ಶರಣರ ಜೀವನ ಚರಿತ್ರೆ


 • 1 ಬಸವಣ್ಣ
 • ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರು ಹಳೆಯಲು ಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ದಿ ಇದೇ ನಮ್ಮ ಕೂಡಲ ಸಂಗಮದೇವರನೊಲಿಸುವ ಪರಿ - ಕೂಡಲ ಸಂಗಮ ದೇವ...... ಎಂದು ಜಗತ್ತಿಗೆ ಸಪ್ತಸೂತ್ರಗಳನ್ನು ನೀಡಿದಂತಹ ಬಸವಣ್ಣನವರಿಗೆ ಸಮಾಜದ ಮೇಲೆ ತಾಯಿ ಪ್ರೀತಿ ಇತ್ತು. ಪ್ರತಿಯೊಂದು ನಿಟ್ಟಿನಲ್ಲಿಯೂ ಸಮಾಜದ ಏಳ್ಗೆಗಾಗಿ ಚಿಂತಿಸುತ್ತಿದ್ದರು. ದೀನರು, ದಲಿತರು, ಅಸ್ಪೃಶ್ಯರ ಬಗ್ಗೆ ಎಲ್ಲಿಲ್ಲದ ಕನಿಕರ. ಅನಿಷ್ಟ ವರ್ಣಬೇಧಗಳ ವಿರುದ್ಧ ಕಿಡಿಕಾರುತ್ತ. ಕಾಸಿಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ ಎಂದು ವಚನದ ಮೂಲಕ ತಿಳಿಸಿ, ಸರ್ವರೂ ಸಮಾನರು, ಯಾರು ಹೆಚ್ಚಿಲ್ಲ ಯಾರೂ ಸಹ ಕಡಿಮೆ ಇಲ್ಲ. ಎಲ್ಲರೂ ತಾಯಿಯ ಗರ್ಭದಿಂದಲೇ ಹುಟ್ಟಿಬರಬೇಕು. ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ ಎಂದು ವೈಜ್ಞಾನಿಕ ವಿಚಾರವನ್ನು ಮಂಡಿಸಿದರು. ನಿಜವಾದ ಕುಲಜರೆಂದರೆ ಲಿಂಗಪಥವನ್ನು ಹಾಗೂ ನಿರಾಕಾರ ಶಿವನನ್ನು ಅರಿತವರೇ ಕುಲಜರು, ಎಂದು ಜ್ಞಾನದಿಂದ ವ್ಯಕ್ತಿಯ ಆದರ್ಶದಿಂದ, ಅವನನ್ನು ಉತ್ತಮ ಕನಿಷ್ಠನೆಂದು ಗುರುತಿಸಬಹುದಲ್ಲದೆ ಜಾತಿಯಿಂದಲ್ಲ ಎಂದು ತಿಳಿಸುತ್ತ ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು, ನಮ್ಮ ಡೋಹಾರ ಕಕ್ಕಯ್ಯ., ಚಿಕ್ಕಯ್ಯ ಎನ್ನಯ್ಯ ಕಾಣಿರಣ್ಣ ಎಂದು ಅಸ್ಪೃಶ್ಯ ಸಮಾಜದಲ್ಲಿ ಜನಿಸಿದರೂ ಸತ್ಯವನ್ನು ದರ್ಶಿಸಿಕೊಂಡವರು ನಮ್ಮ ತಾಯಿ ತಂದೆಗಳು ಎಂದು. ವಿಶ್ವಮಹಾ ಮಾನವತೆಯ ಹರಿಕಾರಕರಾಗಿದ್ದಾರೆ ಬಸವಣ್ಣನವರು, ದಾನಕ್ಕಿಂತಲೂ ದಾಸೋಹಭಾವ ದೊಡ್ಡದೆಂದು ತಿಳಿಸಿ. ತನುನಿಮ್ಮದೆಂಬೆ ಮನ ನಿಮ್ಮದೆಂಬೆ ಧನ ನಿಮ್ಮದೆಂಬೆ ಎಂದು ತ್ರಿಕರ್ಣಶುದ್ಧರಾಗಿ ಶರಣರ ಸೇವೆಗಾಗಿ ಪರಿತಪಿಸುತ್ತಾರೆ. "ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ" ಎಂದು ಬಾಗಿದ ತಲೆ ಮುಗಿದ ಕೈಯಿಂದ 2,32,000 (ಎರಡು ಲಕ್ಷದ ಮೂವತ್ತೆರೆಡುಸಾವಿರ) ಶರಣರನ್ನು ಕಲ್ಯಾಣದತ್ತ ಬರಮಾಡಿಕೊಂಡರು, ಅವರಲ್ಲಿ 774 ಧರ್ಮದ ಮುಖಂಡರು ತತ್ವಜ್ಞಾನಿಗಳು, ಪರಮದಾಸೋಹಿಗಳು, ಶಾಂತಿಮೂರ್ತಿಗಳು ಕಾಯಕಜೀವಿಗಳು, ದಾಸೋಹ ಮೂರ್ತಿಗಳು, ನೀತಿವಂತರು ಒಟ್ಟಾರೆ 770 ಅಮರಗಣಂಗಳನ್ನು ಏಕಕಾಲದಲ್ಲಿ ನಿರ್ಮಿಸಿ “ಅನುಭವ ಮಂಟಪ”ವೆಂಬ ಮಂಟಪದಲ್ಲಿ ಸಮಾಜದ ಏಳ್ಗೆಗಾಗಿ ಚಿಂತನ ಮಂಥನ ನಡೆಸುವ ಕಾರ್ಯವನ್ನು ಎಲ್ಲಾ ಶರಣಶರಣೆಯರ ಸಮ್ಮುಖದಲ್ಲಿ ಪ್ರತಿನಿತ್ಯ ಎರಡು ಗಂಟೆಗಳ ಕಾಲ ಚರ್ಚಿಸುತ್ತಿದ್ದರು. ಅಲ್ಲದೆ ಜನಸಂದರ್ಶನಕ್ಕಾಗಿ ಜನತೆಯ ಕಷ್ಟಕಾರ್ಪಣ್ಯಗಳಿಗೆ ಪರಿಹಾರ ನೀಡಲು ಪರುಷಕಟ್ಟೆಯೆಂಬ ಸ್ಥಳದಲ್ಲಿ ಎಲ್ಲರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದರು. ಬಸವಣ್ಣನವರ ವ್ಯಕ್ತಿತ್ವವನ್ನು ವರ್ಣಿಸಲು ಅಸಾಧ್ಯ, ನಾನು ಗುರುವೆಂದು ಒಂದು ವಚನದಲ್ಲಿಯೂ ಸಹ ಬರೆದುಕೊಂಡಿಲ್ಲ. ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ಕಿಂಕರತ್ವದ ಮೇರು ಮೂರ್ತಿಯಾಗಿ, ಪಂಚಪುರುಷದ ವ್ಯಕ್ತಿತ್ವವನ್ನು ಹೊಂದಿದ್ದರು. ಜ್ಞಾನಿಗಳಲ್ಲದೆ ಕಳ್ಳರು, ಸುಳ್ಳರು, ವೇಶ್ಯೆಯರು, ಕಟುಕ ಕೊಲೆಗಡುಕರು ಅಲ್ಲದೆ ರಾಜಮಹಾರಾಜರು ಸಹ ತಮ್ಮ ಅಷ್ಟ ವೈಭೋಗಗಳನ್ನು ಬಿಟ್ಟು ಉಟ್ಟ ಬಟ್ಟೆಯಲ್ಲಿಯೇ ಕಲ್ಯಾಣಕ್ಕೆ ಬಂದು, ಸಮಾಜದ ಹಿತಚಿಂತಕರಾಗಿ, ಆದರ್ಶಜೀವಿಗಳಾಗಿ ಬದುಕನ್ನು ನಡೆಸಿದರು. ಗುರುಮುಟ್ಟಿ ಗುರುವಾಗಿ ಎಲ್ಲರನ್ನು ಗುರುವಾಗಿ ಮಾಡಿ, ಉರಿಯುಂಡ ಕರ್ಪೂರದಂತೆ ಪರಮಾತ್ಮನಲ್ಲಿ ಬೆರೆಯುವ ಮಾರ್ಗವನ್ನು ತೋರಿದ ಆಧ್ಯಾತ್ಮದ ದೃವತಾರೆಗಳಾಗಿದ್ದಾರೆ. ಹೆಣ್ಣಿಗಾಗಿ ಬಂದವನಲ್ಲಹೊನ್ನಿಗಾಗಿ ಬಂದವನಲ್ಲ ಮಣ್ಣಿಗಾಗಿ ಬಂದವನಲ್ಲ ಕೂಡಲಚನ್ನಸಂಗಮದೇವರಲ್ಲಿ ಭಕ್ತಿಪಥವ ತೋರಲು ಬಂದನಯ್ಯಾ, ಎಂಬ ಚೆನ್ನಬಸವಣ್ಣನವರ ವಚನದಂತೆ ಬದುಕಿ ಬಾಳಿ ಜಗದ ಜನತೆಗೆ ಆದರ್ಶ ಬಸವತತ್ವವನ್ನು ನೀಡಿ ವಿಶ್ವಮಾನವರಾಗಿದ್ದಾರೆ ಬಸವಣ್ಣನವರು. ಬಿಜಾಪುರ ಜಿಲ್ಲೆಯ ಬಾಗೇವಾಡಿ ಬಸವಣ್ಣನವರ ಹುಟ್ಟೂರು. ಮಾದರಸ-ಮಾದಲಾಂಬಿಕೆ ಇವರ ತಂದೆ-ತಾಯಿಗಳು. ಇವರಿಗೆ ಮಾರ್ಗದರ್ಶನ ನೀಡಿದವರು ಹಾಗೂ ವಿದ್ಯಾಬ್ಯಾಸ ನೀಡಿದಂತಹವರು ಸಂಗಮೇಶ್ವರ ಗುರುಗಳು ಬಸವಣ್ಣನವರಿಗೆ ಐಹಿಕ ಜೀವನಕ್ಕೆ ಬೇಕಾಗುವ ವಿದ್ಯೆಯೊಂದಿಗೆ ಪಾರಮಾರ್ಥಿಕ ವಿದ್ಯೆಯನ್ನು ಹೇಳಿಕೊಟ್ಟರು. ವಿದ್ಯೆ, ವಿನಯ, ಭಕ್ತಿ, ಸದಾಚಾರಗಳಿಂದ ಬಸವಣ್ಣನವರು ಎಲ್ಲರಿಗೂ ಅಚ್ಚುಮೆಚ್ಚಾದರು. ಸದಾ ಲವಲವಿಕೆ, ನಗುಮೊಗ, ಸರಳ ವರ್ತನೆ, ಆಲೋಚನಾಪರತೆಗಳಿಂದ, ಅದ್ಭುತವಾಗಿ ರೂಪುಗೊಳ್ಳುತ್ತಿರುವ ಬಸವಣ್ಣನವರ ವ್ಯಕ್ತಿತ್ವ ನೋಡಿ ಎಲ್ಲರೂ ಮಾರುಹೋದರು. ಬಸವಣ್ಣನವರು ಬಿಜ್ಜಳ ಅರಸನ ಮಂತ್ರಿಗಳಾದರು. ಬಲದೇವರ ಮಗಳು ಗಂಗಾಂಬಿಕೆ, ಸಿದ್ದರಸರ ಮಗಳು ಬಿಜ್ಜಳ ಅರಸನ ಸಾಕುತಂಗಿ ನೀಲಾಂಬಿಕೆಯರೊಂದಿಗೆ ಬಸವಣ್ಣನವರ ವಿವಾಹವಾಯಿತು. ಕಲ್ಯಾಣದಲ್ಲಿ ಬಸವಣ್ಣನವರು ‘ಅನುಭವ ಮಂಟಪ' ಸ್ಥಾಪನೆ ಮಾಡಿದರು. ಇದು ಪ್ರಜಾಪ್ರಭುತ್ವದ ತಳಹದಿಯ ಮೇಲೆ ರೂಪುಗೊಂಡಿತು. ಜಾತಿಭೇದವಿಲ್ಲದೆ ಎಲ್ಲರಿಗೂ ಇಲ್ಲಿ ಪ್ರವೇಶವಿತ್ತು. ಸ್ತ್ರೀಯರು ಕೂಡಾ ಭಾಗವಹಿಸುತ್ತಿದ್ದರು. ಅನುಭವ ಮಂಟಪದ ಮೂಲಕ ಹೊಸ ಸಮಾಜ ರಚನೆಯ ಕಾರ್ಯವನ್ನು ಮುಂದುವರಿಸಿದರು. ‘ದೇವನೊಬ್ಬ ನಾಮ ಹಲವು’‘ದಯವೇ ಧರ್ಮದ ಮೂಲ’ ಅಹಂಕಾರವಿರಬಾರದು, ಶುದ್ಧ ಅಂತಃಕರಣಕ್ಕೆ ಹೆಚ್ಚಿನ ಮಹತ್ವವಿರಬೇಕು, ಪ್ರತಿಯೊಬ್ಬರು ಸತ್ಯಶುದ್ಧಕಾಯಕ ಕೈಗೊಳ್ಳಬೇಕು. ಈ ತತ್ತ್ವಗಳನ್ನು ವಚನಗಳಲ್ಲಿ ಬರೆದುದಲ್ಲದೆ ಆಚರಣೆಯಲ್ಲಿ ತಂದರು. "ಕೂಡಲ ಸಂಗಮದೇವ" ಇವರ ಅಂಕಿತನಾಮವಾಗಿತ್ತು. ಭಕ್ತಿಭಂಡಾರಿ ಬಸವಣ್ಣನೆಂದು ಖ್ಯಾತರಾಗಿ, ನವಸಮಾಜದ ಉದಯಕ್ಕೆ ಅಡಿಪಾಯ ಹಾಕಿದವರು ಇವರಾಗಿದ್ದಾರೆ. ಸಮಾನತೆ, ಜಾತಿಭೇದವಿಲ್ಲದ ಸಮಾಜ ನಿರ್ಮಾಣದ ಕನಸು ಇವರದ್ದಾಗಿತ್ತು. ಅನೇಕ ಶಿವಶರಣರಿಗೆ ಇವರು ಸ್ಪೂರ್ತಿಯಾಗಿ ದೇವಮಾನವರಾಗಿ ಬಾಳಿ ಎಲ್ಲರಿಗೂ ದೇವಮಾನವರಾಗುವ ದಾರಿಯನ್ನು ತೋರಿಸಿಕೊಟ್ಟವರು. ಒಂಭತ್ತು ಶತಮಾನಗಳು ಕಳೆದರೂ ಅವರು ಬಿಟ್ಟ ಬೆಳಕು ಪ್ರಕಾಶಮಾನವಾಗಿ ಇನ್ನೂ ಉಳಿದಿದೆ. ಇವರು ಜಾತಿ ಪದ್ಧತಿಯು ನಮ್ಮ ಸಮಾಜದ ಶಾಪಗಳಲ್ಲೊಂದು ಎಂದು ಮನಗಂಡು, ಜಾತಿಪದ್ಧತಿಯನ್ನು ನಿರಾಕರಿಸಿದರು. ಅಂಧಶ್ರದ್ಧೆಯನ್ನು ಖಂಡಿಸಿ ಲಿಂಗವಂತ ಧರ್ಮವನ್ನು ಸಂಸ್ಥಾಪಿಸಿದರು. ಎಲ್ಲಾ ಮಾನವರು ಸಮಾನರೆಂದು ಬೋಧಿಸಿದರು. ಗಂಡು-ಹೆಣ್ಣು ಎಂಬ ಭೇದವನ್ನು ತೊಲಗಿಸಿ, ಪರಸ್ಪರ ಸಮಾನರೆಂದು ಸಾರಿದರು. “ಕಾಯವೇ ಕೈಲಾಸ" ಎಂಬ ತತ್ತ್ವವನ್ನು ಎತ್ತಿಹಿಡಿದರು. ಕಾಯಕಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದರು. ಇಂದಿನ ಸಮಾಜದ ಏರುಪೇರು ಹೋಗಬೇಕಾದರೆ ಪ್ರತಿಯೊಬ್ಬರು ಅವರ ತತ್ವ್ತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ಕರ್ನಾಟಕದ ಸಮಾಜಸುಧಾರಕರಲ್ಲಿ ಬಸವಣ್ಣನವರು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಅವರ ಆದರ್ಶವೇ ಮಾನವ ಕುಲಕೋಟಿಗೆ ದಾರಿದೀಪವಾಗಿದೆ.

