ ಮಾಡಬಾರದು.
 • 19 ಸ್ಥಾವರಲಿಂಗ ಪ್ರತಿಷ್ಠೆ, ಪೂಜೆ, ಭಜನೆ ಮಾಡಿದವನಿಗೆ ನಾಯಕನರಕ.
 • 20 ಲಿಂಗಭಕ್ತರಿಗೆ ತೀರ್ಥಕ್ಷೇತ್ರ ಯಾತ್ರೆಗಳ ಹಂಗೇಕೆ?
 • 21 ಲಿಂಗಭಕ್ತರಿಗೆ ಪಂಚಸೂತಕಗಳಿಲ್ಲ.
 • 22 ಲಿಂಗಭಕ್ತರಿಗೆ ಜಪ-ತಪ, ಧ್ಯಾನ-ಮೌನ, ಮಡಿ-ಮೈಲಿಗೆ, ವ್ರತ, ನೇಮಾದಿಗಳಿಲ್ಲ.
 • 23 ಲಿಂಗಭಕ್ತರು ವಾರ, ತಿಥಿ, ಮೂಹೂರ್ತ ನೋಡಬಾರದು.
 • 24 ಲಿಂಗಭಕ್ತರಿಗೆ ಶುಭ- ಅಶುಭ, ಲಗ್ನ-ವಿಘ್ನಗಳಿಲ್ಲ.
 • 25 ಶರಣರೊಪ್ಪಿದ್ದೇ ಶುಭ, ಒಪ್ಪದಿದ್ದುದೇ ಅಶುಭ.
 • 26 ಅಮಾವಾಸ್ಯೆ, ಪೌರ್ಣಿಮೆ ಎಂಬ ಆಚರಣೆ ಸಲ್ಲ.
 • 27 ಲಿಂಗಭಕ್ತರಿಗೆ ಗ್ರಹಣ, ಸಂಕ್ರಾಂತಿ, ಏಕಾದಶಿಗಳಿಲ್ಲ.
 • 28 ನಾಳಿನ ದಿನಕ್ಕಿಂತ ಇಂದಿನ ದಿನವೇ ಲೇಸು.
 • 29 ಹಾವಿನ ಹುತ್ತಕ್ಕೆ ಹಾಲನೆರೆಯಬಾರದು.
 • 30 ಲಿಂಗಭಕ್ತರು ಶ್ರಾದ್ಧ, ದಿನಕರ್ಮಗಳನ್ನು ಮಾಡಬಾರದು.
 • 31 ಲಿಂಗಭಕ್ತರಿಗೆ ಜಾತಕರ್ಮ-ಶುಭಕರ್ಮ-ಪ್ರೇತಕರ್ಮಂಗಳಿಲ್ಲ.
 • 32 ಲಿಂಗೈಕ್ಯರಾದಾಗ ಡೋಲು, ಕಹಳೆ, ಹಲಿಗೆ ಬಾರಿಸಬಾರದು.
 • 33 ಶರಣರು ಲಿಂಗೈಕ್ಯರಾದಾಗ ಶೋಕಿಸಬಾರದು.
 • 34 ಲಿಂಗದೇಹಿಯ ಶರೀರವನ್ನು ದಹಿಸಕೂಡದು.
 • 35 ಲಿಂಗಭಕ್ತರು ಕಾಗೆಗೆ ಪಿಂಡವನಿಕ್ಕಬಾರದು.
 • 36 ಲಿಂಗಭಕ್ತರು ನಂದಿ, ವೀರಭದ್ರ, ಪಾದುಕೆ, ಗದ್ದುಗೆ, ಕಂಥೆ, ಕಮಂಡಲಗಳನ್ನು ಪೂಜಿಸಬಾರದು.
 • 37 ಲಿಂಗಭಕ್ತರು ಸಂಧ್ಯಾ ವಂದನೆ, ಹೋಮ, ಯಜ್ಞಯಾಗ ಮಾಡಬಾರದು.
 • 38 ಲಿಂಗಭಕ್ತರು ಮಾರಿ, ಮಸಣಿ, ಕನಸು, ಹಾಲಕ್ಕಿ, ಶಕುನಗಳನ್ನು ನಂಬಬಾರದು.
 • 39 ಲಿಂಗಭಕ್ತರು ಅಂಜನಸಿದ್ಧಿ, ಮಂತ್ರ-ತಂತ್ರ ಸಿದ್ಧಿಗಳನ್ನು ನಂಬಬಾರದು ಮತ್ತು ಮಾಡಬಾರದು.
 • 40 ಲಿಂಗಭಕ್ತರ ರುದ್ರಾಕ್ಷಿ ಧರಿಸಿದ ಕೊರಳಿಗೆ ಅನ್ಯ ಮಣಿಮಾಲೆ ಧರಿಸಬಾರದು.
 • 41 ಲಿಂಗಭಕ್ತರ ವಿಭೂತಿ ಧರಿಸುವ ಹಣೆಗೆ ಕುಂಕುಮಾದಿ ತಿಲಕ ಸಲ್ಲ.
 • 42 ಲಿಂಗಭಕ್ತರು ವಿಭೂತಿ ಧರಿಸುವ ಹಣೆಗೆ ಬಂಡಾರ ಶೋಭೆಯಲ್ಲ.
 • 43 ಲಿಂಗಭಕ್ತರ ಹಣೆಗೆ ಗೋಪಿಚಂದನ, ಅರ್ಧಚಂದ್ರರೇಖೆ, ಕಸ್ತೂರಿ ತಿಲಕವಿಡಬಾರದು.
 • 44 ಲಿಂಗಭಕ್ತರು ಅಚ್ಚೆ, ಅನ್ಯ ಚಿಹ್ನೆಗಳನ್ನು ಹಾಕಿಸಿಕೊಳ್ಳಬಾರದು.
 • 45 ಲಿಂಗಭಕ್ತರಿಗೆ ಪಂಚಾಂಗ, ಜ್ಯೋತಿಷ್ಯ, ನಂಬಬಾರದು.
 • 46 ದೇವರು ಅನ್ನ, ವಸ್ತ್ರ ಬೇಡುವುದಿಲ್ಲ.
 • 47 ದೇವರು ತಲೆಗೂದಲನ್ನು ಬಯಸನು.
 • 48 ಕಾಡಿಬೇಡುವ ಹೇಸಿ ದೈವಂಗಳ ನಂಬಬೇಡ.
 • 49 ದೇವರಿಗೆ ಹರಕೆ ಹೊರುವ ಪದ್ಧತಿ ಸಲ್ಲ.
 • 50 ದೇವರ ಹೆಸರಿನಲ್ಲಿ ಪ್ರಾಣಿ ಬಲಿ ಕೊಡಕೂಡದು.
 • 51 ಲಿಂಗಭಕ್ತರಾದವರು ಪಂಚಾಭಿಷೇಕ, ರುದ್ರಾಭಿಷೇಕ, ಮುಂತಾದ ಅಭಿಷೇಕಗಳನ್ನು ಮಾಡಿಸಬಾರದು.
 • 52 ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ.
 • 53 ಪ್ರಪಂಚದೊಳಗಿದ್ದು, ಪಾರಮಾರ್ತ ಸಾಧಿಸಿದವರು ಶರಣರು.
 • 54 ಭಕ್ತನ ಅಂತರಂಗದ ಅರಿವನ್ನು ಜಾಗೃತ ಮಾಡುವವನು ನಿಜಗುರು.
 • 55 ಸಾವಜೀವ ಸಂಬಂಧದ ಠಾವ ತೋರಬಲ್ಲಾತ ನಿಜಗುರು.
 • 56 ಲಿಂಗಜ್ಞಾನವಿಲ್ಲದ ಗುರುವು ದೀಕ್ಷೆ ಕೊಡಲು ಯೋಗ್ಯನಲ್ಲ.
 • 57 ಲಿಂಗಜ್ಞಾನವಿಲ್ಲದ ಗುರುವಿನಿಂದ ದೀಕ್ಷೆಯಾಗಿದ್ದರೆ, ಮರಳಿ ಜ್ಞಾನಿಗುರುವಿನಿಂದ ಇಷ್ಟಲಿಂಗದೀಕ್ಷಾ ಸಂಸ್ಕಾರ ಪಡೆದುಕೊಳ್ಳಬೇಕು.
 • 58 ಧನ, ಧಾನ್ಯ ದ್ರವ್ಯದಾಸೆಗೆ ಲಿಂಗವ ಕಟ್ಟುವಾತ ಗುರುವಲ್ಲ.
 • 59 ಲಿಂಗವನರಿತ ಬಳಿಕ ಮತ್ತೇನನ್ನರಿತರೂ ಫಲವಿಲ್ಲ. ಏನನರಿದಡೆಯೂ ಫಲವಿಲ್ಲ.
 • 60 ಲಿಂಗಪದದ ಮುಂದೆ ಇನ್ನಾವುದು ಘನವಲ್ಲ.
 • 61 ಲಿಂಗವ ನೆನೆದವನು ಲಿಂಗವೇ ಆಗುವನು.
 • 62 ಶಿವಕಳೆಯ ಚೈತನ್ಯ ತುಂಬಿದ ಇಷ್ಟಲಿಂಗವು ಶಿಲೆಯಲ್ಲ.
 • 63 ನಿರಾಕಾರ ನಿಜದೇವನನ್ನು ಅರಿಯುವುದಕ್ಕೆ ಇಷ್ಟಲಿಂಗವೇ ಆಧಾರ.
 • 64 8ನೇ ತಿಂಗಳಲ್ಲಿ ತಾಯಿಯ ಗರ್ಭಕ್ಕೆ ಲಿಂಗಧಾರಣೆ ಅತ್ಯವಶ್ಯಕ, ನಂತರ ಮಗು ಹುಟ್ಟಿದ ತಕ್ಷಣ ಲಿಂಗಧಾರಣ ಮಾಡಬೇಕು.
 • 65 ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿಯೇ ಲಿಂಗಧಾರಣೆ ಮಾಡುವುದು ಕಡ್ಡಾಯ.
 • 66 ಎಷ್ಟೇ ಅಡ್ಡಿ-ಆತಂಕ, ಕಷ್ಟ-ನಷ್ಟ, ನೋವು ಬಂದರು ಇಷ್ಟಲಿಂಗ ಪೂಜೆಯನ್ನು ಬಿಡಬಾರದು.
 • 67 ಲಿಂಗವಂತೆಯು ಮುಟ್ಟಾದಳೆಂದು ಇಷ್ಟಲಿಂಗ ಪೂಜೆ ಬಿಡಬಾರದು.
 • 68 ಬೇಡಿಕೆ ಬಯಕೆಯನ್ನಿಟ್ಟುಕೊಂಡು ಲಿಂಗಪೂಜೆ ಮಾಡಬಾರದು.
 • 69 ಫಲ-ಪದವ ಬಯಸಿ ಲಿಂಗಪೂಜೆ ಮಾಡಬಾರದು.
 • 70 ಲಿಂಗಪೂಜೆಯಿಂದ ಭವ-ಭಯ ನಿವಾರಣೆ.
 • 71 ತನುಮನಭಾವ ಶುದ್ಧಿಯಿಂದ ತ್ರಿವಿಧ ಲಿಂಗವ ಪೂಜಿಸಬೇಕು.
 • 72 ಅರ್ಚನ ಅರ್ಪಣ ಅನುಭಾವದಿಂದ ಲಿಂಗಸಿದ್ಧಿ.
 • 73 ಲಿಂಗವಿಲ್ಲದ ಬರೀ ಧ್ಯಾನ ವ್ಯರ್ಥ, ಧ್ಯಾನವಿಲ್ಲದ ಲಿಂಗ ಅಪೂರ್ಣ.
 • 74 ತನ್ನ ತಾನರಿವುದೇ ಲಿಂಗಪೂಜೆ.
 • 75 ಕರಸ್ಥಲದೊಳಗಿನ ಲಿಂಗವನರಿದಡೆ, ತಾನೇ ಶಿವನಾಗುವನು.
 • 76 ಕರಸ್ಥಲದೊಳಗಿನ ಲಿಂಗವನರಿದಡೆ, ತಾನೇ ಶಿವನಾಗುವನು.
 • 77 ಅಷ್ಟದಳಕಮಲದಲ್ಲಿ ಸಹಜ ಪೂಜೆಯ ಮಾಡಬಲ್ಲ ಶರಣರು ಶಿವನ ಪ್ರತಿಬಿಂಬದಂತಿಪ್ಪರು.
 • 78 ಲಿಂಗವ ಪೂಜಿಸಿ ಸಮರತಿ ಸಮಕಳೆ ಸಮಸುಖವ ಪಡೆಯಬೇಕು.
 • 79 ಇಷ್ಟಲಿಂಗ ಪೂಜೆಯದು ಭವರೋಗಕ್ಕೆ ದಿವ್ಯ ಔಷಧಿಯಾಗಿದೆ.
 • 80 ದೇವರು ಮತ್ತು ಭಕ್ತರ ನಡುವೆ ದಲ್ಲಾಳಿಗಳು (ಪೂಜಾರಿಗಳು) ಬೇಡ.
 • 81 ಸದಾಚಾರಿಯೆ ಲಿಂಗಪೂಜೆಗೆ ಯೋಗ್ಯನು.
 • 82 ಬಾಹ್ಯಾಡಂಬರದ ಪೂಜೆಯನ್ನು ಶರಣರು ಮೆಚ್ಚರು.
 • 83 ಡಾಂಭಿಕ ಪೂಜೆಯನ್ನು ಶರಣರು ಮೆಚ್ಚರು.
 • 84 ಲಿಂಗವ ಧರಿಸಿದ ಶರಣನ ಮನೆಯಲ್ಲಿ ಅನ್ಯದೈವ, ಅನ್ಯಶಾಸ್ತ್ರ, ಅನ್ಯಭೋಧೆಗೆ ಅವಕಾಶವಿಲ್ಲ.
 • 85 ಇಷ್ಟಲಿಂಗ ದೀಕ್ಷೆಯಲ್ಲಿ ಲಿಂಗ, ಜಾತಿ, ವರ್ಣ ವರ್ಗಗಳ ತಾರತಮ್ಯವಿಲ್ಲ.
 • 86 ಇಷ್ಟಲಿಂಗದೇವನ ನಂಬಿದವಂಗೆ ಸರ್ವಸಿದ್ಧಿ ಇದೆ.
 • 87 ಇಷ್ಟಲಿಂಗ ಸಹಿತವಾಗಿ ಬಯಲೊಳಗೆ ಬಯಲಾಗುವರು ಲಿಂಗಭಕ್ತರು.
 • 88 ಜಂಗಮವೇ ಲಿಂಗವೆಂದು ತಿಳಿ.
 • 89 ಹಸಿವು ತೃಷೆ ವ್ಯಸನಕ್ಕೊಳಗಾಗುವ ಮಾನವನನ್ನು ಜಂಗಮಕ್ಕೆ ಹೊಲಿಸಬಾರು.
 • 90 ಬೇಡಿ ತಿನ್ನುವುದನ್ನೇ ನೇಮ ಮಾಡಿಕೊಂಡವರು ಜಂಗಮರಲ್ಲ.
 • 91 ಕಂಡವರ ಕಾಡಿ ಬೇಡಿ ಉದರ ಹೊರೆಯುವವರು ಜಂಗಮರಲ್ಲ.
 • 92 ಭಕ್ತರ ಪಾವನ ಮಾಡುವ ನೆಪದಲ್ಲಿ ಹಣ ಕೂಡಿಹಾಕುವವ ಜಂಗನಲ್ಲ.
 • 93 ಜಾತಿ ಹೆಸರಿನಲ್ಲಿ ಜಂಗಮತ್ವ ಅನುಸರಿಸುವುದು ಸರಿಯಲ್ಲ
 • 94 ಜ್ಞಾನಶೂನ್ಯನಾದ ವೇಷಧಾರಿ ಜಂಗಮವಲ್ಲ.
 • 95 ಬೇಡುವಾತ ಜಂಗಮವಲ್ಲ. ಬೇಡಿಸಿಕೊಂಬಾತ ಭಕ್ತನಲ್ಲ.
 • 96 ಅಂತ್ಯಜನಿಗೂ ಶಿವಮಂತ್ರವ ಹೇಳುವ ಹಕ್ಕಿದೆ.
 • 97 ಶಿವಮಂತ್ರ ಜಪಕ್ಕೆ ಜಾತಿಸೂತಕದ ಬಂಧನವಿಲ್ಲ.
 • 98 ಪ್ರಾಣಲಿಂಗವು ಪರಮಾತ್ಮನ ಚಿದಂಶ ಚಿದ್ರೂಪ.
 • 99 ಬೇಕುಬೇಡೆನ್ನದೆ ಸಹಜದಲ್ಲಿ ಬಂದುದು ದೈವ ಪ್ರಸಾದ.
 • 100 ಪದಾರ್ಥಭಾವವಿಲ್ಲದೆ ಪ್ರಸಾದಭಾವವಾದುದೆ ಪ್ರಸಾದ.
 • 101 ಪಂಚೇಂದ್ರಿಯಗಳನ್ನು ಲಿಂಗಕ್ಕರ್ಪಿಸಿ ಪ್ರಸಾದಿಸುವುದು.
 • 102 ಆಸೆ ಮಾಡಿ ಹೆಚ್ಚಿಗೆ ನೀಡಿಸಿಕೊಂಡು ಪ್ರಸಾದ ಕೆಡಿಸಬಾರದು.
 • 103 ಪ್ರತಿಯೊಂದು ಅನ್ನದ ಅಗಳು ಶಿವ ಕೊಟ್ಟ ಪ್ರಸಾದ, ಅನ್ನ ಚೆಲ್ಲುವುದು ಗೋರ ಅಪರಾಧ.
 • 104 ಜನರಿಗೆ ಅನ್ನ ಪ್ರಸಾದ ನೀಡುವಲ್ಲಿ ಪಂಕ್ತಿಭೇದ ಮಾಡಬಾರದು. ಪಂಕ್ತಿಭೇದ ಮಾಡಿದ್ದು ತಿಳಿದರೆ ಅಂತಹ ಪ್ರಸಾದ ಸ್ವೀಕರಿಸಬಾರದು.
 • 105 ಗುರುಲಿಂಗಜಂಗಮಕ್ಕೆ ಕೊಟ್ಟು ಕೊಂಡುದೇ ನಿಜ ಪ್ರಸಾದ.
 • 106 ಸರ್ವೆಂದ್ರೀಯಗಳು ಪ್ರಸಾದ ರೂಪವಾಗಬೇಕು.
 • 107 ಲಿಂಗವನಲ್ಲದೆ ಅನ್ಯವನರಿಯದಿಹುದೆ ಲಿಂಗಾಚಾರ.
 • 108 ದೇಹವೇ ದೇವಾಲಯ, ಶಿರವೇ ಹೊನ್ನ ಕಳಸ.
 • 109 ಸತ್ಯಶುದ್ಧ ಕಾಯಕಜೀವಿಯೇ ಸದ್ಭಕ್ತನು.
 • 110 ಸತ್ಯಶುದ್ಧ ಕಾಯಕದಿಂದ ದುಡಿದ ಧನದಲ್ಲಿ ಶಿವನಿರುವನು.
 • 111 ಲಿಂಗಭಕ್ತರೆಲ್ಲರಿಗೂ ಕಾಯಕ ಮುಖ್ಯ.
 • 112 ಕಾಯಕವಿಲ್ಲದ ಸೋಮಾರಿ ಬದುಕು ಭಗವಂತನಿಂದ ದೂರ.
 • 113 ಕಾಯಕದಲ್ಲಿಯೇ ಕೈಲಾಸ ಕಾಣು. ಕಾಯಕ ಮಾಡದವನ ಶಿವ ಮೆಚ್ಚನು.
 • 114 ಸತ್ಯಶುದ್ಧ ಕಾಯಕ ಮಾಡುವ ಸದ್ಭಕ್ತನಲ್ಲಿ ಧನ ತಾನಾಗಿಯೆ ಬರುವುದು.
 • 115 ಕಾಯಕಕ್ಕೆ ತಕ್ಕ ಪ್ರತಿಫಲ ಪಡೆ, ಹೆಚ್ಚಿನಾಸೆ ಧರ್ಮ ವಿರೋಧ.
 • 116 ಮುಂದಿನ ಫಲಕ್ಕಾಗಿ ಅಂದಂದಿನ ಕಾಯಕ ಅಂದಂದೇ ಮಾಡು.
 • 117 ಸಹಾಯದ ನೆಪದಲ್ಲಿ ಕೈವೊಡ್ಡುವುದು ನೇಮವಲ್ಲ.
 • 118 ಕಾಯಕವ ಮಾಡುವ ಭಕ್ತ ಯಾರನ್ನೂ ಬೇಡುವವನಲ್ಲ.
 • 119 ನಿತ್ಯದ ಕಾಯಕವ ಬಿಟ್ಟು, ವ್ರತದ ಹೆಸರಿನಲ್ಲಿ ಭಕ್ತರ ಮನೆಗೆ ಹೋಗಿ ಹಣಕೇಳುವುದು ಸದ್ಭಕ್ತನಿಗೆ ಸಲ್ಲದು.
 • 120 ತ್ರಿಕರ್ಣ ಶುದ್ಧವಾಗಿ ಕಾಯಕ ಮಾಡುವ ಭಕ್ತನ ಮನೆಯಂಗಣವೆ ಸ್ವರ್ಗ.
 • 121 ಶುದ್ಧ ಕಾಯಕದಿಂದ ಬಂದುದೇ ಲಿಂಗಕ್ಕರ್ಪಿತ.
 • 122 ಕಾಯಕ ಇಲ್ಲದಿರೆ ಲಿಂಗವೂ ಇಲ್ಲ!
 • 123 ಜಂಗಮ ದಾಸೋಹಕ್ಕಾಗಿ(ಸಮಾಜ ಸೇವೆಗಾಗಿ) ಕಾಯಕ ಮಾಡು.
 • 124 ದಾಸೋಹ ಮಾಡುವ ಭಕ್ತನಿಗೆ "ಕೊಡುವ ದೇವರು" ಇದ್ದೇ ಇರುತ್ತಾನೆ.
 • 125 ಭಕ್ತನು ದಾಸೋಹ ಸಂಪನ್ನನಾಗಿರಬೇಕು.
 • 126 ಮೋಸ ವಂಚನೆಯಿಂದ ಸಂಪಾದಿಸಿದ ಧನ ದಾಸೋಹಕ್ಕೆ ಸಲ್ಲದು.
 • 127 ಒತ್ತಾಯದ ಚಂದಾವಸೂಲಿಯಿಂದ ಮಾಡಿದ ದಾಸೋಹ ಶಿವನಿಗೆ ಸಲ್ಲದು.
 • 128 ಸ್ವಾರ್ಥ ಮನೋಭಾವದ ಸಮಾಜಸೇವೆ ಲಿಂಗಕ್ಕರ್ಪಿತವಲ್ಲ.
 • 129 ಲೌಕಿಕ ಬಯಕೆಯನ್ನಿಟ್ಟು ದಾಸೋಹ ಮಾಡಬಾರದು.
 • 130 ಸ್ವಕಾಯಕದಿಂದ ದಾಸೋಹ ಮಾಡು. ಪಿತ್ರಾರ್ಜಿತವಾಗಿ ಬಂದುದು ದಾಸೋಹಕ್ಕೆ ಸಲ್ಲದು.
 • 131 ಭಕ್ತಿ ಹೀನನ ದಾಸೋಹ ಅರ್ಥಹೀನ.
 • 132 ಶ್ರಮದ ದುಡಿಮೆಯಿಂದ ದಾಸೋಹ ಮಾಡುವ ಸದ್ಭಕ್ತನ ಮನೆಯಲ್ಲುಂಡ ಪ್ರಸಾದವೇ ಪಾವನ.
 • 133 ಶಿವಭಕ್ತರಲ್ಲಿ ಕುಲ ಗೋತ್ರ ಜಾತಿ ವರ್ಣಾಶ್ರಮವನರಸದೆ ಅವರೊಕ್ಕುದ ಕೊಂಬುದೇ ಸದಾಚಾರ.