 • 2 ಜೇಡರ ದಾಸಿಮಯ್ಯ
 • ಹನ್ನೆರಡನೆಯ ಶತಮಾನ ಭಕ್ತಿ, ದಾಸೋಹ, ಅನುಭಾವ ಷಟ್‍ಸ್ಥಲ, ಪಂಚಾಚಾರ, ಅಷ್ಟಾವರಣ, ಜೀವ–ಜಗತ್ತು ಈಶ್ವರ ಸಮಾಜ, ಬದುಕು ಮೊದಲಾದವುಗಳ ಬಗ್ಗೆ ಹೊಸನಿಟ್ಟಿನಲ್ಲಿ ಚಿಂತನೆಗೈದು ಅನುಷ್ಠಾನಕ್ಕೆ ತಂದ ಯುಗ. ಅಂದಿನ ಕನ್ನಡನಾಡಿನ ಚಿತ್ರವೆಂದರೆ ಸಮಗ್ರ ಭಾರತದ ಚಿತ್ರವೇ ಆಗಿತ್ತು. ಬಸವಣ್ಣನವರ ಹಿರಿತನದಲ್ಲಿ ವಚನಕಾರರು ಕಲ್ಯಾಣದಲ್ಲಿ 'ಸಕಲ ಜೀವ ರಾಶಿಗಳಿಗೆ ಲೇಸಗೈದ', ಬಸವಣ್ಣನವರ ಸಮಕಾಲೀನರಲ್ಲಿ ಹಿರಿಯರಾದ ಶ್ರೇಷ್ಠ ಅನುಭಾವಿಗಳು ಜೇಡರ ದಾಸಿಮಯ್ಯನವರು ಒಬ್ಬರಾಗಿದ್ದರು. ಜೇಡರ ದಾಸಿಮಯ್ಯರಿಗೆ ದಾಸ, ದಾಸಿಮ, ದಾಸಿಮಾರ್ಯ, ದೇವರದಾಸ, ಜೇಡರ ದಾಸ, ದೇವರ ದಾಸಿಮಯ್ಯ ಮೊದಲಾದ ಹೆಸರುಗಳು ಇದ್ದದ್ದು ಕಂಡುಬರುತ್ತವೆ. ಬಸವಣ್ಣನವರ ಮೇಲೆ ಪ್ರಭಾವವನ್ನು ಬೀರಿದ ಹಿರಿಯ ಸಮಕಾಲೀನರಲ್ಲಿ ಜೇಡರ ದಾಸಿಮಯ್ಯ ಪ್ರಮುಖರು. ಬಸವಣ್ಣನವರು ಹಲವಾರು ವಚನಗಳಲ್ಲಿ ಈ ಅಂಶವನ್ನು ವ್ಯಕ್ತ ಪಡಿಸಿದ್ದಾರೆ. “ಭಕ್ತಿ ಎಂತಹುದಯ್ಯ ದಾಸಯ್ಯ ಮಾಡಿದಂತಹುದಯ್ಯಾ” “ನೆರೆನಂಬೊ ನೆರೆನಂಬೊ ದಾಸದುಗ್ಗಳೆಯರಂತೆ” “ದಾಸಿಮಯ್ಯನಂತೆ ಉಡ ಕೊಡಬಲ್ಲನೆ”? “ಭಕ್ತಿಯಿಲ್ಲದ ಬಡವ ನಾನಯ್ಯ; ಕಕ್ಕಯ್ಯನ ಮನೆಯಲು ಬೇಡಿದೆ ಚೆನ್ನಯ್ಯನ ಮನೆಯಲೂ ಬೇಡಿದೆ, ದಾಸಯ್ಯನ ಮನೆಯಲೂ ಬೇಡಿದೆ ಎಲ್ಲಾ ಪುರಾತನರು ನೆರೆದು ಭಕ್ತಿಭಿಕ್ಷವನ್ನಿಕ್ಕಿದರೆ ಎನ್ನಪಾತ್ರೆ ತುಂಬಿತ್ತು” “ಈಶ ಭಕ್ತನಾಗಿ ಬಂದು ದಾಸನ ವಸ್ತ್ರವ ಬೇಡಿದ ಕೊಟ್ಟದಾಸ ತವನಿಧಿಯ ಪಡೆದ” ಇತ್ಯಾದಿ. ಹೀಗೆ ಬಸವಣ್ಣನವರು ಜೇಡರ ದಾಸಿಮಯ್ಯರಲ್ಲದೆ ಶಂಕರದಾಸಿಮಯ್ಯ, ಮಾದಾರ ಚೆನ್ನಯ್ಯನವರನ್ನು ಸ್ಮರಿಸಿದ್ದಾರೆ. ಬಸವಣ್ಣನವರ ಮೇಲೆ ಮಹತ್ತರವಾದ ಪ್ರಭಾವವನ್ನು ಬೀರಿದವರಲ್ಲೊಬ್ಬರಾದ ಜೇಡರ ದಾಸಿಮಯ್ಯನವರನ್ನು ಕುರಿತು ಇಲ್ಲಿ ಪ್ರಸ್ತಾಪಿಸಲಾಗಿದೆ. ಶತ ಶತಮಾನಗಳಿಂದ ಮಾನಸಿಕವಾಗಿ ಮತ್ತು ಶಾರೀರಕವಾಗಿ ದಾಸ್ಯಭಾವವನ್ನು ಬೆಳಸಿಕೊಂಡಿದ್ದ ಜನ ತಮ್ಮ ಜಡತ್ವವನ್ನು ಕೊಡವಿಕೊಂಡು ಮೇಲೆದ್ದ ಕಾಲ ಹನ್ನೆರಡನೆಯ ಶತಮಾನ. ಭಿನ್ನಭಿನ್ನ ಕಾಯಕದ ಜನರು ಒಂದೆಡೆ ಸಂಘಟಿತರಾಗಿ ವಿಚಾರವಿನಿಮಯ ನಡೆಸಿದುದು, ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ, ಈ ಶರಣರು ತಮ್ಮ ಅಂದಂದಿನ ಜೀವನದ ಅನುಭವ-ಅನುಭಾವಗಳಿಗೆ ವಚನಗಳ ಮೂಲಕ ಅಭಿವ್ಯಕ್ತಿಸಿದುದು ಅತ್ಯಂತ ಗಮನಾರ್ಹ ವಿಷಯ. ಕೆಳವರ್ಗದವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮೇಲೆತ್ತುವ ಒಂದು ಕ್ರಿಯೆ ಚಳುವಳಿಯ ರೂಪದಲ್ಲಿ ಶರಣರ ಹೃದಯದಂತಿದ್ದ ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಅನುಭವ ಗೋಷ್ಠಿಗಳು, ಬಣ್ಣ, ಭಾಷೆ, ಕುಲ,ಜಾತಿ, ಪ್ರಾಯ, ಲಿಂಗ, ಸ್ಥಾನ, ಕಸುಬು ಮುಂತಾದ ಭೇದಗಳನ್ನು ಕಿತ್ತೊಗೆದುದಲ್ಲದೆ ಪರಸ್ಪರ ಸಾಮೂಹಿಕ ಲಿಂಗಪೂಜೆ, ಸಹ ಪಂಕ್ತಿಭೋಜನ - ಇವೇ ಮೊದಲಾದವು, ಏಕೀಭವಿಸಿದ್ದು ಹನ್ನೆರಡನೆಯ ಶತಮಾನದಲ್ಲಿ ಕಂಗೊಳಿಸುತ್ತಿದ್ದ ಸಂಸತ್ತು (ಪಾರ್ಲಿಮೆಂಟ್). ಇದೇ ಅನುಭವ ಮಂಟಪ. ಇಂಥದ್ದು ಜಗತ್ತಿನ ಇತಿಹಾಸದಲ್ಲಿಯೇ ಹಿಂದೆ ಎಲ್ಲೂ ನಡೆದಿರಲಾರದು. ಇಂತಹ ಆಧ್ಯಾತ್ಮಿಕ ಪೀಠ ಅಥವಾ ಸಂಸ್ಥೆಯನ್ನು ಹುಟ್ಟುಹಾಕಿದ ಅಣ್ಣ ಬಸವಣ್ಣನವರ ಹಿರಿಯ ಸಮಕಾಲೀನ ಶರಣರೂ, ವಚನಕಾರರೂ ಆದವರು ಜೇಡರ ದಾಸಿಮಯ್ಯನವರು. ಇವರನ್ನು ಅನೇಕರು ಆದ್ಯ ವಚನಕಾರರೆಂದು ತಮ್ಮ ಲೇಖನಗಳಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಜೇಡರ ದಾಸಿಮಯ್ಯನವರೇ ಹೇಳಿದ ಒಂದು ವಚನದಲ್ಲಿ ತನಗಿಂತ ಹಿಂದೆ ಇದ್ದ ಶರಣರ ಸೂಳ್ನೂಡಿಗಳ ಅಗ್ಗಳಿಕೆಯನ್ನು ಕುರಿತು ಹೇಳಿರುವ ವಚನ ಇಂತಿದೆ. ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತಡೆ ಒಲ್ಲೆ ಹಿರಿದಪ್ಪರಾಜ್ಯವನಿತ್ತಡೆ ಒಲ್ಲೆ ನಿಮ್ಮ ಶರಣರ ಸೂಳ್ನುಡಿಯ ಒಂದರೆಘಳಿಗೆಯಿತ್ತಡೆ ನಿಮ್ಮನಿತ್ತೆ ಕಾಣಾ ! ರಾಮನಾಥ. ಜೇಡರ ದಾಸಿಮಯ್ಯನ ಜನ್ಮಸ್ಥಳ ಈಗಿನ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿರುವ ಮುದನೂರು. ಈ ಊರಿನಲ್ಲಿ ರಾಮನಾಥ ದೇವಾಲಯ ಮತ್ತು ಸಪ್ತತೀರ್ಥಗಳಿದ್ದು, ನಿಸರ್ಗ ಸೌಂದರ್ಯಕ್ಕೆ ಹೆಸರಾಗಿದೆ. ರಾಮಯ್ಯ - ಶಂಕರಿ ಎಂಬ ದಂಪತಿಗಳಿಗೆ ಹುಟ್ಟಿದ ಜೇಡರ ದಾಸಿಮಯ್ಯ, ಮನೆತನದ ಉದ್ಯೋಗವಾದ ನೆಯ್ಗೆಯ ಕಾಯಕದಲ್ಲಿ ನಿರತನಾದ. ಈತನ ಅಂತರಂಗ ಶಿವಜ್ಞಾನಕ್ಕಾಗಿ ಹಂಬಲಿಸಿತ್ತು. ತನ್ನ ಆತ್ಮದ ಹಸಿವನ್ನು ತೀರಿಸಿಕೊಳ್ಳಲು ಶ್ರೀಶೈಲಕ್ಕೆ ಹೋದರು. ಅಲ್ಲಿ ಪಂಡಿತಾರಾಧ್ಯ ಪೀಠದ ಅಧಿಪತಿಗಳಾದ ಚಂದ್ರಗುಂಡ ಶಿವಾಚಾರ್ಯ ಅವರಿಂದ ಶಿವದೀಕ್ಷೆ ಪಡೆದು ಶಿವಜ್ಞಾನ ಸಂಪನ್ನರಾದರು. ಅಲ್ಲಿಂದ ಹಿಂದಿರುಗಿದ ಜೇಡರ ದಾಸಿಮಯ್ಯನವರು ದಾರಿಯಲ್ಲಿ ಸಾವಿರ ಜನರಿಗೆ ಲಿಂಗದೀಕ್ಷೆಯಿತ್ತು, ಕತ್ತಲೆಯಿಂದ ಬೆಳಕಿನಡೆಗೆ ನಡೆಸಿದ. ಅನೇಕ ಶಿಷ್ಯರನ್ನು ಕೂಡಿಕೊಂಡು ಪೊಟ್ಟಲಕೆರೆಗೆ ಬಂದರು. ಈಗ ಇದು ಆಂಧ್ರಪ್ರದೇಶದ ಮೇದಕ್ ಜಿಲ್ಲೆಯಲ್ಲಿ ‘ಪೊಟಂಚರು’ ಎಂದು ಹೆಸರಾಗಿದೆ. ಆಗ ಅಲ್ಲಿ ಚಾಲುಕ್ಯ ಚಕ್ರವರ್ತಿ ಎರಡನೆಯ ಜಯಸಿಂಹ ರಾಜ್ಯವಾಳುತ್ತಿದ್ದ. ಅಲ್ಲಿಯೂ ಅನೇಕ ಜನರು ಲಿಂಗದೀಕ್ಷೆಯನ್ನು ಜೇಡರ ದಾಸಿಮಯನವರಿಂದ ಪಡೆದರು. ಜಯಸಿಂಹ ರಾಜನ ರಾಣಿ ಸುಗ್ಗಲೆಯು ಸಹ ಲಿಂಗದೀಕ್ಷೆ ತೆಗೆದುಕೊಂಡರು. ಅಲ್ಲಿಂದ ದಾಸಿಮಯ್ಯ ಮುದನೂರಿಗೆ ಬಂದು ನೆಯ್ಗೆಯ ಕಾಯಕ ಮಾಡುತ್ತ ಶಿವಾನು ಭಾವವನ್ನು ಜನರಿಗೆ ನೀಡುತ್ತ ಜೀವನ ಸಾಗಿಸತೊಡಗಿದರು. ಯೌವನಕ್ಕೆ ಕಾಲಿಟ್ಟಿದ್ದ ದಾಸಿಮಯ್ಯನವರಿಗೆ ಮದುವೆಯಾಗುವ ಇಚ್ಛೆಯಾಯಿತು. ಶರಣರು ದಾಂಪತ್ಯ ಜೀವನಕ್ಕೆ ಬಹಳ ಮಹತ್ವಕೊಟ್ಟರು. ಶರಣ ಧರ್ಮವು ಗೃಹಸ್ಥ ಧರ್ಮವನ್ನು ಎತ್ತಿಹಿಡಿಯಿತ್ತು. ತಾಯಿಯೇ ದೇವರೆಂದು ವೇದ ಹೇಳಿದರೆ, ವಚನಕಾರರು ಹೆಣ್ಣೇ ದೇವರೆಂದು ಹೇಳಿದರು. ಹೆಣ್ಣು ಸಾಕ್ಷಾತ್ ಕಪಿಲ ಸಿದ್ಧಮಲ್ಲಿಕಾರ್ಜುನ ಎಂದರು. ಶಿವಶರಣರು ಸಮಾಜದಲ್ಲಿ ಹೆಣ್ಣಿಗೆ ಘನತೆಯ ಗೌರವದ ಸ್ಥಾನ ಕೊಟ್ಟಷ್ಟು ಜಗತ್ತಿನ ಯಾವ ಧರ್ಮವೂ ಕೊಟ್ಟಿಲ್ಲ. ಸಾಮಾಜಿಕ, ಧಾರ್ಮಿಕ-ಆಧ್ಯಾತ್ಮಿಕ ಜೀವನದಲ್ಲಿ ಅವರಿಗೆ ಇರದ ಸ್ಥಾನಗಳನ್ನು ಮೊದಲಿಗೆ ಕೊಟ್ಟು ಗೌರವಿಸಿದವರು ಶರಣರು. ಗಂಡ ಮಾಡುವ ಪುಣ್ಯ ಪಾಪಗಳಿಗೆ ಹೊಣೆಯಾಗುವ ಹಾಗೂ ತಪ್ಪುಕಲ್ಪನೆಗಳಿಂದಾಗಿ ಸ್ತ್ರೀಸಮಾಜ ಆಥಃಪತನ ಹೊಂದಿತ್ತು. ಶರಣ ಧರ್ಮದಲ್ಲಿ ಸ್ತ್ರೀಯರಿಗೆ ಸಂಪೂರ್ಣ ಸ್ವಾತಂತ್ರ್ಯ ಲಭ್ಯವಾಯಿತು. ದಾಂಪತ್ಯ ಜೀವನಕ್ಕೆ ಹಂಬಲಿಸಿದ ಜೇಡರ ದಾಸಿಮಯ್ಯ ಹೆಣ್ಣನ್ನು ಹುಡುಕತೊಡಗಿದರು. ತನ್ನನ್ನು ಅನುಸರಿಸುವ ಸ್ವತಂತ್ರ ವಿಚಾರವುಳ್ಳ ಹೆಣ್ಣನ್ನು ಅವರು ಬಯಸಿದರು. ಅದಕ್ಕೆ ಅವರು ಉಪಾಯ ಮಾಡಿದರು. ಸೆರಗಿನಲ್ಲಿ ಮರಳು ಬೆರಸಿದ ಬೊಗಸೆ ಅಕ್ಕಿ, ಹೆಗಲ ಮೇಲೆ ಎರಡು ಕಬ್ಬಿನ ಜಲ್ಲೆ ಇಟ್ಟುಕೊಂಡು ಇವನ್ನು ಬಳಸಿ ಅಡಿಗೆ ಮಾಡಿ ಬಡಿಸುವ ಹೆಣ್ಣು ಬೇಕೆಂದು ಹೇಳುತ್ತಾ ಊರೂರು ಸುತ್ತಿದ್ದರು. ಕೊನೆಗೆ ಒಬ್ಬ ಬುದ್ಧಿವಂತ ಯುವತಿ ಅವರ ಕರಾರಿಗೆ ಒಪ್ಪಿದರು. ಅವರು ಮಾಡಿದ್ದಾದರೂ ಏನು ? ಕಬ್ಬಿನ ತುದಿಭಾಗ ಬೇರ್ಪಡಿಸಿಟ್ಟು ರಸ ಹಿಂಡಿದರು. ಸಿಹಿ ಜಾಸ್ತಿಯಿರುವ ಕಾಂಡಭಾಗದ ಆ ರಸವನ್ನು ಬೇರೆ ತೆಗೆದಿರಿಸಿದರು. ಕಬ್ಬಿನ ತುದಿಯಿಂದ ತೆಗೆದ ರಸದಿಂದ ಅಕ್ಕಿ ಜಾಲಿಸಿ ಮರಳು ಬೇರ್ಪಡಿಸಿದರು. ಅನಂತರ ಕಾಂಡ ಭಾಗದಿಂದ ತೆಗೆದ ರಸವನ್ನು ಅಕ್ಕಿಯೊಡನೆ ಬೆರಸಿ ಒಲೆಯ ಮೇಲಿಟ್ಟು ಕುದಿಸಿ ಅನ್ನ ಮಾಡಿದರು. ಕಬ್ಬಿನ ಸಿಪ್ಪೆಯನ್ನೆ ಉರವಲಾಗಿ ಬಳಸಿ ತನ್ನ ಜಾಣ್ಮೆ ತೋರಿದರು. ದಾಸಿಮಯ್ಯರ ಪರೀಕ್ಷೆಯಲ್ಲಿ ಗೆದ್ದ ದುಗ್ಗಲೆ ಅವರಿಗೆ ತಕ್ಕ ಸತಿಯಾಗಿ, ಪರಶಿವನಿಗೆ ತಮ್ಮ ದಾಂಪತ್ಯ ಜೀವನ ಮೆಚ್ಚಿಗೆಯಾಗುವಂತೆ ಬದುಕಿದ್ದು ಶರಣರೆಲ್ಲರಿಗೆ ಆದರ್ಶವಾಯಿತು. ಜೇಡರ ದಾಸಿಮಯ್ಯ – ದುಗ್ಗಳೆಯರ ಸಂಸಾರ ಸುಖಮಯವಾಗಿತ್ತು. ದಾಸಿಮಯ್ಯನವರ ಭಕ್ತಿಯ ಜೀವನಕ್ಕೆ ಬೆಳಕಾಗಿ ಬಾಳಿದರು. “ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ ಸತಿಪತಿಗಳೊಂದಾಗದವನ ಭಕ್ತಿ ಅಮೃತದೊಳು ವಿಷವ ಬೆರೆಸಿದಂತೆ ಕಾಣಾ ರಾಮನಾಥ” ದಾಸಿಮಯ್ಯನವರ ಈ ವಚನ ಇವರ ದಾಂಪತ್ಯ ಜೀವನಕ್ಕೆ ಭಾಷ್ಯ ಬರೆದಂತಿದೆ. ತಮ್ಮ ಕಾಯಕದಿಂದ, ಶಿವಾನುಭಾವದಿಂದ, ಪರಿಶುದ್ಧ ಜೀವನದಿಂದ ಈ ಶರಣ ದಂಪತಿಗಳು ಜಗತ್ತಿಗೇ ಮಾರ್ಗದರ್ಶಕರಾದರು. ಭಕ್ತಿ, ಕಾಯಕ, ಅನುಭಾವ - ಇವುಗಳಿಂದ ದಾಸಿಮಯ್ಯರ ಕೀರ್ತಿ ಎಲ್ಲಾ ಕಡೆ ಹಬ್ಬಿತ್ತು. ಇಬ್ಬರು ಯುವಕರಿಗೆ ಸಂಸಾರ ಹೆಚ್ಚೋ, ವೈರಾಗ್ಯ ಹೆಚ್ಚೋ ಎಂಬ ಜಿಜ್ಞಾಸೆಯುಂಟಾಯಿತು. ಅವರು ದಾಸಿಮಯ್ಯನವರ ಮನೆಗೆ ಹೋಗಲು ತೀರ್ಮಾನಿಸಿ ಶರಣರ ಮನೆಗೆ ಬಂದರು ಆ ಯುವಕರು. ಇವರನ್ನು ಕಂಡು ಬರಮಾಡಿಕೊಂಡು ದಾಸಿಮಯ್ಯನವರು ಬಟ್ಟೆ ನೇಯುತ್ತಿದ್ದರು. ಬಂದವರನ್ನು ಉಪಚರಿಸಿ ಕೂಡಿಸುತ್ತಿದ್ದರು. ದುಗ್ಗಳೆ, ಈ ದಾರ ಹರಿದುಹೋಗಿದೆ ಗಂಟುಹಾಕಬೇಕು, ದೀಪ ತಾ ಸರಿಯಾಗಿ ಕಾಣುತ್ತಿಲ್ಲ’ ಎಂದರು. ಹಗಲ ಬೆಳಕಿನಲ್ಲಿ ದೀಪವೇಕೆ ? ಎನ್ನದೆ ಅವರ ಆಣತಿಯಂತೆ ದುಗ್ಗಳೆ ದೀಪವನ್ನು ಒಯ್ದರು. ಆ ಬೆಳಕಿನಲ್ಲಿ ಅವರು ಎಳೆ ಸರಿಪಡಿಸಿದರು. ಕುಂಚಿಗೆಯು ಕೈಗೆ ನಿಲುಕುವಂತಿದ್ದರೂ ಅದನ್ನು ತಂದುಕೊಡಲು ದುಗ್ಗಳೆಯನ್ನು ಕೇಳಿದರು. ಹೀಗೆ ಇಂಥ ನಾಲ್ಕಾರು ಪ್ರಸಂಗಗಳನ್ನು ಬಂದವರು ನೋಡಿದರು. ದಾಸಿಮಯ್ಯ ದಂಪತಿಗಳು ಬಂದವರನ್ನು ಪ್ರಸಾದ ಸ್ವೀಕರಿಸಲು ವಿನಂತಿಸಿದರು. ಆರಿದ ಅಂಬಲಿಯನ್ನು ದಾಸಿಮಯ್ಯ ಸುಡುತ್ತಿದೆ ಎಂದಾಗ, ದುಗ್ಗಳೆ ಬೀಸಣಿಗೆಯಿಂದ ಗಾಳಿ ಬೀಸಿದರು. ಸತಿಪತಿಗಳ ಸರಸಜೀವನ ನೋಡಲು ಬಂದಿದ್ದವರು ವೈರಾಗ್ಯಕ್ಕಿಂತ ಸತಿಪತಿಯರ ಸಾಮರಸ್ಯ ಜೀವನವೇ ಹೆಚ್ಚು ಎಂದುಕೊಂಡರು. ಗಂಡನ ಮನದ ಇಂಗಿತವನ್ನು ಅರಿತು ಬಾಳುವ ಹೆಣ್ಣಿದ್ದರೆ ಸಂಸಾರವೇ ಲೇಸೆಂಬ ಭಾವನೆ ಈ ಪ್ರಸಂಗದಿಂದ ಧ್ವನಿತವಾಯಿತು. ಸಂಸಾರ ಸುಖಮಯವಾಗಬೇಕಾದರೆ ಗಂಡ ಹೆಂಡತಿ ಸಮಾನ ಮನಸ್ಕರಾಗಿರಬೇಕು. ಒಬ್ಬರನೊಬ್ಬರು ಅರ್ಥಮಾಡಿಕೊಂಡಿರಬೇಕು. ತನ್ನ ಇಚ್ಛೆಯಂತೆ, ಹೀಗಿದ್ದ ದಂಪತಿಗಳಿಗೆ ಸ್ವರ್ಗ ಬೇಕೆ? ಭಾವನೆ ಈ ಪ್ರಸಂಗದಿಂದ ಶರಣರು ಸಾಂಸಾರಿಕ ಜೀವನವನ್ನು ಸಮರಸಭಾವದಿಂದ ನಡೆಸುತ್ತಿದ್ದರೆಂಬುದು ಧ್ವನಿತವಾಗುತ್ತದೆ. ಅಂತೆಯೇ ಬಸವಣ್ಣ ಅವರನ್ನು ಹೃದಯ ತುಂಬಿಕೊಂಡಾಡಿದ್ದಾರೆ. ನೆರೆನಂಬೊ ನೆರೆನಂಬೊ ಧರಧುರವಿಲ್ಲದ ಸಾಮವೇದಿಗಳಂತೆ ನೆರೆನಂಬೊ ನೆರೆನಂಬೊ ದಾಸ - ದುಗ್ಗಳೆಯರಂತೆ ನೆರೆನಂಬೊ ನೆರೆನಂಬೊ ಸಿರಿಯಾಳ – ಚೆಂಗಳೆಯಂತೆ ನೆರೆನಂಬೋ ನೆರೆನಂಬೊ ಸಿಂಧುಬಲ್ಲಾಳನಂತೆ. ನಂಬಿದೆಯಾದೊಡೆ ತನ್ನನೀವ ಕೂಡಲಸಂಗಮದೇವ ಜೇಡರ ದಾಸಿಮಯ್ಯ ಒಳ್ಳೆಯ ವಚನಕಾರ. ಇವರ 176 ವಚನಗಳು ದೊರಕಿವೆ. ಅವರ ವಚನಗಳ ಅಂಕಿತ “ರಾಮನಾಥ”. ಜೇಡರ ದಾಸಿಮಯ್ಯನ ವಚನಗಳ ಮುಖ್ಯ ಗುಣ ಸಂಕ್ಷಿಪ್ತತೆ, ಸರಳತೆ ಹಾಗೂ ಅರ್ಥ ಪ್ರಚುರತೆ. ಆ ಕಾಲಮಾನದ ಸಾಮಾಜಿಕ ಜೀವನದ ಹಲವು ವೈಪರೀತ್ಯಗಳ ವಿಡಂಬನೆಯನ್ನು ಟೀಕೆಯನ್ನು ಕಾಣುತ್ತೇವೆ. ‘ವಚನ’ ಒಂದು ಸಾಹಿತ್ಯ ಪ್ರಕಾರವಾಗಿ ರೂಪಗೊಳ್ಳತ್ತಿದ್ದುದನ್ನು ಇವರ ವಚನಗಳಲ್ಲಿ ನಿಚ್ಚಳವಾಗಿ ನಾವು ಗುರುತಿಸುತ್ತೇವೆ. ಈ ಹೊಸ ಸಾಹಿತ್ಯ ಪ್ರಕಾರಕ್ಕೆ ಬೇರೆ ಬೇರೆ ಆಯಾಮಗಳನ್ನು ತೆರೆದು ತೋರಿಸಿದವನು ಜೇಡರ ದಾಸಿಮಯ್ಯನೆಂದರೆ ತಪ್ಪಾಗಲಾರದು. ಅವನು ಹೇಳಿದ ಒಂದು ವಚನ ಹೀಗಿದೆ; ಈಶ ನಿಮ್ಮ ಪೂಜಿಸಿದ ಬಳಿಕ ಅನ್ಯ ದೈವಂಗಳಿಗೆ ಹೇಸಲೇಬೇಕು ಹೇಸದೆ ಅನ್ಯದೈವಕ್ಕೆ ಆಸೆ ಮಾಡಿದಡೆ ಅವ ನಮ್ಮ ಈಶ್ವರಂಗೆ ಹೊರಗು ದೋಷರಹಿತ ಭಕ್ತರು ಆವಂಗೆ ಕುಲವೆಂದು ಕೂಸ ಕೊಟ್ಟುಕಂಡುಂಡಡೆ ಮೀಸಲ ಬೋನವ ನಾಯಿ ಮುಟ್ಟಿದಂತೆ ಕಾಣಾ ರಾಮನಾಥ. ಏಕ ದೇವೋಪಾಸನೆಯೆಂದರೆ – ದೇವನೊಬ್ಬನೆ ಎಂದು ನಂಬಿ ನೆಚ್ಚಿ ಒಂದೇ ಸಾಕಾರ ದೇವನನ್ನು ಪೂಜಿಸುವರು. ಬಹು ದೇವೋಪಾಸನೆಯನ್ನು ಬಿಡುವುದು. ಈ ವಚನದಲ್ಲಿ ಈಶ ಒಬ್ಬನೇ ದೇವರು ಎಂದು ಅವನನ್ನು ನಂಬಿ ಪೂಜೆ ಮಾಡಿದ ಬಳಿಕ, ಅನ್ಯ ದೇವತೆಗಳನ್ನು ಆಸೆ ಪಟ್ಟು ಪೂಜಿಸಿದ್ದೇ ಆದರೆ ಇವರು ಈಶನಿಗೆ ಹೊರಗೆ ಆಗುತ್ತಾರೆ. ಅಂದರೆ ಆ ದೈವ ಅವನನ್ನು ದೂರವಿಡುತ್ತದೆ. ಹಲವು ದೈವದ ಪೂಜೆಯು ಮಿಸಲಿಟ್ಟ ಬೋನವು ನಾಯಿ ಮುಟ್ಟಿ ಅಪವಿತ್ರಗೊಳಿಸಿದಂತಾಗುತ್ತದೆ. ಅಂತಹ ಬೋನವು ದೇವರಿಗೆ ನೈವೇದ್ಯವಾಗಿ ಸಲ್ಲುವುದಿಲ್ಲವೆಂದು ಸ್ಪಷ್ಟವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ದೇವರೆಂದರೆ ಹುಟ್ಟು ಸಾವಿನ ಭವಚಕ್ರಕ್ಕೆ ಅತೀತವಾಗಿ ನಿಂದಿರುವ ಸರ್ವಜ್ಞ ಸರ್ವಶಕ್ತನಾದ ತನಗೆ ಮೀರಿದ ಒಂದು ಶಕ್ತಿಯಿಲ್ಲದಿರುವ ಅದ್ವಿತೀಯನು. ದೇವನ ವಾಖ್ಯೆ ಇಂತಿರುವಾಗ ಇಬ್ಬರು ಮೂವರು ದೇವರಾದರೂ ಹೇಗೆ ಇದ್ದಾರೂ? ಸರ್ವಜ್ಞತ್ವ ಸರ್ವಶಕ್ತಿತ್ವ ಗುಣಯುಕ್ತ ಪರಶಿವನೊಬ್ಬನೇ ದೇವ ಎಂಬುದನ್ನು ಸಕಲ ಶರಣರೂ ಒಪ್ಪುವರು. ಜೇಡರ ದಾಸಿಮಯ್ಯನವರು ತನ್ನ ವಚನಗಳ ಸಾಹಿತ್ಯಕ ಗುಣ ಮತ್ತು ಮೌಲ್ಯಗಳಿಂದಾಗಿ ಶ್ರೇಷ್ಠ ವಚನಕಾರ ಆಗಿದ್ದಾರೆ. ಈಶನ ಶರಣರು ವೇಶಿಯ ಹೋದಡೆ ಮೀಸಲೋಗರವ ಹೊರಗಿರಿಸಿದಡೆ ಹಂದಿ ಮೂಸಿ ನೋಡಿದಂತೆ ರಾಮನಾಥ. ಇಂತಹ ದೃಷ್ಟಾಂತ ಭರಿತ ಅನೇಕ ವಚನಗಳು ಲಭ್ಯವಾಗುತ್ತವೆ. ಈಶ್ವರತತ್ತ್ವವನ್ನು ಸಾಧನೆ ಮಾಡುವ ಸಾಧಕನು, ದೇವರಿಗೆಂದು ಸಮರ್ಪಿಸಬೇಕಾದ ಪ್ರಸಾದವನ್ನು ಹೊರಗಡೆ ಇರಿಸಿದಾಗ ಒಂದು ಹಂದಿಯಂತಹ ಕೊಳಕು ಪ್ರಾಣಿಯು ಮೂಸಿ ನೋಡಿದಡೆ ಹೇಗೆ? ಆ ಪ್ರಸಾದವು ಕೆಟ್ಟು ಹೋಗುವ ಹಾಗೆ, ಭಕ್ತರು ದುರಾಚಾರ ಮಾಡಿದಂತಾಗುತ್ತದೆ., ಇದು ಕೂಡದು. ತ್ಯಾಗ ಮನೋಭಾವವನ್ನು ಸಾಧಕ ಮನುಷ್ಯನು ಬೆಳಸಿಕೊಳ್ಳಬೇಕು. ಸ್ವಾರ್ಥ ಪೂರಿತ ಕರ್ಮಗಳನ್ನು ಪೂರ್ಣವಾಗಿ ಬಿಡಿವುದು ತ್ಯಾಗವಾಗುತ್ತದೆ. ಸತ್ಯ ಶುದ್ಧಕಾಯಕ, ದಾಸೋಹ ಇವುಗಳ ಆಚರಣೆಗಳಲ್ಲಿ ಸರಿಯಾಗಿ ಅಳವಡಿಸಿಕೊಂಡಾಗ ಮಾತ್ರ ಸಂಪೂರ್ಣ ಅಹಂಕಾರ ವಿರಸನ ಸಾಧ್ಯವಾಗುತ್ತದೆ. ಈಶತತ್ತ್ವಕ್ಕೆ ಶರಣನಾದವನು ಪ್ರಾಪಂಚಿಕತೆಯ ಕಡೆಗೆ ಮನವನ್ನು ಕೊಡಕೂಡದು. ಆಗ ಈಶ ಶರಣನಾಗಿ ಪ್ರಗತಿ ಸಾದಿಸಬಹುದು. ಶ್ರೇಷ್ಠ ಸಾಧಕನಾದವನು ಯಾವುದೇ ರೀತಿಯ ಹೊರಗಿನ ತೃಷ್ಣೆಗಳಿಗೆ ಒಳಗಾಗಬಾರದೆಂಬುದೇ ಈ ವಚನದ ಆಂತರ್ಯವಾಗಿದೆ. ದೃಢಚಿತ್ತವಿಲ್ಲದ, ಪಾಪದ ಮನಸ್ಸುಳ್ಳವರ ಜೀವನ ವ್ಯರ್ಥ ಎಂಬುದನ್ನು ಮನಗಾಣಿಸಲು ದಾಸಿಮಯ್ಯ ನೀಡಿರುವ ದೃಷ್ಟಾಂತ ಮನನೀಯವಾಗಿದೆ. ಹರಿದ ಗೋಣಿಯಲೊಬ್ಬ ಕಳವೆಯ ತುಂಬಿದ ಇರುಳೆಲ್ಲಾ ನಡೆದನಾ ಸುಂಕಕಂಜಿ ಕಳವೆಯೆಲ್ಲಾ ಹೋಗಿ ಬರಿಗೋಣಿ ಉಳಿಯಿತ್ತು! ಅಳಿಮನದವನ ಭಕ್ತಿ ಇಂತಾಯಿತ್ತು! ರಾಮನಾಥ. ಜೇಡರ ದಾಸಿಮಯ್ಯ ಹೊಸ ಬಗೆಯ ತನ್ನ ವಿಚಾರ ಪ್ರಣಾಲಿಯನ್ನು ಜನವಾಣಿಯಿಂದ ಹದವಾಗಿ ಪಾಕಗೊಳಿಸಿ ಜನತೆಗೆ ನೀಡಿದ್ದಾರೆ. ಅವರ ವಚನಗಳ ಮುಖ್ಯಗುಣ ಸಂಕ್ಷಿಪ್ತತೆ, ಸರಳತೆ ಹಾಗೂ ಅರ್ಥ ಪ್ರಚುರತೆ ಎಂಬುದಕ್ಕೆ ಈ ವಚನಗಳನ್ನು ನೋಡಿ: ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ ಸುಳಿದು ಬೀಸುವ ಗಾಳಿ ನಿಮ್ಮ ದಾನ. ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ, ರಾಮನಾಥ ? ಲಿಂಗಭೇದವನ್ನು ಅಲ್ಲಗೆಳೆಯುವ ಅವರ ವಚನ ಪ್ರಸಿದ್ಧವಾಗಿದೆ. ಮೊಲೆ ಮುಡಿ ಬಂದಡೆ ಹೆಣ್ಣೆಂಬರು ಗಡ್ಡ ಮೀಸೆ ಬಂದಡೆ ಗಂಡೆಂಬರು. ನಡುವೆ ಸುಳಿದ ಆತ್ಮನು ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ! ರಾಮನಾಥ. ಸಾಹಿತ್ಯ, ಭಾವ, ಭಾಷೆ, ಕಾವ್ಯಸೌಂದರ್ಯ ಮುಂತಾದ ಎಲ್ಲಾ ದೃಷ್ಟಿಯಿಂದಲೂ ಜೇಡರ ದಾಸಿಮಯ್ಯನ ವಚನಗಳು ಉತ್ತಮ ಮಟ್ಟದವು. ಇವರ ವಚನಗಳಲ್ಲಿ ಜೀವಕಳೆ ತುಂಬಿದೆ. ಮನ ಮುಟ್ಟುವಂತೆ ತನ್ನದೇ ಆದ ಧಾಟಿಯಲ್ಲಿ ಸುಲಭವಾದ ಮಾತುಗಳಲ್ಲಿ, ಓದಿದೊಡನೆಯೇ ಮನಸ್ಸಿಗೆ ನಾಟುವ ಹಾಗೆ, ಒಂದೊಂದು ಅರ್ಥಗರ್ಭಿತವಾದ ಉಪಮಾನದಿಂದ ದೊಡ್ಡ ಚಿತ್ರವೇ ಕಣ್ಣೆದುರಿಗೆ ನಿಂತ ಹಾಗೆ ಇವೆ ಇವರ ವಚನಗಳು. ಕಾಯಕವನ್ನೆ ರೂಪಕ ಮಾಡಿ ಹೇಳುವ ಮತ್ತು ತಮ್ಮ ಕಾಯಕದಿಂದಲೇ ಲಿಂಗಾಂಗ ಸಾಮರಸ್ಯ ಸಾಧಿಸಿದ ಜೇಡರ ದಾಸಿಮಯ್ಯ ಮಹಾಕಾವ್ಯಗಳಲ್ಲಿ ಇಲ್ಲದ ವಿಶಿಷ್ಟವಾದ ಸತ್ವ, ಶಕ್ತಿ ಸೌಂದರ್ಯಗಳು ಇವರ ವಚನಗಳಲ್ಲಿವೆ ಎಂಬುವುದರಲ್ಲಿ ಎರಡು ಮಾತಿಲ್ಲ. ಇಂತಹ ಅನುಭಾವೀ ಶರಣನ ಕನಿಷ್ಠ ಯಾವುದಾದರೂ ಒಂದು ವಚನವನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ನಾವು ಬದುಕಿದರೆ ನಮ್ಮ ಜೀವನ ಸುಖ, ಶಾಂತಿ, ಆನಂದಮಯವಾಗುವುದರಲ್ಲಿ ಯಾವ ಸಂದೇಶವೂ ಇಲ್ಲ. ನಿರಾಕಾರ ಶಿವನೇ ಸರ್ವಶ್ರೇಷ್ಠ, ಸರ್ವಶಕ್ತ ಎಂದು ತನ್ನ ವಚನದಲ್ಲಿ ಹಾಡಿ ಹೊಗಳಿದ್ದಾರೆ. ಈತನ ಹೆಂಡತಿ ಹೆಸರು ದುಗ್ಗಳೆ. ನೇಯ್ಗೆ ಕಾಯಕದಿಂದ ಬಂದ ಹಣದಲ್ಲಿ ಜಂಗಮ ದಾಸೋಹವನ್ನು ತಪ್ಪದೇ ಮಾಡುತ್ತಿದ್ದರು. ಸದಾ ಶಿವಧ್ಯಾನ ಶಿವಸಂಕೀರ್ತನದಲ್ಲಿ ನಿರತನಾಗಿರುತ್ತಿದ್ದರು. ಇವರು ಒಬ್ಬ ಶ್ರೇಷ್ಠ ವಚನಕಾರ. "ರಾಮನಾಥ" ಎನ್ನುವುದು ಇವರ ವಚನಗಳ ಅಂಕಿತ. ಕನ್ನಡ ಸಾಹಿತ್ಯದಲ್ಲಿ ದಾಸಿಮಯ್ಯನವರ ಕಥೆ ಸೋಮೇಶ್ವರ ಪುರಾಣ, ಶಿವತ್ತತ್ವ ಚಿಂತಾಮಣಿ, ಸಿದ್ದೇಶ್ವರ ಪುರಾಣ, ಚತುರಾಚಾರ್ಯ ಪುರಾಣ-ಮೊದಲಾದ ಕಾವ್ಯದಲ್ಲಿ ಕಂಡುಬರುತ್ತವೆ. ಇವರೆಲ್ಲರೂ ದೇವರ ದಾಸಿಮಯ್ಯವರ ದಿವ್ಯಚರಿತ್ರೆಯನ್ನು, ಮಹಿಮೆಯನ್ನು ಹಾಡಿ ಹೊಗಳಿದ್ದಾರೆ.

 • 3 ಅಗ್ಘವಣಿ ಹಂಪಯ್ಯ
 • ಹುಸಿಯ ನುಡಿಯನು ಭಕ್ತ, ವ್ಯಸನಕ್ಕೆಳಸನು ಭಕ್ತ, ವಿಷಯಂಗಳಾತಂಗೆ ತೃಣವು ನೋಡಾ, ಬಯಸುವವನಲ್ಲ ಭಕ್ತ. ದಯೆಯೆಂಬುದು ತನ್ನ ಕೈಯಲ್ಲಿ, ಸ್ಮರಣೆಯೆಂಬುದು ತನಗೆ ತೊತ್ತಾಗಿಪ್ಪುದು. ಕೋಪವೆಂಥದೆಂದರಿಯ, ತಾಪತ್ರಯಂಗಳು ಮುಟ್ಟಲಮ್ಮವು, ವ್ಯಾಪ್ತಿಗಳಡಗಿದವು. ಲಿಂಗವನೊಳಕೊಂಡ ಪರಿಣಾಮಿ. ಆತನ ಪಥ ಲೋಕಕ್ಕೆ ಹೊಸತು, ತನಗೊಮ್ಮೆಯು ಲಿಂಗಧ್ಯಾನ, ಲಿಂಗಕ್ಕೊಮ್ಮೆಯು ತನ್ನ ಧ್ಯಾನ. ಘನಘನ ಮಹಿಮೆಯ ಹೊಗಳಲೆನ್ನಳವಲ್ಲ. ಪನ್ನಗಧರ ಕೇಳಯ್ಯಾ, ಚೆನ್ನ ಹಂಪೆಯ ವಿರುಪಯ್ಯಾ, ನಿಮ್ಮ ನಂಬಿದ ಸತ್ಯಶರಣ ಪರಿಣಾಮಿ. ಅಗ್ಘವಣಿ ಹಂಪಯ್ಯನವರು ಕುಂತಲನಾಡಿನ ಮುಕುಂದಪುರದವರು. ಲಿಂಗಾಯತ ಕಾವ್ಯಗಳಲ್ಲಿ ಈ ಕುರಿತು ಉಲ್ಲೇಖವಿದೆ. ಇವರ ಚರಿತ್ರೆ ಪ್ರೌಢದೇವರಾಯನ ಕಾವ್ಯದಲ್ಲಿ ಉಲ್ಲೇಖವಿದೆ. ಇವರು ಮಹಾಶಿವಶರಣರಲ್ಲದೇ ಅನೇಕ ವಚನಗಳನ್ನು ರಚಿಸಿದ್ದಾರೆಂದು ತಿಳಿದುಬರುತ್ತದೆ. ಆದರೆ ಪ್ರಸ್ತುತ ನಾಲ್ಕು ವಚನಗಳು ಮಾತ್ರ ದೊರೆತಿವೆ. "ಹಂಪಿಯ ವಿರುಪ" ಎಂಬ ಅಂಕಿತದಿಂದ ಇವರು ವಚನಗಳನ್ನು ರಚಿಸಿದ್ದಾರೆ. ಇದರ ಪ್ರಕಾರ ಇವರು ಹಂಪೆಯ ಆಸುಪಾಸಿನಲ್ಲಿ ವಾಸವಾಗಿದ್ದಿರಬಹುದೆಂದು ಊಹಿಸಬಹುದಾಗಿದೆ. ಶಿವಭಕ್ತರ ಶಿವಾರ್ಚನೆಗೆ ಮೀಸಲೋದಕವನ್ನು ತಂದು ಕೊಡುವ ಕಾಯಕವನ್ನು ಇವರು ಮಾಡುತ್ತಿದ್ದರು. ಶಿವಭಕ್ತರು ಕಾಯಕಕ್ಕೆ ಪ್ರತಿಯಾಗಿ ಕೊಟ್ಟಿದ್ದನ್ನು ತಂದು ತನ್ನ ಉಪಜೀವನದೊಂದಿಗೆ ದಾಸೋಹ ಸೇವೆ ಮಾಡುತ್ತಿದ್ದರು. ಒಮ್ಮೆ ಭೀಕರ ಬರಗಾಲ ಬಂತು. ತನ್ನ ಮನೆಯಲ್ಲಿದ್ದ ಸಾಮಾನುಗಳನ್ನೆಲ್ಲಾ ಮಾರಿ ಬಾವಿ ತೋಡಿಸಿದರು. ಬಾವಿಯಲ್ಲಿ ನೀರು ಬರಲಿಲ್ಲ. ಆದ್ದರಿಂದ ಇವರ ಕಾಯಕಕ್ಕೆ ತೊಂದರೆಯಾಯಿತು. ಆದರೂ ಸಹ ನಿರಾಕಾರ ಪರಮಾತ್ಮನ ಅನುಗ್ರಹ ಇವರ ಮೇಲಿತ್ತು. ರಾತ್ರಿವಿಡೀ ಚಿಂತೆಯಲ್ಲಿದ್ದ ಇವರಿಗೆ ಬೆಳಿಗ್ಗೆ ಎದ್ದೊಡನೆ ಗುಡ್ಡದ ಮೇಲಿನ ಗುಂಡಿಯಲ್ಲಿ ತುಂಬಿದ್ದ ಚಿಲುಮೆ ನೋಡಿ ಹರ್ಷಗೊಂಡರು. ಅಲ್ಲಿಂದ ನೀರನ್ನು ತಂದು ತನ್ನ ಕಾಯಕ ಮುಂದುವರಿಸಿದ ಮಹಾಶಿವಶರಣ ಇವರಾಗಿದ್ದಾರೆ. ಕಾಯಕನಿಷ್ಠ "ದಾಸೋಹಿನೇಮಿ"ಯಾಗಿ ಹಂಪಯ್ಯ ತನ್ನ ಶರಣ ಬದುಕನ್ನು ಪೂರೈಸಿದ್ದಾರೆ. ಇವರ ವಚನಗಳಲ್ಲಿ ಪಂಚಾಕ್ಷರ ಮಂತ್ರದ ಮಹತ್ವ, ಭಕ್ತನ ಸ್ವರೂಪದ ಮಾಹಿತಿ ಇದೆ. ಇವರ ವಚನಗಳನ್ನು ಗಮನಿಸಿದರೆ ಶರಣ ಹಂಪಯ್ಯನವರ ಜೀವನವು ಭಕ್ತಿ-ಮಂತ್ರಸಿದ್ದಿ-ಕಾಯಕ-ದಾಸೋಹಗಳ ಸಮರಸವಾಗಿದೆ ಎಂದು ಹೇಳಬಹುದಾಗಿದೆ.

 • 4 ಅಗ್ಘವಣಿ ಹೊನ್ನಯ್ಯ
 • ಆದಂತೆ ಆಗಲಿ, ಮಾದಂತೆ ಮಾಣಲಿ ಎನಲಾಗದು. ನೇಮದಾತಂಗೆ ಛಲ ಬೇಕು, ಛಲಬೇಕು. ಹಿಡಿದುದು ಬಿಡಲಾಗದಯ್ಯಾ. ಹುಲಿಗೆರೆಯ ವರದ ಸೋಮನಾಥನ ಮನಮುಟ್ಟಿದ ಧೀರಂಗಲ್ಲದೆ ಸೋಲುವನಲ್ಲ. ಅಗ್ಘವಣಿ ಹೊನ್ನಯ್ಯನವರ ಊರು ಹಾವೇರಿ ಜಿಲ್ಲೆಯ ಲಕ್ಷ್ಮೇಶ್ವರ. ಇವರು ಏಕಾಂತರಾಮಯ್ಯನವರ ಸಮಕಾಲೀನರು. ಇವರೂ ಕೂಡ ಹಂಪಯ್ಯ ಶರಣರಂತೆ ಶಿವಶರಣರಿಗೆ ಪವಿತ್ರ ಜಲವನ್ನು ಒದಗಿಸುವ ಕಾಯಕ ಮಾಡುತ್ತಿದ್ದರು. ಭುವನಕೋಶ, ಕಥಾಸಾಗರ, ಗುರುರಾಜ ಚಾರಿತ್ರ್ಯ, ಪ್ರಭುದೇವರ ಪುರಾಣಗಳಲ್ಲಿ, ಪ್ರೌಢದೇವರಾಯನ ಕಾವ್ಯ, ಚತುರಾಚಾರ್ಯ ಪುರಾಣ, ಹೊನ್ನಯ್ಯನ ಪವಾಡಗಳನ್ನು ದಾಖಲಿಸಿವೆ. ಇವರ ಬಗ್ಗೆ 2 ಶಾಸನಗಳು ದೊರೆತಿವೆ. (ಕ್ರಿ.ಶ. 1176ರ ಕಲ್ಲೇದೇವರಪುರದ ಹಾಗೂ ಕ್ರಿ.ಶ. 1280ರ ಮಂಡ್ಯ ಜಿಲ್ಲೆ ಮರಡಿಪುರದ ಶಾಸನದಲ್ಲಿ ದೊರೆತಿವೆ). ಇವರ ನಾಲ್ಕು ವಚನಗಳು ಲಭ್ಯವಾಗಿವೆ. ಇವರ ವಚನದ ಅಂಕಿತ "ಹುಲಿಗೆರೆಯ ವರದ ಸೋಮನಾಥ". ಶರಣನಾದವನಿಗೆ ಸಿದ್ಧಿಯ ಬದುಕಿಗೆ ಸಾತ್ವಿಕವಾದ ಛಲ ಬೇಕೇ ಬೇಕೆಂದು ಇವರು ಹೇಳುತ್ತಾರೆ. ಶರಣ ಹೊನ್ನಯ್ಯನವರ ಮೇಲೆ ಶೈವಪಾಶುಪತದ ಪ್ರಭಾವವನ್ನು ಕಾಣಬಹುದಾಗಿದೆ. ಶರಣರು ಮಾಡುವ ಯಾವುದೇ ಕೆಲಸವನ್ನು ಕೀಳಾಗಿ ಭಾವಿಸದೆ, ಪವಿತ್ರ ಕಾಯಕವೆಂದು ತಿಳಿಯುತ್ತಿದ್ದರು. ಅದೇ ಮಾರ್ಗದಲ್ಲಿ ಸಾಗಿದ ಹೊನ್ನಯ್ಯನವರು ಹೊನ್ನಿನಂತಹ ಪವಿತ್ರ ದಾಸೋಹ ಭಾವವನ್ನು ಅಳವಡಿಸಿಕೊಂಡಿದ್ದರು. ನೀರು ಎಲ್ಲಾ ಕಾರ್ಯಕ್ಕೂ ಬೇಕೇ ಬೇಕು. ನೀರಿಗೆ ಬೆಲೆ ಕಟ್ಟಲಾಗುವುದಿಲ್ಲ. ಪ್ರತಿನಿತ್ಯ ಹಂಪಯ್ಯನವರ ಸಂಗಡ ಶುದ್ಧ ಜಲವನ್ನು ಕಲ್ಯಾಣದ ಅನುಭವ ಮಂಟಪದಲ್ಲಿ ನಿತ್ಯ ಲಿಂಗಾರ್ಚನೆ ಮಾಡಿಕೊಳ್ಳುತ್ತಿದ್ದ ಶರಣರಿಗೆ, ಅಗ್ಘವಣಿಯನ್ನು ಒದಗಿಸುತ್ತಿದ್ದರು. ಇವರು ಸತ್ಯ-ಶುದ್ಧ ಕಾಯಕದ ಶ್ರೇಷ್ಠತೆಯನ್ನು ಮೆರೆದಿದ್ದಾರೆ. ಒಂಬೈನೂರು ವರ್ಷದ ಹಿಂದೆಯೇ ಅವೈಜ್ಞಾನಿಕ ಕಾಲದಲ್ಲಿ ನಿಷ್ಕಾಮದಿಂದ ಸಮಾಜದ ಸೇವೆಯೇ ತಮ್ಮ ಉಸಿರೆಂದು ಬದುಕಿದಂತಹ, ಶರಣರ ಆದರ್ಶ ತತ್ತ್ವಗಳಿಗೆ ಬಸವಣ್ಣನವರೇ ಮೂಲ ಕಾರಣೀಭೂತರಾಗಿ, ಕಂಗೊಳಿಸುತ್ತಾರೆ. ಇಂತಹ ಬಸವಣ್ಣನವರ ಬೆಳಕಿನಲ್ಲಿ ಬೆಳಕಾದವರು ಅಗ್ಘವಣಿ ಹೊನ್ನಯ್ಯನವರು.

 • 5 ಅನಾಮಿಕ ನಾಚಯ್ಯ
 • ಹಸಿವಿಂಗೆ ಲಯವಿಲ್ಲ, ವಿಷಯಕ್ಕೆ ಕುಲವಿಲ್ಲ; ಮರಣಕ್ಕೆ ಮನ್ನಣೆಯಿಲ್ಲ, ಆಸೆಗೆ ಹವಣಿಲ್ಲ, ವಂಚಕನನಾಮಿಕ ನಾಚಯ್ಯಪ್ರಿಯ ಚೆನ್ನರಾಮಯ್ಯ. ಅನಾಮಿಕ ನಾಚಯ್ಯನವರು ಅಸ್ಪೃಶ್ಯಜಾತಿಯವರೆಂದು ತಿಳಿಯುತ್ತದೆ. ಈ ಶರಣರು ತಮ್ಮ ವಚನವೊಂದರಲ್ಲಿ "ತಾನು ಅನಾಮಿಕ" ಎಂಬುದನ್ನು ಸೂಚಿಸಿದ್ದಾರೆ. "ಚೆನ್ನರಾಮೇಶ್ವರ" ಇವರ ಅಂಕಿತವಾಗಿದೆ. ಕೆಳಜಾತಿಯಲ್ಲಿ ಹುಟ್ಟಿದ ನಾಚಯ್ಯನವರು ಸಾಧನೆಯಲ್ಲಿ ಮೇಲುಕುಲದವರಿಗಿಂತಲೂ ಮೇಲೇರಿದ್ದಾರೆ. ಅಂಗಭಾವದಿಂದ ಆತ್ಮಭಾವಕ್ಕೇರಿ ಲಿಂಗವೇ ತಾನಾಗುವ ಪರಿಯನ್ನು ತಿಳಿಸಿದ್ದಾರೆ. ಇವರು ಕಲ್ಯಾಣದಲ್ಲಿ ಬಸವಾದಿ ಶಿವಶರಣರ ಜೊತೆಯಲ್ಲಿದ್ದು ಅನುಭಾವದ ಸಾಧನೆ ಮಾಡಿರುವ ಇವರು ಬಸವಾದಿ ಶಿವಶರಣರ ಪ್ರಭಾವಕ್ಕೊಳಗಾಗಿದ್ದನ್ನು ಕಾಣಬಹುದಾಗಿದೆ. ಇವರ ವಚನಗಳ ಅಂಕಿತವನ್ನು ಗಮನಿಸಿದಾಗ "ಆಲಂದೆ" ಪರಿಸರದಲ್ಲಿ ವಾಸವಾಗಿದ್ದರೆಂದು ತಿಳಿಯಬಹುದಾಗಿದೆ. ಇವರ ಪಾಂಡಿತ್ಯವನ್ನು ಇವರೇ ಬರೆದಂತಹ ವಚನಗಳಲ್ಲಿ ಕಾಣಬಹುದಾಗಿದೆ. ಅದ್ಭುತ ಜ್ಞಾನಿಗಳಾಗಿ ಬಸವಣ್ಣನವರ ಅನುಭವ ಮಂಟಪದ ಒಡ್ಡೋಲಗದಲ್ಲಿ ಧ್ರುವತಾರೆಗಳಾಗಿ ಮೆರೆದಿದ್ದಾರೆ. ಅನಾಮಿಕ ನಾಚಯ್ಯನವರ ಒಂದು ವಚನ ಹೀಗಿದೆ: "ಜಂಬೂದ್ವೀಪ ಕಡವರ ದ್ವೀಪ, ಮಧ್ಯಗಿರಿ, ಪಾತಾಳಕ್ಕೆ ಬೇರುವರಿದು ಈರೆಂಟು ಲಕ್ಷ ಯೋಜನೆ ಪರಿಪ್ರಮಾಣ ಮೇಲೇಳಿಗೆಯಲ್ಲಿ ಎಂಬತ್ತುನಾಲ್ಕು ಲಕ್ಷ ಯೋಜನ ಪರಿಪ್ರಮಾಣ ನಾಚಯ್ಯಪ್ರಿಯ ಚೆನ್ನರಾಮನಾಥನ ಗಣಂಗಳ ಒಡ್ಡೋಲಗ ಮೂವತ್ತಾರು ಲಕ್ಷ ಯೋಜನ ವಿಸ್ತೀರ್ಣ."

 • 6 ಅಂಗ ಸೋಂಕಿನ ಲಿಂಗತಂದೆ
 • ಮರದೊಳಗಣ ಬೆಂಕಿ ತನ್ನ ತಾನೆ ಉರಿಯಬಲ್ಲುದೆ? ಶಿಲೆಯೊಳಗಣ ದೀಪ್ತಿ ಆ ಬೆಳಗ ತನ್ನ ತಾನೆ ಬೆಳಗಬಲ್ಲುದೆ? ಆ ತೆರನಂತೆ ಕುಟಿಲನ ಭಕ್ತಿ, ಕಿಸುಕುಳನ ವಿರಕ್ತಿ, ಮಥನಿಸಿಯಲ್ಲದೆ ದಿಟಹುಸಿಯ ಕಾಣಬಾರದು. ಸತ್ಯವನು ಅಸತ್ಯವನು ಪ್ರತ್ಯಕ್ಷ ಪ್ರಮಾಣಿಸಿದಲ್ಲದೆ ನಿಶ್ಚಯವನರಿಯಬಾರದು. ಗುರುವಾದಡೂ ಲಿಂಗವಾದಡೂ ಜಂಗಮವಾದಡೂ ಪರೀಕ್ಷಿಸಿ ಹಿಡಿಯದವನ ಭಕ್ತಿ, ವಿರಕ್ತಿ, ತೂತು ಕುಂಭದಲ್ಲಿಯ ನೀರು, ಸೂತ್ರ ತಪ್ಪಿದ ಬೊಂಬೆ, ನಿಜನೇತ್ರ ತಪ್ಪಿದ ದೃಷ್ಟಿ. ಬೇರು ಮೇಲಾದ ಸಸಿಗೆ ನೀರಿನಾರೈಕೆಯುಂಟೆ? ಇಂತು ಆವ ಕ್ರೀಯಲ್ಲಿಯೂ ಭಾವಶುದ್ಧಾತ್ಮನಾಗಿ ಆರೈಕೆ ಬೇಕು, ಭೋಗಬಂಕೇಶ್ವರಲಿಂಗದ ಸಂಗದ ಶರಣನ ಸುಖ. ಅಂಗ ಸೋಂಕಿನ ಲಿಂಗ ತಂದೆಯವರು ಲಿಂಗಾಂಗ ಸಾಮರಸ್ಯದ ಸಿದ್ಧಿಯನ್ನು ಪಡೆದ ಶರಣರಾಗಿದ್ದರೆಂಬುದಕ್ಕೆ ಅವರ ಹೆಸರೇ ಸಾಕ್ಷಿಯಾಗಿದೆ. ಇವರೂ ಕೂಡ ಬಸವಾದಿ ಶಿವಶರಣರ ಸಮಕಾಲೀನರೆಂದು ತಿಳಿದುಬರುತ್ತದೆ, ಅಲ್ಲದೇ ಶರಣ ಧರ್ಮಪಾಲಕರಾಗಿ, ‘ಸರ್ವಾಂಗ ಲಿಂಗಸಿದ್ಧಿ'ಯನ್ನು ಪಡೆದ ಮಹಾಶಿವಶರಣ ಇವರಾಗಿದ್ದರು. ಇವರ ಚರಿತ್ರೆಯ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿರುವುದಿಲ್ಲ. ಇವರ ಹನ್ನೊಂದು ವಚನಗಳು ಮಾತ್ರ ಇಂದು ಉಪಲಬ್ಧವಿದೆ. ‘ಭೋಗ ಬಂಕೇಶ್ವರ ಲಿಂಗ' ವೆಂಬುದು ಇವರ ವಚನದ ಅಂಕಿತವಾಗಿದೆ. ಈ ಶರಣರ ವಚನಗಳಲ್ಲಿ ದೇಹವನ್ನು ಅಂಗವಾಗಿಸಿಕೊಳ್ಳುವ, ಅಂಗವನ್ನು ಲಿಂಗವಾಗಿಸಿಕೊಳ್ಳುವ ಸಿದ್ಧಿಯನ್ನು ಕುರಿತ ವಿವರಗಳಿಂದ ಕೂಡಿವೆ. ಲಿಂಗದ ಸಂಗದಿಂದ ದೇಹದಲ್ಲಿನ ದೋಷಗಳು ಕಣ್ಮರೆಯಾಗಿವೆ, ಎಂದು ತನ್ನ ಒಂದು ವಚನದಲ್ಲಿ ಇವರು ವ್ಯಕ್ತಪಡಿಸಿದ್ದಾರೆ. ಗುರು-ಲಿಂಗ-ಜಂಗಮರನ್ನು ಪರೀಕ್ಷೆಗೆ ಒಳಪಡಿಸಿ, ಅದರಲ್ಲಿ ನಿಜತತ್ವವಿದ್ದರೆ ಮಾತ್ರ ಒಪ್ಪಿಕೊಳ್ಳಬೇಕೆಂಬುವುದು ಇವರ ಅಭಿಪ್ರಾಯವಾಗಿತ್ತು. ಆಧ್ಯಾತ್ಮ ವೈಚಾರಿಕತೆಗಳ ಸಾಮರಸ್ಯದಿಂದ ಲಿಂಗಸ್ವರೂಪ ಸ್ಥಿತಿಯನ್ನು ಪಡೆದುಕೊಂಡಿದ್ದ ಇವರು ಶರಣರ ಸಮೂಹದಲ್ಲಿ ಗಮನ ಸೆಳೆಯುತ್ತಾರೆ.

 • 7 ಅಂಬಿಗರ ಚೌಡಯ್ಯ
 • ಅಡವಿಯೊಳಗರಸುವಡೆ ಸಿರಿಗಂಟಿ ತಾನಲ್ಲ. ಮಡುವಿನೊಳಗರಸುವಡೆ ಮತ್ಸ್ಯಮಂಡೂಕನಲ್ಲ. ತಪಂಬಡುವಡೆ ವೇಷಕ್ಕೆ ವೇಳೆಯಲ್ಲ. ಒಡಲ ದಂಡಿಸುವಡೆ ಕೊಡುವ ಸಾಲಿಗನಲ್ಲ. ಅಷ್ಟತನುವಿನೊಳಗೆ ಹುದುಗಿದ್ದ ಲಿಂಗವ ನಿಲುಕಿ ನೋಡಿಯೆ ಕಂಡನಂಬಿಗ ಚೌಡಯ್ಯ. ಅತ್ಯಾಹಾರವನುಂಡು ಹೊತ್ತುಗಳೆದು ಹೋಕಿನ ಮಾತನಾಡುತ್ತ, ಚಿತ್ತ ಬಂದ ಪರಿಯಲ್ಲಿ ವ್ಯವಹರಿಸಿಕೊಳ್ಳುತ್ತ, ಮತ್ತೆ ಶಿವನ ನೆನೆದೆನೆಂದಡೆ ಶಿವನ ವರ ಎತ್ತಲೆಂದರಿಯದೆಂದಾತ, ನಮ್ಮಂಬಿಗರ ಚೌಡಯ್ಯ. ಹೆಸರೇ ಸೂಚಿಸುವಂತೆ ಅಂಬಿಗರ ಚೌಡಯ್ಯ ತನ್ನ ದೋಣಿ ಮೂಲಕ ಜನರನ್ನು ದಾಟಿಸುತ್ತಿದ್ದರು, ಮತ್ತು ದೋಣಿಯಲ್ಲಿದ್ದ ಭಕ್ತರನ್ನೆಲ್ಲ ಶಿವಪಥದತ್ತ ಸಾಗಿಸಿದ ಮಹಾಮಹಿಮ, ಶಿವಶರಣ ಇವರಾಗಿದ್ದಾರೆ. ‘ಅಂಬಿಗ'ರೆಂದರೆ ನೀರಿನಲ್ಲಿ ವ್ಯವಹರಿಸುವವರು. (ನಾವೆ, ದೋಣಿ ನಡೆಸುವವರು ಎಂದರ್ಥ) ದೋಣಿ ನಡೆಸುವ ಕಾಯಕದ ಮೂಲಕ ಇವರು ಎಲ್ಲರ ಗಮನ ಸೆಳೆಯುತ್ತಾರೆ. ಇವರ ಕಾಲ ಕ್ರಿ.ಶ 1160. ಇವರ 278 ವಚನಗಳು ದೊರೆತಿವೆ. ಇವರು ತಮ್ಮ ಹೆಸರನ್ನೇ ಅಂಕಿತವಾಗಿಟ್ಟುಕೊಂಡು, ವಚನಗಳನ್ನು ರಚಿಸಿರುವುದು ವಿಶಿಷ್ಟವಾಗಿದೆ. ಸಮಾಜದಲ್ಲಿ ಕಂಡದ್ದನ್ನು ಕಂಡಹಾಗೆ ಹೇಳಿ ಕೆಂಡದಂತಹ ಕೋಪ ಬರಿಸುವ ಚೌಡಯ್ಯನವರು ಕೆಂಡಗಣ್ಣ ಮೂರ್ತಿಯಾಗಿದ್ದರು. ಮುಚ್ಚುಮರೆಯಿಲ್ಲದೆ, ತೆರೆದ ಮನಸ್ಸಿನ ವಚನಗಳನ್ನು ರಚಿಸಿದ್ದಾರೆ. ಡಂಭಾಚಾರ, ಮೂಡನಂಬಿಕೆಗಳಿಗೆ ಇವರು ಕಿಡಿಕಾರಿದ್ದಾರೆ. ‘ನಿಜವಾದ ನಗಾರಿ, ನಿರ್ಭಯತೆಯ ಭೇರಿ' ಎಂದು ಶಿವಶರಣರು ಇವರನ್ನು ಹೊಗಳಿದ್ದಾರೆ. ನುಡಿದಂತೆ ನಡೆದು, ನಡೆದಂತೆ ನುಡಿದ ಧೀರ ಶರಣ ಚೌಡಯ್ಯನವರಾಗಿದ್ದು, ಇಂದಿಗೂ ಕನ್ನಡಿಗರ ನಾಲಿಗೆಯ ಮೇಲೆ ನಲಿದಾಡುವ ಅಂಬಿಗರ ಚೌಡಯ್ಯನವರ ವಚನಗಳು ಶರಣರ ಹೃದಯ ಗೆದ್ದಿವೆ. ಅಂಬಿಗರ ಚೌಡಯ್ಯ ಶರಣರು ಕ್ರಾಂತಿಯ ಪುರುಷರಾಗಿದ್ದು, ಮಹಾಮಹಿಮರಾದ ಇವರನ್ನು ನೆನೆಯುವುದೇ ನಮಗೊಂದು ಸೌಭಾಗ್ಯವಾಗಿದೆ. 12ನೇ ಶತಮಾನದ ವಚನಕಾರರು ಭಕ್ತಿಗೆ ಮಹತ್ವವನ್ನು ಕೊಟ್ಟಿದ್ದಾರೆ. ಅಷ್ಟೇ ಪ್ರಾಮುಖ್ಯತೆಯನ್ನು ‘ಕಾಯಕ'ಕ್ಕೂ ನೀಡಿದ್ದಾರೆ. ಬಸವಾದಿ ಶಿವಶರಣರನ್ನು ಗಮನಿಸಿದಾಗ ಪ್ರತಿಯೊಬ್ಬರೂ ಕಾಯಕಕ್ಕೆ ಕೊಟ್ಟ ಪ್ರಾಮುಖ್ಯತೆ ಏನೆಂಬುದು ನಮಗೆ ಅರಿವಾಗುತ್ತದೆ.

 • 8 ಅಮರಗುಂಡದ ಮಲ್ಲಿಕಾರ್ಜುನ ತಂದೆ
 • ಕಾಯವೆಂಬ ಪಟ್ಟಣಕ್ಕೆ ಸತ್ಯವೆಂಬ ಕೋಟೆಯನಿಕ್ಕಿ, ಧರ್ಮಾರ್ಥಕಾಮಮೋಕ್ಷಂಗಳೆಂಬ ಉಕ್ಕಡದವರೆಚ್ಚತ್ತಿರಿ ! ಎಚ್ಚತ್ತಿರಿ ! ಭಯ ಘನ ! ಭಯ ಘನ ! ಅಜ್ಞಾನವೆಂಬ ತೀವ್ರ ಕತ್ತಲೆ ಕರ ಘನ! ಕರ ಘನ ! ಒಂಬತ್ತು ಬಾಗಿಲ ಜತನವ ಮಾಡಿ ! ಜತನವ ಮಾಡಿ! ಜ್ಞಾನಜ್ಯೋತಿಯ ಪ್ರಬಲವ ಮಾಡಿ! ಪ್ರಬಲವ ಮಾಡಿ! ಐವರು ಕಳ್ಳರು ಕನ್ನವ ಕೊರೆವುತೈದಾರೆ, ಸುವಿಧಾನವಾಗಿರಿ ! ಸುವಿಧಾನವಾಗಿರಿ! ಜೀವಧನವ ಜತನವ ಮಾಡಿ! ಜತನವ ಮಾಡಿ! ಭಳಿರೆಲಾ! ಭಳಿರೆಲಾ! ಆ ಪಟ್ಟಣದ ಮೂಲಸ್ಥಾನದ ಶಿಖರದ ಮೇಲಣ ಬಾಗಿಲ ತೆರೆದು, ನಡೆವುದೆ ಸುಪಥ ಸ್ವಯಂಭುನಾಥನಲ್ಲಿಗೆ, ಇದನರಿತು ಮಹಾಮಹಿಮ ಮಾಗುಡದ ಮಲ್ಲಿಕಾರ್ಜುನದೇವರಲ್ಲಿ ಎಚ್ಚರಿಕೆಗುಂದದಿರಿ ! ಎಚ್ಚರಿಕೆಗುಂದದಿರಿ! ಅಮರಗುಂಡದ ಮಲ್ಲಿಕಾರ್ಜುನ ತಂದೆಯವರು ಮೂಲತಃ ಆಂಧ್ರ ಪ್ರದೇಶದ ಅಮರಗುಂಡದವರು. ಆನಂತರ ಕರ್ನಾಟಕಕ್ಕೆ ಬಂದಿರಬಹುದೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಈಗಿನ ತುಮಕೂರು ಜಿಲ್ಲೆಯ ಗುಬ್ಬಿ ಇವರ ಊರು. ಮರಗುಂಡವು ಗುಬ್ಬಿ ಹೆಸರನ್ನು ಪಡೆದ ಬಗ್ಗೆ ಕಥೆ ಇದೆ. ಕಥಾಸಾಗರ, ಚತುರಾಚಾರ್ಯ ಪುರಾಣ, ಅಮರಗಣಾಧೀಶ್ವರ ಚರಿತ್ರೆಗಳಲ್ಲಿ ಈ ಶರಣರ ಪವಾಡದ ಕಥೆಗಳ ವಿವರಗಳು ಬರುತ್ತವೆ, ಶರಣರ ಕಾವ್ಯಗಳಲ್ಲಿ ಇವರ ಶಿಷ್ಯ ಗುರುಭಕ್ತನೆಂಬವರ ಹೆಸರು ಬರುತ್ತದೆ. ಮಲ್ಲಿಕಾರ್ಜುನನವರು ತನ್ನ ಶಿಷ್ಯನನ್ನು ಪರೀಕ್ಷಿಸಲು ಶೂಲವೇರು ಎನ್ನುತ್ತಾನೆ. ಅದರಂತೆ ಗುರುಭಕ್ತ ಶೂಲವನ್ನು ಏರುತ್ತಾರೆ. ಹಾಗೇ ಶಿವಪದವನ್ನು ಪಡೆಯುತ್ತಾರೆ, ಎನ್ನುವುದು ಕಾವ್ಯಗಳಿಂದ ತಿಳಿದುಬರುತ್ತದೆ. ಇವರು ಹಲವಾರು ವಚನಗಳನ್ನು ಬರೆದಿದ್ದರೂ, ಕೇವಲ ಎರಡು ಮಾತ್ರ ಲಭ್ಯವಾಗಿದೆ. ಬಸವ ಧರ್ಮದ ಉದ್ಧಾರಕ್ಕಾಗಿ ತನ್ನನ್ನು ತಾನೇ ಮುಡುಪಾಗಿಟ್ಟ ಇವರು, ಮಹಾ ಶರಣರಾಗಿ ಮೆರೆದಿದ್ದಾರೆ. ಬಸವ ಧರ್ಮದ ಪುರಾಣಗಳಲ್ಲಿ, ಕಥೆಗಳಲ್ಲಿ, ಕಾವ್ಯಗಳಲ್ಲಿ ಉಲ್ಲೇಖವಾಗಿರುವ ಇವರು, ಭವಿತನದಲ್ಲಿ ಶಿವನ ಪರಮಭಕ್ತರಾಗಿದ್ದು, ಕಲ್ಯಾಣದ ಶರಣರ ಸಮೂಹದಲ್ಲಿ ಸೇರಿ ಲಿಂಗವಂತಧರ್ಮದ ಸಂಸ್ಕಾರವನ್ನು ಪಡೆದು, ನಿರಾಕಾರ ಶಿವನನ್ನು ತಮ್ಮ ಹೃದಯದಲ್ಲಿ ಪ್ರತಿಷ್ಠಾಪಿಸಿಕೊಳ್ಳುತ್ತಾರೆ. "ಮಾಗುಡದ ಮಲ್ಲಿಕಾರ್ಜುನ" ಇವರ ವಚನದ ಅಂಕಿತವಾಗಿದೆ. ಇಷ್ಟಲಿಂಗದ ಮೂಲಕವಾಗಿ ಸಾಧಕನು ತನ್ನ ಆತ್ಮದಲ್ಲಿನ ಮಹಾಲಿಂಗದ ದರ್ಶನ ಪಡೆದು "ಮಹಾಲಿಂಗ"ವೇ ಆಗುತ್ತಾನೆ ಎಂದು ಇವರು ವಚನದಲ್ಲಿ ಉಲ್ಲೇಖಿಸಿದ್ದಾರೆ. ಕಲ್ಯಾಣದ ಶರಣ ಸಮೂಹದಲ್ಲಿದ್ದಂತಹ ಶರಣರು ತಮ್ಮ ಅಂಗವನ್ನೇ, ಲಿಂಗವಾಗಿಸಿಕೊಂಡು ಮರಣದ ಭಯವಿಲ್ಲದೆ, ನಿತ್ಯ ನೂರು ವರುಷ ತುಂಬಿದವರಂತೆ, ಬಯಲು ಮೂರ್ತಿಗಳಾಗಿ ರೂಪುಗೊಂಡಿದ್ದರು. 12 ನೇ ಶತಮಾನವನ್ನು ಕಲ್ಪಿಸಿಕೊಳ್ಳಲು ನಮ್ಮಿಂದ ಅಸಾಧ್ಯ, ಅಷ್ಟೊಂದು ಎತ್ತರಕ್ಕೇರಿದ್ದರು ಶರಣರು. ಅಂತಹ ಶರಣರಲ್ಲಿ ಅಮರಗುಂಡದ ಮಲ್ಲಿಕಾರ್ಜುನ ತಂದೆಯವರು ಒಬ್ಬರಾಗಿದ್ದಾರೆ.

 • 9 ಅಮುಗಿ ದೇವಯ್ಯ
 • ಕಂಗಳ ಕತ್ತಲೆಯ ಕೆಡಿಸಿದ ರವಿಯ ಚಂದದಂತಾಯಿತ್ತೆನ್ನ ಗುರುವಿನುಪದೇಶ. ಕನ್ನಡಿ ರವಿಯ ತನ್ನೊಳಗೆ ಇರಿಸಿದಂತಾಯಿತ್ತೆನ್ನ ಗುರುವಿನುಪದೇಶ. ಜಲದ ನಿರ್ಮಳ ಗಗನವನೊಳಕೊಂಡ ಪರಿಯಂತಾಯಿತ್ತೆನ್ನ ಗುರುವಿನುಪದೇಶ. ಚಂದ್ರಕಾಂತದ ಶಿಲೆಯ ಬಿಂದು ಚಂದ್ರಮ ಸೋಂಕಿದಂತಾಯಿತ್ತೆನ್ನ ಗುರುವಿನುಪದೇಶ. ಕೊಡನೊಳಗಣ ಬಯಲ ಹಂಚಿಕೊಂಡ ಪರಿಯಂತಾಯಿತ್ತೆನ್ನ ಗುರುವಿನುಪದೇಶ. ಇದು ಕಾರಣ, ದರ್ಪಣಕೆ ದರ್ಪಣವ ತೋರಿದಂತಾಯಿತ್ತೆನ್ನ ಗುರುವಿನುಪದೇಶ. ಮಹಾಘನ ಸದ್ಗುರು ಸಿದ್ಧಸೋಮನಾಥನೆಂಬ ಲಿಂಗದಂತಾಯಿತ್ತೆನ್ನ ಗುರುವಿನುಪದೇಶ. ಶಿವನ ನೆನೆದಡೆ ಭವ ಹಿಂಗುವುದೆಂಬ ವಿವರಗೇಡಿಗಳ ಮಾತ ಕೇಳಲಾಗದು, ಹೇಳದಿರಯ್ಯಾ. ಜ್ಯೋತಿಯ ನೆನೆದಡೆ ಕತ್ತಲೆ ಕೆಡುವುದೆ? ಇಷ್ಟಾನ್ನವ ನೆನೆದಡೆ ಹೊಟ್ಟೆ ತುಂಬುವುದೆ? ರಂಬೆಯ ನೆನೆದಡೆ ಕಾಮದ ಕಳವಳವಡಗುವುದೆ ಅಯ್ಯಾ ? ನೆನೆದರಾಗದು, ನಿಜದಲ್ಲಿ ನಿರ್ಧರಿಸಿ ತಾನು ತಾನಾಗದನ್ನಕ್ಕರ, ಸದ್ಗುರು ಸಿದ್ಧಸೋಮನಾಥಲಿಂಗನ ನೆನೆಯಬಾರದು. ಅಮುಗಿದೇವಯ್ಯನವರು 12ನೇ ಶತಮಾನದ ಪ್ರಸಿದ್ಧವಾದ ಮಹಾಶರಣರು. ನೇಯ್ಗೆಯೇ ಇವರ ಕಾಯಕ. ಕಾಯಕನಿಷ್ಠೆ, ಲಿಂಗನಿಷ್ಠೆಗೆ ಇವರು ಹೆಸರುವಾಸಿಯಾಗಿದ್ದರು. ಸಿದ್ಧಸೋಮನಾಥ ಅಂಕಿತದಲ್ಲಿ ಅಮುಗಿ ದೇವಯ್ಯನವರು ವಚನಗಳನ್ನು ಬರೆದಿದ್ದಾರೆ. ಈ ಮಹಾಶರಣರು ಸಿದ್ಧರಾಮಯ್ಯನವರೊಂದಿಗೆ ಸಂಬಂಧವನ್ನು ಪಡೆದು ಪ್ರಸಿದ್ಧರಾದವರು. ಹಲಗೆದೇವರ ಶೂನ್ಯಸಂಪಾದನೆಯಲ್ಲೂ ಇವರ ಕಥೆ ಬರುತ್ತದೆ. ಇವರು ಮಹಾಮಹಿಮ ಪುರಾಣ ಪುರುಷರಾಗಿದ್ದರು. ಇವರನ್ನು ಕುರಿತು ಶಂಕರ ದೇವ "ಅಮುಗಿದೇವಯ್ಯಗಳ ರಗಳೆ" ಕೃತಿಯನ್ನು ಬರೆದಿದ್ದಾರೆ. ಇಷ್ಟಲಿಂಗನಿಷ್ಠೆಯ ಏಕೈಕ ಸಂಕೇತವಾಗಿ ಅಮುಗಿದೇವಯ್ಯನವರು ಕಂಗೊಳಿಸುತ್ತಾರೆ. 17ನೇ ಶತಮಾನದಲ್ಲಿ ಶಿವಲಿಂಗ ಕವಿ "ಅಮುಗಿ ದೇವಯ್ಯಗಳ ಸಾಂಗತ್ಯ" ಎಂಬ ಕಾವ್ಯ ರಚಿಸುತ್ತಾರೆ. ಜನಪದ ಕಥೆಗಳಲ್ಲೂ ಕೂಡ 'ಅಮುಗಿ ದೇವಯ್ಯ'ನವರ ಬಗ್ಗೆ ಮಾಹಿತಿಗಳು ಲಭ್ಯವಾಗಿದೆ. "ಹಂತಿಯ ಹಾಡೆಂದು ಪಂತ ಕಟ್ಟಲು ಬೇಡ ಕಂತಿ ಕರಗುವುದು ನಿಂತಲ್ಲೆ| ಅಮುಗಯ್ಯ ಕುಂತು ಎದೆಯೊಳಗೆ ಹಾಡಿಸಿದ" ಯಾದವರಾಜ ಸಿಂಘಣ್ಣನವರು ಅಮುಗಿದೇವಯ್ಯನವರಿಗೆ, ಭಕ್ತಿಯಿಂದ ದಾನ ಕೊಟ್ಟ ಬಗ್ಗೆ ಪಂಡರಾಪುರದ ಸಮೀಪ ಪೂರ್ಣಜಾದಲ್ಲಿನ ಲಿಂಗೇಶ್ವರ ದೇವಾಲಯದ ಶಾಸನದಿಂದ ತಿಳಿದುಬರುತ್ತದೆ. ಕಲ್ಯಾಣದ ಕ್ರಾಂತಿಯ ತರುವಾಯ ಇವರು ಪುಳಜೆಗೆ ಬಂದಿರಬಹುದೆಂದು ತಿಳಿಯಬಹುದಾಗಿದೆ. ಅಮುಗಿದೇವಯ್ಯ ಹಾಗೂ ಇವರ ಪತ್ನಿ ರಾಯಮ್ಮನವರು ಬಸವಣ್ಣನವರ ಅನುಭವ ಮಂಟಪದಲ್ಲಿ ಪಾಲ್ಗೊಳ್ಳುತ್ತಿದ್ದರು. ಸೊನ್ನಲಿಗೆ, ಕಲ್ಯಾಣ ಹಾಗೂ ಪುಳಜೆಯ ಸೋಮನಾಥನ ಸನ್ನಿಧಿಯಲ್ಲಿದ್ದು ಲಿಂಗವಂತ ಧರ್ಮವನ್ನು ಪಸರಿಸಿದ ಮಹಾಮಹಿಮ ಇವರಾಗಿದ್ದಾರೆ. ಇವರ ವಚನಗಳಲ್ಲಿ ಕ್ರಿಯಾತ್ಮಕ ಉಪಮೇಯಗಳನ್ನು ವಿಶೇಷವಾಗಿ ಕಾಣಬಹುದಾಗಿದೆ. ಇವರ ವಚನಗಳು 21 ನೇಯ ಶತಮಾನದ ಶರಣರಿಗೆ ಸರಳವಾಗಿ ಅರ್ಥವಾಗುವ ಶೈಲಿಯಲ್ಲಿವೆ. ಕಲ್ಯಾಣದ ಶರಣರ ವಚನಗಳನ್ನು ಗಮನಿಸಿದಾಗ ಒಬ್ಬೊಬ್ಬ ಶರಣರ ಶೈಲಿಯು ವಿಭಿನ್ನ ಅರ್ಥದ ತಾತ್ಪರ್ಯ ಹೊಂದಿವೆ.

 • 10 ಅರಿವಿನ ಮಾರಿತಂದೆ
 • ಅರಸು ಆಲಯವ ಹಲವ ಕಟ್ಟಿಸಿದಂತೆ, ಶರೀರದಲ್ಲಿ ಆತ್ಮನು ಹಲವು ನೆಲೆವುಂಟೆಂದು ತಿರುಗುತ್ತಿಹ ಭೇದವಾವುದು ಹೇಳಿರಯ್ಯಾ? ಆ ಘಟದೊಳಗಳ ಭೇದ: ಅಸು ಹಿಂಗಿದಾಗ ಘಟವಡಗಿತ್ತು, ಅರಸಿಲ್ಲದಾಗ ಆಲಯ ದೆಸೆಗೆಟ್ಟಿತ್ತು. ಅಳಿವುದೊಂದು, ಉಳಿದಿಹಲ್ಲಿ ಕಾಬುದೊಂದೆ ಭೇದ, ಸದಾ ಶಿವಮೂರ್ತಿಲಿಂಗವನರಿತಲ್ಲಿ. ಕಲ್ಲಿನೊಳಗಳ ಜ್ಯೋತಿ, ಉರಿಯೊಳಗಳ ಉಷ್ಣ, ಹಣ್ಣಿನೊಳಗಳ ಸಾರದ ಸವಿಯಂತೆ, ಸವಿಲೇಪವಾದ ಚಿತ್ತದ ವಿಲಾಸಿತದಂತೆ ನಿಜಲಿಂಗದಲ್ಲಿ ಘನಬೆಳಗು ತೋರುತ್ತಲಿದೆ, ಸದಾಶಿವಮೂರ್ತಿಲಿಂಗದಲ್ಲಿ. ಅರಿವಿನ ಮಾರಿತಂದೆ "ಅರಿವು ಹಂಚುವ ಕಾಯಕ"ವನ್ನು ಮಾಡುತ್ತಿದ್ದರು. ಅರಿವು ಎಂದರೆ ಶರಣ ಸಂಸ್ಕಾರ. ಧರ್ಮಕ್ಕೆ ಸಂಬಂಧಿಸಿದ ತಿಳುವಳಿಕೆಯನ್ನು ಮನೆ ಮನೆಗಳಿಗೆ ಹೋಗಿ, ಶರಣರ ವಚನಗಳನ್ನು, ಕಥೆಗಳನ್ನು ಹಾಡಿ, ಹೊಗಳುತ್ತಾ, ಇವರು ವಚನಗಳ ಮೂಲಕ ಬಸವ ಧರ್ಮದ ಅರಿವು ಮೂಡಿಸುತ್ತಿದ್ದರೆಂಬುದು, ಇವರ ಹೆಸರಿನ ಮೂಲಕ ತಿಳಿದುಬರುತ್ತದೆ. ಇವರ ವಚನಗಳ ತಾತ್ತ್ವಿಕ ಆಳ ನಮ್ಮ ಗಮನವನ್ನು ಸೆಳೆಯುತ್ತದೆ. ಇವರ ಸಾಧನೆಯನ್ನು ಗಮನಿಸಿದ ಶರಣರು "ಅರಿವಿನ ಮಾರಿತಂದೆ" ಎಂಬ ಬಿರುದಿನಿಂದ ಕರೆಯುತ್ತಿದ್ದರು. ಇವರು ಅನುಭಾವದ ತುತ್ತತುದಿಗೇರಿದ ಶರಣರಾಗಿದ್ದಾರೆ. ಇವರು ಅನುಭವ ಮಂಟಪದ ಸದಸ್ಯರಾಗಿದ್ದು; ಅಲ್ಲಿನ ಚರ್ಚೆ, ಸಂವಾದಗಳಲ್ಲಿ ಭಾಗವಹಿಸುತ್ತಿದ್ದರು. ಅರಿವಿನ ಮಾರಿತಂದೆಯವರ 309 ವಚನಗಳು ಲಭ್ಯವಾಗಿವೆ. ‘ಸದಾಶಿವಮೂರ್ತಿಲಿಂಗ' ಎನ್ನುವುದು ಇವರ ವಚನದ ಅಂಕಿತವಾಗಿದೆ. ಇವರ ವಚನಗಳಲ್ಲಿ ಲಿಂಗವಂತ ಧರ್ಮದ ನಿಷ್ಠೆಯನ್ನು ಆಳವಾಗಿ ಗುರುತಿಸಬಹುದು. ಸಿದ್ಧಾಂತಕ್ಕಿಂತ ಮಿಗಿಲಾಗಿ ಆಚರಣೆಗೆ ಹೆಚ್ಚಿನ ಒತ್ತು ಕೊಟ್ಟಿರುವುದನ್ನು ತಿಳಿಯಬಹುದಾಗಿದೆ. ಅರಿವಿನ ಮಾರಿತಂದೆ ಇಷ್ಟಲಿಂಗ ದೀಕ್ಷಾಕ್ರಮವನ್ನು ತಮ್ಮ ವಚನಗಳಲ್ಲಿ ಹೇಳಿರುತ್ತಾರೆ. ಲಿಂಗವಂತ ಅಥವಾ ಶರಣ ಧರ್ಮದಲ್ಲಿ ಅರ್ಚನೆ, ಅರ್ಪಣೆ, ಅನುಭಾವದ ಪ್ರಾಮುಖ್ಯತೆಯನ್ನು ತಿಳಿಸಿದ್ದಾರೆ. ಅರಿವು ಇವರ ವಚನದ ಜೀವಾಳವಾಗಿದೆ. ಮುಖ್ಯವಾಗಿ ಆಚರಣೆಗೆ ಮಹತ್ವವನ್ನು ಕೊಟ್ಟು ಶರಣ ಧರ್ಮವನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಹೇಳಿದ್ದಾರೆ. ಒಟ್ಟಿನಲ್ಲಿ ಅರಿವಿನ ಮಾರಿತಂದೆಯವರು ವಚನಗಳ ಮೂಲಕ ಲಿಂಗವಂತ ಧರ್ಮಾಚರಣೆಯ ಮಹತ್ವವನ್ನು ಸಾರಿದ್ದಾರೆ. ನಡೆದಂತೆ ನುಡಿದ, ನುಡಿದಂತೆ ಬಾಳಿದ ಈ ಮಹಾಶರಣ ಎಲ್ಲರಿಗೂ ಮಾದರಿಯಾಗಿದ್ದಾರೆ.

 • 11 ಆಯ್ದಕ್ಕಿ ಮಾರಯ್ಯ
 • ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯಬೇಕು, ಲಿಂಗಪೂಜೆಯಾದಡೂ ಮರೆಯಬೇಕು, ಜಂಗಮ ಮುಂದೆ ನಿಂದಿದ್ದಡೂ ಹಂಗು ಹರಿಯಬೇಕು. “ಕಾಯಕವೇ ಕೈಲಾಸವಾದ” ಕಾರಣ, ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು. ತೊಟ್ಟುಬಿಡುವನ್ನಕ್ಕ ಮತ್ತಾ ಬುಡದಾಸೆ ಬೇಕು, ಮತ್ರ್ಯದ ಹಂಗುಳ್ಳನ್ನಕ್ಕ, ಸತ್ಯಶರಣರ ಸಂಗ, ನಿತ್ಯ ಜಂಗಮಸೇವೆ ಕೃತ್ಯವಿರಬೇಕು, ಅಮರೇಶ್ವರಲಿಂಗವನರಿವುದಕ್ಕೆ. ಆಯ್ದಕ್ಕಿ ಮಾರಯ್ಯ ಮತ್ತು ಲಕ್ಕಮ್ಮನವರದ್ದು ಆದರ್ಶ ದಾಂಪತ್ಯ. ರಾಯಚೂರಿನ ಲಿಂಗಸಗೂರಿನಲ್ಲಿ ಇವರು ವಾಸವಾಗಿದ್ದರು. ಇವರು ಕಾಯಕದಿಂದ ಬಂದ ಹಣದಲ್ಲಿ ದಾಸೋಹ ಮಾಡುತ್ತಿದ್ದರು. ದಾನ, ಧರ್ಮ ಮಾಡುವುದರಲ್ಲಿ ಇವರದ್ದು ಎತ್ತಿದ ಕೈ. ಕಲ್ಯಾಣದ ಅನುಭವ ಮಂಟಪದ ಉಗ್ರಾಣದಲ್ಲಿ ಬಿದ್ದ ಅಕ್ಕಿಯ ಕಾಳುಗಳನ್ನು ಆರಿಸುತ್ತಾ ಅಕ್ಕಿಯನ್ನೇ ಕಾಯಕದ ಕೂಲಿಯನ್ನಾಗಿ ಪಡೆಯುತ್ತಿರುತ್ತಾರೆ. ತಂದ ಅಕ್ಕಿಯಿಂದ ಜಂಗಮಕ್ಕೆ ನಿತ್ಯ ಪ್ರಸಾದ ದಾಸೋಹವನ್ನು ಮಾಡುತ್ತಿದ್ದುದರಿಂದ ಇವರನ್ನು ಆಯ್ದಕ್ಕಿ ಮಾರಯ್ಯ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಮಾರಯ್ಯನವರು ಬಸವತತ್ತ್ವ ಪ್ರಸಾರಕರಾಗಿ ನೊಂದವರಿಗೆ, ದೀನ-ದಲಿತರಿಗೆ ಇವರು ಸದಾ ಧಾನ-ಧರ್ಮಗಳನ್ನು ಮಾಡುತ್ತಿದ್ದರು. 12 ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ತಮ್ಮ ವಚನಗಳನ್ನು ಬಿತ್ತರಿಸಿದರು. ‘ಅಮರೇಶ್ವಲಿಂಗ’ ಎನ್ನುವುದು ಮಾರಯ್ಯನವರ ವಚನದ ಅಂಕಿತವಾಗಿದೆ. ಇವರ ಪತ್ನಿ ಮಹಾಶಿವಶರಣೆ, ಕಾಯಕ ಪ್ರೇಮಿ. ‘ಕಾಯಕವೇ ಕೈಲಾಸ’ವೆಂದು ಅರಿತಿದ್ದ ಲಕ್ಕಮ್ಮನವರು ವಚನದ ಅಂಕಿತವನ್ನು ತಮ್ಮ ಪತಿಯ ಹೆಸರಿನಿಂದಲೇ ಸೂಚಿಸಿಕೊಂಡಿದ್ದಾರೆ. ಇವರ ವಚನಾಂಕಿತ ‘ಮಾರಯ್ಯಪ್ರಿಯ ಅಮರೇಶ್ವರಲಿಂಗ’ ವಾಗಿದೆ. ನಮ್ಮ ಜೀವನಕ್ಕೆ ಎಷ್ಟು ಬೇಕೋ ಅಷ್ಟನ್ನೇ ಸಂಗ್ರಹಿಸಬೇಕೆಂಬ ತತ್ತ್ವವನ್ನು ಜಗತ್ತಿಗೆ ಸಾರಿ ತೋರಿಸಿದ್ದಾರೆ. ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ? ಎಂಬ ಲಕ್ಕಮ್ಮನ ಮಾತು ಸರ್ವಶ್ರೇಷ್ಠವಾದುದು. ಇದು ಗಂಡನ ಮನಸ್ಸನ್ನು ಪರಿವರ್ತಿಸಿತು. ಶಿವಶರಣರಿಗೆ ದಾರಿಯನ್ನು ತೋರಿಸಿತು. ಒಂದು ಕಾಳು ಬೆಳೆಯಲು ಆರೆಂಟು ತಿಂಗಳೇ ಬೇಕಾಗುವುದು. ಆದರೆ ಅದನ್ನು ಹೊರಗೆ ಬಿಸಾಡಬಾರದು ಎಂಬುದನ್ನು ಸಾರಿ ಹೇಳಿದವರು ಈ ಶರಣ ದಂಪತಿಗಳಾಗಿದ್ದಾರೆ. ಇವರ ಆದರ್ಶ ದಾಂಪತ್ಯ ಜಗತ್ತಿಗೆ ದಾರಿದೀಪವಾಗಿದೆ ಎಂದರೆ ತಪ್ಪಾಗಲಾರದು. ಕಾಯಕ ಸಿದ್ಧಾಂತ ಹಾಗೂ ದಾಸೋಹದಲ್ಲಿ ಮನಸ್ಸು ನೆಟ್ಟು, ನಾಳಿನ ಯೋಚನೆಯಿಲ್ಲದ ಶರಣರ ಸಂಗದಲ್ಲಿ ಭಕ್ತಿಭಾವದಲ್ಲಿ ಉಂಡು ಕಾಯಕತತ್ವವನ್ನು ಜಗತ್ತಿಗೆ ಸಾರಿದವರು ಇವರಾಗಿದ್ದಾರೆ. ಇವರು ಪ್ರತಿಪಾದಿಸಿದ್ದ "ಕಾಯಕತತ್ವ" ಶರಣರ ಪಾಲಿಗೆ ಕಾಮಧೇನುವಾಗಿದೆ.