 • 134 ಸದಾಚಾರಿಯೇ ಶ್ರೇಷ್ಠ ಕುಲದವನು, ಲಿಂಗವಂತನು ಕುಲವನರಸದೇ ಪರಸ್ಪರ ಮದುವೆ ಸಂಬಂಧ ಬೆಳೆಸಬೇಕು.
 • 135 ಶಿವಾಚಾರದ ಧರ್ಮ ರಕ್ಷಣೆ ಮಾಡುವುದೇ ಗಣಾಚಾರ.
 • 136 ಶಿವಶರಣರೇ ಹಿರಿಯರಾಗಿ ತಾನೇ ಕಿರಿಯನಾಗಿ ಭಯ-ಭಕ್ತಿಯಿಂದ ಸೇವೆ ಮಾಡುವುದೇ ಭೃತ್ಯಾಚಾರ.
 • 137 ಅಳಿಮನದವನು ಲಿಂಗಭಕ್ತನಾಗಲಾರ.
 • 138 ಕಾಲಕ್ಕಂಜಿ ಸಾಂದರ್ಭಿಕ ಭಕ್ತನಾಗಬಾರದು.
 • 139 ಜಾತಿಸೂತಕವ ಕಳೆದುಕೊಂಡವನೇ ನಿಜವಾದ ಲಿಂಗಭಕ್ತ.
 • 140 ನಡೆ-ನುಡಿ ಒಂದಾಗಿರುವವರೆ ನಿಜವಾದ ಸದ್ಭಕ್ತರು.
 • 141 ಭಕ್ತನು ಗುರು ಲಿಂಗ ಜಂಗಮ ಅನುಭಾವಿಯಾಗಿರಬೇಕು.
 • 142 ಭಕ್ತನ ಎಲ್ಲಾ ಕಾರ್ಯಕ್ಕೂ ಗುರುಲಿಂಗ ಜಂಗಮವೆ ಬೇಕು.
 • 143 ತನುಮನಭಾವ ಶುದ್ಧವಾದ ಸದ್ಭಕ್ತನ ಕಾಯವೇ ಕೈಲಾಸ.
 • 144 ಸದ್ಭಕ್ತರಿಗೆ ಶರಣೆಂದಡೆ ಜನ್ಮ ಜನ್ಮದ ಪಾಪ ತೊಲಗುವುದು.
 • 145 ಭಕ್ತಿಯಿಂದ ಹುಸಿಯಿಲ್ಲದೆ ಮಾಡುವ ಸದ್ಭಕ್ತರ ಸೇವೆ ಶಿವನಿಗೆ ಅರ್ಪಿತ.
 • 146 ಲಿಂಗಭಕ್ತ ಗಳಿಸಿದ ದ್ರವ್ಯವನ್ನು ಗುರುಲಿಂಗ ಜಂಗಮಕ್ಕೆ ನೀಡಬೇಕು.
 • 147 ಲಿಂಗಭಕ್ತನು ಲಿಂಗಭಕ್ತನಿಗೆ ಹಣದ ಸಹಾಯ ಮಾಡಬೇಕೆ ಹೊರತು ಅವರೊಡನೆ ಕಡಬಡ್ಡಿಯ ವ್ಯವಹಾರ ಮಾಡಬಾರದು.
 • 148 ಭಕ್ತನ ಮನೆಗೆ ಸತ್ಯಶರಣರು ಬಂದರೆ ಭೃತ್ಯಾಚಾರವ ಮಾಡಬೇಕು.
 • 149 ಲಿಂಗಭಕ್ತನು ವಿವಾಹಕ್ಕೆ ವಧುವಿನ ಜಾತಿ ಕೇಳಕೂಡದು ವಿವಾಹದ ನಂತರ ತನ್ನ ಹೆಂಡತಿಯಾಗುವವಳಿಗೆ ಬಸವಧರ್ಮದ ಸಂಸ್ಕಾರ ನೀಡಬೇಕು.
 • 150 ಲಿಂಗಭಕ್ತನು ತನ್ನ ಮಕ್ಕಳಿಗೆ ಲಿಂಗಜ್ಞಾನ ನೀಡುವುದು ಕಡ್ಡಾಯ.
 • 151 ಲಿಂಗತತ್ತ್ವದಲ್ಲಿ ಅಚಲನಿಷ್ಠೆ ಬೆಳಸಿಕೊಂಡಾತನೆ ನಿಜ ಶರಣನು.
 • 152 ಅಂಗಭಾವ ಬಿಟ್ಟು ಲಿಂಗನೆನಹಿನಲ್ಲಿ ಬದುಕುವವನೇ ಪ್ರಸಾದಿ.
 • 153 ಪ್ರಸಾದಿಯ ಬಿಟ್ಟು ಪ್ರಸಾದವಿಲ್ಲ. ಪ್ರಸಾದವ ಬಿಟ್ಟು ಪ್ರಸಾದಿಯಿಲ್ಲ.
 • 154 ಶರಣಧರ್ಮದಲ್ಲಿ ಡಂಭಾಚಾರ ವೈಭವಕ್ಕೆ ಹಣ ವಿನಿಯೋಗಿಸುವುದನ್ನು ಶರಣರು ಖಂಡಿಸಿದ್ದಾರೆ.
 • 155 ಲಿಂಗದಲ್ಲಿ ಪ್ರಾಣ, ಪ್ರಾಣದಲ್ಲಿ ಲಿಂಗವನಿರಿಸಿಕೊಂಡಾತ ಪ್ರಾಣಲಿಂಗಿ.
 • 156 ಪ್ರಾಣಲಿಂಗಿಯಾದ ಶರಣ ಶಿವಸ್ವರೂಪಿಯಾಗಿರುವನು.
 • 157 ಶರಣರ ಪಥ, ಲೋಕಕ್ಕೆ ಹಿತ.
 • 158 ಶರಣ ಮರಳಿ ಭವಿಯಾಗಲಾರ
 • 159 ಶರಣರು ಉಪಮಾತೀತರು.
 • 160 ಶರಣ ಭವಬಂಧನ ರಹಿತನಾಗಿರುತ್ತಾನೆ.
 • 161 ಲಿಂಗದೇಹಿಯಾಗಿ ಹುಟ್ಟುಗೆಟ್ಟರು ಶರಣರು.
 • 162 ಶರಣನಿಗೆ ಕರ್ಮಫಲವಿಲ್ಲ ಶರಣನ ಪಥ ಲಿಂಗಾಧೀನ.
 • 163 ಶರಣ ದ್ವೈತಾದ್ವೈತವ ಮೀರಿದವನು.
 • 164 ಶರಣನು ಸ್ವಯಂಲಿಂಗಿಯಾಗಿರುತ್ತಾನೆ.
 • 165 ನಿರಾಕಾರ ಲಿಂಗವನೆಚ್ಚಿ ನಡೆಯುವವನು ಶರಣ.
 • 166 ಶರಣ ಉಂಡು ಉಪವಾಸಿ, ಬಳಸಿ ಬ್ರಹ್ಮಚಾರಿ.
 • 167 ಶರಣನೇ ಶಿವ, ಶರಣನ ಕಾಯವೇ ಕೈಲಾಸ.
 • 168 ಸರ್ವಸದ್ಗುಣಗಳಲ್ಲಿ ಪರಿಪೂರ್ಣನಾದವನೇ ಶರಣ.
 • 169 ಸಾಧನೆಯಿಲ್ಲದ ಲಿಂಗಧಾರಿ ಶರಣನಾಗಲು ಸಾಧ್ಯವಿಲ್ಲ.
 • 170 ಸದಾಚಾರ ಸದ್ಭಕ್ತಿಯಿಂದಲ್ಲದೆ ಅನ್ಯಮಾರ್ಗದಿಂದ ಶಿವನೊಲಿಯನು
 • 171 ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ.
 • 172 ನುಡಿದಂತೆ ನಡೆ ಇದೇ ಜನ್ಮಕಡೆ.
 • 173 ನುಡಿದಂತೆ ನಡೆ, ನಡೆದಂತೆ ನುಡಿ.
 • 174 ಹೊಗಳಿಕೆಗೆ ತಲೆಬಾಗಬೇಡ, ನಿಂದನೆಗೆ ಹೆದರಬೇಡ.
 • 175 ಸಮಾಧಾನದಿಂದ ವರ್ತಿಸು ದುಡುಕಬೇಡ.
 • 176 ದುರಾಸೆ ಪಡಬೇಡ, ಲೋಭಿಯಾಗಬೇಡ.
 • 177 ಲಂಚವಂಚನೆಗೆ ದಾಸನಾಗಬೇಡ.
 • 178 ಪರದ್ರವ್ಯಕ್ಕೆ ಆಸೆ ಮಾಡಬೇಡ.
 • 179 ಕಳ್ಳತನದ ಸಂಪಾದನೆ ಬೇಡ.
 • 180 ಕಳವು ಹಾದರ ಮುಂತಾದ ಹೀನ ಕೃತ್ಯಗಳಲ್ಲಿ ತೊಡಗಬೇಡ.
 • 181 ವಿನೋದ, ಹರಟೆ, ಜೂಜಾಟಗಳಲ್ಲಿ ಕಾಲ ಕಳೆಯಬೇಡ.
 • 182 ಜೀವ ಹಿಂಸೆ ಮಾಡಬೇಡ.
 • 183 ಮದ್ಯಪಾನಿ, ದುರಾಚಾರಿ, ದುವ್ರ್ಯೆಸನಿ ನಿರಾಕಾರ ಶಿವನ ಭಕ್ತನÀಲ್ಲ.
 • 184 ವಿಶ್ವದ ಸಕಲ ಜೀವಿಗಳಿಗೆ ಲೇಸನ್ನೇ ಬಯಸಬೇಕು.
 • 185 ಪರಸ್ತ್ರೀಯನ್ನು ಪೂಜ್ಯತೆಯಂತೆ ಕಾಣು.
 • 186 "ನಾನು" ಮಾಡಿದೆ ಎಂಬ ಗರ್ವಬೇಡ. ಮಾಡಿಸುವಾತ ಶಿವನೆಂಬುದ ಮರೆಯಬೇಡ.
 • 187 ತಿಳಿತಿಳಿದು ಮಾಡುವ ತಪ್ಪಿಗೆ ಕ್ಷಮೆಯಿಲ್ಲ.
 • 188 ಮಾಡಿ ನೀಡಿ ಮತ್ತೆ ಆಡಿಕೊಳ್ಳಬೇಡ.
 • 189 ನಿನ್ನ ಕುಲದಭಿಮಾನದ ಗರ್ವ ಬಿಟ್ಟು ಸಕಲರೊಳಗೊಂದಾಗು .
 • 190 ಅರೆಭಕ್ತರ ಸಂಗಬೇಡ. ಹುಸಿಭಕ್ತಿಯ ನಟನೆ ಬೇಡ.
 • 191 ಸಜ್ಜನರ ಸಂಗ ಹೆಜ್ಜೇನು ಸವಿದಂತೆ.
 • 192 ಸಜ್ಜನ ಸದ್ಭಕ್ತರ ಸಂಗದೊಳಗಿರ್ದು ಜೀವದ ಭಯವೇಕೆ?
 • 193 ಸ್ವಯಂ ಜ್ಞಾನವಿಲ್ಲದವರೊಡನೆ ಮಾತನಾಡಬೇಡ.
 • 194 ಮೌನವು ಜ್ಞಾನಿಯ ಲಕ್ಷಣ. ಕಲಹ ಲೋಬಿಯ ಲಕ್ಷಣ.
 • 195 ಶರಣರು ಬಂದಾಗ ಕುಳಿತ ಆಸನದಿಂದ ಮೇಲೆದ್ದು ಬರಮಾಡಿಕೊಳ್ಳಬೇಕು.
 • 196 ಶರಣರು ನಮಸ್ಕರಿಸಿದರೆ ಪ್ರತಿಯಾಗಿ ನಮಸ್ಕರಿಸು.
 • 197 ಆತ್ಮೀಯರೆಂದು ಅವರ ತಪ್ಪನ್ನು ಮುಚ್ಚಿಡಬೇಡ.