 • 12 ಅಲ್ಲಮಪ್ರಭುಗಳು
 • ಅಂಗದ ಕೈಯಲ್ಲಿ ಲಿಂಗ, ಮನದ ಕೈಯಲ್ಲಿ ಸಂಸಾರ, ಎಂತಯ್ಯಾ ನಿನ್ನ ಪ್ರಾಣಲಿಂಗವೆಂಬೆ? ಹೊರಗೆ ಕುರುಹಾಗಿ ತೋರುತ್ತಿದೆ. ತನುವಿಗೆ ತನು ಸಯವಾಗದು ಮನಕ್ಕೆ ಮನ ಸಯವಾಗದು, ಎಂತಯ್ಯಾ? ನಿನ್ನ ಪ್ರಾಣಲಿಂಗವೆಂಬೆ ಗುಹೇಶ್ವರಾ. ಅಂಬುಧಿಯೊಳಗಾದ ನದಿಗಳು ಮರಳುವುವೆ? ಉರಿಯೊಳಗಾದ ಕರ್ಪುರ ರೂಪಿಂಗೆ ಬಪ್ಪುದೆ? ಮರುತನೊಳಗಾದ ಪರಿಮಳ ಲೇಪನಕ್ಕೆ ಬಪ್ಪುದೆ? ಲಿಂಗವನರಿದು ಲಿಂಗೈಕ್ಯವಾದ ಶರಣ ಮರಳಿ ಹುಟ್ಟುವನೆ ಗುಹೇಶ್ವರಾ? ಹನ್ನೆರಡನೆಯ ಶತಮಾನದ ಮೇರುವ್ಯಕ್ತಿತ್ವ ಅಲ್ಲಮಪ್ರಭು ಅವರದ್ದು. ಆ ವ್ಯಕ್ತಿತ್ವದ ಬೆಳಕು ಇಂದೂ ಕೂಡ ಪ್ರಜ್ವಲಿಸುತ್ತಿದೆ. ಬಸವಣ್ಣನವರ ಭಕ್ತಿಯ ಪ್ರತೀಕ. ಚೆನ್ನಬಸವಣ್ಣನವರು ಜ್ಞಾನದ ಪ್ರತೀಕ. ಅಲ್ಲಮಪ್ರಭುದೇವರು ವೈರಾಗ್ಯದ ಪ್ರತೀಕವಾಗಿದ್ದಾರೆ. ಪ್ರಭುದೇವರ ಚರಿತ್ರೆಯನ್ನು ಮೊತ್ತಮೊದಲು ರಗಳೆ ರೂಪದಲ್ಲಿ ರಚಿಸಿದವರು ಹರಿಹರ. ಅವರು ಕೇವಲ 338 ಸಾಲಿನ ಲಲಿತ ರಗಳೆಯಲ್ಲಿ ಪ್ರಭುದೇವರ ಕಥೆಯನ್ನು ಸುಂದರವಾಗಿ ವಿವರಿಸಿದ್ದಾರೆ. ಅನಿಮಿಷ ಯೋಗಿಗಳಿಂದ ಪ್ರಭುದೇವರಿಗೆ ಲಿಂಗದೀಕ್ಷೆಯಯಿತು. ಪ್ರಭುದೇವರು 12 ವರ್ಷ ದೇಶ ಸಂಚಾರ ಮಾಡಿ, ಆಗ ಬಳಕೆಯಲ್ಲಿದ್ದ ಹಲವಾರು ಸಿದ್ಧಾಂತಗಳ ಮೇಲೆ ಸಿದ್ಧಾಂತದ ಬೆಳಕು ಚೆಲ್ಲಿದ್ದರೆಂದು ಗ್ರಂಥಗಳಿಂದ ತಿಳಿಯುತ್ತದೆ. ಇವರು ತನ್ನ ಕೊನೆಯ ದಿನಗಳನ್ನು ಶ್ರೀಶೈಲದಲ್ಲಿ ಕಳೆದರು. ಚೆನ್ನಬಸವಪುರಾಣದ ಆಧಾರದ ಮೇಲಿಂದ ಬಸವಣ್ಣನವರು ಕಪ್ಪಡಿಸಂಗಮದಲ್ಲಿ ಲಿಂಗೈಕ್ಯರಾದ ಕಾಲದಲ್ಲಿ, ಇವರು ಶ್ರೀಶೈಲದಲ್ಲಿಯೇ ಲಿಂಗೈಕ್ಯರಾದರೆಂದು ತಿಳಿದುಬರುತ್ತದೆ. ಕನ್ನಡ ಸಾಹಿತ್ಯದಲ್ಲಿ ವಚನಗಳ ಕೊಡುಗೆ ಅತ್ಯಮೂಲ್ಯವಾಗಿದೆ. ಸಾಹಿತ್ಯದ ದಿಕ್ಕನ್ನೇ ಬದಲಿಸಿ ಹೊಸಹುಟ್ಟು ನಿರ್ಮಿಸಿದ ಕೀರ್ತಿ ವಚನಕಾರರದ್ದಾಗಿದೆ. ಬಸವ ಧರ್ಮದ ಸಿದ್ಧಾಂತವೇ ಇವರ ವಚನಗಳಲ್ಲಿ ಕಂಡುಬರುತ್ತವೆ. ಆಧ್ಯಾತ್ಮದ ಆಳವಾದ ಅಭ್ಯಾಸಿಗಳಿಗೆ ಮಾತ್ರ ಅವರ ವಚನಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯ. 15ನೇ ಶತಮಾನದಲ್ಲಿ ವಿಜಯನಗರದ ಮಂತ್ರಿ ಜಕ್ಕಣ್ಣನವರು ಪ್ರಭುದೇವರ ವಚನಗಳಿಗೆ ವಿಮರ್ಶೆ ಬರೆದು ಮಹೋಪಕಾರ ಮಾಡಿದ್ದಾನೆ. ಗೂಢವಾದ ಅರ್ಥ, ಬೆಡಗಿನ ವಚನಗಳ ಮೂಲಕ ಇವರು ಶ್ರೇಷ್ಠ ವಿಚಾರಧಾರೆಗಳನ್ನು ಭಕ್ತರಿಗೆ, ಜನರಿಗೆ ಉಣಬಡಿಸಿದ್ದಾರೆ. ತಮ್ಮ ವಚನಗಳಲ್ಲಿ ಇವರು ಅನೇಕ ಬೆಡಗಿನ ಲೋಕೋಕ್ತಿಗಳನ್ನು ಹೇರಳವಾಗಿ ಉಪಯೋಗಿಸಿದ್ದಾರೆ. "ಗುಹೇಶ್ವರ" ಇವರ ವಚನಗಳ ಅಂಕಿತವಾಗಿದೆ. ಇವರ ಬೋಧಕ-ಸಾಧಕ ಗಳನ್ನು ಬಸವಣ್ಣನವರು ಮೆಚ್ಚಿಕೊಂಡು ಅನುಭವ ಮಂಟಪದ ಶೂನ್ಯಪೀಠದ ಅಧ್ಯಕ್ಷರನ್ನಾಗಿ ಮಾಡುತ್ತಾರೆ. ಬಸವಣ್ಣನವರ ಲೋಕ ಕಲ್ಯಾಣದ ಕಾರ್ಯಗಳಿಗೆ ಇವರು ಪ್ರೇರಕರಾಗಿದ್ದು, ದಿವ್ಯಜ್ಞಾನಿ, ವೈರಾಗ್ಯಮೂರ್ತಿ, ಮಹಾಜಂಗಮ, ಲೋಕಗುರು, ಪರಿಪೂರ್ಣವ್ಯಕ್ತಿತ್ವ, ಅನುಭಾವಿ, ತತ್ತ್ವಜ್ಞಾನಿ, ದಾರ್ಶನಿಕರಾಗಿ ವ್ಯೂಮಕಾಯರಾಗಿ ಸಾಧನೆಗೈದು ವಿಶ್ವಕ್ಕೆ ವಚನ ಸಾಹಿತ್ಯದ ಸಂದೇಶವನ್ನು ನೀಡಿದ್ದಾರೆ. ಅಂತಹ ಅದ್ಭುತ ವಚನಗಳಲ್ಲಿ ಅಲ್ಲಮಪ್ರಭುಗಳ ವ್ಯಕ್ತಿತ್ವ ಸಾಧನೆ ದರ್ಶನವಾಗುತ್ತದೆ. ಇಂತಹ ಮಹಾಮಹಿಮರ ಪಾದಸ್ಪರ್ಶದಿಂದ ಕನ್ನಡ ನಾಡು-ನುಡಿ-ಸಂಸ್ಕೃತಿ ಪಾವನವಾಗಿದೆ.

 • 13 ಇಳೆಹಾಳ ಬೊಮ್ಮಯ್ಯ
 • ಸೇವಾ ಮನೋಭಾವ, ಕರ್ತವ್ಯನಿಷ್ಠೆಯಿಂದ ಇಳೆಹಾಳ ಬೊಮ್ಮಯ್ಯನವರು ಎಲ್ಲರ ಗಮನ ಸೆಳೆದಿದ್ದಾರೆ. ಇವರು ಕಾಲ 12ನೇ ಶತಮಾನ. ಶರಣರ ಸೇವೆಗೆ ತಮ್ಮನ್ನು ಮುಡುಪಾಗಿಸಿಕೊಂಡ ಮಹಾಮಹಿಮರಿವರು. ಇವರಿಗೆ ಶರಣ ಸೇವೆಯನ್ನು ತಮ್ಮ ಉಸಿರಾಗಿಸಿಕೊಂಡಿದ್ದರು. ಆದುದ್ದರಿಂದ ಇವರಿಗೆ ಸದಾಚಾರ್ಯ ಎಂದು ಕರೆದಿರುವುದು ಸೂಕ್ತವಾಗಿದೆ. ‘ಕೃಷಿ’ ಇವರ ಕಾಯಕವಾಗಿದೆ. ಕಾಯಕಯೋಗಿಯಾದ ಇವರ ಬಗ್ಗೆ ಸಾಕಷ್ಟು ಪ್ರಚಾರ ಸಿಕ್ಕಿಲ್ಲ. ಇದಕ್ಕೆ ಹಲವಾರು ಕಾರಣಗಳಿರಬಹುದು. ವಿಜಾಪುರ ಜಿಲ್ಲೆಯ ಇಳೆಹಾಳ(ಇಲಾಳ) ಇವರ ಹುಟ್ಟೂರು. ಗ್ರಾಮದ ಹೆಸರಿನ ಮೂಲಕ ಪ್ರಸಿದ್ಧಿಗೆ ಬಂದ ಶರಣ ಇವರಾಗಿದ್ದಾರೆ. ಇವರು ಒಕ್ಕಲು ಮಗನಾಗಿ ಸೇವೆ ಸಲ್ಲಿಸಿದ್ದಾರೆ. ಗ್ರಾಮದ ಪಾಲಿನ ನಿಷ್ಠಾವಂತ ಬಂಟರಾಗಿದ್ದರು. ಗ್ರಾಮಕ್ಕೆ ಮುತ್ತಿಗೆ ಹಾಕಿದ ಪೆರ್ಮಾಡಿರಾಯನೆಂಬವವನನ್ನು ಎದುರಿಸಿ ಹೋರಾಡಿ ಹಿಮ್ಮೆಟ್ಟಿಸುತ್ತಾರೆ. ಇದನ್ನು ಗಮನಿಸಿದ ರಾಜ ಮೆಚ್ಚಿಗೆಗಾಗಿ ಇವರಿಗೆ “ಮುನ್ನೂರೆಪ್ಪತ್ತು ಮಾರಿ ಹೊಲವ ಕಮ್ಮ ತವಗೆಯ್ದು ಕೋರನಿಕ್ಕುವ” ಮಾನ್ಯವನ್ನು ಅಂಗೀಕರಿಸಿದ್ದು, ಆ ಸ್ಥಳದಲ್ಲಿ ಅನೇಕ ಫಲ-ಪುಷ್ಟ ಧಾನ್ಯಗಳನ್ನು ಬೆಳೆದು ಕಲ್ಯಾಣ ನಾಡಿನ ರೈತರಿಗೆ ಆದರ್ಶ ಪ್ರಾಯರಾಗಿದ್ದರು. ಜೊತೆಗೆ ತಾವು ಬೆಳೆದ ಧಾನ್ಯಗಳನ್ನು ಬಡ-ಬಗ್ಗರಿಗೆ ದಾಸೋಹ ಮಾಡುತ್ತಿದ್ದರು. ಪುರಾಣದಲ್ಲಿ ಈ ಸಂಗತಿಯ ವಿವರಣೆ ಇದೆ. ಬೊಮ್ಮಯ್ಯನವರ ಬಗ್ಗೆ 75 ಪದ್ಯಗಳ ಜನಪದ ಗೀತೆಗಳು ಲಭ್ಯವಾಗಿವೆ. ಇದರ ಮೂಲಕ ಈ ಮಹಾಮಹಿಮರ ಬಗ್ಗೆ ತಿಳಿದುಕೊಳ್ಳಬಹುದು. ಇವರು ಬಸವಣ್ಣನವರು ಹಾಕಿಕೊಟ್ಟ ಕಾಯಕ-ದಾಸೋಹ-ಜಂಗಮ ತತ್ತ್ವಕ್ಕೆ ಕಂಬದಂತಿದ್ದು, 770 ಅಮರ ಗಣಂಗಳಲ್ಲಿ ಇವರು ಒಬ್ಬರಾಗಿ ಶರಣ ತತ್ತ್ವದ ಧ್ರುವತಾರೆಯಾಗಿದ್ದಾರೆ.

 • 14 ಉರಿಲಿಂಗದೇವ
 • ಅರಿದೊಡೆ ಶರಣ, ಮೆರೆದೊಡೆ ಮಾನವ. ಪಾತಕನು, ಹೊಲೆಯನು, ನಾನೇತಕ್ಕೆ ಬಾತೆ? ಹೊತ್ತಿಗೊಂದುಂದು ಪರಿಯ ಗೋಸುಂಬೆಯಂತೆ ಈಶನ ಶರಣರ ಕಂಡು ದಾಸೀನವ ಮಾಡುವ ದಾಸೋಹವರಿಯದ ದೂಷಕನು ನಾನಯ್ಯ. ಏಸು ಬುದ್ಧಿಯ ಹೇಳಿ ಬೇಸತ್ತೆನೀ ಮನಕೆ, ಈಶ ನೀ ಸಲಹಯ್ಯಾ, ಉರಿಲಿಂಗತಂದೆ. ಅವರಾರ ಪರಿಯಲ್ಲ ಎಮ್ಮ ನಲ್ಲನು. ವಿಶ್ವವೆಲ್ಲವು ಸತಿಯರು, ಸೋಜಿಗದ ಪುರುಷನು. ಅವರವರ ಪರಿಯಲ್ಲೇ ಅವರವರ ನೆರೆವನು, ಅವರವರಿಗವರಂತೆ ಸುಖಮಯನು ನೋಡಾ. ಅವರೆಲ್ಲರ ವಂಚಿ(ಸ), ಎನ್ನನಗಲದ ಪರಿಯ ನೋಡಾ, ಕೆಳದಿ. ನೀನೊಳ್ಳಿದಳಾದಡೆ ಮಹಾಮಂತ್ರವ ಜಪಿಸು, ನಿನ್ನನಗಲನು, ನಿನ್ನಾಣೆ, ಉರಿಲಿಂಗದೇವ, ತನ್ನಾಣೆ ಕೆಳದಿ. ಪ್ರೌಢದೇವರಾಯನ ಕಾಲದ ಕಾವ್ಯದ ಪ್ರಕಾರ ‘ಉರಿಲಿಂಗದೇವರು’, ‘ಕಂದಲಾಪುರ’ ಎಂಬ ಊರಿನಲ್ಲಿ ಶರಣಧರ್ಮದ ಮಠದ ಸ್ವಾಮಿಯಾಗಿದ್ದರೆಂದು ತಿಳಿದುಬರುತ್ತದೆ. ಇವರು ಶಿವಶರಣರಲ್ಲಿ ಅತ್ಯಂತ ಮೇಧಾವಿ ವಿದ್ವಾಂಸರಾಗಿದ್ದರು. ಉರಿಲಿಂಗದೇವ ಬಸವಣ್ಣನವರ ಸಮಕಾಲೀನರಾದರೂ ಕಲ್ಯಾಣದಲ್ಲಿ ವಾಸಿಸದೆ ಕಂದಲಾಪುರದಲ್ಲಿ ಇದ್ದರೆಂದು ತಿಳಿಯುತ್ತದೆ. ಆದರೂ ಆಗಾಗ್ಗೆ ಕಲ್ಯಾಣಕ್ಕೆ ಹೋಗಿ ಬರುತ್ತಿದ್ದರು. ಮಹಾರಾಷ್ಟ್ರದಲ್ಲಿ ಲಿಂಗವಂತ ಧರ್ಮ ಪ್ರಸಾರಕರಲ್ಲಿ ಇವರು ಅಗ್ರಗಣ್ಯರಾಗಿದ್ದಾರೆ. ಮಠದ ಸ್ವಾಮಿಯಾಗಿ ಕ್ರಾಂತಿಕಾರಕ ಚಟುವಟಿಕೆಗಳಿಂದ ಜನಮನ್ನಣೆ ಗಳಿಸಿದ್ದಾರೆ. ಪೂರ್ವಾಶ್ರಯದಲ್ಲಿ ಅಸ್ಪೃಶ್ಯರಾಗಿದ್ದ ಉರಿಲಿಂಗಪೆದ್ದಿ ಇವರ ಶಿಷ್ಯರಾಗಿದ್ದು, ಗುರುವನ್ನು ಮೀರಿಸುವ ವಿದ್ವಾಂಸರಾಗಿದ್ದರೆಂದು ಇತಿಹಾಸ ತಿಳಿಸುತ್ತದೆ. ಮಹಾರಾಷ್ಟ್ರದ ಪೆದ್ದಣ್ಣ ಮತ್ತು ಕಾಳವ್ವೆ ಎಂಬ ಅಸ್ಪೃಶ್ಯರಿಗೆ ಇಷ್ಟಲಿಂಗ ದೀಕ್ಷೆಯನ್ನಿತ್ತು ಉತ್ತಮ ವಿದ್ವಾಂಸರನ್ನಾಗಿ ಮಾಡಿರುತ್ತಾರೆ. ಇದರಿಂದ ಇವರು ವಿರೋಧಿಗಳ ವೈರತ್ವವನ್ನು ಕಟ್ಟಿಕೊಳ್ಳಬೇಕಾಯಿತು. ಒಮ್ಮೆ ಇವರ ಆಶ್ರಮಕ್ಕೆ ವೈರಿಗಳು ಬೆಂಕಿಯಿಟ್ಟರೆಂದು ತಿಳಿದುಬರುತ್ತದೆ. ಆದರೂ ವಿಚಲಿತರಾಗದೆ ಇವರು ತಮ್ಮ ಉತ್ತಮ ಕೆಲಸಗಳನ್ನು ಮುಂದುವರೆಸುತ್ತಾರೆ. ಇಚ್ಛಾಶಕ್ತಿಯಿದ್ದರೆ ಎಂತಹ ಕೆಲಸವನ್ನಾದರೂ ಸಾಧಿಸಬಹುದೆಂದು ಉರಿಲಿಂಗದೇವರು ನಡೆದು ಬಂದ ದಾರಿಯಲ್ಲಿ ಮೂಡಿಬರುತ್ತದೆ. ಸನ್ಮಾರ್ಗಕ್ಕೆ ಇಚ್ಛಾಶಕ್ತಿ ಬೇಕು ಎಂಬುದು ಇವರ ವಚನಗಳಿಂದ ತಿಳಿಯಬಹುದು. ಕಾಶಿಯ ‘ಶಿವಲೆಂಕ ಮಂಚಣ್ಣ’ನವರು ಉರಿಲಿಂಗದೇವರ' ಗುರು. ಅವರಿಂದಲೇ ಗುರುಪಟ್ಟ ಬಂದಿರಬಹುದೆಂದು ತಿಳಿಯುತ್ತದೆ. ಉರಿಲಿಂಗದೇವರು ತನ್ನ ನೆಚ್ಚಿನ ಶಿಷ್ಯ ಉರಿಲಿಂಗಪೆದ್ದಿಯವರಿಗೆ ಗುರುಪಟ್ಟವನ್ನು ಕಟ್ಟಿ ಕಂದಲಾಪುರದಲ್ಲಿ ಲಿಂಗೈಕ್ಯರಾಗುತ್ತಾರೆ. ಒಬ್ಬ ಕೆಳವರ್ಗದವನಿಗೆ ಸಂಸ್ಕಾರ ನೀಡಿ ಧರ್ಮಗುರುವಾಗಿ ಮಾಡಿದ ಉರಿಲಿಂಗದೇವರು ಒಬ್ಬ ಕ್ರಾಂತಿಕಾರಿ ಶಿವಯೋಗಿ. ಇವರ ವಚನಗಳಲ್ಲಿ ‘ಶರಣಸತಿ ಲಿಂಗಪತಿ’ ಭಾವವಿರುವುದನ್ನು ಕಾಣಬಹುದಾಗಿದೆ.

 • 15 ಉರಿಲಿಂಗಪೆದ್ದಿ
 • ಅಮೃತಕ್ಕೆ ಹಸಿವುಂಟೆ? ಜಲಕ್ಕೆ ತೃಷೆಯುಂಟೆ? ಮಹಾಜ್ಞಾನಸ್ವರೂಪಂಗೆ ವಿಷಯವುಂಟೆ? ಸದ್ಗುರುಕಾರುಣ್ಯವ ಪಡೆದು ಲಿಂಗಾರ್ಚನೆಯಂ ಮಾಡುವ ಮಹಾಭಕ್ತಂಗೆ ಬೇರೆ ಮುಕ್ತಿಯ ಬಯಕೆ ಉಂಟೆ? ಅವರುಗಳಿಗೆ ಅದು ಸ್ವಯಂಭು ಸಹಜಸ್ವಭಾವ. ಇನ್ನು ತೃಪ್ತಿ ಆಪ್ಯಾಯನ ಅರಸಲುಂಟೆ? ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ. ಅಮೃತ ಸರ್ವರಿಗೂ ಅಮೃತವಾಗಿಪ್ಪುದಲ್ಲದೆ ಕೆಲವರಿಗೆ ಅಮೃತವಾಗಿ, ಕೆಲಬರಿಗೆ ವಿಷವಾಗದು ನೋಡಾ. ಎಂತು ಅಂತೆ, ಶ್ರೀ ಗುರು ಸರ್ವರಿಗೆಯೂ ಗುರುವಾಗಿರಬೇಕಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ. ಉರಿಲಿಂಗಪೆದ್ದಿಯವರ ಮೊದಲ ಹೆಸರು ಪೆದ್ದಿ. ನಂತರ ಉರಿಲಿಂಗ ಪೆದ್ದಿಯೆಂದು ಪ್ರಖ್ಯಾತರಾಗುತ್ತಾರೆ. ಪೆದ್ದಿ ಕಳ್ಳತನ ಮಾಡಿ ಜೀವಿಸುತ್ತಿದ್ದರು. ಆದರೆ ಗುರುವಿನ ಅನುಗ್ರಹದಿಂದ ಕನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿ ಪ್ರಾವಿಣ್ಯತೆಯನ್ನು ಸಾಧಿಸಿ, ಮಹಾನ್ ವಿದ್ವತ್ ಅನ್ನು ಸಂಪಾದಿಸಿಕೊಳ್ಳುತ್ತಾರೆ. ವೇದ, ಉಪನಿಷತ್ತು, ಆಗಮ, ಪುರಾಣ ಮೊದಲಾದ ಸಂಸ್ಕೃತ ಗ್ರಂಥವನ್ನು ಅಭ್ಯಾಸ ಮಾಡಿ, ಅವುಗಳಲ್ಲಿ ಉರುಳಿಲ್ಲವೆಂದು ತಿಳಿದು, ಬಸವ ಧರ್ಮವನ್ನು ಅಳವಡಿಸಿಕೊಂಡು ತಮ್ಮ ಉಸಿರಾಗಿಸಿಕೊಂಡಿರುತ್ತಾರೆ. ಪೆದ್ದಿ ಕಳ್ಳತನ ಮಾಡಲು ಹೋದಾಗ ನಡೆದ ಘಟನೆ, ಒಮ್ಮೆ ಉರಿಲಿಂಗದೇವರು ಸೂರಯ್ಯನೆಂಬ ಮುಮೂಕ್ಷುವಿಗೆ ಲಿಂಗದೀಕ್ಷೆ ಮಾಡಬೇಕಾಯಿತ್ತು. ಸೂರಯ್ಯನು ಪೂಜೆಗೆ ಬೇಕಾದ ಸಾಮಗ್ರಿಗಳನ್ನು ತಂದು ಮಠದಲ್ಲಿ ಇಟ್ಟಿದ್ದರು. ಇದನ್ನು ಕದಿಯಲು ಪೆದ್ದಿ ಬರುತ್ತಾರೆ. ಮಠದ ಮಾಳಿಗೆ ಏರಿ ಬೆಳಕಿಂಡಿಯೊಳಗಿನಿಂದ ಇಳಿಯಲು ಪ್ರಯತ್ನಿಸಿದರು. ಆಗ ಉರಿಲಿಂಗ ದೇವರು ಪೂಜೆಯಲ್ಲಿದ್ದರು. ಪೆದ್ದಣ್ಣನವರಿಗೆ ಕೆಳಗೆ ಇಳಿಯಲು ಧೈರ್ಯವಾಗಲಿಲ್ಲ. ಮಾಳಿಗೆ ಮೇಲೆ ಕುಳಿತು ಪೂಜಾಕ್ರಮಗಳನ್ನು ನೋಡ ತೊಡಗಿದರು. ಉರಿಲಿಂಗದೇವರು ಸೂರಯ್ಯನವರಿಗೆ ದೀಕ್ಷೆ ಕೊಡುವುದನ್ನು ಗಮನಿಸಿದ ಕಳ್ಳ ಪೆದ್ದಣ್ಣನವರ ಹೃದಯ ಪರಿವರ್ತನೆಯಾಯಿತು. ಮುಂದೆ ಕಳ್ಳತನ ಮಾಡುವುದನ್ನು ಬಿಟ್ಟು ಮನಃಪರಿವರ್ತಿತಗೊಂಡು ಕಟ್ಟಿಗೆಯನ್ನು ಅರಣ್ಯದಿಂದ ಕಡಿದು ತಂದು ಮಾರಿ ಅದರಿಂದ ಉಪಜೀವನ ನಡೆಸುತ್ತಾರೆ. ಕೆಲವು ದಿನಗಳಲ್ಲಿ ಗುರುಗಳಾದ ಉರಿಲಿಂಗ ದೇವರ ಮನಸ್ಸನ್ನು ಗೆದ್ದು ದೀಕ್ಷೆ ಪಡೆದುಕೊಳ್ಳುತ್ತಾರೆ. ಪೆದ್ದಿಯ ಭಕ್ತಿ, ನಿಷ್ಠೆಗಳಿಗೆ ಉರಿಲಿಂಗದೇವರು ಮೆಚ್ಚಿ ಲಿಂಗದೀಕ್ಷೆ ನೀಡುತ್ತಾರೆ. ನಂತರ ಪೆದ್ದಿ ಎಂಬ ಹೆಸರನ್ನು ತೆಗೆದುಹಾಕಿ ‘ಉರಿಲಿಂಗಪೆದ್ದಿ’ ಎಂದು ನಾಮಕರಣ ಮಾಡುತ್ತಾರೆ. ಲಿಂಗದೀಕ್ಷೆ ಪಡೆದ ಮೇಲೆ ಉರಿಲಿಂಗಪೆದ್ದಿಯ ಮೊದಲಿನ ದುಷ್ಟತನಗಳು ಹೊರಟು ಹೋದವು. ಇವರಿಗೆ ಪುನರ್ಜನ್ಮ ಬಂದಂತಾಯಿತು. ನಂದರಾಜನು ಕಂದಾರದಲ್ಲಿ ಕೆರೆಯನ್ನು ಅಗಿಸುತ್ತಿದ್ದರು. ಆಗ ಅಡ್ಡಲಾಗಿ ಕಲ್ಲೊಂದು ಬಂತು. ಅದನ್ನು ತೆಗೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ಉರಿಲಿಂಗಪೆದ್ದಿ ಗುರುವಿನ ಸ್ಮರಣೆಯನ್ನು ಮಾಡಿ ಬಂಡೆ ಒಡೆದು ನೀರು ಚಿಮ್ಮುವ ಹಾಗೆ ಮಾಡಿ ತಮ್ಮ ಗುರುವಿನ ಬಗ್ಗೆ ಅಪಾರ ಗೌರವವನ್ನು ಉಂಟುಮಾಡಿದರು. ಇವರ ಪವಾಡ ಸದೃಷ್ಯ ಕಾರ್ಯ ನಾಡಿನ ತುಂಬೆಲ್ಲಾ ಹಬ್ಬಿತ್ತು. ಇವರ ಗುರುನಿಷ್ಠೆಯನ್ನು ಕಂಡು ಉರಿಲಿಂಗದೇವರು ಉರಿಲಿಂಗಪೆದ್ದಿಯವರನ್ನು ತಮ್ಮ ಪೀಠಕ್ಕೆ ಗುರುವಾಗಿ ನೇಮಿಸುತ್ತಾರೆ. ಮಠಾಧಿಪತಿಯಾದ ಉರಿಲಿಂಗಪೆದ್ದಿ, ಸಂಸ್ಕೃತ, ಕನ್ನಡ ಭಾಷೆಯಲ್ಲಿ ಅದ್ಭುತ ಪಾಂಡಿತ್ಯಹೊಂದಿ ವಚನಗಳನ್ನು ಬರೆದರು. ಲಿಂಗದ ಬಗ್ಗೆ ಇವರು ಅನೇಕ ವಚನಗಳನ್ನು ಬರೆದಿದ್ದಾರೆ. ಲಿಂಗವು ಪರಮ ಮೂಲವಸ್ತು, ಪರ, ಗೂಢ, ಶರೀರಸ್ಥ, ಲಿಂಗಕ್ಷೇತ್ರ, ಅನಾದಿ ಎಂಬ ಐದು ಲಿಂಗದ ಲಕ್ಷಣಗಳಿವೆ. ಪರ ಅಂದರೆ ಲಿಂಗವು ಪರವಸ್ತು. ಅದರ ನಿಲುವನ್ನು ಶರಣರಲ್ಲದೆ ಯಾರೂ ಅರಿಯಲು ಸಾಧ್ಯವಿಲ್ಲವೆಂದು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪ್ರತಿಯೊಬ್ಬ ಭಕ್ತನು ಕಾಯಕ ಮಾಡಬೇಕು. ಅದು ಸತ್ಯಶುದ್ಧವಾಗಿರಬೇಕು. ಹಿಡಿದ ವ್ರತ ಬಿಡಬಾರದೆಂದು ಇವರ ವಚನಗಳಿಂದ ತಿಳಿದುಬರುತ್ತದೆ. ಕಳ್ಳನಾದವನು ಸಂಸ್ಕಾರದಿಂದ ಮಹಾಶರಣನಾದರು. ಉರಿಲಿಂಗಪೆದ್ದಿಯವರು ಎಲ್ಲ ಶರಣರಿಗೂ ಮಾದರಿಯಾದರು. ಒಬ್ಬ ಅನಾಗರೀಕ, ಅನಕ್ಷರಸ್ಥ, ಕಳ್ಳ ಇಷ್ಟು ಎತ್ತರಕ್ಕೆ ಬೆಳೆಯಲು ಅವರ ಅಚಲವಾದಂತಹ ಛಲ ಸಾಕ್ಷಿಯಾಗಿದೆ. ಪ್ರತಿಯೊಬ್ಬರೂ ಮನಸ್ಸನ್ನು ಮಾಡಿದರೆ ಏನನ್ನಾದರೂ ಸಾಧಿಸಬಹುದೆಂದು ಸಾಬೀತು ಪಡಿಸಿದ್ದಾರೆ.

 • 16 ಉಗ್ಘಡಿಸುವ ಗಬ್ಬಿದೇವಯ್ಯ
 • ಭಾವಭ್ರಮೆವಂತರು ಬಾರದಿರಿ, ಜ್ಞಾನಹೀನರು ಬೇಗ ಹೋಗಿ, ತ್ರಿವಿಧ ಮಲಕ್ಕೆ ಕಚ್ಚಿಮುಟ್ಟಿ ಹೊಡೆದಾಡುವರತ್ತಲಿರಿ. ನಿರುತ ಸ್ವಯಾನುಭಾವರು ಬನ್ನಿ, ಪರಬ್ರಹ್ಮಸ್ವರೂಪರು ಬನ್ನಿ, ಏಕಲಿಂಗನಿಷ್ಠಾಪರರು ದೃಢವಂತರು ಬನ್ನಿ, ಸನ್ಮಾರ್ಗ ಸತ್ಕ್ರಿಯಾವಂತರು ಬನ್ನಿ, ಎಂದು ಎನಗೆ ಕೊಟ್ಟ ಕಾಯಕ ಕೂಡಲಸಂಗಮದೇವರಲ್ಲಿ ಬಸವಣ್ಣ. ಜ್ಞಾನ ಬಾ, ಮಾಯೆ ಹೋಗೆಂದು ಕಳುಹುತ್ತಿದ್ದೇನೆ. ಅರಿವು ಬಾ, ಅಜ್ಞಾನ ಹೋಗೆಂದು ಕಳುಹುತ್ತಿದ್ದೇನೆ. ನಿಃಕಲ ಬಾ, ಸಕಲ ಹೋಗೆಂದು ಕಳುಹುತ್ತಿದ್ದೇನೆ. ನಿಃಪ್ರಪಂಚ ಬಾ, ಪ್ರಪಂಚ ಹೋಗೆಂದು ಕಳುಹುತ್ತಿದ್ದೇನೆ. ಕೂಡಲಸಂಗಮದೇವರಲ್ಲಿ ಬಸವಣ್ಣನ ಬಲ್ಲವರನೊಳಗೆ ಕೂಡಿ, ಅರಿಯದವರ ಹೊರಗೆ ತಡೆವುತ್ತಿದ್ದೇನೆ. ಉಗ್ಘಡಿಸುವ ಗಬ್ಬಿದೇವಯ್ಯ ಬಸವೇಶ್ವರರ ಸಮಕಾಲೀನ ಮಹಾಶಿವಶರಣರು. ಇವರು ಅನುಭಾವಿ ಶರಣರು. ಇವರ ವಚನಗಳ ಮೂಲಕ ವ್ಯಕ್ತಿತ್ವವನ್ನು ತಿಳಿಯಬಹುದಾಗಿದೆ. ಗಬ್ಬಿದೇವಯ್ಯ ಗಟ್ಟಿಯಾಗಿ ಕೂಗಿ ಹೇಳುವ, ಉದ್ಘೋಷಿಸುವ ಕಾಯಕ ಮಾಡುತ್ತಿದ್ದರು. ಇವರು ಸಭೆ-ಸಮಾರಂಭಗಳಲ್ಲಿ ಶಾಂತಿಯಿಂದ ಇರುವಂತೆ ನೋಡಿಕೊಳ್ಳುತ್ತಿರಬಹುದೆಂದು ತಿಳಿದು ಬರುತ್ತದೆ. ಇವರ ವಚನಗಳಲ್ಲಿ ಕಾಯಕ ನಿಷ್ಠೆಯ ಸ್ಪಷ್ಟವಾದ ಸೂಚನೆಯಿದೆ. ಆಧ್ಯಾತ್ಮದ ಚಿಂತನೆಗೆ ಹೋಗುವವರು ಹೇಗಿರಬೇಕು, ಹೇಗಿದ್ದರೆ ಚೆನ್ನ ಎಂದು ತಮ್ಮ ವಚನದಲ್ಲಿ ತಿಳಿಸಿದ್ದಾರೆ. ಇವರ ಮೇಲೆ ಬಸವಣ್ಣನವರು ಅಗಾಧ ಪ್ರಭಾವವನ್ನು ಬೀರಿರುತ್ತಾರೆ. ‘ಗಬ್ಬಿ’ ಎಂದರೆ ಶ್ರೇಷ್ಠ ಎಂಬ ಅರ್ಥವಿದೆ. ಇವರು ಕೂಡ ಒಬ್ಬ ಶ್ರೇಷ್ಠ ವಚನಕಾರರು. ಸಾಮಾಜಿಕವಾಗಿ ಇವರು ಕೆಳವರ್ಗದವರಾದರೂ ಇವರ ವಚನಗಳು, ಮೇಲ್ವರ್ಗದ ಜನರ ಅನುಭವಕ್ಕಿಂತಲೂ ಶ್ರೀಮಂತವಾಗಿ ಮೂಡಿಬಂದಿವೆ. ಇದರ ಆಧಾರದ ಮೇಲೆ ಇವರು ಜ್ಞಾನದಲ್ಲಿ ಮೇಲ್ದರ್ಜೆಯವರಾಗಿದ್ದಾರೆ ಎಂದು ತಿಳಿದು ಬರುತ್ತದೆ. ಅಂತರಂಗದ ಜ್ಞಾನವು ಪ್ರಕಟವಾಗಲು ಮನುಷ್ಯ ಮಾಯೆಯನ್ನು ಗೆಲ್ಲಬೇಕು. ಕಾಮ, ಕ್ರೋಧ, ಲೋಭ, ಮದ, ಮೋಹ, ಮತ್ಸರ ಈ ಆರು ಶತ್ರುಗಳು ಮಾಯೆಯ ವಿವಿಧ ರೂಪಗಳು. ಇವನ್ನು ಮನಸ್ಸಿನಿಂದ ಕಿತ್ತೊಗೆಯಬೇಕೆಂದು ತಿಳಿಸುತ್ತಾ, ಕೆಳವರ್ಗದಲ್ಲಿ ಹುಟ್ಟಿದನೆಂಬ ಕೀಳರಿಮೆಯನ್ನು ತೊರೆದ ಇವರು ಸಾರ್ಥಕ ಕಾಯಕದ ಮೂಲಕ ಶಿವಶರಣರಿಗೆ ಮಾದರಿಯಾಗಿದ್ದಾರೆ. ಇವರ ವ್ಯಕ್ತಿತ್ವ ಅನುಕರಣೀಯವಾಗಿದೆ.

 • 17 ಉಳಿಯುಮೇಶ್ವರ ಚಿಕ್ಕಯ್ಯ
 • ಎನ್ನ ಮನವ ಮಂಚವ ಮಾಡಿ, ತನುವ ಪಚ್ಚಡಿಸುವೆ ಬಾರಯ್ಯ! ಎನ್ನ ಅಂತರಂಗದಲ್ಲಿಪ್ಪೆ ಬಾರಯ್ಯ! ಎನ್ನ ಬಹಿರಂಗದಲ್ಲಿಪ್ಪೆ ಬಾರಯ್ಯ! ಎನ್ನ ಶಿವಲಿಂಗದೇವನೆ ಬಾರಯ್ಯ! ಎನ್ನ ಭಕ್ತವತ್ಸಲನೆ ಬಾರಯ್ಯ! ‘ಓಂ ನಮಃ ಶಿವಾಯ’ ಎಂದು ಕರೆವೆನು ಉಳಿಯುಮೇಶ್ವರಲಿಂಗವೆ ಬಾರಯ್ಯ! ಅಸ್ಥಿ, ಚರ್ಮ, ಮಾಂಸ, ರಕ್ತ, ಖಂಡದ ಚೀಲ: ಬಾ(ತೆ)ಗೆಟ್ಟೊಡಲ ನಾನೆಂತು ಸಲಹುವೆನಯ್ಯಾ? ಹುರುಳಿಲ್ಲದಿಹ ಸಂಸಾರ: ಎಂದಿಂಗೆ ನಾನಿದ ಹೊತ್ತು ತೊಳಲುವುದ ಬಿಡುವೆನಯ್ಯಾ? ಎಂದಿಂಗೆ ನಾನಿದರ ಸಂಶಯವಳಿವೆನಯ್ಯಾ? ಎಡಹಿ ಕೊಡ, ನೀರೊಳಗೆ ಒಡೆದಂತೆ ಎನ್ನೊಡಲೊಡೆದು ನಿಮ್ಮೊಳೆಂದು ನೆರೆವೆನೊ ಉಳಿಯುಮೇಶ್ವರಾ. ಉಳಿಯುಮೇಶ್ವರ ಚಿಕ್ಕಯ್ಯ ಮಹಾಶಿವಶರಣ. ಇವರ ಕಾಲ 12 ನೆಯ ಶತಮಾನದ ಉತ್ತರಾರ್ಧ ಹಾಗೂ 13ನೆಯ ಆರಂಭ ಭಾಗವೆಂದು ತಿಳಿದು ಬರುತ್ತದೆ. ಇವರ ಬಗ್ಗೆ ಶಾಸನಗಳಲ್ಲಿ ಉಲ್ಲೇಖಗಳಿವೆ. ಚಿಕ್ಕಯ್ಯ ತನ್ನ ವಚನದಲ್ಲಿ ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವ, ಸಿದ್ಧರಾಮ ಮೊದಲಾದವರನ್ನು ಹೆಸರಿಸಿದ್ದಾರೆ. ಇವರು ಶರಣರಿಗೆ ತೋರಿರುವ ಪ್ರೀತಿ, ವಿಶ್ವಾಸ, ಭಕ್ತಿಯಿಂದ ಲಿಂಗವಂತ ಧರ್ಮಿಯರಿಗೆ ಪ್ರೀತಿಪಾತ್ರರಾಗಿದ್ದಾರೆ. ಶರಣತತ್ತ್ವವನ್ನು ಜೀವನದಲ್ಲಿ ಕೊನೆಯವರೆಗೂ ಪಾಲಿಸಿದ್ದಾರೆ. ಶಾಸನಗಳಿಂದ ಚಿಕ್ಕಯ್ಯ ಕೀರ್ತಿವಂತನೆಂದು ತಿಳಿದುಬರುತ್ತದೆ. ಅಲ್ಲದೆ ಇವರು ಅನುಭಾವಿ, ಭಕ್ತನೆಂದೂ ತಿಳಿಯುತ್ತದೆ. ಇವರ 15 ವಚನಗಳು ಲಭ್ಯವಾಗಿವೆ. ‘ಉಳಿಯುಮೇಶ್ವರ ಲಿಂಗ’ ಇವರ ಅಂಕಿತವಾಗಿದೆ. ಇವರ ಕಾಲದ ಬಗ್ಗೆ ವಿದ್ವಾಂಸರು ಸಾಕಷ್ಟು ಚರ್ಚೆ ಮಾಡಿದ್ದಾರೆ. ಎಂ.ಎಂ.ಕಲ್ಬುರ್ಗಿ ಅವರು ಶಾಸನಗಳ ಪ್ರಕಾರ ಇವರ ಕಾಲ ಕ್ರಿ.ಶ. 1168 ರಿಂದ 1202 ಎಂದು ಅಭಿಪ್ರಾಯಪಡುತ್ತಾರೆ. ಬಸವಣ್ಣನವರ ತರುವಾಯ ಇವರು ಬದುಕಿದ್ದರೆಂದು ಶಾಸನಗಳಿಂದ ಸ್ಪಷ್ಟಪಡಿಸಿದ್ದಾರೆ.

 • 18 ಏಕಾಂತ ರಾಮಯ್ಯ
 • ಅಶನ ವ್ಯಸನ ಸರ್ವವಿಷಯಾದಿಗಳಲ್ಲಿ ಹುಸಿದು, ಪಿಸುಣತ್ವದಿಂದ ಗಸಣಿಗೊಂಡು, ಮಾಡಿಸಿಕೊಂಬುದು ಸದ್ಗುರುವಿಗೆ ಸಂಬಂಧವಲ್ಲ. ತಿಲರಸ-ವಾರಿಯ ಭೇದದಂತೆ, ಮಣಿಯೊಳಗಿದ್ದ ಸೂತ್ರದಂತೆ ಅಂಗವ ತೀರ್ಚಿ ಪಾಯ್ದು ನಿಂದ ಅಹಿಯ ಅಂಗದಂತೆ ಗುರುಸ್ಥಲಸಂಬಂಧ, ಎನ್ನಯ್ಯ ಚೆನ್ನರಾಮೇಶ್ವರಲಿಂಗವನರಿಯಬಲ್ಲಡೆ. ಕಾಯ ಹಲವು ಭೇದಗಳಾಗಿ ಆತ್ಮ ನೇಕವೆಂಬುದು ಅದೇತರ ಮಾತು? ಬೆಂಕಿಯಿಂದಾದ ಬೆಳಗು ಸುಡಬಲ್ಲುದೆ? ಬೆಂಕಿ(ಯ)ಲ್ಲದೆ. ಹಲವು ಘಟದಲ್ಲಿ ಅವರವರ ಹೊಲಬಿನಲ್ಲಿ ಅನುಭವಿಸುತ್ತ ಮತ್ತೊಂದರಲ್ಲಿ ಕೂಟಸ್ಥವಪ್ಪ ಸುಖ ಉಂಟೆ? ಈ ಗುಣ ಎನ್ನಯ್ಯ ಚೆನ್ನರಾಮನನರಿದಲ್ಲಿ. 12ನೇ ಶತಮಾನದ ಓರ್ವ ಮಹಾಶರಣ ಏಕಾಂತ ರಾಮಯ್ಯ. ಇವರು ಕಲ್ಬುರ್ಗಿ ಜಿಲ್ಲೆಯ ಆಳಂದವೆಂಬ ಊರಿನವರು. ಇವರು ಪುರುಷೋತ್ತಮಭಟ್ಟ - ಸೀತಾದೇವಿಯವರ ಮಗನು. ಏಕಾಂತದಲ್ಲಿ ಧ್ಯಾನ ಮಾಡುತ್ತಿದ್ದುದರಿಂದ ರಾಮನು ಏಕಾಂತ ರಾಮಯ್ಯನಾದರು. ಇವರು ಬಸವಣ್ಣನವರ ಹಿರಿಯ ಸಮಕಾಲಿನ ಶಿವಶರಣರಾಗಿದ್ದರೆಂದು ತಿಳಿಯುತ್ತದೆ. ಪಾಲ್ಕುರಿಕೆ ಸೋಮನಾಥನ ಕೃತಿ ಗಣಸಹಸ್ರದಲ್ಲಿ ರಾಮಯ್ಯನವರ ಹೆಸರು ಬರುತ್ತದೆ. ಇವರು 12ನೇ ಶತಮಾನದ ವಚನಕಾರರು ಸಹ ಆಗಿದ್ದರು. ಇವರ ವಚನಾಂಕಿತ “ಎನ್ನಯ್ಯ ಚೆನ್ನರಾಮೇಶ್ವರ”ಆಗಿದೆ. ಇವರ ಬಗ್ಗೆ ಮಹಾಕವಿ ಹರೀಶ್ವರನು ಒಂದು ರಗಳೆ ಕಾವ್ಯವನ್ನು ಬರೆದಿದ್ದಾರೆ. ಆದಯ್ಯ ಮೊದಲಾದವರ ವಚನಗಳಲ್ಲೂ ಇವರ ಹೆಸರು ಪ್ರಸ್ತಾಪವಾಗಿದೆ. ರಾಮಯ್ಯನವರ ಪವಾಡ ಕಂಡು ಮೆಚ್ಚಿದ ಬಿಜ್ಜಳರಾಜನು ಕ್ರಿ.ಶ. 1155 ರಲ್ಲಿ ಗೋಕಾವೆ ಗ್ರಾಮವನ್ನು (ಭೋಗಾವಿ) ಉಂಬಳಿ ಕೊಟ್ಟನು. ಇದೇ ರೀತಿ ಚಾಳುಕ್ಯ ನಾಲ್ಕನೆಯ ಸೋಮಯ್ಯನು ಅಬಲೂರು ಶಾಸನ ಹಾಗೂ ಹರಿಹರನ ‘ಏಕಾಂತ ರಾಮಯ್ಯನ ರಗಳೆ’ ಏಕಾಂತ ರಾಮಯ್ಯನವರ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತದೆ. ಲಿಂಗವಂತ ಮತೋದ್ಧಾರಕರಲ್ಲಿ ಏಕಾಂತ ರಾಮಯ್ಯನವರ ಹೆಸರು ಪ್ರಮುಖವಾಗಿದೆ.

 • 19 ಏಲೇಶ್ವರದ ಕೇತಯ್ಯ
 • ಆವ ವ್ರತ ನೇಮವ ಹಿಡಿದಡೂ ಆ ವ್ರತ ನೇಮದ ಭಾವ ಶುದ್ಧವಾಗಿರಬೇಕು. ಅಸಿ ಕೃಷಿ ಯಾಚಕ ವಾಣಿಜ್ಯತ್ವದಿಂದ ಬಂದ ದ್ರವ್ಯಂಗಳಲ್ಲಿ ಬಾಹ್ಯದ ಬಳಕೆ-ಅಂತರಂಗದ ನಿರಿಗೆ ಉಭಯ ಶುದ್ಧವಾಗಿಪ್ಪ ಭಕ್ತಂಗವೆ ಏಲೇಶ್ವರಲಿಂಗದಂಗ. ಒಡೆಯರು ಭಕ್ತರಲ್ಲಿ ಕೃಷಿಯಿಲ್ಲದೆ ಬೇಡಿ ತಂದು, ತನ್ನ ಮಡದಿ ಮಕ್ಕಳ ಹೊರೆದು, ಮಿಕ್ಕಾದುದ ಒಡೆಯರಿಗಿಕ್ಕಿಹೆನೆಂಬ ಅಡುಗೂಳಿಕಾರನ ಗಂಜಿಗುಡಿಹಿಯ ಭಕ್ತಿ ತನ್ನ ಸಂಸಾರದ ಅಡಿಯೊಳಗೆ ಅಡಗಿತ್ತು, ಇದ ಬೆದಕಿದಡೆ ಹುರುಳಿಲ್ಲ. ನನ್ನಿಯೆತ್ತಿಗೆ ಎನ್ನ ಮಣ್ಣೆತ್ತು ಘನವೆನಬೇಕು, ಅದು ಭಕ್ತಿಪಕ್ಷದ ಓಸರ. ಬಿಡಲಿಲ್ಲ, ಅರಿದು ಹಿಡಿಯಲಿಲ್ಲ. ಆ ಅಂಗವ, ಒಡಗೂಡುವ ಶರಣರು ನೀವೆ ಬಲ್ಲಿರಿ. ಎನಗದು ಸಂಗವಲ್ಲ ಏಲೇಶ್ವರಲಿಂಗಕ್ಕೆ. ಲಿಂಗವಂತ ಧರ್ಮ ಪುರಾಣ ಕಾವ್ಯಗಳಿಂದ ಏಲೇಶ್ವರದ ಕೇತಯ್ಯನವರ ಮಹಿಮೆ ತಿಳಿಯುತ್ತದೆ. ಇವರ ಊರು ಏಲೇಶ್ವರ (ಈಗಿನ ಏಲೇರಿ). ಇವರ ಪತ್ನಿ ಸಾಯಿದೇವಿ. ಶಿವಣ್ಣ ಮತ್ತು ಶಿವಕ್ಕ ಇವರ ಮಕ್ಕಳು. ಜಂಗಮ ಸೇವೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು ಕೇತಯ್ಯನವರು. ಇವರು ಬಸವ ಧರ್ಮದ ಆಚರಣೆಯಲ್ಲಿದ್ದರು. ಇದನ್ನು ಸಹಿಸದೆ ಇವರ ವಿರೋಧಿಗಳು ಬಿತ್ತನೆಗೆ ಇಟ್ಟ ಉದ್ದು, ಕಡಲೆ, ಗೋಧಿಗಳನ್ನು ಸುಟ್ಟು ಹಾಕಿದರು. ಆದರೂ ಇವರು ವಿಚಲಿತರಾಗಲಿಲ್ಲ. ಇಷ್ಟಲಿಂಗ ಪೂಜೆಯನ್ನು ಬಿಡಲಿಲ್ಲ. ಸುಟ್ಟು ಕರಿಯಾದ ಬೀಜವನ್ನೇ ಗುಡಿಸಿ ಹೆಡಗೆಯಲ್ಲಿ ತುಂಬಿ ಹೊಲಕ್ಕೆ ಹೋಗಿ ಬಿತ್ತುತ್ತಾರೆ. ಎಂಟು ಮುಡಿ ಬೆಳೆದು ತನ್ನ ಮಹಿಮೆಯನ್ನು ಸಾರಿದ ಶಿವಶರಣರು ಮಗನಿಗೆ ಮದುವೆ ಮಾಡುತ್ತಾರೆ. ಆಗಲೂ ವಿರೋಧಿಗಳು ಏಲೇಶ್ವರದ ಕೇತಯ್ಯನವರಿಗೆ ನೆಮ್ಮದಿಯಿಂದ ಇರಲು ಬಿಡಲಿಲ್ಲ. ಅವರನ್ನು ಸುತ್ತುವರೆದು ಕಾಡುತ್ತಾರೆ. ಕೇತಯ್ಯನಿಗೆ ತೊಂದರೆ ಕೊಟ್ಟವರ ಕಣ್ಣು ಹೋಗಿ ಕಾಲು ಮುರಿದು ಹೋಗುತ್ತದೆ. ಇಷ್ಟಾದರೂ ಕೇತಯ್ಯ ವೈರಿಗಳ ಮೇಲೆ ಸೇಡು ತೀರಿಸಿಕೊಳ್ಳಲಿಲ್ಲ. ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ಕಂಡರು. ಈ ರೀತಿಯ ಸುಸಂಸ್ಕೃತ ಶಾಂತ ಮನಸ್ಸಿನ ಅನುಭಾವಿ ಕೇತಯ್ಯನವರು ಶಿವಭಕ್ತರಲ್ಲಿ ಅಗ್ರಮಾನ್ಯರಾಗಿದ್ದಾರೆ. ಇವರು ಬಸವಣ್ಣನವರ ಸಮಕಾಲೀನ ವಚನಕಾರರಾಗಿದ್ದು, ‘ಏಲೇಶ್ವರ ಲಿಂಗ’ ಇವರ ಅಂಕಿತವಾಗಿದೆ. ಇವರ 74 ವಚನಗಳು ಲಭ್ಯವಾಗಿವೆ. ಆಚರಣೆಯಲ್ಲಿ ಮೈಮರೆತು, ಒಡೆಯರು ಭಕ್ತರಿಗೆ ಅನ್ಯಾಯ ಮಾಡಬಾರದು ಎಂದಿದ್ದಾರೆ ಕೇತಯ್ಯನವರು. ಭಕ್ತ-ಜಂಗಮರ ಸಂಬಂಧದ ವಿಷಯವಾಗಿ ಕೇತಯ್ಯನವರು, ತಮ್ಮ ವಚನಗಳಲ್ಲಿ ಚರ್ಚಿಸಿದ್ದಾರೆ. 12ನೇ ಶತಮಾನದ ಶಿವಶರಣರು ಸುಖ-ದುಃಖಗಳೆರಡನ್ನು ಪರಮಾತ್ಮನ ಪ್ರಸಾದವೆಂದು ಸಮಾನವಾಗಿ ಸ್ವೀಕರಿಸುತ್ತಿದ್ದರು. ಅದೇ ರೀತಿಯಲ್ಲಿ ಏಲೇಶ್ವರದ ಕೇತಯ್ಯನವರು ಬದುಕಿ ಬಾಳಿದಂತಹ ಶರಣರಾಗಿದ್ದಾರೆ. ಮನುಕುಲಕ್ಕೆ ಇವರ ಚರಿತ್ರೆಯೇ ಧಿವ್ಯ ಔಷಧಿಯಾಗಿದೆ.

 • 20 ಕನ್ನದ ಮಾರಿತಂದೆ
 • ಕತ್ತಲೆಯಲ್ಲಿ ಕನ್ನವನಿಕ್ಕಿದಡೆ ಎನಗೆ ಕತ್ತಿಯ ಕೊಟ್ಟ ಕರ್ತುವಿಗೆ ಭಂಗ. ಅವರು ಮರೆದಿರ್ದಲ್ಲಿ ಮನೆಯ ಹೊಕ್ಕಡೆ ಎನ್ನ ಚೋರತನದ ಅರಿಕೆಗೆ ಭಂಗ. ಮರೆದಿರ್ದವರ ಎಬ್ಬಿಸಿ ಅವರಿಗೆ ಅವರೊಡವೆಯ ತೋರಿ, ಎನ್ನೊಡವೆಯ ತಂದೆ, ಮಾರನ ವೈರಿ ಮಾರೇಶ್ವರಾ. ಹನ್ನೆರಡನೇ ಶತಮಾನದಲ್ಲಿ ‘ಮಾರಿತಂದೆ’ ಹೆಸರಿನ ಹತ್ತಕ್ಕೂ ಹೆಚ್ಚು ಜನ ಶರಣರನ್ನು ಕಾಣಬಹುದು. ಅವರಲ್ಲಿ ಕನ್ನದ ಮಾರಿತಂದೆಯವರು ಪ್ರಮುಖ ಶಿವಶರಣರಾಗಿದ್ದಾರೆ. ಇವರ ಕಾಲ ಕ್ರಿ.ಶ. 1160. ಇವರದು ಕನ್ನ ಹಾಕಿ ಕಳವು ಮಾಡುವ ಕಾಯಕ. ಇವರು ಶರಣರ ಮನೆಗೆ ಕನ್ನ ಹಾಕುತ್ತಿರಲಿಲ್ಲ. ಶ್ರೀಮಂತರ ಮನೆಗೆ ಕನ್ನ ಹಾಕುತ್ತಿದ್ದರು. ಲಕ್ಕಣ್ಣ ದಂಡೇಶನ “ಶಿವತತ್ತ್ವ ಚಿಂತಾಮಣಿ”ಯಲ್ಲಿ ಈ ಬಗ್ಗೆ ಉಲ್ಲೇಖವಿದೆ. ಒಮ್ಮೆ ಬಿಜ್ಜಳನ ಅರಮನೆಗೆ ಕನ್ನ ಹಾಕಲು ಹೋಗಿ ಸಿಕ್ಕಿ ಬೀಳುತ್ತಾರೆ. ರಾಜ ಇವರಿಗೆ ಶೂಲದ ಶಿಕ್ಷೆಯನ್ನು ನೀಡುತ್ತಾರೆ. ಆದರೆ ಬಸವಣ್ಣ ಮಾರಿತಂದೆಯವರನ್ನು ಶೂಲದ ಶಿಕ್ಷೆಯಿಂದ ಬಿಡಿಸಿ, ಕನ್ನಹಾಕಿ ಇನ್ನೊಬ್ಬರ ವಸ್ತು ಕದಿಯುವುದು ಸರಿಯಲ್ಲವೆಂದು ಬುದ್ಧಿ ಹೇಳುತ್ತಾರೆ. ನಂತರ ಮಾರಿತಂದೆ ಕನ್ನ ಹಾಕುವುದನ್ನು ಬಿಟ್ಟು, ಶರಣರಾಗುತ್ತಾರೆ. ಭವಿಗಳ ಮನಕ್ಕೆ ಕನ್ನ ಹಾಕಿ ಅವರನ್ನು ಭಕ್ತರನ್ನಾಗಿ ಪರಿವರ್ತಿಸುವ ಕಾಯಕ ಪ್ರಾರಂಭಿಸುತ್ತಾರೆ. ಇವರ ಮೂರು ವಚನಗಳು ಲಭ್ಯವಾಗಿವೆ. ‘ಮಾರನ ವೈರಿ ಮಾರೇಶ್ವರಾ’ ಎಂಬುದು ಇವರ ವಚನಾಂಕಿತವಾಗಿದೆ. ಬದುಕಿನ ಉದ್ದೇಶವನ್ನೇ ಮರೆತುಬಿಟ್ಟವರನ್ನು ಜಾಗೃತಗೊಳಿಸಿ, ಅವರಿಗೆ ಸರಿಯಾದ ಮಾರ್ಗ ತೋರಿಸುವುದೇ ಮಾರಿತಂದೆಯ ಹೊಸ ಕಾಯಕವಾಯಿತು. ಇದರ ಮೂಲಕ ಇವರು ನಿರಾಕಾರ ಶಿವ ಮೆಚ್ಚುವ ಕೆಲಸ ಮಾಡಿದರು. ಬಸವಣ್ಣನವರು ಕಳ್ಳನ ಮನಸ್ಸನ್ನು ಪರಿವರ್ತಿಸಿ, ಅವರು ಶರಣ ಮಾರ್ಗದಲ್ಲಿ ನಡೆಯುವಂತೆ ಮಾಡಿದ್ದಾರೆ. ಇದು ನಿಜಕ್ಕೂ ಪವಾಡವೇ ಸರಿ. ಇಂತಹ ಅನೇಕ ಪರಿವರ್ತನೆಯ ಪವಾಡಗಳನ್ನು ಬಸವಣ್ಣನವರು ಮಾಡಿರುತ್ತಾರೆ. ಇದಕ್ಕೆ ಕನ್ನದ ಮಾರಿತಂದೆಯ ವೃತ್ತಾಂತವೇ ಜೀವಂತ ಉದಾಹರಣೆಯಾಗಿದೆ.

 • 21 ಕನ್ನಡಿ ಕಾಯಕದ ಅಮ್ಮಿದೇವಯ್ಯ
 • ಆವಾವ ಜಾತಿ (ಗೋ)ತ್ರದಲ್ಲಿ ಬಂದಡೂ ತಮ್ಮ ತಮ್ಮ ಕಾಯಕಕ್ಕೆ, ಭಕ್ತಿಗೆ ಸೂತಕವಿಲ್ಲದಿರಬೇಕು. ಆವಾವ ವ್ರತವ ಹಿಡಿದಡೂ, ಇದಿರ ದಾಕ್ಷಿಣ್ಯ(ವ) ಮರೆದು ತನ್ನಯ ತ್ರಿಕರಣ ಶುದ್ಧವಾಗಿ ನಡೆಯಬೇಕು. ಪರಪುರುಷಾರ್ಥಕ್ಕೆ ಅರಿಯಿಸಿಕೊ(ಳಹದೆ) ಮೂಗ? ಅರುಹಿರಿಯರು ಹೇಳಿದರೆಂದು ಕಲಸಬಹುದೆ ಅಮಂಗಲವ? ಇಂತೀ ಕ್ರೀಯಲ್ಲಿ ಭಾವಶುದ್ಧವಾಗಿ ಭಾವದಲ್ಲಿ ದಿವ್ಯಜ್ಞಾನಪರಿಪೂರ್ಣವಾಗಿಪ್ಪ ಗುರುಚರಭಕ್ತಂಗೆ ಚೆನ್ನಬಸವಣ್ಣ ಸಾಕ್ಷಿಯಾಗಿ ಕಮಳೇಶ್ವರಲಿಂಗವು ತಾನೆಯೆಂದು ಭಾವಿಸುವನು. ಪಂಜ ಹಿಡಿವಂಗೆ ಸಂದೇಹವಲ್ಲದೆ ಉರಿವ ಬೆಳಗಿಂಗೆ ಸಂದೇಹವುಂಟೆ? ಸಂಸಾರ ಸಂದಣಿಯಲ್ಲಿ ಅನಂಗನ ಆತುರದಲ್ಲಿ ಹೊಂದಿ ಬೇವಂಗೆ ಲಂದಣತನವಲ್ಲದೆ ನಿಜಪ್ರಸಂಗಿ, ನಿರತಿಶಯ ಲಿಂಗಾಂಗಿ, ಪರಬ್ರಹ್ಮ ಪರಿಣಾಮಿ ಜಗದ ಹ(ದಿರಿ)ಗರಲ್ಲಿ ಸಿಕ್ಕಿ ಪರಿಭ್ರಮಣಕ್ಕೊಳಗಾಹನೆ? ಇಂತೀ ನಿಜವನರಿದಾತನೆ ಚೆನ್ನಬಸವಣ್ಣ ಸಾಕ್ಷಿಯಾಗಿ ಕಮಳೇಶ್ವರಲಿಂಗವು ತಾನೆಂಬೆನು. ಕನ್ನಡಿ ಕಾಯಕದ ಅಮ್ಮಿದೇವಯ್ಯ, ಬಸವಣ್ಣನವರ ಸಮಕಾಲೀನ ವಚನಕಾರರಾಗಿದ್ದಾರೆ. ಕ್ಷೌರಿಕ ವೃತ್ತಿಯನ್ನು ಇವರು ಮಾಡುತ್ತಿದ್ದರು. ಇವರ ವಚನಗಳಲ್ಲಿರುವ ಹಡಪ, ಕನ್ನಡಿ, ಕತ್ತರಿ, ಚಿಮ್ಮುಟಿಗೆ ಮೊದಲಾದ ಪದಗಳನ್ನು ಗಮನಿಸಿದಾಗ; ಇವರು ಕೂಡ ತಮ್ಮ ವಚನಗಳಲ್ಲಿ ವೃತ್ತಿಗೆ ಸಂಬಂಧಿಸಿದ ವೃತ್ತಿ ಪ್ರತಿಮೆಗಳನ್ನು ಬಳಸುತ್ತಿದ್ದರೆಂದು ತಿಳಿಯುತ್ತದೆ. ಇವರ ಕಾಲ ಕ್ರಿ.ಶ.1160. ಇವರ ಹತ್ತು ವಚನಗಳು ಲಭ್ಯವಾಗಿವೆ. “ಕಮಳೇಶ್ವರ ಲಿಂಗ” ಇವರ ಅಂಕಿತವಾಗಿದೆ. ಇವರ ವಚನಗಳಲ್ಲಿ ಕಾಯಕಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟಿರುವುದನ್ನು ಗಮನಿಸಬಹುದಾಗಿದೆ. ಜಾತಿ ಯಾವುದೇ ಆಗಲಿ, ಗೋತ್ರ ಯಾವುದೇ ಆಗಲಿ, ಹಿಡಿದ ಕಾಯಕಕ್ಕೆ ಚ್ಯುತಿ ಬರಬಾರದೆಂದು ಹೇಳಿದ್ದಾರೆ. ಇವರ ನಿಷ್ಠುರ ಸ್ವಭಾವದ ಶಿವಶರಣರಾಗಿದ್ದರು. ಕಂದಾಚಾರಿಗಳು ಬೆಳಿಗ್ಗೆ ಎದ್ದೊಡೆ ಕ್ಷೌರಿಕರ ಮುಖ ನೋಡಬಾರದೆಂಬ ಮೂಢನಂಬಿಕೆಯ ಆಚರಣೆಯನ್ನು ಅನುಸರಿಸುತ್ತಿದ್ದಂತಹ, ಸಂದರ್ಭದಲ್ಲಿ ಗುರು ಬಸವಣ್ಣನವರು, ತಮ್ಮ ಆಪ್ತ ಕಾರ್ಯದರ್ಶಿಯಾಗಿ ಕ್ಷೌರಿಕ ಕಾಯಕದವರನ್ನೇ ನೇಮಿಸಿಕೊಂಡಿದ್ದರು. ಸಮಾಜದ ಕೆಳವರ್ಗದವರನ್ನು ಮೇಲೆತ್ತಿದ ಕೀರ್ತಿ ಬಸವಣ್ಣನವರದ್ದು. ಶರಣರ ಪ್ರಭಾವದಿಂದಾಗಿ ಅಮ್ಮಿದೇವ ಸಮಾಜದಲ್ಲಿ ತಲೆ ಎತ್ತಿ ನಿಲ್ಲುವಂತಾಯಿತು. ಅಮ್ಮಿದೇವರ ಕಾಯಕ ನಿಷ್ಠೆ ಎಲ್ಲರಿಗೂ ಮಾದರಿಯಾಯಿತು. ಇವರು ಕ್ಷೌರಿಕ ವೃತ್ತಿಯ ಜೋತೆಗೆ ಸಾಮಾನ್ಯ ಕಾಯಿಲೆಗಳಿಗೆ ಗಿಡಮೂಲಿಕೆಯ ಔಷಧ ನೀಡುತ್ತಿದ್ದರು. ಆತ್ಮಕ್ಕೆ ತಗುಲಿದ ಬೇನೆಗಳಿಗೆ ಔಷಧ ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವರಂತಹ ನಿಜಶರಣರ ಸಂಗ ಎಂದು ಇವರು ಸ್ಪಷ್ಟಪಡಿಸಿದ್ದಾರೆ. ಜಾತಿ-ಗೋತ್ರ ಬಿಟ್ಟು ಕಾಯಕ ಮಾಡಬೇಕು ಎಂದು ಹೇಳಿದ್ದಾರೆ. ಇವರು ಬೆಡಗಿನ ಭಾಷೆಯಲ್ಲಿ ಅನುಭಾವವನ್ನು ಅಭಿವ್ಯಕ್ತಿಗೊಳಿಸಿದ್ದಾರೆ.