 • 198 ನಿನ್ನ ಅವಗುಣಗಳನ್ನು ಎತ್ತಿ ತೋರಿಸಿದರೆ, ಮುನಿಸಿಕೊಳ್ಳಬೇಡ.
 • 199 ಯಾರ ಮನಸ್ಸನ್ನು ನೋಯಿಸಬೇಡ.
 • 200 ಶರಣರ ಸುಖ ದುಃಖದಲ್ಲಿ ಭಾಗಿಯಾಗು.
 • 201 ಸದಾ ಪರರ ಹಿತವನ್ನು ಬಯಸು.
 • 202 ಕ್ಷಮಿಸುವ ಗುಣದಿಂದ ವ್ಯಕ್ತಿಯನ್ನು ತಿದ್ದಬಹುದು.
 • 203 ಪದವಿ ಪ್ರತಿಷ್ಠೆಗೆ ಆಸೆ ಪಡಬೇಡ.
 • 204 ಧರ್ಮ ಪ್ರಸಾರಕರನ್ನು ಅಪಹಾಸ್ಯ ಮಾಡಬೇಡ.
 • 205 ವಿಕಲಚೇತರನ್ನು ಕೀಳಾಗಿ ಕಾಣಬೇಡ.
 • 206 ವಾದಮಾಡಬೇಡ ಮಾತಿಗೆ ಮಾತು ಬೆಳೆಸಬೇಡ.
 • 207 ದುಷ್ಟನಿಗೆ ಬೋಧನೆ ಮಾಡಬೇಡ.
 • 208 ಚಾಡಿ ಹೇಳಬೇಡ ಜಗಳ ಹಚ್ಚಬೇಡ.
 • 209 ಮೂರ್ಖರೊಡನೆ ಕಲಹ ಬೇಡ.
 • 210 ಮಾತು ಮಾತಿಗೆ ಆಣೆ ಮಾಡಬೇಡ.
 • 211 ವಿಷಯ ತಿಳಿಯದೆ ಭಾಷೆ ಕೊಡಬೇಡ.
 • 212 ಜಿದ್ದು ಹಠ ಪ್ರತಿಜ್ಞೆಗಳನ್ನು ಮಾಡಬೇಡ.
 • 213 ತನು ಮನ ಭಾವದಿಂದ ಶುದ್ಧನಾಗು.
 • 214 ಕಂಡ ಕಂಡವರ ಮುಂದೆ ಅನುಭವವನ್ನು ಹಂಚಿಕೊಳ್ಳಬೇಡ.
 • 215 ವೈಚಾರಿಕ ಪ್ರಜ್ಞೆಯನ್ನು ಬೆಳೆಸಿಕೊ.
 • 216 ಸಂಸಾರದ ಜಂಜಾಟಕ್ಕೆ ಅತಿಯಾಗಿ ಅಂಟಿಕೊಳ್ಳಬೇಡ.
 • 217 ನಿರಾಕಾರ ಲಿಂಗದೇವನಿಗೆ ಶರಣಾಗು, ಅವನನ್ನೆ ಪ್ರಾರ್ಥಿಸು.
 • 218 ಎಲ್ಲವನ್ನು ಕರುಣಿಸಿದ ನಿಜದೇವನನ್ನೆ ಸ್ತುತಿಸು.
 • 219 ಸದಾ ಪರಮಾತ್ಮನ ನೆನಹಿನಲ್ಲಿರು.
 • 220 ಅರಿಯದೆ ಮಾಡಿದ ತಪ್ಪಿಗೆ ಲಿಂಗದೇವರಲ್ಲಿ ಕ್ಷಮೆ ಕೇಳು.
 • 221 ಪರಮಾತ್ಮನೊಡ್ಡಿದ ಪರೀಕ್ಷೆಯನ್ನು ಎದುರಿಸು.
 • 222 ಸುಮ್ಮನೆ ದಿನವ ಕಳೆಯದೆ ಶರಣರೊಡನೆ ಶಿವಾನುಭಾವ ಮಾಡು.
 • 223 ಪ್ರಾಣ, ಹಣ, ಯೌವನವಿರುವಾಗಲೇ ಶಿವನ ನೆನೆ.
 • 224 ಜೀವವಿದ್ದಾಗಲೇ ಶಿವನ ಕೂಡುವ ದಿವ್ಯಜ್ಞಾನವನ್ನು ಪಡೆ.
 • 225 ದೇವರು ಮೆಚ್ಚುವಂತೆ ಬದುಕು, ಜಗವು ತಾನೇ ಮೆಚ್ಚುವುದು.
 • 226 ಲಿಂಗದೇವನ ಒಲುಮೆಯಿಂದ ಎಲ್ಲವೂ ಸಾಧ್ಯ.
 • 227 ಮನವೆಂಬ ಮರ್ಕಟವನ್ನು ನಿಲ್ಲಿಸುವಂತೆ ಪರಮಾತ್ಮನ ಬೇಡಿಕೊ.
 • 228 ಸತ್ಯವ ಸಾಧಿಸುವಲ್ಲಿ ಛಲವಂತನಾಗು.
 • 229 ಜರಿದರೆಂದು ಮನಸ್ಸÀನ್ನ್ಸು ಖಿನ್ನಮಾಡಿಕೊಳ್ಳಬೇಡ.
 • 230 ಬಡತನಕ್ಕೆ ಹೆದರಬೇಡ. ಸಿರಿಯ ನೆಚ್ಚಿ ಕೆಡಬೇಡ.
 • 231 ಸುಖ-ದುಃಖ, ಬಡತನ-ಸಿರಿತನವನ್ನು ಸಮಾನಾಗಿ ಕಾಣು.
 • 232 ಹಿಡಿದ ಸತ್ಕಾರ್ಯದಲ್ಲಿ ಯಶಸ್ವಿಯಾಗು.
 • 233 ವಚನಾನುಭವ ಅಳವಡಿಸಿಕೊಳ್ಳುವುದಕ್ಕೆ ಗೃಹಸ್ಥ ಸನ್ಯಾಸನೆಂಬ ಭೇದವಿಲ್ಲ.
 • 234 ಎಲ್ಲವನರಿಯುವ ಮೊದಲು ತನ್ನ ತಾನರಿಯಬೇಕು.
 • 235 ತನ್ನ ತಾನರಿಯದೆ ಪರರಿಗೆ ಬುದ್ಧಿ ಹೇಳುವುದು ತರವಲ್ಲ.
 • 236 ಅಂಗಸುಖಕ್ಕಾಗಿ ಕಂಡಕಂಡ ಪದಾರ್ಥ ತಿನ್ನಬೇಡ.
 • 237 ದೇಹದ ಅತೀ ಪೋಷಣೆ ಬೇಡ.
 • 238 ಮಾತು, ನಿದ್ರೆ, ಆಹಾರ ಮಿತವಾಗಿರಲಿ.
 • 239 ನಸುಕಿನಲ್ಲಿ ಎದ್ದೇಳಿ, ದುಸ್ವಪ್ನವ ಕಾಣದಿರಿ, ಅಂಗವಿಕಾರದಿಂದ ವಿಮುಕರಾಗಿ.
 • 240 ಮಗು ಹುಟ್ಟಿದ ಕೂಡಲೆ ತಾಯಿ ಎದೆಯಲ್ಲಿ ಹಾಲನ್ನು ಉತ್ಪತ್ತಿ ಮಾಡುವ ದೇವರು ಪ್ರತಿಯೊಬ್ಬರ ಹೊಟ್ಟೆಗೆ ಆಹಾರ ಖಂಡಿತ ನೀಡುತ್ತಾನೆ. 84 ಲಕ್ಷ ಜೀವರಾಶಿಗಳಲ್ಲಿ ಮನುಷ್ಯ ಮಾತ್ರ ಹಣಸಂಪಾದಿಸಲು ಹೋಗುತ್ತಾನೆ. ತುಂಬದಿರುವ ಹೊಟ್ಟೆ ತುಂಬಿಸಿಕೊಳ್ಳಲು ತುಂಡು ಬಟ್ಟೆ ಧರಿಸಿ, ಅರೆ ನಗ್ನದಿಂದ ನರ್ತಿಸಿ, ದೇಶದ ಸಂಸ್ಕೃತಿ, ಸಂಸ್ಕಾರಗಳನ್ನು ಹಾಳುಮಾಡಿ, ಅನಾಗರಿಕತೆ ಸ್ವೇಚ್ಚಾಚಾರದಿಂದ ಮನೋವಿಕಾರ ಉಂಟುಮಾಡಿ ಕೋಟ್ಯಂತರ ಶಾಲಾಮಕ್ಕಳನ್ನು, ಯುವ ಪೀಳಿಗೆಯನ್ನು ಹಾಳು ಮಾಡುತ್ತಿರುವ ನೀವು ಸತ್ತಾಗ ನಿಮ್ಮೊಂದಿಗೆ ಹಣ ಬರುವುದಿಲ್ಲ. ನಿಮ್ಮಿಚ್ಚೆಯಂತೆ ಮುಂದಿನ ಜನ್ಮದಲ್ಲಿ ನಗ್ನ ಸ್ಥಿತಿಯ ಪ್ರಾಣಿಗಳಾಗಿ ಹುಟ್ಟುತ್ತೀರಿ.
 • 241 ಸಂಸಾರಿಯಾಗುವುದು ತಪ್ಪಲ್ಲ, ಸಂಸಾರದಲ್ಲಿ ಮುಳುಗುವುದು ತಪ್ಪು.
 • 242 ಇಂದ್ರಿಯ ಸುಖದಲ್ಲಿ ಪಾವಿತ್ರತೆ ಇರಲಿ, ಇಂದ್ರಿಯಗಳಿಗೆ ದಾಸನಾಗುವುದು ಘನಘೋರ ಅಪರಾಧ.
 • 243 ಬಸವಾದಿ ಶರಣರನ್ನು ಏಕವಚನದಲ್ಲಿ ಸಂಬೋಧಿಸುವವರು, ಭವಿಗಳಲ್ಲದೆ ಭಕ್ತರಲ್ಲ.
 • 244 ಬಸವಣ್ಣನವರನ್ನು ಹುಡುಕಿಕೊಂಡು ದಲಿತ ಹಿಂದುಳಿದವರ ಕೇರಿಗಳಿಗೆ ಹೋಗಿ, ಅವರ ಹೃದಯದಲ್ಲಿ ಬಸವಣ್ಣನವರನ್ನು ಕಾಣೆ.
 • 245 "ಅಂತರ್ಜಾತಿ ವಿವಾಹಗಳ" ಜಾತ್ರೆಯಮಾಡಿ, ಬಸವಣ್ಣನವರ ತೇರು ಎಳೆಯಿರಿ.
 • 246 ಸಮುದಾಯಗಳ ಒಕ್ಕೂಟವೇ ಬೇರುಗಳು, ಕಾಂಡವೇ ಬಸವಧರ್ಮ, ಫಲವೇ ವಚನ ಸಾಹಿತ್ಯ.
 • 247 ಶರೀರದ ಅಂಗಾಂಗ ಪ್ರದರ್ಶನ, ಮುಂದೆ ಪ್ರಾಣಿ ಜನ್ಮಕ್ಕೆ ಆಹ್ವಾನ.
 • 248 ಲಜ್ಜೆ ಮತ್ತು ನಾಚಿಕೆ ಹೆಣ್ಣಿಗೆ, ಸರಿಸಾಟಿಯಿಲ್ಲದ ಆಭರಣ.
 • 249 ಹೆಣ್ಣು ದೇಶದ ಸಂಸ್ಕøತಿಯ ಪ್ರತೀಕ, ಸಂಸ್ಕಾರದ ರಾಯಬಾರಿ.
 • 250 ಮಾನವ ಜನ್ಮ ಮರ್ಯಾದೆಯ ಜನ್ಮ, ಅಂಗಾಂಗ ಪ್ರದರ್ಶನದ ಹಂದಿ ಜನ್ಮವಲ್ಲ.
 • 251 ಜಂಗಮವೆನ್ನುವುದು ಜಾತಿಯಲ್ಲ, ಜಂಗಮವೆನ್ನುವುದು ಅಖಂಡ ವಿಶ್ವ ಚೈತನ್ಯ.

ಗುರುಬಸವ ಲಿಂಗಾಯ ನಮಃ
ಶರಣು ಬಂಧುಗಳಿಗೆ ಶರಣು ಶರಣಾರ್ಥಿಗಳು

ಶ್ರೀ ಬಸವ ವಾಹಿನಿಯ ಧ್ಯೇಯೋದ್ದೇಶಗಳು ಹಾಗೂ ಸಮಾಜ ಪರಿವರ್ತನೆಯ ಕಲ್ಯಾಣ ಕಾರ್ಯಕ್ರಮಗಳು:

 1. ಶ್ರೀ ಬಸವ ಟಿ.ವಿ ಇದು "ಸಂಸ್ಕಾರದ ಬೆಳಕು"
 2. ಶ್ರೀ ಬಸವ ಟಿ.ವಿ ಇದು ಅಚ್ಚ ಕನ್ನಡದ ಶರಣ ಸಂಸ್ಕøತಿಯ ವಾಹಿನಿ:
 3. ಶ್ರೀ ಬಸವ ಟಿ.ವಿ ಇದು ಅಜ್ಞಾನ ಅಶ್ಲೀಲ ರಹಿತ ಜ್ಞಾನ ವಾಹಿನಿ
 4. ಶ್ರೀ ಬಸವ ಟಿ.ವಿ ಇದು ಪ್ರಗತಿಪರ ಜ್ಞಾನ ವಾಹಿನಿ.