 • 22 ಕಂಕರಿ ಕಕ್ಕಯ್ಯ
 • ‘ಕಂಕರಿ’ ಒಂದು ಜನಪದ ವಾದ್ಯ. ಚೌಡಿಕೆ ಅಥವಾ ತುಂತುಣಿ ಮಾದರಿಯನ್ನು ಹೋಲುತ್ತದೆ. ಈ ವಾದ್ಯ ನುಡಿಸುವುದರಲ್ಲಿ ವಿಶೇಷ ಪರಿಣತಿಯನ್ನು ಪಡೆದ ಕಕ್ಕಯ್ಯನನ್ನು ಜನ ‘ಕಂಕರಿ ಕಕ್ಕಯ್ಯ’ ಎಂದು ಕರೆದರು. ಆರಂಭದಲ್ಲಿ ಇವರು ಸಾಮಾನ್ಯ ಜನಪದ ಕಲಾವಿದರಾಗಿದ್ದರು. ಶಿವಶರಣರ ಕ್ರಾಂತಿಯ ಪ್ರಭಾವಕ್ಕೆ ಇವರು ಒಳಗಾದರು. ಕಂಕರಿ ನುಡಿಸುತ್ತಾ ಮನೆ ಮನೆಗೆ ಹೋಗಿ ಹಾಡುತ್ತ, ಕುಣಿಯುತ್ತಾ ಕಾಯಕ ಪಡೆದು ಹೊಟ್ಟೆ ಹೊರೆಯಲು ಪ್ರಾರಂಭಿಸಿದರು. ಕಕ್ಕಯ್ಯನಿಗೆ ಶರಣ ತತ್ತ್ವ ದಾರಿದೀಪವಾಯಿತು. ಇವರಲ್ಲಿ ಕಾಯಕ ಪ್ರಜ್ಞೆ ಬೆಳೆಯಿತು. ಇದರಿಂದ ಸ್ವಾವಲಂಬನೆ, ಆತ್ಮಗೌರವ ಇವರಲ್ಲಿ ಬೆಳೆಯಿತು. ಬಸವಣ್ಣನವರ ಮುಂದಾಳ್ತನದಿಂದ ರೂಪುಗೊಂಡ ಶಿವಶರಣರ ಹೊಸ ಹೊಸ ತತ್ತ್ವಗಳಿಗೆ ಮಾರುಹೋಗಿ ಇವರು ಕಲ್ಯಾಣಕ್ಕೆ ಬಂದು ನೆಲೆಸಿದರು. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಚೆದುರಿದ್ದ ಜನಪದ ಕಲಾವಿದರನ್ನು ಶರಣರು ‘ಕಾಯಕ’ದ ತಾತ್ವಿಕ ನಿಲುವಿಗೆ, ಮುಕ್ತ ಮನಸ್ಸಿನಿಂದ ಗೌರವದಿಂದ ಸ್ವಾಗತಿಸಿದರು; ಅಲ್ಲದೆ ಶಿವಶರಣರ ಸಹಜ ದೃಷ್ಟಿ ಮತ್ತು ಜೀವನದ ಧೋರಣೆಗಳು ಕಕ್ಕಯ್ಯ ಮೊದಲುಗೊಂಡು ಅನೇಕ ಜನಪದ ಕಲಾವಿದರನ್ನು ತೀವ್ರಗತಿಯಲ್ಲಿ ಆಕರ್ಷಿಸಿ ಅವರಲ್ಲಿ ಆತ್ಮ ವಿಶ್ವಾಸವನ್ನು ಕುದುರಿಸಿತು. ಜನಪದ ಹಾಡು, ಕುಣಿತ, ವೇಷಗಾರಿಕೆ ಇತ್ಯಾದಿ ವಿವಿಧ ಕ್ಷೇತ್ರದ ಕಲಾವಿದರು ಕಲ್ಯಾಣದಲ್ಲಿ ನೆಲೆಸಿ, ಶರಣರ ಒಡನಾಟದಲ್ಲಿದ್ದು ಅವರಿಂದ ಕಾಯಕ ಸಿದ್ಧಾಂತದ ಹಿರಿಮೆಯನ್ನು ಅರಿತು ಮೈಗೂಡಿಸಿಕೊಂಡು ಕಲೆಗಳ ಚೆಲುವಿಗೆ ಭಕ್ತಿ ಶಕ್ತಿಯ ಸಹಜ ನಿಲವನ್ನು ಅಳವಡಿಸಿ ನಾಡಿನ ನಾನಾ ಭಾಗಗಳಿಗೆ ಹೋಗಿ ಶರಣಧರ್ಮ ಪ್ರಸಾರ ಕಾರ್ಯದಲ್ಲಿ ನಿರತರಾದುದನ್ನು ಕಾಣುತ್ತೇವೆ. ಕಂಕರಿಯ ಕಕ್ಕಯ್ಯ, ಸಕಳೇಶ ಮಾದರಸ, ಕಿನ್ನರಿ ಬ್ರಹ್ಮಯ್ಯ, ರಾಗದ ಸಂಕಣ್ಣ, ಸಿದ್ಧ ಬುದ್ಧಯ್ಯ, ಭದ್ರಗಾಯಕ, ಬಹುರೂಪಿ ಚೌಡಯ್ಯ, ಢಕ್ಕೆಯ ಮಾರಯ್ಯ, ಕಲಕೇತ ಬೊಮ್ಮಯ್ಯ, ಜಕ್ಕೆಯರ ಬ್ರಹ್ಮಯ್ಯ, ತತ್ವಪದದ ದೇವಮ್ಮ, ತಂದಾನತಾನದ ಶಿವಮಾಯಿದೇವಿ - ಹೀಗೆ ಜನಪದ ವೃಂದಗಳ ವಿವಿಧ ಭಾಗದ ಜನರು ಹಿಂಡುಗಟ್ಟಿ ಶಿವಶರಣರ ಸಾಮೂಹಿಕ ಆಂದೋಲನದಲ್ಲಿ ಭಾಗಿಗಳಾಗಿ, ತಮ್ಮ ಜನಪದ ಸಂವೇದನೆಗಳನ್ನು ಶರಣರ ಸೈದ್ಧಾಂತಿಕ ನಿಲುವುಗಳಲ್ಲಿ ಪರಿವರ್ತಿಸಿದ್ದನ್ನು ಕಾಣುತ್ತೇವೆ. ಬಸವಣ್ಣನವರ ಸಮಕಾಲೀನರಾದ ಶರಣ ಕಂಕರಿ ಕಕ್ಕಯ್ಯ, ವಚನಗಳನ್ನು ರಚಿಸಿದಂತೆ ಕಾಣುವುದಿಲ್ಲ. ಆದರೆ ಇವರು ತಮ್ಮ ಜೊತೆಗೂಡಿದ ಇತರ ಜನಪದ ಕಲಾವಿದರಿಗೆ ಸ್ಫೂರ್ತಿಯ ನೆಲೆಯಾದುದು ಮಾತ್ರ ಸತ್ಯ. ಒಮ್ಮೆ ಒಬ್ಬ ಜಂಗಮ ಇವರನ್ನು ಪರೀಕ್ಷಿಸಲು, ಕಂಕರಿ ನುಡಿಸುವಾಗ ಒಂದು ನೃತ್ಯ ಮಾಡುತ್ತಾರೆ. ಇವರ ನೃತ್ಯವನ್ನು ಕಂಡು ಕಕ್ಕಯ್ಯ ಇನ್ನು ಜೋರಾಗಿ ಕಂಕರಿ ನುಡಿಸುತ್ತಾರೆ. ಮೂರು ದಿನವಾದರೂ ಯಾರೂ ಸೋಲಲಿಲ್ಲ, ಯಾರೂ ಗೆಲ್ಲಲಿಲ್ಲ. ಕೊನೆಗೆ ನೃತ್ಯ ಮಾಡಿದ ಜಂಗಮ ಕುಸಿದು ಬೀಳುತ್ತಾರೆ. ನಂತರ ಎಚ್ಚೆತ್ತು ಕಂಕರಿ ಕಕ್ಕಯ್ಯನನ್ನು ಹೊಗಳುತ್ತಾರೆ. ಮೂರು ದಿನಗಳಿಂದ ತನ್ನ ಕಾಯಕ ತಪ್ಪಿದ್ದಕ್ಕೆ ಕಕ್ಕಯ್ಯ ಕೋಪಗೊಳ್ಳುತ್ತಾರೆ. ಜಂಗಮನಿಗೆ ಕಾಯಕದ ಆಯ ಕೊಡಲು ಕೇಳುತ್ತಾರೆ. ಜಂಗಮನಿಗೂ ಕಂಕರಿ ಕಕ್ಕಯ್ಯನಿಗೂ ವಾದ ನಡೆಯುತ್ತದೆ. ಆ ವಾದ-ವಿವಾದದಲ್ಲಿ ಕಕ್ಕಯ್ಯನವರು ಗೆಲ್ಲುತ್ತಾರೆ. ಸೋತ ಜಂಗಮನು ಕೊನೆಗೆ ಕಾಯಕದ ಆಯವನ್ನು ತುಂಬಿ ಕೊಡುತ್ತಾರೆ. ಬಸವ ಧರ್ಮದಲ್ಲಿ ಕಾಯಕಕ್ಕೆ ಮೊದಲ ಪ್ರಾಧ್ಯಾನತೆ ನೀಡಿದ್ದಾರೆ. ಕಾರಣ ಹೊಟ್ಟೆಗಾಗಿ-ಬಟ್ಟೆಗಾಗಿ ಅನ್ಯರನ್ನು ಬೇಡಿದಾಗ ಅವರು ದ್ರವ್ಯ ಧನವನ್ನು ನೀಡಿದರೆ ಪಡೆದವರಿಗೆ ಅವರ ಕರ್ಮದ ಭೋಗದಲ್ಲಿ ಪಾಲನ್ನು ಪಡೆಯಬೇಕಾಗುತ್ತದೆ. ಆದುದರಿಂದ “ಕಾಯವನ್ನೇ ಕೈಲಾಸ” ಮಾಡಿಕೊಂಡು ಸತ್ಯಶುದ್ಧವಾದ ದುಡಿಮೆಯನ್ನು ಮಾಡಿದರೆ, “ಕಾಯಕವೇ ಕೈಲಾಸ”ವಾಗುತ್ತದೆ. ಇಲ್ಲದಿದ್ದರೆ ಹೊಟ್ಟೆಪಾಡಾಗುತ್ತದೆ. 12ನೇ ಶತಮಾನದ ಶರಣರು ಹೊಟ್ಟೆಪಾಡಿಗಾಗಿ ಚಿಂತಿಸಿದವರಲ್ಲ. ಹಸಿವು ತೃಷೆ ವ್ಯಸನಗಳನ್ನೆಲ್ಲಾ ಬದಿಗೊತ್ತಿ ಮೆಟ್ಟಿನಿಂತವರು. ಅದೇ ರೀತಿ ಕಂಕರಿಯ ಕಕ್ಕಯ್ಯ ಶರಣರ ಸಮೂಹದಲ್ಲಿ ವಿಶೇಷ ಮನ್ನಣೆ ಪಡೆದು ಬಸವ ಧರ್ಮ ಸಾಮೂಹಿಕ ಕ್ರಾಂತಿಯಲ್ಲಿ ಪಾಲುಗಾರರಾಗಿ ಅಮರರಾಗಿದ್ದಾರೆ.

 • 23 ಕಲಕೇತ ಬ್ರಹ್ಮಯ್ಯ
 • ಬೇಡಲೇತಕ್ಕೆ ಕಾಯಕವ ಮಾಡಿಹೆನೆಂದು? ಕೊಡದಡೆ ಒಡಗೂಡಿ ಬಯ್ಯಲೇತಕ್ಕೆ? ಒಡೆಯರು ಭಕ್ತರಿಗೆ ಮಾಡಿಹೆನೆಂದು ಗಡಿತಡಿಗಳಲ್ಲಿ ಕವಾಟ ಮಂದಿರ ಮಂದೆ ಗೊಂದಿಗಳಲ್ಲಿ ನಿಂದು ಕಾಯಲೇತಕ್ಕೆ? ಈ ಗುಣ ಕಾಯಕದಂದವೆ? ಈ ಗುಣ ಹೊಟ್ಟೆಗೆ ಕಾಣದ ಸಂಸಾರದ ಘಟ್ಟದ ನಿಲವು. ಉಭಯ ಭ್ರಷ್ಟಂಗೆ ಕೊಟ್ಟ ದ್ರವ್ಯ ಮೇಖಲೇಶ್ವರಲಿಂಗಕ್ಕೆ ಮುಟ್ಟದೆ ಹೋಯಿತ್ತು. ‘ಕಿಳ್ಳಿಕೇತರ ಆಟ’ವೆಂಬ ಜನಪದ ಕಲೆಯನ್ನು ಪ್ರದರ್ಶಿಸುವುದು ಕಲಕೇತ ಬ್ರಹ್ಮಯ್ಯನ ಕಾಯಕವಾಗಿತ್ತು. ಶರಣರ ಪ್ರಭಾವದಿಂದ ಇವರು ಸಮಾಜದಲ್ಲಿ ಉನ್ನತಿಯನ್ನು ಸಾಧಿಸಿದ್ದಾರೆ. ಇವರ ನಿಷ್ಕಲ್ಮಶ ಭಾವದಿಂದ ಶರಣರ ಪ್ರೀತಿಗೆ ಪಾತ್ರರಾಗಿರುತ್ತಾರೆ. ಶರಣರ ಸಾಹಿತ್ಯದಲ್ಲಿ ಕಲಕೇತ ಬ್ರಹ್ಮಯ್ಯನ ಬಗ್ಗೆ ಸಾಕಷ್ಟು ಮಾಹಿತಿಗಳು ದೊರೆಯುತ್ತವೆ. ಬಸವಪುರಾಣ, ಶಿವತತ್ತ್ವ ಚಿಂತಾಮಣಿ, ಚೆನ್ನಬಸವ ಪುರಾಣ, ಪ್ರಭುದೇವರ ರಗಳೆ, ಶರಣ ಲೀಲಾಮೃತಗಳಂತಹ ಕೃತಿಗಳಲ್ಲಿ ಬ್ರಹ್ಮಯ್ಯನವರ ಬಗ್ಗೆ ವಿವರಗಳಿವೆ. ಇವರು ಐತಿಹಾಸಿಕ ವ್ಯಕ್ತಿಯು ಹೌದು, ಪುರಾಣ ಪುರುಷರೂ ಕೂಡಾ ಹೌದು. ಮುಂದಲೆಯಲ್ಲಿ ಎತ್ತಿ ಕಟ್ಟಿದ ಮುಡಿ, ಹಣೆಯಲ್ಲಿ ವಿಭೂತಿ, ಕಿವಿಯಲ್ಲಿ ಕೆಂದಳಿರು, ಎಡಗಾಲಲ್ಲಿ ಅಂದುಗೆ, ಬಲಗಾಲಲ್ಲಿ ಗೆಜ್ಜೆ, ಎಡಗೈಯಲ್ಲಿ ದಕ್ಷನ ಕುರಿದಲೆಯ ತೆರನ ತಗರಿನ ಕೋಡು, ಬಲಗೈಯಲ್ಲಿ ಬೆತ್ತ, ಮೈಮೇಲೆ ಹೊದೆದ ಕಾಗಿನ ಕಪ್ಪಡ- ಇದು ಕಲಕೇತ ಬ್ರಹ್ಮಯ್ಯನವರ ವೇಷಭೂಷಣವಾಗಿದೆ. ಇವರು ಇಷ್ಟಲಿಂಗಧಾರಿಯಾದ ಶರಣ. ಇವರು ಬಸವಣ್ಣನವರ ಸಮಕಾಲೀನ ವಚನಕಾರರು. ‘ಮೇಖಲೇಶ್ವರ ಲಿಂಗ’ ಎಂಬ ಅಂಕಿತದಿಂದ ವಚನಗಳನ್ನು ಬರೆದಿದ್ದಾರೆ. ಬೆಡಗಿನ ರಚನೆಯ ವಚನಗಳನ್ನು ಇವರು ಬರೆದಿದ್ದಾರೆ. ಇವರ ವಚನಗಳಲ್ಲಿ ಕಾಯಕದ ಮಹತ್ವದ ಬಗ್ಗೆ ವಿವರಗಳಿವೆ. ಭಿಕ್ಷೆ ಬೇಡುವುದು ಕಾಯಕವಾಗಲಾರದು. ಜನರು ಕೊಡದಿದ್ದಾಗ ಬೈಯುವುದು. ದೇವಸ್ಥಾನ, ಮಂದಿರಗಳ ಅಕ್ಕಪಕ್ಕದಲ್ಲಿ ನಿಂತು ಕಾಯುವುದಾಗಲಿ ಕಾಯಕವಾಗಲಾರದು. ಇದು ಕಾಯಕದ ರೀತಿಯಲ್ಲ ಎಂದು ಬ್ರಹ್ಮಯ್ಯನವರು ಸ್ಪಷ್ಟಪಡಿಸಿದ್ದಾರೆ. ಲಿಂಗವಂತ ಧರ್ಮದ ಷಟ್ಸ್ಥಲ ಸಿದ್ಧಾಂತವನ್ನು ಇವರ ವಚನಗಳಲ್ಲಿ ಕಾಣಬಹುದು. ಕಲಕೇತ ಬ್ರಹ್ಮಯ್ಯ ಶಿವಯೋಗ ಸಾಧನೆಯಿಂದ ಪಡೆದ ಆನಂದವನ್ನು ಕಲಕೇತ ವಿದ್ಯೆಯಲ್ಲಿ ಪ್ರದರ್ಶಿಸಿದ್ದಾರೆ. ಶಿವಭಕ್ತರ, ಶಿವಶರಣರ ಕಣ್ಮಣಿಯಾಗಿ ಬಾಳಿದ ಮಹಾಮಹಿಮನಾಗಿದ್ದಾರೆ.

 • 24 ಕಂಬದ ಮಾರಿತಂದೆ
 • ನಾನಾ ಜನ್ಮಂಗಳಲ್ಲಿ ಬಂದಡೂ, ನಾನಾ ಯುಕ್ತಿಯಲ್ಲಿ ನುಡಿದಡೂ, ನಾನಾ ಲಕ್ಷಣಂಗಳಲ್ಲಿ ಶ್ರುತ ದೃಷ್ಟ ಅನುಮಾನಂಗಳ ಲಕ್ಷಿಸಿ ನುಡಿವಲ್ಲಿ, ಏನನಹುದು ಏನನಲ್ಲಾಯೆಂಬ ಠಾವನರಿಯಬೇಕು. ಮಾತ ಬಲ್ಲೆನೆಂದು ನುಡಿಯದೆ, ನೀತಿವಂತನೆಂದು ಸುಮ್ಮನಿರದೆ, ಆ ತತ್ಕಾಲದ ನೀತಿಯನರಿದು ಸಾತ್ವಿಕ ಲಕ್ಷಣದಲ್ಲಿಪ್ಪಾತನ ಲಕ್ಷಣವೇ ನಿರೀಕ್ಷಣ, ಕದಂಬಲಿಂಗಾ. ಇವರು ಬಸವಣ್ಣನವರ ಸಮಕಾಲೀನ ವಚನಕಾರರು. ಇವರ ಕಾಲ ಕ್ರಿ.ಶ.1160. ಇವರು ತಮ್ಮ ವಚನದಲ್ಲಿ ಬಸವಣ್ಣ, ಚೆನ್ನಬಸವಣ್ಣ, ಅಲ್ಲಮಪ್ರಭು ದೇವರನ್ನು ಸ್ಮರಿಸಿದ್ದಾರೆ. ‘ಕದಂಬಲಿಂಗ’ ಎನ್ನುವುದು ಇವರ ವಚನದ ಅಂಕಿತವಾಗಿದೆ. ಕಂಬದ ಮಾರಿತಂದೆಯ ಹನ್ನೊಂದು ವಚನಗಳು ಪ್ರಕಟವಾಗಿವೆ. ಮತ್ಸ್ಯ, ತೆಪ್ಪ, ಮೊದಲಾದ ಪದಗಳು ಇವರ ವಚನಗಳಲ್ಲಿವೆ. ಇದನ್ನೆಲ್ಲಾ ಗಮನಿಸಿದಾಗ ಇವರು ಮೊದಲು ಮೀನುಗಾರಿಕೆ ವೃತ್ತಿಯನ್ನು ಮಾಡುತ್ತಿದ್ದರೆಂದು ತಿಳಿದುಬರುತ್ತದೆ. ಇವರು ತಮ್ಮ ವಚನದಲ್ಲಿ ‘ವೃತ್ತಿ ಪ್ರತಿಮೆ’ಗಳನ್ನು ಬಳಸಿದ್ದಾರೆ. ಇವರು ದೇವರ ಆಟವನ್ನು ಮಡುವಿನಾಟಕ್ಕೆ ಹೋಲಿಸಿದ್ದಾರೆ. ನದಿಯಲ್ಲಿಯ ಮಡುವು, ಅದರೊಳಗಿರುವ ಸುಳಿಗಳು ಪ್ರತಿಮೆಗಳಾಗಿ ವಚನಗಳಲ್ಲಿ ಮೂಡಿಬಂದಿವೆ. ವೃತ್ತಿ ಪ್ರತಿಮೆಗಳನ್ನು ಬಳಸಿಕೊಂಡು ಆಧ್ಯಾತ್ಮದ ನೆಲೆಯನ್ನು ತಿಳಿಸುವ ಕಂಬದ ಮಾರಿತಂದೆಯು ಕೆಲವು ಬೆಡಗಿನ ವಚನಗಳನ್ನು ಬರೆದಿದ್ದಾರೆ. ಇವರ ವಚನಗಳು ಸರಳ ಸುಂದರವಾಗಿವೆ. ಅವುಗಳಲ್ಲಿ ಕಾವ್ಯದ ಸೊಗಡನ್ನು ಕಾಣಬಹುದು. ಇವರು ಬಳಸಿದ ಭಾಷೆ ಕಾವ್ಯಾತ್ಮಕವಾಗಿದೆ. ಶರಣರು ಕಾಯಕತತ್ತ್ವದ ಮೇಲೆ ನಂಬಿಕೆ ಇಟ್ಟವರು. ಯಾವುದೇ ವೃತ್ತಿಯಾಗಲಿ ಅದರಲ್ಲಿ ಶಿವನನ್ನು ಕಾಣುವವರಾಗಿದ್ದಾರೆ.

 • 25 ಕಿನ್ನರಿ ಬ್ರಹ್ಮಯ್ಯ
 • ನಿನ್ನ ಹರೆಯದ, ರೂಹಿನ ಚೆಲುವಿನ, ನುಡಿಯ ಜಾಣಿನ, ಸಿರಿಯ ಸಂತೋಷದ, ಕರಿ ತುರಗ ರಥ ಪದಾತಿಯ ನೆರವಿಯ, ಸತಿ ಸುತರ ಬಂಧುಗಳ ಸಮೂಹದ, ನಿನ್ನ ಕುಲದಭಿಮಾನದ ಗರ್ವವ ಬಿಡು, ಮರುಳಾಗದಿರು. ಅಕಟಕಟಾ ರೋಮಜನಿಂದ ಹಿರಿಯನೆ? ಮದನನಿಂ ಚೆಲುವನೆ? ಸುರಪತಿಯಿಂದ ಸಂಪನ್ನನೆ? ವಾಮದೇವ ವಶಿಷ್ಠರಿಂದ ಕುಲಜನೆ? ಅಂತಕನ ದೂತರು ಬಂದು ಕೈವಿಡಿದೆಳೆದೊಯ್ಯುವಾಗ ನುಡಿ ತಡವಿಲ್ಲ ಕೇಳೋ ನರನೆ! ಎನ್ನ ಮಹಾಲಿಂಗ ತ್ರಿಪುರಾಂತಕದೇವರ ಪೂಜಿಸಿದೆಯಾದರೆ ಕೇಡಿಲ್ಲದ ಪದ ದೊರಕೊಂಬುದು ಮರುಳೆ. ಹುಸಿಯೆಂಬ ಅಲಗಿಂಗೆ ಒಡಲೆ ಗುರಿಯಾಯಿತ್ತು. ಏನೆಂಬೆನೇನೆಂಬೆ ವಿಧಿ ಮಾಡಿತ್ತ. (ಶಮೆ ದಮೆಯಾದಿ)ಗಳು ನೆಲೆಗೊಳ್ಳದೆ ಹೋದವು. ಮಹಾಲಿಂಗ ತ್ರಿಪುರಾಂತಕನ ಶರಣರೆ ಎನ್ನೊಡೆಯರೆಂದರಿಯದೆ ಇದ್ದ ಕಾರಣ, ತೆರಹು ಮರಹಿನಲ್ಲಿ ತಾವೆಡೆಗೊಂಡವು. ಕಿನ್ನರಿ ಬ್ರಹ್ಮಯ್ಯ ಆಂಧ್ರಪ್ರದೇಶದವರು. ಕಲಿದೇವಿ ಎಂಬ ಶಿವಶರಣೆಯ ಮಗ. ಇವರದು ಅಕ್ಕಸಾಲೆಯ ಕಾಯಕ. ಇದರಲ್ಲಿ ಶಿವಾನಂದವನ್ನು ಪಡೆಯುತ್ತಾರೆ. ಕೊನೆಗೆ ಅಕ್ಕಸಾಲೆಯ ಕಾಯಕ ಬಿಟ್ಟು ಕಿನ್ನರಿ ವಾದ್ಯ ಹಿಡಿಯುತ್ತಾರೆ. ಇವರೊಬ್ಬ ಅನುಪಮ ಶರಣ. ಕಿನ್ನರಿ ಬ್ರಹ್ಮಯ್ಯ ಬಸವಣ್ಣನವರ ಆತ್ಮ ಸಖನಾಗುತ್ತಾರೆ. ಇವರ ಪ್ರಾಣಪಕ್ಷಿ ಹಾರಿ ಹೋದಾಗ ತಾಯಿಯನ್ನು ಕಳೆದುಕೊಂಡವರಂತೆ ಬಸವಣ್ಣ ರೋಧಿಸುತ್ತಾರೆ. ಬಸವಣ್ಣನವರ ಪೂರ್ಣಾನುಗ್ರಹ ಪಡೆದ ಮಹಾಮಹಿಮ ಇವರಾಗಿದ್ದಾರೆ. ಕಲ್ಯಾಣದ ಕ್ರಾಂತಿಯ ಸಂದರ್ಭದಲ್ಲಿ ಹರಳಯ್ಯ ಮಧುವರಸ ಎಳೆಹೂಟೆ ಶಿಕ್ಷೆ ಆದ ಮೇಲೆ ಕಲ್ಯಾಣವನ್ನು ಬಿಟ್ಟು ಶಿವಶರಣರೊಂದಿಗೆ ಉಳಿವೆಯತ್ತ ಹೊರಡುತ್ತಾರೆ. ಇವರು ಚೆನ್ನಬಸವಣ್ಣ, ಮಡಿವಾಳ ಮಾಚಯ್ಯನವರೊಂದಿಗೆ ಶರಣರ ರಕ್ಷಾಮಣಿಯಾಗಿದ್ದು ವಚನ ಕಟ್ಟುಗಳ ಸಂರಕ್ಷಣೆಯ ಯುದ್ಧದಲ್ಲಿ ಹೋರಾಡುತ್ತಾರೆ. ಇವರು 200 ಅಡಿ ಎತ್ತರದಲ್ಲಿ ಭೂಮಿ ಅಗಿದು ನದಿಯನ್ನು ಒಳಕ್ಕೆ ತಿರುಗಿಸಿ ಗುಹೆಯನ್ನು ಜಲದುರ್ಗವನ್ನಾಗಿ ಪರಿವರ್ತಿಸಿದ ವೀರ ಶಿವಶರಣ. ಶರಣರ ರಕ್ಷಣೆಗಾಗಿ ಕೊನೆಯವರೆಗೂ ಹೋರಾಡಿ ಶರಣರ ಮರಣವೇ ಮಹಾನವಮಿ ಎಂಬುದನ್ನು ಸಾರಿದವರಲ್ಲಿ ಇವರೊಬ್ಬರು. ಬಸವ ಕಲ್ಯಾಣದ ಅರಿವಿನಮಹಾಮನೆಗೆ ಸಮೀಪದಲ್ಲಿರುವ ಸಮಾಧಿಯ ಮೇಲೆ “ಕಿನ್ನರಯ್ಯ” ಎಂಬ ಶಿಲಾಶಾಸನವಿದೆ. ಇದು ಜಗತ್ತಿಗೆ ಕಿನ್ನರಿ ಬ್ರಹ್ಮಯ್ಯನವರ ಚರಿತ್ರೆಯನ್ನು ಸಾರುತ್ತದೆ.

 • 26 ಕೀಲಾರದ ಭೀಮಣ್ಣ
 • ಕರ್ಪುರದ ಹಣತೆಯಲ್ಲಿ ಬತ್ತಿಯ ಹಾಕಿ ಉರುಹಬಹುದೆ? ಕಿಚ್ಚಿನ ಮಧ್ಯದಲ್ಲಿ ನಿಂದು ಕೆಟ್ಟೀತೆಂದು ಹುಲ್ಲ ಸೊಪ್ಪ ಹಾಕಿ ಹೊತ್ತಿಸಬಹುದೆ? ಅಲಗು ಕೂರವಾಯಿತ್ತೆಂದು ತನ್ನೊಡಲನಿರಿದು ಅಲಗಿನ ಕೂರ ಸುಲಲಿತವೆನ್ನಬಹುದೆ? ಆಗುಣ ಅಲ್ಲಲ್ಲಿಗೆ ದೃಷ್ಟ. ಇದು ನಿಶ್ಚಯ, ನಿಜ ಲಿಂಗಾಂಗಿಗೆ ಅರಿವಿನ ಭೇದ, ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗನರಿದವನ ತೆರ. ವ್ಯಾಧನಂತೆ ಜಾಲಗಾರನಂತೆ ಹೇಮಚೋರನಂತೆ ಇಂತೀ ಗಾಹುಗಳ್ಳರಂತೆ ಮಾತಿನಲ್ಲಿ ಬ್ರಹ್ಮವ ನುಡಿದು ಸರ್ವ ಸಂಸಾರದಲ್ಲಿ ಏಳುತ್ತ ಮುಳುಗುತ್ತ ಬೇವುತ್ತ ನೋವುತ್ತ ಮತ್ತೆ ಬ್ರಹ್ಮದ ಸುಮ್ಮಾನದ ಸುಖಿಗಳೆಂತಪ್ಪರೊ? ಇಂತು ನುಡಿಯಬಾರದು, ಸಮಯವ ಬಿಡಬಾರದು, ಕ್ರೀಯ ಅರಿದು ಮರೆಯಬಾರದು ಜ್ಞಾನವ. ಇಂತೀ ಭೇದವನರಿದು ಹರಿದವಗಲ್ಲದೆ ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗವು ಸಾಧ್ಯವಿಲ್ಲ. ಕೀಲಾರದ ಭೀಮಣ್ಣ ಬಸವಣ್ಣನವರ ಸಮಕಾಲೀನರು. ಇವರ ಕಾಲ ಕ್ರಿ.ಶ.1160 ಆಗಿದೆ. ಇವರು ವ್ಯವಸಾಯ ಮಾಡುತ್ತಿದ್ದರು. ದನಗಳನ್ನು ಸಾಕುತ್ತಿದ್ದ ಇವರು ಹೈನುಗಾರಿಕೆಯನ್ನು ಮಾಡುತ್ತಿದ್ದರು. ಹೀಗಾಗಿ ಇವರ ವಚನಗಳಲ್ಲಿ ಪ್ರಾಣಿ ರೂಪಕಗಳನ್ನು ಕಾಣಬಹುದು. ಕೀಲಾರದ ಭೀಮಣ್ಣನವರ ವಚನದ ಅಂಕಿತ “ತ್ರಿಪುರಾಂತಕಲಿಂಗ”. ಬಸವ ಕಲ್ಯಾಣದ ತ್ರಿಪುರಾಂತಕ ಕೆರೆಯ ದಡದಲ್ಲಿ ಇವರು ದನಗಳನ್ನು ಸಾಕಿದರು. ಪಶುಸಂಗೋಪನೆ ಇವರ ಕಾಯಕವಾಗಿತ್ತು ಎಂದು ತಿಳಿದುಬರುತ್ತದೆ. “ಎರಡು ಮೊಲೆಯ ಪಶುವಿಂಗೆ ಕೊಂಬು ಮೂರು, ಕಿವಿ ನಾಲ್ಕು” ಎಂದು ಹೇಳುವ ವಚನಗಳಲ್ಲಿ ಬೆಡಗಿನ ಪರಿಭಾಷೆಯನ್ನು ಕಾಣಬಹುದಾಗಿದೆ. ಹಸುಗಳು ಅನೇಕ ಬಣ್ಣಗಳಿಂದ ಕೂಡಿವೆ. ಆದರೆ ಅವುಗಳ ಹಾಲಿನ ಬಣ್ಣ ಒಂದೇ ರೀತಿ ಇರುತ್ತದೆ. ಈ ಹಸುಗಳು ಒಟ್ಟಿಗೆ ಮೇಯುತ್ತವೆ. ಒಂದೇ ದಾರಿಯಲ್ಲಿ ಹೋಗುತ್ತವೆ. ಆದರೆ ಮನುಷ್ಯನಲ್ಲಿ ಭೇದಗಳು ಅನೇಕ. ಪ್ರಾಣಿಗಳನ್ನು ನೋಡಿಯಾದರೂ ಮನುಷ್ಯ ಕಲಿಯುವುದು ಬೇಕಾದಷ್ಟಿದೆ ಎಂಬ ಸತ್ಯವನ್ನು ಕೀಲಾರದ ಭೀಮಣ್ಣ ತಮ್ಮ ವಚನಗಳಲ್ಲಿ ಹೇಳಿದ್ದಾರೆ. ಲಿಂಗಪೂಜೆ ಮಾಡಬೇಕಾದರೆ ಮನೋವಿಕಾರ ಹೋಗಬೇಕೆಂದು ಇವರು ತಮ್ಮ ವಚನದಲ್ಲಿ ಹೇಳಿದ್ದಾರೆ. ಇವರ ವಚನಗಳ ರಚನೆಯ ಮೇಲೆ ಅಲ್ಲಮಪ್ರಭುದೇವರ ಪ್ರಭಾವವಿರುವುದನ್ನು ಕಾಣಬಹುದಾಗಿದೆ. ಕೀಲಾರ ಭೀಮಣ್ಣನವರು ನಡೆದ ದಾರಿ ಹೆದ್ದಾರಿಯಾಗಿದೆ. ಕಾಯಕ ಗೋವುಗಳನ್ನು ಕಾಯುವುದು ಈಗಿನ ವ್ಯವಸ್ಥೆಯಲ್ಲಿ ಕೀಳಾಗಿ ಕಂಡರೂ 12ನೇ ಶತಮಾನದಲ್ಲಿ “ಕಾಯಕವೇ ಕೈಲಾಸ”ವೆಂದು ಗುರು ಬಸವಣ್ಣನವರ ನುಡಿಯನ್ನು ಶ್ರೇಷ್ಠವನ್ನಾಗಿ ಮಾಡಿ ತೋರಿಸಿದ್ದಾರೆ.

 • 27 ಕೂಗಿನ ಮಾರಿ ತಂದೆ
 • ನಾರಿಯೂ ಮರನೂ ಕೂಡಿ ಬಾಗಲಕ್ಕಾಗಿ ಶರ ಚರಿಸುವುದಕ್ಕೆಡೆಯಾಯಿತ್ತು. ಭಕ್ತಿಯೂ ವಿರಕ್ತಿಯೂ ಕೂಡಲಿಕ್ಕಾಗಿ ವಸ್ತುವನರಿವುದಕ್ಕೆ ಒಡಲಾಯಿತ್ತು. ಆ ವಸ್ತು ತ್ರಿಕರಣವ ವೇಧಿಸಿದ ಮತ್ತೆ ತ್ರಿಗುಣ ನಷ್ಟ. ಆ ನಷ್ಟದಲ್ಲಿ ಪಂಚೇಂದ್ರಿಯ ನಾಶನ, ಸಪ್ತಧಾತು ವಿಸರ್ಜನ, ಅಷ್ಟಮದ ಹುಟ್ಟುಗೆಟ್ಟಿತ್ತು, ಹದಿನಾರು ತೊಟ್ಟು ಬಿಟ್ಟಿತ್ತು, ಇಪ್ಪತ್ತೈದರ ಬಟ್ಟೆ ಕೆಟ್ಟಿತ್ತು, ಸದ್ಭಾವದ ನಿಷ್ಠೆ ತಲ್ಲೀಯವಾಯಿತ್ತು. ಇಂತಿವರೊಳಗಾದ ಕುಲವಾಸನೆ ಹೊಲಬುಗೆಟ್ಟಿತ್ತು. ನಾನಾರೆಂಬುದ ತಿಳಿದಲ್ಲಿ ಕೂಗಿನ ಕುಲಕ್ಕೆ ಹೊರಗಾಯಿತ್ತು ಮಹಾಮಹಿಮ ಮಾರೇಶ್ವರನನರಿಯಲಾಗಿ. ಬಿಂಗಕ್ಕೆ ಹೊರೆಯಲ್ಲದೆ ನಿಜಶಿಲೆಯ ದೀಪ್ತಿಯ ತರಂಗಕ್ಕೆ ಹೊರೆಯುಂಟೆ? ಸಂಸಾರಿಗೆ ಪ್ರಕೃತಿ ರಾಗದ್ವೇಷಂಗಳಲ್ಲದೆ ಮನವು ಮಹದಲ್ಲಿ ನಿಂದ ನಿಜಲಿಂಗಾಂಗಿಗೆ ಈ ಉಭಯದ ಸಂದುಂಟೆ? ಈ ಗುಣದಂಗಲಿಂಗಾಂಗಿಯ ಸಂಗ ಮಹಾಮಹಿಮ ಮಾರೇಶ್ವರಾ. ಕೂಗಿನ ಮಾರಿತಂದೆಯ ಬಗ್ಗೆ ಪರ್ವತೇಶ ರಚಿಸಿರುವ ‘ಚತುರಾಚಾರ್ಯ ಪುರಾಣ’ದಲ್ಲಿ ಮಾಹಿತಿ ಇದೆ. ಇವರ ಕಾಲ 1160. ಇವರು ಬಸವಾದಿ ಶಿವಶರಣರ ಸಮಕಾಲೀನವರಾಗಿದ್ದಾರೆ. ‘ಅನುಭವ ಮಂಟಪ’ದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಶಿವಶರಣನೆಂದು ತಿಳಿದುಬರುತ್ತದೆ. ಇವರು ಕಲ್ಯಾಣದ ಶಿವಾನುಭವಗೋಷ್ಠಿಯಲ್ಲಿದ್ದ ಪ್ರಸಿದ್ಧ ಶಿವಾನುಭವಿ. ‘ಕೂಗುವುದು’ ಇವರ ಕಾಯಕ. ಕೂಗಿ ಸುದ್ದಿ ಮುಟ್ಟಿಸುವ ಕೆಲಸ ಇವರದಾಗಿತ್ತು. ಇವರು ಕಲ್ಯಾಣದ ಕ್ರಾಂತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರೆಂದು ಅವರ ಜೀವನ ಚರೀತ್ರೆಯಲ್ಲಿ ಕಾಣಬಹುದಾಗಿದೆ. ಇವರು ಶೂರ ಶರಣರಾಗಿದ್ದು, ಬಿಜ್ಜಳನ ಸೈನ್ಯವು ಬೆನ್ನಟ್ಟಿ ಬಂದಾಗ ಶರಣರಿಗೆ “ಕೂಗಿ” ಸುದ್ದಿಯನ್ನು ಮುಟ್ಟಿಸಿದಂತಹ ಮಹಾಮಹಿಮ ಪುರುಷರು ಇವರಾಗಿದ್ದಾರೆ. “ಮಹಾಮಹಿಮ ಮಾರೇಶ್ವರಾ” ಇದು ಕೂಗಿನ ಮಾರಿತಂದೆಯ ವಚನದ ಅಂಕಿತವಾಗಿದೆ. ಇವರ ವಚನಗಳಲ್ಲಿ ಷಟ್ಸ್ಥಲದ ಕುರಿತು ವಿವರವಾದ ಮಾಹಿತಿ ಇದೆ. ಧ್ಯಾನ ಮತ್ತು ಜ್ಞಾನ ಈ ಎರಡು ತುಂಬಾ ಮುಖ್ಯವಾದುದು ಎನ್ನುವುದು ಇವರ ವಿಚಾರವಾಗಿದೆ. ಪ್ರತಿಯೊಂದು ವಚನದ ಕೆಳಗೆ ‘ಕೂಗು’ ಎಂದು ಬರೆದಿರುವುದು ವಿಶಿಷ್ಟತೆಯಾಗಿದೆ. ಕೂಗಿಂಗೆ ಹೊರಗು, ಕೂಗಿಂದ ನಮೋ ಎಂದು, ಕೂಗಿನ ದನಿ, ಕೂಗಿನ ಕುಲ - ಇಂತಹ ನುಡಿಗಳ ಮೂಲಕ ಇವರ ವಚನಗಳು ಮುಕ್ತಾಯವಾಗುತ್ತವೆ. ಆಧ್ಯಾತ್ಮದತ್ತ ಸಾಗುವ ಇವರ ವಚನಗಳನ್ನು ಹಲವಾರು ಬಾರಿ ಓದಿದಾಗ ನಮಗೆ ನಿಜವಾದ ಅರ್ಥ ಸಿಗುತ್ತದೆ. ಒಂದೇ ಓದಿಗೆ ಸಾಮಾನ್ಯರಿಗೆ ಇವರ ವಚನ ಅರ್ಥವಾಗುವುದು ದುರ್ಲಭ. ಸುಳ್ಳು, ಕಳ್ಳತನ, ಕೊಲೆ ಮೊದಲಾದ ಗುಣಗಳನ್ನು ದೂರ ಮಾಡಬಹುದೆಂದು ಇವರು ತಿಳಿಸಿದ್ದಾರೆ. ಇವುಗಳಿಂದ ದೂರವಾಗಲು ಸದ್ಭಕ್ತನಾಗಿ ಷಟ್ಸ್ಥಲಗಳನ್ನು ಅಳವಡಿಸಿಕೊಂಡು ಸದ್ಭಕ್ತನಾಗಿ ಮುಕ್ತಾತ್ಮನಾಗಬೇಕೆಂದು ತಿಳಿಸಿ ಬಸವ ಧರ್ಮದ ಸಾಧಕರಿಗೆ ಸಾಧನೆಯ ಮೆಟ್ಟಿಲುಗಳನ್ನು ಏರಲು ಇವರ ವಚನಗಳಲ್ಲಿ ಸಾಧನೆಯ ಮಾರ್ಗವನ್ನು ತೋರಿಸಿದ್ದಾರೆ.