12ನೇ ಶತಮಾನದ ಬಸವಾದಿ ಶರಣರಿಗೆ, ವಚನ ಪಿತಾಮಹ ಪೂಜ್ಯ ಶ್ರೀ ಫ.ಗು ಹಳಕಟ್ಟಿಯವರಿಗೆ, ಕರ್ನಾಟಕ ಗಾಂಧಿ ಪೂಜ್ಯ ಶ್ರೀ ಹರ್ಡೇಕರ್ ಮಂಜಪ್ಪನವರಿಗೆ, ಪೂಜ್ಯ ಶ್ರೀ ಉತ್ತಂಗಿ ಚೆನ್ನಪ್ಪನವರಿಗೆ ಹಾಗೂ 21ನೇ ಶತಮಾನದವರೆಗೆ, ಬಸವಧರ್ಮವನ್ನು ಉಳಿಸಿ ಬೆಳೆಸಿದ ಮಠ ಮಾನ್ಯಗಳಿಗೆ, ಸಾಹಿತಿಗಳಿಗೆ, ವಿದ್ವಾಂಸರಿಗೆ, ದಾಸೋಹಿಗಳಿಗೆ ಶ್ರೀ ಬಸವ ಟಿವಿಯನ್ನು ಭಕ್ತಿಯಿಂದ ಸಮರ್ಪಿಸುತ್ತಿದ್ದೇವೆ.


ಪ್ರಚಾರದ ಕಮಿಟಿಗಳು:- ಪ್ರತಿ ಜಿಲ್ಲೆಗೆ 10 ಜನರ ಧರ್ಮ ಪ್ರಚಾರಕರ ಕಮಿಟಿ ರಚನೆ ಮಾಡಿಕೊಂಡು ಅವರನ್ನು ಸಾಧಕರೆಂದು ಗುರುತಿಸಿ ತರಬೇತಿ ಕೊಡಲಾಗುವುದು. ನಂತರ ಅವರಿಗೆ ಮಾಸಿಕ ವೇತನ ಅಥವಾ ಗೌರವಧನ ಕೊಡಲಾಗುವುದು.

ಅವರು ನಿರ್ವಹಿಸಬೇಕಾದ ಕಾರ್ಯಗಳು:

•	ಪ್ರತಿ ತಾಲ್ಲೂಕಿನಲ್ಲಿ ಪ್ರವಚನ ಕಾರ್ಯಕ್ರಮಗಳನ್ನು ನಡೆಸಲು ಆಯೋಜನೆ ಮಾಡುವುದು.
•	ಎಲ್ಲಾ ಧರ್ಮದಿಂದ ಬಂದು ಪರಿವರ್ತಿತನೆಗೊಂಡವರಿಗೆ ಬಸವ ಧರ್ಮದ ಸಂಸ್ಕಾರ ನೀಡುವುದು.
•	ಹೆಚ್ಚು ಬಸವಾಭಿಮಾನಿಗಳು ಮತ್ತು ಹಿಂದುಳಿದ ಕುಟುಂಬಗಳಿರುವ ಗ್ರಾಮಗಳಲ್ಲಿ ನಿರಂತರ ಪ್ರವಚನ ನೀಡಲು ಕಾರ್ಯಕ್ರಮಗಳನ್ನು ಆಯೋಜಿಸುವುದು.
•	ಪ್ರವಚನ ಕೇಳಿ ಪರಿವರ್ತಿತ ಗೊಂಡವರಿಗೆ ಜಾತಿ ಮತ ಪಂಥಗಳ ಬೇಧವಿಲ್ಲದೆ ರುದ್ರಾಕ್ಷಿ ದೀಕ್ಷೆ ಮತ್ತು ಲಿಂಗದೀಕ್ಷೆಯನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೋಳ್ಳುವುದು.


1. ಕೋಟಿಗ್ರಂಥ ಅಭಿಯಾನ ಎನ್ನುವ ವಿಶೇಷ ಕಾರ್ಯಕ್ರಮದ ಮೂಲಕ “ಸಮಗ್ರ ವಚನ ಸಾರ” ಎನ್ನುವ ವಚನ ಗ್ರಂಥವನ್ನು ಮುದ್ರಿಸಿ ಮನೆ-ಮನೆಗಳಿಗೆ ಮುಟ್ಟಿಸಲಾಗುವುದು.

2. ವಿಶ್ವಗುರು ವಿಶ್ವ ಭ್ರಾತೃತ್ವಪ್ರೇಮಿ ಜಗಜ್ಯೋತಿ ಬಸವೇಶ್ವರರು 12ನೇ ಶತಮಾನದಲ್ಲಿ ಜನ್ಮತಾಳಿ, ಮಾನವ ಕುಲಕ್ಕೆ ನೈತಿಕ ಮೌಲ್ಯಗಳನ್ನು ಬೋಧಿಸಿ ಸಕಲ ಜೀವಾತ್ಮರಿಗೆ ಲೇಸನ್ನೇ, ಬಯಸುವ ಸಮಾಜವನ್ನು ನಿರ್ಮಾಣ ಮಾಡಿದರು ಮನುಷ್ಯ ಮನುಷ್ಯನನ್ನು ಕಂಡಾಗ ಇವನು ಯಾರು, ಇವನು ಯಾವ ಕುಲಜಾತಿಯವನು, ಮತಧರ್ಮದವನು ಎಂದು ಮನಸ್ಸಿನಲ್ಲಿ ಅಂದುಕೊಳ್ಳದೆ, ಇವನಮ್ಮವ ಇವನಮ್ಮವ, ಇವ ನನ್ನ ಬಂಧು, ಇವ ನನ್ನ ಬಳಗ, ಇವ ನನ್ನ ಸಹೋದರ ಎಂದುಕೊಂಡು ನಾವೆಲ್ಲರೂ ಪರಮಾತ್ಮನ ಮಹಾಮನೆಯ ಮಕ್ಕಳೆಂದಿನಿಸುವ ಭಾವನೆಯನ್ನು, ಎಲ್ಲರಿಗೂ ಮೂಡಲಿ ಎಂದು ಮಾನವತಾವಾದಿ ಬಸವಣ್ಣನವರು ಪರಮಾತ್ಮನನ್ನು ಕೇಳಿಕೊಂಡಿದ್ದಾರೆ. ಈ ವಚನದ ಅರ್ಥದಂತೆ ಜಾತಿ, ಧರ್ಮ, ವರ್ಗ ಬೇಧವಿಲ್ಲದೆ ಪ್ರತಿಯೊಬ್ಬರ ಮನೆಗಳಿಗೆ ಬಸವ ಧರ್ಮದ ಸಂದೇಶವನ್ನು ಮತ್ತು 770 ಅಮರಗಣಂಗಳ ತತ್ವ ಸಂದೇಶಗಳನ್ನು ಪ್ರತಿದಿನ ಪ್ರಸಾದ ಮಾಡಲಾಗುವುದು. 

3. ಬಸವ ತತ್ವ ಪ್ರಚಾರದ ಕಮ್ಮಟಗಳನ್ನು ಜಿಲ್ಲಾವಾರು ತಾಲ್ಲೂಕುವಾರು ನಡೆಸುವುದು.

4. ಬಸವ ಕಲ್ಯಾಣದ ಪರುಷಕಟ್ಟೆ ಹಾಗೂ ಅನುಭವ ಮಂಟಪ ಕ್ಷೇತ್ರಗಳನ್ನು ಗುರುತಿಸಿ. (ಬಿ.ಕೆ.ಡಿ.ಬಿ) ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ವತಿಯಿಂದ, ಅಭಿವೃದ್ಧಿ ಪಡಿಸಲು ಶ್ರೀ ಬಸವ ವಾಹಿನಿಯಿಂದ ಒತ್ತಾಯಿಸುವುದು.

5. ಕೂಡಲಸಂಗಮದ ಐಕ್ಯ ಮಂಟಪ ಸಂರಕ್ಷಣೆ ಮತ್ತು ಅಭಿವೃದ್ಧಿ ಪಡಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವುದು ಹಾಗೂ ಹೋರಾಟ ಮಾಡುವುದು.

6. ಪ್ರತಿ ವರ್ಷ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ರೀತಿಯಲ್ಲಿ ವಚನ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಹೋರಾಟ ಮಾಡುವುದು.

7. ವಚನ ಸಾಹಿತ್ಯದ ಓಲೆಗರಿಗಳನ್ನು ಸಂಶೋಧಿಸಿ ಸಂಗ್ರಹಿಸಿ ಪ್ರಕಟಿಸಲು, ಪ್ರಾಚ್ಯವಸ್ತು ಇಲಾಖೆಯಲ್ಲಿ ಶಾಖೆಯನ್ನು ತೆರೆಯುವಂತೆ ಸರ್ಕಾರಕ್ಕೆ ಒತ್ತಾಯ ಪಡಿಸುವುದು.

8. ಪ್ರತಿ ಜಿಲ್ಲೆಯಲ್ಲಿ ಬಸವಧರ್ಮ ಪ್ರಚಾರ ಮಾಡಲು ಕನಿಷ್ಠ 200 ಜನ ಸಾಧಕರಿಗೆ ತರಬೇತಿ ನೀಡಿ, ಎಲ್ಲಾ ಸೌಲಭ್ಯ ಕಲ್ಪಿಸಿ, ಧರ್ಮ ಪ್ರಚಾರವನ್ನು ಮಾಡಿಸಲಾಗುವುದು. 

9. ದಲಿತ ಮತ್ತು ಹಿಂದುಳಿದ ಪ್ರದೇಶಗಳಿಗೆ ಹೋಗಿ ಅವರಿಗೆ ಆತ್ಮ ಗೌರವ ತುಂಬಿ ಕೀಳರಿಮೆಯನ್ನು ಹೋಗಲಾಡಿಸಿ ಅವರಿಗೆ, ನೈತಿಕ ಬಲವನ್ನು ತುಂಬುವ ದೀನ ದಲಿತರ ಹೃದಯದಲ್ಲಿ ಬಸವಣ್ಣನವರನ್ನು ಕಾಣುವ ಪ್ರಯತ್ನವನ್ನು ಶ್ರೀ ಬಸವ ಟಿ.ವಿ ಮಾಡುತ್ತದೆ.

10. ಬಸವಾದಿ ಶರಣರು ಮಾನವಕುಲಕ್ಕೆ ನೀಡಿರುವ ಗುರು, ಲಿಂಗ, ಜಂಗಮ, ಪರಿಕಲ್ಪನೆಯನ್ನು  ಅರ್ಥೈಸುವ ಮತ್ತು ಅಷ್ಟಾವರಣ, ಪಂಚಾವಾರ, ಷಟ್‍ಸ್ಥಲಗಳಂತಹ ಬಸವ ಧರ್ಮದ ಸಂಸ್ಕಾರಗಳ ತರಬೇತಿ ಕಮ್ಮಟಗಳನ್ನು ದಾಸೋಹಿಗಳ ಸಹಾಯದೊಂದಿಗೆ ಮಾಡಲಾಗುವುದು.