 • 28 ಕೆಂಭಾವಿಯ ಭೋಗಣ್ಣ
 • ಅಂಗದ ಕೈಯಲ್ಲೊಂದಂಗವದೆ ನೋಡಾ. ಲಿಂಗದ ಕೈಯಲ್ಲೊಂದು ಲಿಂಗವದೆ ನೋಡಾ. ಈ ಉಭಯದ ಮಧ್ಯದಲ್ಲಿ ಅರಿದ ತಲೆಯ, ಕೈಯಲ್ಲಿ ಹಿಡಿದುಕೊಂಡು, ಮುಂಡ ಉದಯವಾಯಿತ್ತ ಕಂಡೆ. ಅದಕ್ಕೆ ತಲೆಯಲ್ಲಿ ಓಲೆ, ಮುಂಡದಲ್ಲಿ ಮೂಗುತಿ, ಮೂಗಿನಲ್ಲಿ ಕಣ್ಣು, ಕಿವಿಯಲ್ಲಿ ತೋರಣ, ಕಂಗಳ ಮುತ್ತುಸರವ ಪವಣಿಸುವ ಜಾಣೆಯ ಕಣ್ಣ ಕೈಯ ಲಿಂಗಕ್ಕೆ ಮದುವೆಯ ಮಾಡಿದರೆಮ್ಮವರು. ಆ ಲಿಂಗದಿಂದ ರೂಪಲ್ಲದ, ಸೋಂಕಿಲ್ಲದ ಸೊಬಗಿನ ಅಭಿನವ ಶಿಶು ಹುಟ್ಟಿತ್ತು ನೋಡಾ. ಆ ನಾಮವ ಹಿಡಿದು ಕರೆದಡೆ ಕೈಸನ್ನೆ ಮಾಡಿತ್ತು. ನೋಡಿದಡೆ ಮುಂದೆಬಂದು ನಿಂದಿತ್ತು. ಅಪ್ಪಿದಡೆ ಸೋಂಕಿಲ್ಲದೆ ಹೋಯಿತ್ತು. ಅರಸಹೋದಡೆ ಅವಗನಿಸಿತ್ತು. ನಿಜಗುರು ಭೋಗೇಶ್ವರಾ, ಇದರ ಕೌತುಕದ ಕಾರಣವೇನು ಹೇಳಯ್ಯಾ. ಅಂಗೈಯಗಲದ ಪಟ್ಟಣದೊಳಗೆ ಆಕಾಶದುದ್ದ ಎತ್ತು ತಪ್ಪಿತ್ತು. ಅರಸಹೋಗಿ ಹಲಬರು ಹೊಲಬುದಪ್ಪಿ, ತೊಳಲಿ ಬಳಲುತ್ತೈದಾರೆ. ಆರಿಗೆ ಮೊರೆಯಿಡುವೆ, ಅಗುಸಿಯನಿಕ್ಕುವೆ. ಆಲಗಾರನ ಕರೆಸಿ, ಜಲವ ತೊಳೆಯಿಸಿ ಅಘಟಿತ ಘಟಿತ ನಿಜಗುರು ಭೋಗೇಶ್ವರಾ, ಅರಸಿಕೊಂಡು ಬಾರಯ್ಯಾ. ಕೆಂಭಾವಿಯ ಭೋಗಣ್ಣನವರು ಪ್ರಸಿದ್ಧ ಶಿವಶರಣರಲ್ಲಿ ಒಬ್ಬರಾಗಿದ್ದಾರೆ. ಮಹಾಕವಿ ಹರಿಹರನು ಕೆಂಭಾವಿಯ ಭೋಗಣ್ಣನವರ ಬಗ್ಗೆ ಒಂದು ರಗಳೆ ಕಾವ್ಯ ಬರೆದಿರುತ್ತಾರೆ. ಹಲವಾರು ಪುರಾಣಗಳಲ್ಲಿ ಇವರ ಉಲ್ಲೇಖವಿದೆ. ಇವರು ಮಹಾಮಹಿಮ, ಪುರಾಣಪುರುಷ. ಕೆಂಭಾವಿಯ ಭೋಗಣ್ಣನವರು, ವೈದಿಕ ಧರ್ಮದ ಅರ್ಥವಿಲ್ಲದ ಕರ್ಮದ ವಿರುದ್ಧ ಹೋರಾಡಿದ್ದಾರೆ. ಲಿಂಗವಂತ ಧರ್ಮದ ವಿಶಾಲ ತತ್ತ್ವಗಳನ್ನು ಪ್ರಸಾರ ಮಾಡಿದ್ದಾರೆ. ಇವರ 22 ವಚನಗಳು ಉಪಲಬ್ಧವಿದ್ದು, ‘ನಿಜಗುರು ಭೋಗನಾಥ’ ಅಂಕಿತದಲ್ಲಿ ವಚನಗಳನ್ನು ಬರೆದಿದ್ದಾರೆ. ಒಂದು ವಚನದಲ್ಲಿ “ನಿಜಗುರು ಭೋಗಸಂಗನಲ್ಲಿ ಸ್ವಯವಾದ ಅಲ್ಲಮ, ಅಜಗಣ್ಣ, ಚೆನ್ನಬಸವರಾಜ, ಮುಖ್ಯಲಿಂಗಾಂಗಿಗಳ ಪಾದಕ್ಕೆ ನಮೋ ನಮೋ ಎಂದು ಬದುಕಿದೆ” ಎಂಬ ಮಾತುಗಳಲ್ಲಿ ಕೆಂಭಾವಿಯ ಭೋಗಣ್ಣನವರು ಕಲ್ಯಾಣದ ಶಿವಶರಣರನ್ನು ಕೊಂಡಾಡಿದ್ದಾರೆ. ಈ ವಚನವನ್ನು ಅವಲೋಕಿಸಿದರೆ, ಬಸವಣ್ಣನವರ ಸಮಕಾಲೀನರೆಂದು ತಿಳಿಯಬಹುದಾಗಿದೆ. ಚಂದಿಮರಸ ಇವರ ಸಮಕಾಲೀನವರೆಂದು ಶಾಸನಗಳಿಂದ ತಿಳಿದು ಬರುತ್ತದೆ. ಕೆಂಭಾವಿ ಭೋಗಣ್ಣನವರ ಊರು ಕಲ್ಬುರ್ಗಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಗ್ರಾಮದವರು. ಭೋಗಣ್ಣನವರು ವೇದಶಾಸ್ತ್ರ, ಪುರಾಣಗಳನ್ನು ಅಧ್ಯಯನ ಮಾಡಿದವರಾಗಿದ್ದು, ಅರ್ಥವಿಲ್ಲದ ವೈದಿಕ ಧರ್ಮದ ಕರ್ಮದ ಆಚರಣೆಗೆ ಬೇಸತ್ತು, ಶಿವಶರಣರ ಶಿವಾನುಭಾವದ ವಿಚಾರಗಳಿಗೆ ಮಾರುಹೋಗುತ್ತಾರೆ. ಲಿಂಗ ದೀಕ್ಷೆ ಹೊಂದಿ ಶಿವಧರ್ಮ ತತ್ತ್ವಗಳನ್ನು ಅತ್ಯಂತ ನಿಷ್ಠೆಯಿಂದ ಪಾಲಿಸುತ್ತಾರೆ. ಶಿವಭಕ್ತರೊಳಗೆ ಜಾತಿಯಿಲ್ಲ, ಶಿವಭಕ್ತರೊಳಗೆ ಭೇದವಿಲ್ಲವೆಂದು ಸಾರುತ್ತಾರೆ. ಭೋಗಣ್ಣನವರು ಅನೇಕ ಪವಾಡಗಳನ್ನು ಮೆರೆದು ಇಷ್ಟಲಿಂಗದ ಮಹತ್ವವನ್ನು ಸತ್ಯ ವಚನ ಸಾಹಿತ್ಯದ ಸಾರವನ್ನು ಜಗತ್ತಿಗೆ ಸಾರಿ ಬಸವನಿಷ್ಠೆಯನ್ನು ಬೆಳೆಸುವಲ್ಲಿ ಪ್ರಮುಖರಾಗಿದ್ದಾರೆ. ಇವರ ಪ್ರಕಾರ ಭಕ್ತನ ಕೊಲೆ ಮಾಡಬಾರದು. ಕೊಲೆ ಮಾಡಿದರೆ ಪಂಚ ಮಹಾಪಾತಕಗಳು ಬರುತ್ತವೆ ಎಂದು ಎಚ್ಚರಿಸಿದ್ದಾರೆ. ಸಜ್ಜನ ಗಂಡನ ಕದ್ದವರು, ಕಳ್ಳರ ಹಿಂದೆ ಹೋದ ಸತಿಯಂತೆ ಆದವರು, ಮನವೆ ಸೂಳೆಯಾಗಿ, ಮಾತಿನ ಮಾಲೆಯ ಸರವನ್ನು ಧರಿಸಿದವರು ನಿಜಶರಣರಾಗಲು ಸಾಧ್ಯವಿಲ್ಲ ಎಂದು ಭೋಗಣ್ಣ ತಿಳಿಸಿದ್ದಾರೆ. ಇವರು ಆರು ಬೆಡಗಿನ ವಚನಗಳನ್ನು ಬರೆದಿದ್ದಾರೆ, ಕೆಲವು ವಚನಗಳು ಉಪಮೇಯಗಳಿಂದ ಕಾವ್ಯದ ಸ್ಪರ್ಶವನ್ನು ಪಡೆದಿವೆ. ಸರಳತೆ, ಸ್ಪಷ್ಟತೆ ಇವರ ವಚನಗಳಲ್ಲಿ ಕಾಣಬಹುದು. ಒಟ್ಟಾರೆ ಇವರ ವಚನಗಳಲ್ಲಿ ಅಷ್ಟಾವರಣ, ಭಕ್ತ-ಭವಿ, ಸಾಕಾರ-ನಿರಾಕಾರ, ಅಂಗ-ಲಿಂಗ, ವೇಷಡಂಭಕ-ಶಬ್ದಬೋಧಕ, ಭವಭಾರಿಗಳ ಬಗೆಗೆ ವಿವರಗಳು ಕಂಡುಬರುತ್ತದೆ.

 • 29 ಕೊಂಡಗುಳಿ ಕೇಶಿರಾಜ
 • ಕೇಶಿರಾಜರ ಜನ್ಮ ಸ್ಥಳ ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಕೊಂಡಗುಳಿ. ಇವರ ಕಾಲ ಕ್ರಿ.ಶ. 1160. ಇವರ ತಂದೆಯ ಹೆಸರು ನಿಂಬಣಯ್ಯ ತಾಯಿಯ ಹೆಸರು ಗಂಗಾದೇವಿ. ಶ್ರೀ ವಿರೂಪಾಕ್ಷ ದೇವರು ಇವರ ಗುರುವೆಂದು ಹರಿಹರನ ‘ಕೇಶಿರಾಜ ದಣ್ಣಾಯಕರ ರಗಳೆ’ಯಿಂದ ತಿಳಿದುಬರುತ್ತದೆ. ಇವರು ಕಲ್ಯಾಣ ಚಾಲುಕ್ಯರ ಅರಸು ಆರನೆಯ ವಿಕ್ರಮಾದಿತ್ಯನ ಆಸ್ಥಾನದಲ್ಲಿ ದಂಡನಾಯಕರಾಗಿದ್ದು ಸುಮಾರು ನೂರು ವರ್ಷಗಳ ಕಾಲ ಇವರು ಬದುಕಿದ್ದರೆಂದು ತಿಳಿದುಬರುತ್ತದೆ. ಕ್ರಿ.ಶ. 1051 ರಿಂದ ಕ್ರಿ.ಶ. 1151ರ ವರೆಗೆ ಇವರ ಜೀವಿತ ಕಾಲವೆಂದು ವಿದ್ವಾಂಸರು ಗುರುತಿಸಿದ್ದಾರೆ. ಕೇಶಿರಾಜನವರು ನರನ ಸೇವೆಯೇ ಹರನ ಸೇವೆಯೆಂದು ಭಾವಿಸಿ ಉದಾತ್ತ ರೀತಿಯಲ್ಲಿ ಬಾಳಿದವರು. ಇವರು ಕಲಿ-ಕವಿ-ಗಾಯರಾಗಿ ಸಮಾಜದಲ್ಲಿ ಎಲ್ಲರ ಗೌರವಕ್ಕೆ ಪಾತ್ರರಾದರು. “ಅರಸನ ಐಸಿರಿ ಅರಸನಿಗೇ ಇರಲಿ, ನನಗೆ ಶಿವಶರಣರ ಸಹವಾಸವೊಂದೇ ಸಾಕು” ಎನ್ನುವುದು ಇವರ ಧೋರಣೆಯಾಗಿತ್ತು. ಅದರಂತೆ ಬಾಳಿ ಬದುಕಿ ತೋರಿದ್ದಾರೆ. ಬೇಟೆ ಕಾಯಕದ ಬೊಮ್ಮಯ್ಯ, ಕೇಶಿರಾಜರಿಂದ ಪ್ರಭಾವಿತರಾಗಿದ್ದನ್ನು ಇವರ ಚರಿತ್ರೆಯಲ್ಲಿ ನೋಡಬಹುದಾಗಿದೆ. ಇವರಲ್ಲಿ ವಿದ್ವತ್ತು, ದೈವಭಕ್ತಿ ಮತ್ತು ಸಾಮಾಜಿಕ ಕಳಕಳಿ ಮನೆಮಾಡಿದ್ದವು. ದಂಡನಾಯಕನಾಗಿ, ಕವಿಯಾಗಿ ಶಿವತತ್ತ್ವ ಪ್ರಸಾರಕರಾಗಿ ಇವರು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಶರಣರಾದ ವಂಶವರ್ಧನರ ಸಂಗದಲ್ಲಿ ಶಿವಾನುಭಾವ ಗೋಷ್ಟಿಯನ್ನು ನಡೆಸಿದ್ದಾರೆ. ತಾವೇ ರಚಿಸಿದ ಕಂದ ಪದ್ಯಗಳನ್ನು ಹಾಡುತ್ತಾ ವ್ಯಾಖ್ಯಾನ ಮಾಡುತ್ತಾ ಸ್ವತಃ ಶಿವಾನುಭಾವದ ಅಮೃತವನ್ನು ಸವಿಯುತ್ತ ಇತರರಿಗೆ ಅದನ್ನು ಉಣಬಡಿಸಿದ್ದಾರೆ. ಇವರು ಏಳು ದಿನಗಳ ಕಾಲ ಅಖಂಡ ಶಿವಾರ್ಚನೆಯನ್ನು ಕೈಗೊಂಡು ರಾಜ ವಿಕ್ರಮಾದಿತ್ಯನನ್ನು ಚಕಿತಗೊಳಿಸಿದವರಾಗಿದ್ದಾರೆ. ಇದರಿಂದ ರಾಜ ತನ್ನ ತಪ್ಪುಗಳನ್ನು ತಿದ್ದಿಕೊಂಡು ಸರಿಮಾರ್ಗದಲ್ಲಿ ನಡೆಯಲು ಮಾರ್ಗದರ್ಶಕರಾಗಿ ದಾರಿ ತೋರಿದ್ದಲ್ಲದೇ ಮೋಕ್ಷ ಸಾಧನೆಗೈಯಲು ಇವರು ಕಾರಣಿಕರ್ತರಾಗಿದ್ದಾರೆ. “ಓಂ ನಮಃ ಶಿವಾಯ” ಈ ಮಂತ್ರದ ಮಹತ್ವವನ್ನು ಸಾರುವ 110 ಕಂದಪದ್ಯಗಳನ್ನು ರಚಿಸಿ ಅವನ್ನು ಭಾವಾವೇಶದಿಂದ ಹಾಡಿ ಶರಣರ ಮನ ಗೆದ್ದಿದ್ದಾರೆ.

 • 30 ಮರುಳಸಿದ್ಧ
 • ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕು. ಉಜ್ಜಯಿನಿ ಗ್ರಾಮದ ಈಶಾನ್ಯ ದಿಕ್ಕಿಗೆ ಇರುವ ಗ್ರಾಮವೇ ಕಗ್ಗಲ್ಲುಪುರ. ಇಲ್ಲಿನ ಮಚ್ಚೆ ಕಾಯಕದ ಲಿಂಗವಂತರಾದ ಕೂಚಿಮಾರ ಮತ್ತು ಸುಪ್ರಭೆ ದಂಪತಿಗಳ ಮಗನಾಗಿ ಮರುಳಸಿದ್ಧರು ಜನಿಸಿದರು. ಮಹಾಮಹಿಮರು ಇವರು. ಶ್ರೇಷ್ಠ ಶಿವಶರಣರಾಗಿ ಲೋಕವನ್ನು ಪಾವನಗೊಳಿಸಿದರು. ಪ್ರಾಣಿಗಳೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದ ಇವರಿಗೆ ದೇವರ ಹೆಸರಿನಲ್ಲಿ ಪ್ರಾಣಿಬಲಿ ಕೊಡುವುದನ್ನು ಕಂಡು ಸಹಿಸಿಕೊಳ್ಳಲಾಗದೆ ಪ್ರತಿಭಟಿಸಿದರು. ಈ ಬಗ್ಗೆ ಜನಜಾಗೃತಿ ಮೂಡಿಸಿದರು. ಕಾಯಕವಿಲ್ಲದೆ ದೇವರಿಲ್ಲ, ಧರ್ಮವಿಲ್ಲ, ದೇವರು, ಧರ್ಮಗಳ ಹೆಸರಿನಲ್ಲಿ ಯಾವ ವ್ಯಕ್ತಿಯು ಸೋಮಾರಿಯಾಗಿ ನಿರುದ್ಯೋಗಿಯಾಗಿ ಪರಾವಲಂಬಿಯಾಗಿ ಇರಬಾರದೆಂದು ಸಾರಿದರು. ದೇವರ ಹೆಸರಿನಲ್ಲಿ ಸೋಗಿನ ಜೀವನ ನಡೆಸುವುದನ್ನು ವಿರೋಧಿಸಿದರು. ಮರುಳಸಿದ್ಧರು ವಾಮಾಚಾರದಲ್ಲಿ ನಿರತರಾಗಿದ್ದ ಜನರ ಮನಃಪರಿವರ್ತನೆ ಮಾಡಿ ಅವರಿಗೆ ಲಿಂಗದೀಕ್ಷೆ ಕೊಟ್ಟು ಲಿಂಗತತ್ತ್ವವನ್ನು ಬೋಧಿಸಿದ ಮಹಾತ್ಮರು. ಅಕ್ಕಮಹಾದೇವಿಗೆ ದೀಕ್ಷೆ ಕೊಟ್ಟು ಶರಣಸತಿ ಲಿಂಗಪತಿಯಾಗಿ ದೇವರನ್ನೊಲಿಸಲು ಉಪದೇಶಿಸಿದರು. ಅರಿಯದ ಕಾರಣ ಭವಕ್ಕೆ ಬಂದರು. ಅರಿವಿಲ್ಲದವಂಗೆ ಆಚಾರವಿಲ್ಲ, ಆಚಾರವಿಲ್ಲದವಂಗೆ ಅರಿವಿಲ್ಲ. ಅರಿವಿಲ್ಲದವಂಗೆ ಗುರುವಿಲ್ಲ, ಗುರುವಿಲ್ಲದವಂಗೆ ಲಿಂಗವಿಲ್ಲ. ಲಿಂಗವಿಲ್ಲದವಂಗೆ ಜಂಗಮವಿಲ್ಲ, ಜಂಗಮವಿಲ್ಲದವಂಗೆ ಪ್ರಸಾದವಿಲ್ಲ. ಪ್ರಸಾದವಿಲ್ಲದವಂಗೆ ಮಹಾಲಿಂಗವಿಲ್ಲವಯ್ಯಾ. ಈ ಆರು ಸಹಿತ ಆಚಾರ, ಆಚಾರಸಹಿತ ಗುರು ಗುರುಸಹಿತ ಲಿಂಗ, ಲಿಂಗಸಹಿತ ಜಂಗಮ ಜಂಗಮಸಹಿತ ಪ್ರಸಾದ, ಪ್ರಸಾದಸಹಿತ ಮಹಾಲಿಂಗ. ಆದಿಲಿಂಗ ಅನಾದಿಶರಣನಾಗಿಬಂದು ಷಡುಸ್ಥಲವ ನಡೆದು ತೋರಿದ. ಅಂತಲ್ಲದೆ ಒಂದೊಂದ ಕಳೆದು ನಡೆದನೆಂದಡೆ ಸೋಪಾನದ ಕಟ್ಟೆಯ ಕಲ್ಲು ಬಿದ್ದಂತೆ. ಇದು ಆರಿಗೂ ಅಳವಡದು ಬಸವಣ್ಣಂಗಳವಟ್ಟಿತ್ತು. ಆ ಬಸವಣ್ಣನ ಭೃತ್ಯನಾಗಿರಿಸಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. ಹಳೇಬೀಡಿನ ರಾಜನ ಮನಃಪರಿವರ್ತನೆ ಮಾಡಿ ರಾಜನ ಕೈಂಕರ್ಯಗಳ ಬಗೆಗೆ ಅವರಲ್ಲಿ ಆಸಕ್ತಿ ಮೂಡಿಸಿದರು. ಪ್ರಜೆಗಳ ಹಿತರಕ್ಷಣೆಗೆ ಕಂಕಣಬದ್ಧರಾಗುವಂತೆ ಮಾಡಿದರು. ಜೇಡರ ದಾಸಿಮಯ್ಯ, ಸಿದ್ಧರಾಮ ಮೊದಲಾದ ಶಿವಶರಣರ ಸಮಕಾಲೀನರು ಇವರು. ಶರಣರ ಜೊತೆಯಲ್ಲಿ ಲಿಂಗವಂತ ತತ್ತ್ವಾನುಷ್ಠಾನಕ್ಕಾಗಿ ದುಡಿದರು. ದಲಿತರ ಹೊಟ್ಟೆಯಲ್ಲಿ ಹುಟ್ಟಿಬಂದು ಸಮಗ್ರ ಮಾನವಕುಲಕ್ಕೆ ಕಳಶಪ್ರಾಯರಾದವರು. ಪ್ರತಿಭೆ, ಪಾಂಡಿತ್ಯ ಸಾಧನೆಗಳಿಗೆ ಜಾತಿಯು ಅಡ್ಡಬರಲಾರದು ಎಂದು ಅವರು ಜಗತ್ತಿಗೆ ಸಾಧಿಸಿ ತೋರಿಸಿದರು.

 • 31 ಗಜೇಶ ಮಸಣಯ್ಯ
 • ಆತನ ಬೆರಸಿದ ಕೂಟವನೇನೆಂದು ಹೇಳುವೆನವ್ವಾ, ಹೇಳಲೂಬಾರದು, ಕೇಳಲೂಬಾರದು; ಏನ ಹೇಳುವೆನವ್ವಾ, ಶಿಖಿ ಕರ್ಪೂರ ಬೆರಸಿದಂತೆ. ಮಹಾಲಿಂಗ ಗಜೇಶ್ವರನ ಕೂಡಿದ ಕೂಟವಹೇಳಲು ಬಾರದವ್ವಾ. ಎಲೆ ಎಲೆ ತಾಯೆ ನೋಡವ್ವಾ! ಇರುಳು ತೊಳಲುವ ಜಕ್ಕವಕ್ಕಿಯಂತೆ ಹಲಬುತ್ತಿದ್ದೆ ನೋಡವ್ವಾ! ಮಾಗಿಯ ಕೋಗಿಲೆಯಂತೆ ಮೂಗಿಯಾಗಿದ್ದೆ ನೋಡವ್ವಾ! ಮಹಾಲಿಂಗ ಗಜೇಶ್ವರನ ಅನುಭಾವಸಂಬಂಧಿಗಳ ಬರವೆನ್ನ ಪ್ರಾಣ(ದ) ಬರವು ನೋಡ(ವ್ವಾ). ಗಜೇಶ ಮಸಣಯ್ಯ ಪ್ರಸಿದ್ಧ ಶಿವಶರಣರು. ಕರಜಿಗೆ ಇವರ ಊರು. ಲಿಂಗಪೂಜೆ, ಜಂಗಮ ದಾಸೋಹ ಇವರ ನಿತ್ಯಕಾರ್ಯ. ಇವರು ಬಸವಣ್ಣನವರ ಸಮಕಾಲೀನರು. ಇವರ ಕಾಲ ಕ್ರಿ.ಶ. 1160. ಕಾವ್ಯಗಳಲ್ಲಿ ಇವರ ವ್ಯಕ್ತಿತ್ವ ಹಾಗೂ ಇವರಿಗಿದ್ದ ಲಿಂಗ ನಿಷ್ಠೆಯನ್ನು ಇವರ ವಚನಗಳಲ್ಲಿ ಕಂಡು ಹಾಡಿ ಹೊಗಳಿದ್ದಾರೆ. ಪ.ಗು. ಹಳಕಟ್ಟಿಯವರ ಪ್ರಕಾರ ಕನ್ನಡನಾಡಿನಲ್ಲಿ ಎರಡು ಕರಜಿಗೆ ಗ್ರಾಮಗಳಿವೆ. ಇವುಗಳಲ್ಲಿ ಬಿಜಾಪುರ ಜಿಲ್ಲೆಯ ಅಕ್ಕಲಕೋಟ ಸಂಸ್ಥಾನದಲ್ಲಿಯ ಕರಜಿಗೆಯೇ ಮಸಣಯ್ಯನವರದೆಂದು ತಿಳಿದುಬರುತ್ತದೆ. ‘ಮನಹಳ್ಳಿ’ ಎಂಬ ಗ್ರಾಮವಿದ್ದು ಅಲ್ಲಿ ಮಸಣಯ್ಯನವರ ಮಂಟಪ ಇಂದಿಗೂ ಇದೆ. ಇಲ್ಲಿ ಮಸಣಯ್ಯನವರು ಕೆಲಕಾಲ ವಾಸಿಸಿರಬಹುದೆಂದು ತಿಳಿದುಬರುತ್ತದೆ. ಈ ಗ್ರಾಮದಿಂದ 6 ಮೈಲುಗಳ ಮೇಲೆ ‘ತೊರೆ’ ಅಥವಾ ‘ಬೆಣ್ಣೆ ತೊರೆ’ ಎಂಬ ಹೆಸರಿನ ಒಂದು ದೊಡ್ಡ ಹಳ್ಳವು ಹರಿಯುತ್ತದೆ. ಮಸಣಯ್ಯನವರು ಲಿಂಗಪೂಜೆಗೋಸ್ಕರ ಕುಳಿತ ನದಿ ಇದೆ ಆಗಿರುತ್ತದೆ. ಇವೆಲ್ಲ ಸಂಗತಿಗಳನ್ನು ನಿರೀಕ್ಷಿಸಿದಲ್ಲಿ ಮಸಣಯ್ಯನವರ ಗ್ರಾಮವು ಅಕ್ಕಲಕೋಟೆಗೆ ಸಮೀಪವಿರುವ ಕರಜಿಗಿಯೇ ಎಂದು ಪುರಾವೆಗಳಿಂದ ತಿಳಿದುಬರುತ್ತದೆ. ಇವರು ಉತ್ತಮ ವಚನಕಾರರು. ‘ಮಹಾಲಿಂಗ ಗಜೇಶ್ವರ’ ಅಂಕಿತದಲ್ಲಿ ಅತ್ಯುತ್ತಮವಾದ ವಚನಗಳನ್ನು ಬರೆದಿರುತ್ತಾರೆ. ಈಗ ಇವರ 65 ವಚನಗಳು ಲಭ್ಯವಾಗಿವೆ. ಪ್ರತಿಭೆ, ವ್ಯಕ್ತಿತ್ವ, ಮನೋಭಾವ, ಮಧುರಶೈಲಿಗಳನ್ನು ಗಮನಿಸಿದರೆ ಇವರು ಮಹಾವಿದ್ವಾಂಸರೆಂದು ತಿಳಿಯಬಹುದಾಗಿದೆ. ಮಸಣಯ್ಯ ತಮ್ಮ ವಚನಗಳಲ್ಲಿ ಬಳಸಿದ ಉದಾಹರಣೆಗಳು, ಉಪಮೆಗಳು ಸಂದರ್ಭೋಚಿತವಾಗಿವೆ. ಇವುಗಳಿಂದ ವಚನದ ಸೌಂದರ್ಯ ಹೆಚ್ಚಿದೆ. ಮಧುರ ಭಾವಕ್ಕೆ ತಕ್ಕಂತೆ ಬಳಸಿದ ಭಾಷೆ, ತಂತ್ರಗಳು ಓದುಗರಿಗೆ ಹೆಚ್ಚು ಆತ್ಮೀಯತೆಯನ್ನು ಉಂಟುಮಾಡುತ್ತವೆ. ಇವರ ವಚನದ ಮತ್ತೊಂದು ಮುಖ್ಯವಾದ ವಿಶೇಷ ಗುಣವೆಂದರೆ ಚಿಕ್ಕ ಚಿಕ್ಕ ನುಡಿಗಳಲ್ಲಿ ವಿಶಾಲ ಅರ್ಥ ತುಂಬಿರುವುದು. ಕೆಲವು ಮಾತುಗಳಂತೂ ಗಾದೆಗಳ ಪಡಿಯಚ್ಚಿನಂತಿವೆ. ಅವುಗಳಲ್ಲಿಯ ವಿಚಾರ ವೈಭವ ಮೆಚ್ಚುವಂತಹದು. ‘ಇದ್ದಿಲ ಹಿಂಡಿದಡೆ ರಸವುಂಟೆ?’ ‘ಉಪ್ಪಿಲ್ಲದೂಟ ಸಪ್ಪೆ ಕಾಣಿರೋ’ ‘ಒಲಿದವರ ಕೊಲುವಡೆ ಮಸೆದ ಕೂರಲಗೇಕವ್ವಾ, ಅವರನೊಲ್ಲೆನೆಂದರೆ ಸಾಲದೆ?’ ‘ದೂರದಲ್ಲಿದ್ದವರ ನೆನೆವರಲ್ಲದೆ ಸಮೀಪದಲ್ಲಿದ್ದವರನಾರೂ ನೆನೆವರಿಲ್ಲ’’ಮಾತಂಗಿಯ ಹೊಳೆಯಲ್ಲಿ ಉತ್ತಮನ ನೆಳಲು ಸುಳಿದಡೆ ರೂಹು ಹೊಲೆಯನಾಗಬಲ್ಲುದೆ? ’ಉರಗನ ಬಾಯ ಕಪ್ಪೆಯಂತೆ ಸಂಸಾರ’ ‘ಇಂದಿನಿಂದಿನ ಸುಖ ಇಂದಿಂಗೆ ಪರಿಣಾಮ’ ‘ ಕಾಮಂಗಂಜಿ ಚಂದ್ರಮನ ಮರೆಹೊಗಲು ರಾಹು ಕೊಂಡಂತಾದೆನವ್ವಾ’ ‘ತೊತ್ತಿನ ಮುನಿಸು ಸಲುವುದೆ?’ ‘ದಿಬ್ಯವ ತುಡುಕಿದರೆ ಕೈ ಬೇವುದಲ್ಲದೆ ಮೈ ಬೇವುದೆ ? ‘ಹೆಣಗುವಲ್ಲಿ ಮೈಯೆಲ್ಲಾ ಕೈಯಾಗಿ ಹೆಣಗಬೇಕು’ ಎಂಬಂತಹ ಮಾತುಗಳು ಮಸಣಯ್ಯನ ಲೋಕಾನುಭವ, ಸೂಕ್ಷ್ಮ ದೃಷ್ಟಿಯ ಪ್ರತೀಕವಾಗಿದೆ. ಒಟ್ಟಿನಲ್ಲಿ ಗಜೇಶ ಮಸಣಯ್ಯನವರ ವಿಶಿಷ್ಟ ಭಾವ, ಸ್ವಭಾವ, ವಚನ ರಚನೆ, ಭಾಷಾಶೈಲಿಗಳಿಂದ ವಚನಕಾರರಲ್ಲಿ ಒಬ್ಬ ಅತ್ಯುತ್ತಮ ವಚನಕಾರರಾಗಿ ಗಮನ ಸೆಳೆಯುತ್ತಾರೆ. ಲಿಂಗಪತಿಯಲ್ಲಿ ಶರಣಸತಿಯ ಐಕ್ಯವು ‘ಆಲಿಕಲ್ಲ ಪುತ್ಥಳಿ ಕರಗಿ ಅಪ್ಪುವಿನೊಡಗೂಡಿದಂತಾಗುತ್ತದೆ’. ಜ್ಯೋತಿ ಪರಂಜ್ಯೋತಿಯಲ್ಲಿ ಬೆರೆತು ಹೋಗುತ್ತದೆ. ಬಯಲಿನಲ್ಲಿ ಬಯಲು ಕೂಡಿ ಕುರುಹಳಿದು ಪರಮಶಾಂತಿ ಮಾತ್ರ ಉಳಿಯುತ್ತದೆ. ಹೀಗೆ ಲಿಂಗಾಂಗ ಸಾಮರಸ್ಯವನ್ನು ಬೋಧಿಸುವ ತಮ್ಮ ಎಲ್ಲಾ ವಚನಗಳಲ್ಲಿ ಮಸಣಯ್ಯ ಬಳಸಿದ ಪ್ರತಿಮೆ, ದೃಷ್ಟಾಂತ, ಉಪಮೆ ಒಂದೊಂದೂ ಔಚಿತ್ಯಪೂರ್ಣ. ಮಧುರ ಭಾವಕ್ಕೆ ತಕ್ಕ ಲಲಿತಭಾಷೆ, ಸಂಬೋಧನಾತ್ಮಕ ತಂತ್ರ ಹದವರಿತು ಬೆರೆತು ಅವರ ವಿಚಾರಗಳನ್ನು ಹೆಚ್ಚು ಆತ್ಮೀಯವಾಗಿಸಿವೆ. ಗಜೇಶ ಮಸಣಯ್ಯ ವಿಜಾಪುರದ ಕರ್ಜಗಿಯಲ್ಲಿ ಹುಟ್ಟಿ ಲೌಕಿಕ ಸಂಸಾರಿಯಾಗಿ, ಬಸವಾದಿ ಶರಣರ ಸಮೂಹದಲ್ಲಿ ಒಬ್ಬ ಉತ್ತಮ ಶರಣರೆನಿಸಿ ಬಾಳಿದ ಮಹಾ ಶಿವಶರಣರಾಗಿದ್ದರೆಂದು ಶಾಸನಗಳಿಂದ ತಿಳಿದುಬರುತ್ತದೆ. ನಿತ್ಯ ಲಿಂಗಾರ್ಚನೆ, ಜಂಗಮ ದಾಸೋಹದ ಮೂಲಕ ಶರಣರ ಸಮೂಹದಲ್ಲಿ ಆದರ್ಶವ್ಯಕ್ತಿಯಾಗಿ ಬಾಳಿದವರು. ಕೊನೆಗೆ ಮಾನಹಳ್ಳಿ ಗ್ರಾಮದಲ್ಲಿ ಲಿಂಗೈಕ್ಯರಾಗುತ್ತಾರೆ. ಒಟ್ಟಿನಲ್ಲಿ ಗಜೇಶ ಮಸಣಯ್ಯನವರ ವಿಶಿಷ್ಟ ಭಾವ-ಸ್ವಭಾವ, ವಚನ ರಚನೆ ಹಾಗೂ ಭಾಷಾ ಶೈಲಿಗಳಿಂದ ವಚನಕಾರರಲ್ಲಿ ಒಬ್ಬ ವಿಶಿಷ್ಟ ವ್ಯಕ್ತಿಯಾಗಿ ತನ್ನದೇ ಆದ ಸ್ಥಾನವನ್ನು ಗಳಿಸಿಕೊಂಡಿದ್ದಾರೆ.