11. ಕರ್ನಾಟಕ ಮತ್ತು ಬೇರೆ ರಾಜ್ಯಗಳಲ್ಲಿ ಶತ ಶತಮಾನಗಳಿಂದ ಮಠ ಮಂದಿರಗಳನ್ನು ನಿರ್ಮಿಸಿಕೊಂಡು ಸಮಾಜ ಸೇವೆ ಮತ್ತು ಬಸವ ಧರ್ಮ ಪ್ರಚಾರ ಮಾಡಿಕೊಂಡು ಬಂದಿರುವ ಘನ ಮಠಗಳ ಅನನ್ಯ ಸೇವೆಯನ್ನು ಚಿತ್ರೀಕರಿಸಿ ಎಲ್ಲರಿಗೂ ತಿಳಿಯುವಂತೆ ಸಾಕ್ಷ್ಯಚಿತ್ರಗಳನ್ನು ತಯಾರಿಸಲು ಶ್ರೀ ಬಸವ ಟಿ.ವಿ. ಕಾರ್ಯೋನ್ಮುಖವಾಗುತ್ತದೆ. ಬಸವ ಧರ್ಮಕ್ಕಾಗಿ ಗಂಧದ ಕೊರಡಿನಂತೆ ಸವೆಸಿಕೊಳ್ಳುತ್ತಿರುವವರನ್ನು ಗುರುತಿಸಿ ಗೌರವಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಶ್ರೀ ಬಸವ ಟಿ.ವಿ. ಮಾಡುತ್ತದೆ.

12. ಬಸವ ಧರ್ಮದ ಉಳಿವು, ಅಭಿವೃದ್ಧಿ ಮತ್ತು ಪ್ರಚಾರಕ್ಕಾಗಿ ಶ್ರಮಿಸಿ ಮಡಿದವರ ಹೆಸರಿನಲ್ಲಿ ಪ್ರಶಸ್ತಿಗಳನ್ನು ಶ್ರೀ ಬಸವ ಟಿ.ವಿ. ನೀಡುತ್ತದೆ.

13. ಮೂಢನಂಬಿಕೆಗಳನ್ನು ಹಾಗೂ ಭ್ರಷ್ಟಾಚಾರ ಮತ್ತು ಕಂದಾಚಾರ ನಿರ್ಮೂಲನೆ.

14. ದುಷ್ಕøತ್ಯ ದುರಾಚಾರಗಳ ವ್ಯಸನ ಮುಕ್ತ ದೇಶವನ್ನಾಗಿಸುವುದು.

15. ಸಮಾನತೆ, ಸಹಬಾಳ್ವೆ, ಸೋದರತೆ, ಸಹಿಷ್ಣುತೆ ಮತ್ತು ಅಸಹಿಷ್ಣುತೆ ನಿವಾರಣೆಗಾಗಿ ದುಡಿಮೆ.

16. ಮೂಲಭೂತ ಕೋಮುವಾದ ಮತ್ತು ಮತಿಯ ಗಲಭೆಗಳ ನಿರ್ಮೂಲನೆ.

17. ಉತ್ತಮ ಮೌಲ್ಯಧಾರಿತ ಶಿಕ್ಷಣಕ್ಕಾಗಿ ಶಿಕ್ಷಕರಿಗೆ ಬಸವ ಸಂಸ್ಕಾರ ತರಬೇತಿ ನೀಡುವುದು.

18. ಪ್ರತಿಯೊಂದು ತರಗತಿಯ ಪಠ್ಯಪುಸ್ತಕಗಳಲ್ಲಿ, ಶರಣರ ಆದರ್ಶ ತತ್ವಗಳನ್ನು ಬಿಂಬಿಸುವ  ಪಠ್ಯಕ್ರಮವನ್ನು, ಸರ್ಕಾರ ಜಾರಿ ಮಾಡುವಂತೆ, ಒತ್ತಾಯಿಸುವುದು.

19. ಮದುವೆ ಸಂಭ್ರಮಗಳಲ್ಲಿ ವಿಜೃಂಭಣೆಗಾಗಿ ಮಾಡುವ ದುಂದುವೆಚ್ಚ ವ್ಯವಸ್ಥೆಯ ವಿರುದ್ಧ,  ಹಾಗೂ  ಇಂತಹ ಕಾರ್ಯಕ್ರಮಗಳಿಂದ ದೇಶಕ್ಕಾಗುವ ನಷ್ಟದ ಬಗ್ಗೆ, ಸಾಕ್ಷ ಚಿತ್ರಗಳನ್ನು ತೋರಿಸುವ ಮುಖಾಂತರ ಜನರಲ್ಲಿ, ಅರಿವು ಮೂಡಿಸಿ ಈ ಬಗ್ಗೆ ಕಾನೂನು ಮಾಡುವಂತೆ ಸರ್ಕಾರವನ್ನು ಒತ್ತಾಯಿಸಬೇಕು.

20. ಇಷ್ಟಲಿಂಗವನ್ನು ಧರಿಸುವುದರಿಂದ ಮಾನವ ಕುಲಕೋಟಿಗಾಗುವ ಪ್ರಯೋಜನಗಳನ್ನು, ತಿಳಿಸಲು ಜನಾಂದೋಲನ ಮಾಡುವುದು.

21. ಸಾವಯವ ಕೃಷಿಪದ್ದತಿಯಿಂದ ರೈತನಿಗಾಗುವ ಲಾಭ ಹಾಗೂ ರೈತನ ಭೂಮಿಯ ಫಲವತ್ತತೆ ಕಾಪಾಡುವ ಕಾರ್ಯ ಕೈಗೊಳ್ಳುವ ಬಗ್ಗೆ.

22. ಬಸವ ತತ್ವಗಳ ಅಳವಡಿಕೆಯಿಂದ, ಆಹಾರ ವಿಹಾರಗಳ ಪದ್ದತಿಗಳ ಅರಿವು ಮೂಡಿಸಿ, ಮಾರಕ ರೋಗಗಳಿಂದ ಮುಕ್ತರಾಗುವ ಬಗ್ಗೆ ಕಾರ್ಯಕ್ರಮ.

23. ದೇಹದಲ್ಲೇ ದೇವರಿದ್ದಾನೆ, ಎಂಬ ಅರಿವು ಮೂಡಿಸುವ ಕಾರ್ಯಕ್ರಮ.

24. ದೇವರ ಹೆಸರಲ್ಲಿ ಬಲಿ ಕೊಡುವುದು, ಹಾಗೂ ದೇವರ ಹೆಸರಿನಲ್ಲಿ ಮುಗ್ಧ ಜನರನ್ನು ಬಲಿತೆಗೆದುಕೊಳ್ಳುತ್ತಿರುವ, ಅನಿಷ್ಟ ಪದ್ದತಿಗಳ ವಿರುದ್ಧ ಹೋರಾಟ.

25. ಪಾಶ್ಚಿಮಾತ್ಯ ರಾಷ್ಟ್ರಗಳ ಆಶ್ಲೀಲ ಉಡುಗೆ-ತೊಡುಗೆಗಳಿಗೆ ಯುವಪೀಳಿಗೆ ಆಕರ್ಷಣೆಗೊಳಗಾಗಿರುವ ವಿರುದ್ಧ ತಿಳುವಳಿಕೆ ಮೂಡಿಸುವುದು.

26. ಭಾರತ ದೇಶದಲ್ಲಿ ಧೂಮಪಾನ ಮತ್ತು ತಂಬಾಕು ನಿಷೇದಿಸುವ ಬಗ್ಗೆ ಹೋರಾಟ .

27. ಮನೆಯಲ್ಲೇ ಮದ್ದು, ತಯಾರಿಸಿ ದೇಶಿಯ ವೈದ್ಯಪದ್ದತಿಯ ಕಾರ್ಯಕ್ರಮಗಳನ್ನು ಮಾಡುವುದು.

28. ನೀರಿನ ಮಿತ ಬಳಕೆ, ಹಾಗೂ ಭೂಮಿಯಲ್ಲಿ ನೀರನ್ನು ಹಿಂಗಿಸುವ ಬಗ್ಗೆ, ರೈತರಿಗೆ ತಿಳುವಳಿಕೆ ಹಾಗೂ ಮಳೆನೀರು ಕೊಯ್ಯಲಿನ ತರಬೇತಿ ನೀಡುವುದು.

29. ರೈತರು ಬೆಳೆದ ಬೆಳೆಗಳಿಗೆ, ಸರಿಯಾದ ಬೆಲೆ ನಿಗದಿಪಡಿಸುವ ಬಗ್ಗೆ ಹೋರಾಟ.

30. ಶ್ರೀ ಬಸವ ಟಿವಿಯ ಸಾರಥ್ಯದಲ್ಲಿ ರೈತರ ಸಹಾಯವಾಣಿ ನಿರ್ಮಿಸುವುದು.

31. ವಿದೇಶಿ ಕಂಪನಿಗಳಿಂದ ತಯಾರಾದ, ವಸ್ತುಗಳ ಬಳಕೆಯ ವಿರುದ್ಧ ಅರಿವು ಮೂಡಿಸುವುದು.

32 ಸಣ್ಣ ಹಿಡುವಳಿ ರೈತರಿಗೆ ಸರ್ಕಾರ, ಬಡ್ಡಿರಹಿತ ಸಾಲವನ್ನು ನೀಡಲು ಹೋರಾಟ ಹಾಗೂ ಹೈನುಗಾರಿಕೆ ಜಾನುವಾರಗಳಿಗೆ ಉಚಿತ ವಿಮೆ ಓದಗಿಸುವ ಹೋರಾಟ ಮಾಡುವುದು.

33. ಆಶ್ಲೀಲ ಜಾಹಿರಾತು ಪ್ರದರ್ಶನ ಆಯೋಜಿಸುವ ಕಂಪನಿಗಳ ವಿರುದ್ಧ, ಹೋರಾಟ ಜಾಹಿರಾತುಗಾಗಿ ಮುಗ್ಧ ಹೆಣ್ಣು ಮಕ್ಕಳ ಅಂಗಾಂಗಗಳನ್ನು, ಪ್ರದರ್ಶನ ಮಾಡುವ ಕಂಪನಿಗಳ ವಿರುದ್ಧ ಹೋರಾಟ.

34. ಬಸವ ಕಲ್ಯಾಣದ ಪರಂಪರೆಯನ್ನು, ಪ್ರವಾಸಿಗರಿಗೆ ತಿಳಿಸಲು ಗೈಡ್, ಪುಸ್ತಕಗಳನ್ನು ಮುದ್ರಿಸುವುದು.

35. ಬಸವ ಜಯಂತಿಯನ್ನು ಬಸವ ಕಲ್ಯಾಣದಲ್ಲಿ ಬೃಹತ್ ಪ್ರಮಾಣದಲ್ಲಿ ನೇರವೇರಿಸಿ, ಜಗತ್ತಿನ ಹೆಸರಾಂತ ಶರಣ ಸಂತ ಅನುಭಾವಿಗಳಿಗೆ ಆಹ್ವಾನವಿತ್ತು. ಆ ದೇಶದ ಭಾಷೆಯನ್ನು ತರ್ಜುಮೆ ಮಾಡಿಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು.

36. ಬಸವ ಕಲ್ಯಾಣ ದರ್ಶಿನಿ, ಕ್ಯಾಲೆಂಡರನ್ನು ಮುದ್ರಿಸಿ, ಪ್ರತಿ ತಿಂಗಳಿಗೆ ಒಬ್ಬೊಬ್ಬರು ಶರಣರ ಜೀವನಚರಿತ್ರೆ, ಹಾಗೂ ಅವರ ವಚನಗಳನ್ನು ಮುದ್ರಿಸಿ ಕಡಿಮೆ ಬೆಲೆಯಲ್ಲಿ ಜನತೆಗೆ ಮುಟ್ಟಿಸುವುದು.

37. ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಹಾಗೂ ಬಸವ ತತ್ವವನ್ನು ಪ್ರಚಾರ ಮಾಡುವುದು.

38. ಶರಣರಜೀವನ ಚರಿತ್ರೆಗಳ ಪ್ರಭಂದ ಸ್ಪರ್ಧೆಗಳನ್ನು ಶ್ರೀ ಬಸವ ವಾಹಿನಿಯಿಂದ, ನಡೆಸಿಕೊಟ್ಟು ಮಕ್ಕಳಿಗೆ ಪ್ರಶಸ್ತಿ ಪುರಸ್ಕಾರ ನೀಡುವುದು.

39. ಸ್ವಾವಲಂಬಿ ರೈತರು ಹಾಗೂ ಗೃಹ ಕೈಗಾರಿಕೆಯಲ್ಲಿ ಸಾಧನೆಗೈದವರಿಗೆ, ಪ್ರಶಸ್ತಿಗಳನ್ನು ನೀಡುವುದು.

40. ದಲಿತ ಶೋಷಿತಜನರ, ಕೇರಿಗಳಿಗೆ ಭೇಟಿಕೊಟ್ಟು ಅವರ ಕಷ್ಟ-ಸುಖಗಳಿಗೆ ಸ್ಪಂದಿಸಿ ಬಸವ ವಾಹಿನಿಯಿಂದ, ಅವರ ತೊಂದರೆಗಳಿಗೆ ಪರಿಹಾರ ಕಲ್ಪಿಸುವುದು ಮತ್ತು ದಲಿತರ ಧ್ವನಿಯಾಗಿ ನಿಲ್ಲುವುದು.

41. ಪರಿಸರ ಮತ್ತು ಅರಣ್ಯ ಸಂರಕ್ಷಣೆಯ ಬಗ್ಗೆ ಅರಿವನ್ನು ಮೂಡಿಸುವುದು.

42. ಬಾಲ್ಯವಿವಾಹ ನಿರ್ಮೂಲನೆ.

43. ಪ್ರತಿ ದಿನ ಒಬ್ಬ ಶರಣರ ಜೀವನಚರಿತ್ರೆಯ ಧಾರವಾಹಿಗಳನ್ನು ನಮ್ಮ ವಾಹಿನಿಂದ ಬಿತ್ತರಿಸುವುದು.

44. ನೀತಿ ಕಥೆಗಳ ಮೂಲಕ ವಚನ ಸಾಹಿತ್ಯವನ್ನು ಬಿತ್ತರಿಸುವುದು.

45. ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ನುರಿತ ತಜ್ಞರಿಂದ ಸಂವಾದ ಕಾರ್ಯಕ್ರಮ.

46. ಪಕ್ಷಿ ಸಂಕುಲಗಳ ಬಗ್ಗೆ ತಿಳುವಳಿಕೆ ಹಾಗೂ ಅವುಗಳ ಸಂರಕ್ಷಣೆಗೆ ಬಗ್ಗೆ ಅರಿವನ್ನು ಮೂಡಿಸುವುದು.

47. ವಾಯುಮಾಲಿನ್ಯದ ಬಗ್ಗೆ ಅರಿವನ್ನು ಮೂಡಿಸುವುದು.


1. ಬಸವ ತತ್ವ ಪ್ರಸಾರ ಮಾಡುವ, ಭಿತ್ತಿ ಚಿತ್ರಗಳು ಮತ್ತು ವಚನ ಸೂಕ್ತಿಗಳನ್ನು ದಾಸೋಹಿಗಳ ಸಹಾಯದಿಂದ ಪ್ರಕಟಿಸಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರದಶಿಸಲಾಗುವುದು.

2. ಪ್ರತಿಯೊಂದು ಕೇಂದ್ರ ಮತ್ತು ರಾಜ್ಯಸರ್ಕಾರದ ಆಡಳಿತ ಕಛೇರಿಗಳಲ್ಲಿ, ಬಸವಣ್ಣನವರ ರಾಜಕೀಯ ಮತ್ತು ಜನಪರ ಆಡಳಿತದ, ವಚನ ಸೂಕ್ತಿಗಳನ್ನು ದಾಸೋಹಿಗಳ ಸಹಾಯದಿಂದ ಪ್ರದರ್ಶಿಸುವುದು.

3. ಗುರು ಬಸವಣ್ಣನವರ ಹೆಸರಿನಲ್ಲಿ, ಸಮಾಜ ಕಲ್ಯಾಣಕಾರಿ ಯೋಜನೆಗಳನ್ನು ರೂಪಿಸುವಂತೆ ಸರ್ಕಾರಕ್ಕೆ ಒತ್ತಾಯಿಸುವುದು.

4. ವಚನ ಸಾಹಿತ್ಯದ ಪುಸ್ತಕಗಳನ್ನು ಪ್ರತಿ ಮನೆ ಮನೆಗಳಿಗೆ ತಲುಪಿಸುವುದು.

5. ಬಸ್ ನಿಲ್ದಾಣ ಹಾಗೂ ಪಟ್ಟಣ ಪ್ರದೇಶದ ಸರ್ಕಲ್‍ಗಲ್ಲಿ ನಿಂತು, ವಚನ ಸಾಹಿತ್ಯದ ಪುಸ್ತಕಗಳನ್ನು ಮಾರುವುದು.

6. 12ನೇ ಶತಮಾನದ ಶರಣರು ಐಕ್ಯವಾಗಿರುವ ಸ್ಥಳಗಳನ್ನು ಹುಡುಕಿ ಬಸವ ವಾಹಿನಿಂದ ಅಭಿವೃದ್ಧಿ ಪಡಿಸುವುದು.

7. ಈವರೆಗೆ ಪ್ರಚಾರಕ್ಕೆ ಬಾರದಿರುವ ಶರಣರ ಜೀವನಚರಿತ್ರೆ ಮತ್ತು ಅವರ ವಚನಗಳನ್ನು ಪ್ರಕಟಿಸುವುದು.

8. ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಗೆ ಕ್ಯಾಬಿನೆಟ್ ದರ್ಜೆಯ ಅಧಿಕಾರವನ್ನು ನೀಡುವಂತೆ ಹೋರಾಟ ಮಾಡುವುದು.

9. ರೈತರ ಬಿತ್ತನೆ ಹಾಗೂ ರೋಗಗಳ ಬಗ್ಗೆ ರೈತ ಮಾಹಿತಿ ಕೇಂದ್ರಗಳನ್ನು, ಪ್ರತಿ ಗ್ರಾಮಗಳಲ್ಲಿ ತೆರೆಯಲು ಹೋರಾಟ ಮಾಡುವುದು.

10. ಸುಳ್ಳು ಜಾಹಿರಾತುಗಳನ್ನು ಪ್ರದರ್ಶಿಸುವ ಕಂಪನಿಗಳ ವಿರುದ್ಧ ಹಾಗೂ ಅವುಗಳನ್ನು ಮಾರಾಟ ಮಾಡುವ ಉದ್ದಿಮೆದಾರರ ವಿರುದ್ಧ ಹೋರಾಟ.

11. ಹೆಣ್ಣು ಮಕ್ಕಳನ್ನು ಕ್ಲಬ್, ಬಾರು ಹಾಗೂ ವೇಶ್ಯವಾಟಿಕೆಗಳಿಗೆ ಬಳಸಿಕೊಳ್ಳದಂತೆ ಹೋರಾಟ ಹಾಗೂ ಮನವರಿಕೆ ಮಾಡುವುದು.


* ಜಗತ್ತಿನ ಮೂಲೆ ಮೂಲೆಗಳಿಗೆ ಶರಣರ ಬಗ್ಗೆ ಮಹತ್ವವನ್ನು, ಮುಟ್ಟಿಸಲು ನಮ್ಮ ಶ್ರೀ ಬಸವ ಟಿವಿ ಶ್ರಮಿಸುವುದು.

* ಸರ್ಕಾರವು ಪ್ರತಿಯೊಂದು ಜಯಂತಿಗೂ, ರಜಾ ಘೋಷಿಸುವ ವಿರುದ್ಧ ಅರಿವು ಮೂಡಿಸಿ ಎರಡುಗಂಟೆ ಹೆಚ್ಚು ಕೆಲಸವನ್ನು ಮಾಡಿಸುವುದು.