 • 32 ಗೋರಕ್ಷ
 • ಹಿಟ್ಟಿನ ಲೆಪ್ಪದಲ್ಲಿ ಚಿತ್ರದ ಕರಚರಣಾದಿಗಳ ಮಾಡಿ, ತುಪ್ಪದ ಮಧುರದ ಸಾರವ ಕೂಡಿ, ಕಿಚ್ಚಿನಲ್ಲಿ ಸುಟ್ಟು ಮೆದ್ದಲ್ಲಿ ಮತ್ತೆ ಕೈಕಾಲಿನ ಚಿತ್ರದ ಬಗೆಯುಂಟೆ? ಇದು ನಿಶ್ಚಯ ವಸ್ತು ಸ್ವರೂಪ. ಮತ್ರ್ಯದ ದೃಕ್ಕು ದೃಶ್ಯಕ್ಕೆ ನಿಶ್ಚಯವಾಗಿಹನು, ಏಕಲಿಂಗ ನಿಷ್ಠೆವಂತರಲ್ಲಿ ಕಟ್ಟಳೆಯಾಗಿಹನು, ಆತ್ಮ ಲಕ್ಷ್-ನಿರ್ಲಕ್ಷ್ಯ ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥಲಿಂಗವು. ಕುಂಡಲಿಯೆಂಬ ಆಧಾರದಲ್ಲಿ ಜಗ ತೇಜ ವಾಯುವೆಂಬ ತ್ರಿವಿಧ ಕೂಡಿ ಕಮಂಡಲ ಹುಟ್ಟಿತ್ತು ಅದಕ್ಕೆ ಬಾಯಿ ಮೂರು ಹಿಡಿಯಾರು ಜೂಳಿ ಒಂದರಲ್ಲಿ ಉದಕವ ಕೊಳ್ಳುತ್ತಿರಲಾಗಿ ಆ ಹಸುವಿನ ತೃಷೆಯಡಗಿ ಬಯಕೆ ಸಲೆ ಬತ್ತಿದಲ್ಲಿ ಮಹಾಗಣನಾಥನ ಐವತ್ತೆರಡು ಸರ ಹರಿದವು ಮುವತ್ತಾರು ಮಣಿ ಕೆಟ್ಟವು ಇಪ್ಪತ್ತೈದು ಮಣಿಪುಂಜವಾಯಿತ್ತು ಆರು ನಾಯಕ ರತ್ನವೆಲ್ಲಿ ಅಡಗಿತ್ತೆಂದರಿಯೆ ಮೂರು ರತ್ನನ ಕಂಡೆ ಒಂದು ಉರಿವುದು ಒಂದು ಉಲಿವುದು ಒಂದು ಬೆಳಗು ನಂದಿಹುದು ಇಂತೀ ತ್ರಿವಿಧ ದಂಗವ ಕಂಡು, ಈ ಅಂಗದ ಮಣಿಯ ಒಂದೊಂದ ಪವಣಿಸಲಾರದೆ, ಈ ದಿನಮಣಿಯ ವಿರಳವ ತೋರಿಸಾ ಗೋರಕ್ಷಪಾಲಕ ಮಹಾಪ್ರಭುಸಿದ್ಧ ಸೋಮನಾಥ ಲಿಂಗವೆ. ಕಾಯವೆಂಬ ಅರಗಿನ ಕುದುರೆಯ ಮೇಲೆ ಜ್ವಲಿಸುವ ಹಿರಿಯರಸನೆಂಬ ಲಿಂಗ ಮೂರ್ತಗೊಂಡು, ಅನುಚರವಾದ ಕರಣೇಂದ್ರಿಯಗಳೆಂಬ ಮಂಜಿನ ಪರಿವಾರ ಒಂದಾಗಿ ಸಂತೈಸಿ ಆಯಾ ಅಂಗಗಳಿಗೆ ಆಯಾ ಲಿಂಗಕಳೆಗಳನ್ನು ಜೋಡಿಸಿ ತೋಡಿಸುತ್ತಾರೆ. ಮನ-ಬುದ್ಧಿ-ಚಿತ್ತ-ಅಹಂಕಾರ ಎಂಬ ಅಂತಃಕರಣ ಚತುರಂಗದ ಮೇಲೆ ಧ್ಯಾನಧಾರಣ ವಾಕ್ಕು ಕ್ರಿಯೆಗಳೆಂಬ ಶಸ್ತ್ರವನ್ನು ಹಿಡಿದು, ಬೆಳದಿಂಗಳ ಕಿರಣವೆಂಬ ಶಾಂತಿಯ ಮೇಲೆ ಇಷ್ಟಪಟ್ಟು ಏರಲಾಗಿ ಅರಿಷಡ್ವರ್ಗವೆಂಬ ಸೇನೆ ಹೆದರಿ ನಡುಗಿತು. ಶರೀರವೆಂಬ ಊರಿಗೆ ಅರಸನಾದ ಜೀವಾತ್ಮನು ಎತ್ತಿದ ತಮಂಧದ ಕತ್ತಿ ಜ್ಞಾನರವಿಯ ಬೆಳಕಿನಲ್ಲಿ ಅಡಗಿಹೋಯಿತು. ಅನುಚರರಾದ ಕರಣೇಂದ್ರಿಯಗಳು ಲಿಂಗಾನಂದ ಸಾಗರದಲ್ಲಿ ಮಂಜಿನಂತೆ ಕರಗಿ ಹೋದವು. ಜ್ಯೋತಿರೂಪನಾದ ಜ್ಞಾನಾತ್ಮನು ಶರೀರದಲ್ಲಿನ ಪ್ರಾಣವಾಯುವಿನೊಳಗಾದನು. ಅಂಗವೆಂಬ ಅರಗಿನ ಕುದುರೆ ಲಿಂಗದ ಪರಂಜ್ಯೋತಿ ಚೈತನ್ಯದಲ್ಲಿ ಕರಗಿತ್ತು. ಬಸವ ಧರ್ಮದ ಸಿದ್ಧಾಂತದಂತೆ ಅರಗಿನ ಕುದುರೆಯಾದ ಅಂಗನೆಂಬ ಅತಿ ಲಿಂಗಪತಿಯಾದ ಅರಸನ ತೊಡೆಯೇರಿದಳು! ಇಂತಹ ಶಕ್ತಿ ಸಮೇತ ದೊರೆಗೆ ಸರಿದೊರೆಯಾದ ಇದಿರಿಲ್ಲ. ಇದು ಪ್ರಭುದೇವಾ, ನೀನು ಅರಿಯದ್ದಲ್ಲ’ ಎಂದು ವಿನಮ್ರವಾಗಿ ನುಡಿಯುತ್ತಾರೆ. ಆಗ ಪ್ರಭುದೇವರು ಗೋರಕ್ಷ ಶರಣರಿಗೆ ಲಿಂಗಾಂಗ ಸಂಬಂಧವನ್ನು ಸ್ಥಿರವಾಗಿ ನಿಲ್ಲುವಂತೆ ತಿಳಿಸಿಕೊಟ್ಟು ಅವರನ್ನು ಬೀಳ್ಕೊಡುತ್ತಾರೆ. ಹೀಗೆ ನಶ್ವರವಾದ ಕಾಯವನ್ನೆ ನಂಬಿ ನೆಚ್ಚಿದ್ದ ಗೋರಕ್ಷಕರನ್ನು ಸ್ಪರ್ಶಮಣಿಯ ಪ್ರಭಾವದಂತೆ ಪರಿವರ್ತನೆಗೊಳಿಸಿ, ಕಾಯಕ್ಕಿಂತ ಮಿಗಿಲಾದ ಆತ್ಮಜ್ಞಾನವನ್ನು ಬೋಧಿಸಿ, ಸಾಕ್ಷಾತ್ಕಾರ ಹೊಂದಲು ಮಾರ್ಗತೋರಿಸಿ, ಅಲ್ಲಿಂದ ಮುಂದೆ ತೆರಳುತ್ತಾರೆ. ಗೋರಕ್ಷರವರು ಅಹಂಕಾರವಳಿದು ನಿಜಜ್ಞಾನವನ್ನು ಹೊಂದಿ ಮಹಾಜ್ಞಾನಿಯೂ, ವಚನಕಾರರೂ ಆಗಿ ಉತ್ತಮ ಶರಣರೆನಿಸಿಕೊಳ್ಳುತ್ತಾರೆ. ಗೋರಕ್ಷಕ ಶರಣರು ದೇಹವನ್ನು ಯೋಗಸಾಧನೆಯಿಂದ ವಜ್ರದಂತೆ ಗಟ್ಟಿಯಾಗಿಸಿಕೊಂಡವರು. ಇವರು ನಾಥ ಸಂಪ್ರದಾಯದ ಒಬ್ಬ ಸಾದಕರು. ಮಚ್ಚೇಂದ್ರನಾಥನ ಶಿಷ್ಯ. ಅಲ್ಲಮಪ್ರಭುವಿನ ಸಮಕಾಲೀನರು. ಇವರ ಮೊದಲ ಹೆಸರು ಗೋರಖನಾಥ. ಉತ್ತರ ಕರ್ನಾಟಕದ ಪಟ್ಟದಕಲ್ಲು ಇವರ ಹುಟ್ಟಿದ ಊರು. ಯೋಗಸಾಧಕರಾಗಿ ಗುರುಗಳಿಂದ ಗತಿಸ್ಥಂಭ, ಜಿಹ್ವಾಸ್ಥಂಭಗಳಂಥ ವಿದ್ಯೆಗಳನ್ನು ಕಲಿತುಕೊಂಡರು. ಹೆಸರೇ ಸೂಚಿಸುವಂತೆ ಗೋರಕ್ಷ ಮೊದಲು ದನ ಮೇಯಿಸುವ ಕಾಯಕ ಮಾಡಿದ್ದಾರೆಂದು ತಿಳಿಯುತ್ತದೆ. ಹರಿಹರರ ರೇವಣಸಿದ್ಧೇಶ್ವರ ರಗಳೆ, ಚಾಮರಸರ ಪ್ರಭುಲಿಂಗಲೀಲೆಗಳಲ್ಲಿ ಗೋರಕ್ಷರ ಕಥೆ ಬರುತ್ತದೆ. ಗೋರಕ್ಷಕರವರು ತಮ್ಮ ದೇಹದಂಡನವೆ ಸರ್ವಸ್ವವೆಂದು ನಂಬಿದ್ದರು ಹಾಗೂ ತಮ್ಮನ್ನಾರು ಸೋಲಿಸರು ಎಂದು ತಿಳಿದಿದ್ದರು. ಅಲ್ಲಮಪ್ರಭುಗಳು ಇವರ ಭ್ರಮೆಯನ್ನು ಹೋಗಲಾಡಿಸುತ್ತಾರೆ. ಅಲ್ಲಮಪ್ರಭುಗಳಿಗೆ ಶರಣಾದ ಇವರು ಲಿಂಗ ದೀಕ್ಷೆಯನ್ನು ಪಡೆಯುತ್ತಾರೆ. ಬಸವಾದಿ ಶಿವಶರಣ ಸಂಪರ್ಕಕ್ಕೆ ಬಂದ ಮೇಲೆ ವಚನಗಳನ್ನು ಬರೆಯಲು ಪ್ರಾರಂಭಿಸುತ್ತಾರೆ. ‘ಗೋರಕ್ಷ ಪಾಲಕ ಮಹಾಪ್ರಭು ಸಿದ್ಧಸೋಮನಾಥಲಿಂಗ’ ಎಂಬ ಅಂಕಿತದಲ್ಲಿ ಗೋರಕ್ಷರವರು ಬರೆದ ‘ಹನ್ನೊಂದು’ ವಚನಗಳು ಲಭ್ಯವಾಗಿವೆ. ಏಕದೇವರ ಪೂಜೆ, ಆತ್ಮಸಿದ್ಧಿ, ಮುಕ್ತಿ ಮುಂತಾದ ವಿಷಯಗಳನ್ನು ಕುರಿತು ವಚನಗಳನ್ನು ಬರೆದಿದ್ದಾರೆ. ಆತ್ಮಸಿದ್ಧಿಯನ್ನು ಪಡೆದುಕೊಳ್ಳಬೇಕಾದರೆ ದೇಹವನ್ನು ವಜ್ರದಂತೆ ಗಟ್ಟಿ ಮಾಡಿಕೊಂಡರೆ ಆಗದು. ಅನೇಕ ವಿದ್ಯೆ ಕಲಿತರೆ ಆಗದು. ಶರೀರವನ್ನು ಶಿವಯೋಗದಿಂದ ಪರಿಶುದ್ಧವಾಗಿಸಿಕೊಳ್ಳಬೇಕು. ಲಿಂಗಾಂಗ ಸಾಮರಸ್ಯದ ಸಾಧನೆ ಮಾಡಬೇಕು ಎಂದು ತಮ್ಮ ವಚನಗಳ ಮೂಲಕ ತಿಳುವಳಿಕೆ ನೀಡುತ್ತಾರೆ. ಶರಣರ ಸಂಪರ್ಕಕ್ಕೆ ಬಂದಮೇಲೆ ಶಿವಯೋಗದ ಮರ್ಮವನ್ನು ತಿಳಿದುಕೊಂಡರು. ಶರಣಜೀವಿಯಾಗಿ ಕಾಯಕಯೋಗಿಯಾಗಿ ಬದುಕಿನಲ್ಲಿ ಮಹತ್ತರವಾದ ಪರಿವರ್ತನೆಯನ್ನು ಪಡೆದುಕೊಂಡರು. ಹೀಗೆ ಕಾಯಸಿದ್ಧಿಯಿಂದ ವಜ್ರದೇಹವನ್ನು ಮಾಡಿಕೊಂಡಿದ್ದಂತಹ ಗೋರಕ್ಷಕರು ಅಲ್ಲಮ ಪ್ರಭುಗಳ ಮುಕ್ತಿ ಮಾರ್ಗದ ಮಾರ್ಗದರ್ಶನವನ್ನು ಪಡೆದು ಕಲ್ಯಾಣಕ್ಕೆ ಬಂದು ನೆಲೆಸಿದ್ದು, ಗೋರಟಾ ಎಂಬ ಗ್ರಾಮದಲ್ಲಿ ಇವರ ಪ್ರತಿಮೆಯ ಕುರುಹಿನ ಮಂಟಪವು ಕಂಡುಬರುತ್ತದೆ. ಕಲ್ಯಾಣ ಕ್ರಾಂತಿಯ ನಂತರ ಶರಣರು ಕಲ್ಯಾಣವನ್ನು ಬಿಟ್ಟು ಬೇರೆ ಬೇರೆ ಊರುಗಳಲ್ಲಿ ಲಿಂಗೈಕ್ಯರಾಗಿದ್ದಾರೆಂದು ಇತಿಹಾಸ ತಿಳಿಸುತ್ತದೆ. ಶರಣರ ಸ್ಮಾರಕಗಳನ್ನು, ಗವಿಗಳನ್ನು, ವಚನಗಳನ್ನು ಹಾಗೂ ಅವರ ಚರೀತ್ರೆಯ ವಿಚಾರಗಳನ್ನು ವೈದಿಕರು ಒಂಭತ್ತು ತಿಂಗಳುಗಳ ಕಾಲ ನಾಶಪಡಿಸಿದ ಕಾರಣ ಯಾವ ಯಾವ ಶರಣರು ಎಲ್ಲೆಲ್ಲಿ ಲಿಂಗೈಕ್ಯರಾದರೆಂಬ ಇತಿಹಾಸವಿಲ್ಲ. ಗೋರಕ್ಷಕರು ಬಸವತತ್ತ್ವವನ್ನು ಅಳವಡಿಸಿಕೊಂಡು ಉರಿಯುಂಡ ಕರ್ಪೂರದಂತೆ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಕರಾಗಿ ಈ ನಶ್ವರ ಶರೀರ ಶಾಶ್ವತವಲ್ಲ, ನಿಜವಾದ ಜ್ಞಾನವೇ ಶಾಶ್ವತವೆಂಬುದನ್ನು ಸಾಧಿಸಿ ತೋರಿಸಿದ್ದಾರೆ.

 • 33 ಎಡೆಯೂರು ತೋಂಟದ ಸಿದ್ಧಲಿಂಗಯತಿಗಳು
 • ಅಂಗನೆಯ ಚಿತ್ತ, ರಮಣನ ಸುತ್ತಿ ಮುತ್ತಿ ಅಪ್ಪಿ ಅಗಲದಿಪ್ಪಂತೆ, ಜಾಗ್ರ, ಸ್ವಪ್ನ, ಸುಷುಪ್ತಿಯಲ್ಲಿ ಶರಣ ಚಿತ್ತರತಿ ಶಿವಲಿಂಗವ ಸುತ್ತಿ ಮುತ್ತಿ ಅಪ್ಪಿ ಅಗಲದಿಪ್ಪರೆ ಆ ಮಹಾತ್ಮನ ಏನೆಂದುಪಮಿಸುವೆನಯ್ಯಾ! ಲಿಂಗಪ್ರಾಣಿಯ, ಪ್ರಾಣಲಿಂಗ ಸಂಬಂಧಿಯ, ಸ್ವತಂತ್ರ ವಸ್ತುವಿನಲ್ಲಿ ಅರಿವರತು ಬೆರಗು ನಿಬ್ಬೆರಗಾದ ಘನಲಿಂಗಪ್ರಾಣಿಗೆ ನಮೋ ನಮೋಯೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರಪ್ರಭುವೇ! ಅಟ್ಟುದ ಅಡಲುಂಟೆ, ಸುಟ್ಟುದ ಸುಡಲುಂಟೇ ಅಯ್ಯಾ? ಬೆಂದ ಮಡಕೆ ಮರಳಿ ಧರೆಯ ಕೂಡಬಲ್ಲುದೇ ಅಯ್ಯಾ? ಕರ್ಪುರವ ಅಗ್ನಿ ನುಂಗಿದ ಬಳಿಕ ಕರಿ ಉಂಟೇ ಅಯ್ಯಾ? ಶರಣನ ಲಿಂಗ ನುಂಗಿ, ಲಿಂಗವ ಶರಣ ನುಂಗಿ ನದಿಯೊಳಗೆ ನದಿ ಬೆರೆದಂತೆ ಬೆರೆದು ಶುದ್ಧ ನಿರ್ಮಲನಾದ ಲಿಂಗೈಕ್ಯಂಗೆ ಭಿನ್ನಾಭಿನ್ನವ ಕಲ್ಪಿಸುವ ಅಜ್ಞಾನಿಗಳ ಎನಗೊಮ್ಮೆ ತೋರದಿರಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರಪ್ರಭುವೇ! ಲಿಂಗವಂತ ಧರ್ಮದ ವಾಙ್ಮಯದಲ್ಲಿ ಎಡೆಯೂರು ಸಿದ್ಧಲಿಂಗ ಯತಿಗಳು ಮಹೊನ್ನತ ಗೌರವ ಸ್ಥಾನವನ್ನು ಪಡೆದಿರುತ್ತಾರೆ. ಇವರು ಉತ್ತಮ ವಚನಕಾರರು. ಮಾನವ ಸಮಾಜದ ಏಳ್ಗೆಗಾಗಿ ದುಡಿದವರು. ನೊಂದವರನ್ನು ಸಂತೈಸಿದವರು. ಸಂಸ್ಕøತಿಯನ್ನು ಬೆಳೆಸಿದವರಾಗಿದ್ದಾರೆ. ಸಿದ್ಧಲಿಂಗರು ಚಾಮರಾಜನಗರ ಜಿಲ್ಲೆಯ ಹರದನಹಳ್ಳಿಯಲ್ಲಿ ಜನಿಸಿದರು. ಹೇರಂಬ ಎಂಬ ಕವಿಯು ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳ ಸಾಂಗತ್ಯದಲ್ಲಿ ಮಲ್ಲಿಕಾರ್ಜುನ ಮತ್ತು ಜ್ಞಾನಾಂಬೆಯರು ಇವರ ತಂದೆ-ತಾಯಿಗಳೆಂದು ತಿಳಿಸಿದ್ದಾರೆ. ಇವರು ಪೂರ್ವಜನ್ಮ ಸಂಸ್ಕಾರದಿಂದ ಮಹಾಜ್ಞಾನಿಯಾಗಿದ್ದರೂ ಷಟ್ಸ್ಥಲ ಸಾಧನೆ ಮತ್ತು ಆತ್ಮ ಸಂಸ್ಕಾರಗಳಿಂದ ಮಹಾಮಹಂತರಾದರು. ಇವರು ಹದಿನೈದನೆಯ ಶತಮಾನದಲ್ಲಿದ್ದರೆಂದು ಇತಿಹಾಸ ಹಾಗೂ ಶಾಸನಗಳಿಂದ ತಿಳಿದುಬರುತ್ತದೆ. ಕ್ರಿ.ಶ.1410ರಲ್ಲಿ ಜನಿಸಿ, 1435ರಲ್ಲಿ ಗುರು ಪಟ್ಟವನ್ನು ಸ್ವೀಕರಿಸಿದರು. ಕ್ರಿ.ಶ.1500ರಲ್ಲಿ ಲಿಂಗೈಕ್ಯರಾಗುತ್ತಾರೆ. ಸಿದ್ಧಲಿಂಗರು ಕಲ್ಯಾಣದ ಶರಣಧರ್ಮವನ್ನು ಮನಸಾರೆ ಮೆಚ್ಚಿದ್ದರು ಇವರು ಧರ್ಮೋದ್ಧಾರ ದೃಷ್ಟಿಯಿಂದ ದೇಶಪರ್ಯಟನ ಮಾಡಿದರು. ಅನೇಕ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿ ದೇಹವೇ ದೇವಾಲಯವೆಂಬ ತತ್ವವನ್ನು ಸಾರುತ್ತ. ಅಲ್ಲಲ್ಲಿ ಪವಾಡಗಳನ್ನು ಮೆರೆದರು. ಇವರಿಂದ ಪ್ರಭಾವಿತರಾಗಿ ಅನೇಕ ರಾಜರು ಲಿಂಗವಂತ ಧರ್ಮ ಅವಲಂಬಿಸಿದರು ಮತ್ತು ಪೋಷಿಸಿದರು. ಗಂಗಡಿಕಾರ ಒಕ್ಕಲಿಗರ ಪಂಗಡದವರು ಲಿಂಗಧಾರಿಗಳಾಗಿ ಶಿವಭಕ್ತರಾದರು. ಸಿದ್ಧಲಿಂಗರ ಶಿಷ್ಯ ಹಲಗೆಯಾರ್ಯ ‘ಶೂನ್ಯಸಂಪಾದನೆ’ಯನ್ನು ರಚಿಸಿದ್ದಾರೆಂದು ತಿಳಿಯುತ್ತದೆ. ಇವರು ಪರಮ ವೈರಾಗ್ಯಮೂರ್ತಿಗಳಾಗಿದ್ದರು. ಇವರನ್ನು ಜನರು ನಿರಾಕಾರಶಿವನೆಂದೇ ನಂಬಿ ಆರಾಧಿಸಿದರು. ಇವರು ಅಹಿಂಸಾ ಪರಮೋ ಧರ್ಮಃ ಎಂಬ ತತ್ತ್ವವನ್ನು ಸಮಾಜದಲ್ಲಿ ಆಚರಣೆಗೆ ತಂದವರಾಗಿದ್ದಾರೆ. ಸಿದ್ಧಲಿಂಗರು ಹಂಪೆಯ ವಿರೂಪಾಕ್ಷರಾಯರಿಗೆ ಲಿಂಗಾಯತ ಧರ್ಮವನ್ನು ಬೋಧಿಸಿದವರಾಗಿದ್ದಾರೆ. ‘ಷಟ್ಸ್ಥಲಜ್ಞಾನ ಸಾರಾಮೃತ’ವನ್ನು ಎಡೆಯೂರಿನಲ್ಲಿ ಬರೆದಿರುತ್ತಾರೆ. ಇದರಲ್ಲಿ 701 ವಚನಗಳಿವೆ. ಇವರ ವಿಚಾರವು ಅನೇಕ ಶಿಲಾಶಾಸನಗಳಲ್ಲಿ ಕಂಡುಬರುತ್ತವೆ. ಚಿತ್ರದುರ್ಗದ ಒಂದು ಶಾಸನದಲ್ಲಿ ವಚನವೊಂದರ ಉಲ್ಲೇಖವಿದೆ. ಕನ್ನಡ ಸಾಹಿತ್ಯದಲ್ಲೂ ಇವರ ಪ್ರಭಾವ ಹೇರಳವಾಗಿ ಮೂಡಿಬಂದಿದೆ. ತೊಂಬತ್ತು ವರ್ಷ ಮಹಾ ಶಿವಯೋಗಿ ಲಿಂಗವಂತ ಧರ್ಮದ ಉದ್ಧಾರವನ್ನು ಮಾಡಿದ ಸಿದ್ಧಲಿಂಗಯತಿಗಳು ಬೋಳ ಬಸವೇಶ್ವರರನ್ನು ಅನುಗ್ರಹಿಸಿ ಗುರುಪಟ್ಟ ನೀಡಿದರು. ಕೆಲವೇ ದಿನಗಳಲ್ಲಿ ಲಿಂಗೈಕ್ಯರಾದರು. ಇವರು ಕನ್ನಡ ನಾಡಿನಲ್ಲಿ ಆಗಿಹೋದ ಮಹಾಮಹಿಮರಲ್ಲಿ ಅಗ್ರಗಣ್ಯರಾಗಿದ್ದಾರೆ.

 • 34 ಚೆನ್ನಬಸವಣ್ಣ
 • ಅಂಗದ ಕೊನೆಯಲ್ಲಿ ಲಿಂಗ ಮುಂತಲ್ಲದೆ ಸಂಗವ ಮಾಡನಾ ಶರಣನು, ನಯನದ ಕೊನೆಯಲ್ಲಿ ಲಿಂಗ ಮುಂತಲ್ಲದೆ ಅನ್ಯವ ನೋಡನಾ ಶರಣನು, ಶ್ರೋತ್ರದ ಕೊನೆಯಲ್ಲಿ ಲಿಂಗ ಮುಂತಲ್ಲದೆ ಅನ್ಯವ ಕೇಳನಾ ಶರಣನು, ನಾಸಿಕದ ಕೊನೆಯಲ್ಲಿ ಲಿಂಗ ಮುಂತಲ್ಲದೆ ಪರಿಮಳವ ವೇಧಿಸ ಶರಣನು, ಜಿಹ್ವೆಯ ಕೊನೆಯಲ್ಲಿ ಲಿಂಗ ಮುಂತಲ್ಲದೆ ರುಚಿಯ ನಿಶ್ಚಯಿಸ ಶರಣನು, ಕೂಡಲಚೆನ್ನಸಂಗಾ, ನಿಮ್ಮ ಶರಣ ಸರ್ವಾಂಗಲಿಂಗಿಯಾದ ಕಾರಣ. ಅಂತರಂಗದಲ್ಲಿ ಅರಿವಾದಡೇನಯ್ಯಾ, ಬಹಿರಂಗದಲ್ಲಿ ಕ್ರೀ ಇಲ್ಲದನ್ನಕ್ಕ? ದೇಹವಿಲ್ಲದಿರ್ದಡೆ ಪ್ರಾಣಕ್ಕಾಶ್ರಯವುಂಟೆ? ಕನ್ನಡಿಯಿಲ್ಲದಿರ್ದಡೆ ತನ್ನ ಮುಖವ ಕಾಣಬಹುದೆ? ಸಾಕಾರ ನಿರಾಕಾರ ಏಕೋದೇವ, ನಮ್ಮ ಕೂಡಲ ಚೆನ್ನಸಂಗಯ್ಯನು. ಚೆನ್ನಬಸವಣ್ಣನವರ ಕಾಲ 12ನೇ ಶತಮಾನ. ಇವರ ಜನನ ಮತ್ತು ಬಾಲ್ಯದ ಸುತ್ತಲೂ ಅನೇಕ ಪವಾಡಗಳು ಹುಟ್ಟಿಕೊಂಡಿವೆ. ಹಲವಾರು ಕವಿಗಳು, ಇವರನ್ನು ‘ಷಟ್ಸ್ಥಲ ಸಾರ್ವಭೌಮ’ ಎಂದಿದ್ದಾರೆ. ಇವರ ಬಗ್ಗೆ ಕಾವ್ಯ ರಚಿಸಿದವರಲ್ಲಿ ಪಾಲ್ಕುರಿಕೆಯ ಸೋಮನಾಥ, ಭೀಮಕವಿ, ಲಕ್ಕಣ್ಣ ದಂಡೇಶ, ಚಾಮರಸ, ಸಿಂಗಿರಾಜ, ವಿರೂಪಾಕ್ಷ ಪಂಡಿತ, ಸಿದ್ಧನಂಜೇಶ, ಅದೃಶ ಕವಿ, ಚನ್ನಪ್ಪ ಕವಿ ಮೊದಲಾದವರು ಪ್ರಮುಖರು. ಚೆನ್ನಬಸವಣ್ಣನವರ ಜನನಿ ಅಕ್ಕನಾಗಮ್ಮ. ಇವರ ತಂದೆ ಹೆಸರು ಶಿವಸ್ವಾಮಿ. ಬಸವಣ್ಣನವರು ಇವರ ಸೋದರಮಾವ. ಈ ಮಾತಿಗೆ ಶರಣರ ವಚನಗಳೇ ಸಾಕ್ಷಿಯಾಗಿವೆ. ಚನ್ನಬಸವಣ್ಣನವರು ಕಲ್ಯಾಣದಲ್ಲಿ ಜನಿಸಿದರೆಂದು ಕಾವ್ಯಗಳಿಂದ ತಿಳಿದುಬರುತ್ತದೆ. ಇವರಿಗೆ ಗುರುಕಾರುಣ್ಯವನ್ನು ಅನುಗ್ರಹಿಸಿದ ಪುಣ್ಯವಂತ ಬಸವಣ್ಣನವರು. ಈ ಮಾತನ್ನು ಚನ್ನಬಸವಣ್ಣನವರು ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಇವರ ಸ್ಥಾನ ಪ್ರಮುಖವಾದುದು. ಕಲ್ಯಾಣದ ಹಣತೆಯಲ್ಲಿ ಬಸವಣ್ಣ ತೈಲವಾದರೆ ಚನ್ನಬಸವಣ್ಣನವರು ಬತ್ತಿಯಾದರು, ಪ್ರಭುದೇವರು ಜ್ಯೋತಿಯಾದರು. ಇಷ್ಟಲಿಂಗದಿಂದ ಪ್ರಾಣಲಿಂಗ ಪಡೆಯಬೇಕು. ಇಷ್ಟಲಿಂಗದಲ್ಲಿ ನಿಷ್ಠೆ ಅಗತ್ಯ; ಅದು ಮಾಸಿದರೆ ಪ್ರಾಣಲಿಂಗ ಕಾಣದು ಎಂಬ ವಿಚಾರವನ್ನು ಇವರ ವಚನಗಳಿಂದ ತಿಳಿಯಬಹುದಾಗಿದೆ. ಸಿದ್ಧಾಂತದ ಗೂಢವಾದ ವಿಚಾರಗಳನ್ನು ಸೂತ್ರ ವಾಕ್ಯಗಳಲ್ಲಿ ಹೇಳುವುದರಲ್ಲಿ ಚೆನ್ನಬಸವಣ್ಣನವರು ಸಿದ್ಧಹಸ್ತರು. ಇವರ ವಚನಗಳಲ್ಲಿ ಲೋಕೋಕ್ತಿಗಳು ವಿಪುಲ ಸಂಖ್ಯೆಯಲ್ಲಿ ದೂರೆಯುತ್ತವೆ. ಚೆನ್ನಬಸವಣ್ಣನವರು ಷಟ್ಸ್ಥಲ ವಚನಗಳನಲ್ಲದೆ, ಕರಣಹಸಿಗೆ, ಮಿಶ್ರಾರ್ಪಣ, ಹಿರಿಯ ಮಂತ್ರಗೋಪ್ಯ, ಪದಮಂತ್ರಗೋಪ್ಯ, ಸಕೀಲ ವಚನಗಳನ್ನು ರಚಿಸಿದ್ದಾರೆ. ಇವರು ದಾರ್ಶನಿಕ, ಕವಿ, ವಿಮರ್ಶಕರಾಗಿದ್ದಾರೆ. ಇವರು ಬಸವಣ್ಣನವರ ನಿಷ್ಠಾವಂತ ಶಿಷ್ಯರಾಗಿ, ಸೇವಕರಾಗಿ, ಸೋದರಳಿಯರಾಗಿ, ಕಲ್ಯಾಣದ ಕ್ರಾಂತಿಯಲ್ಲಿ ಪ್ರಜ್ವಲಿಸಿದ್ದಾರೆ. ಕಲ್ಯಾಣದ ಕ್ರಾಂತಿಯ ಸಂದರ್ಭದಲ್ಲಿ ಚನ್ನಬಸವಣ್ಣನವರು ತಮ್ಮ ತಾಯಿ ಅಕ್ಕನಾಗಮ್ಮ, ಮಡಿವಾಳ ಮಾಚಯ್ಯ, ರುದ್ರಮುನಿ. ಕಿನ್ನರಿ ಬೊಮ್ಮಯ್ಯ, ರೇಚಣ್ಣ ಮೊದಲಾದ ಶರಣರ ಸಹಾಯದಿಂದ ಶರಣರನ್ನು ರಕ್ಷಿಸಿದಲ್ಲದೆ, ವಚನ ಸಾಹಿತ್ಯದ ತಾಳೆಗರಿಯ ಕಟ್ಟುಗಳನ್ನು ಸಂರಕ್ಷಿಸುವಲ್ಲಿ ಇವರು ಯಶಸ್ವಿಯಾದರು. ಉಳುವಿಯಲ್ಲಿ ಚೆನ್ನಬಸವಣ್ಣನವರು ಘೋರ ಅರಣ್ಯದಲ್ಲಿ ವಾಸಿಸಿದ್ದ ಗವಿಗಳು ಇಂದಿಗೂ ಸಾಕ್ಷಿಯಾಗಿವೆ. ಈ ಗವಿಗಳನ್ನು ನೋಡಿದ ಎಲ್ಲರ ಎದೆಗಳು ಝಲ್ಲೆಂದೆನಿಸುತ್ತವೆ. ಕಿರಿಯ ವಯಸ್ಸಿನಲ್ಲಿಯೇ ಹಿರಿಯ ಜ್ಞಾನವನ್ನ ಸಂಪಾದಿಸಿ, “ಚಿನ್ಮಯ ಜ್ಞಾನಿ” ಎಂಬ ಬಿರುದನ್ನು ಪಡೆದಿದ್ದರು. ಇವರು ಜಗತ್ತಿಗೆ ಆಧ್ಯಾತ್ಮದ ಜ್ಞಾನವನ್ನು ನೀಡಿ, ಕಿರಿಯ ವಯಸ್ಸಿನಲ್ಲಿಯೇ ಕ್ರಿ.ಶ.1168 ರಲ್ಲಿ ಉಳುವಿಯಲ್ಲಿ ಲಿಂಗೈಕ್ಯರಾಗುತ್ತಾರೆ. ಕಣ್ಣು ಕೋರೈಸುವಂತಹ ಪ್ರತಿಭೆ ಚೆನ್ನಬಸವಣ್ಣನವರದ್ದು. ಅವರ ಮಾತು ಸರ್ವಾಂಗಲಿಂಗಿ, ಸಂಸಾರ ನಿಸ್ಸಂಗಿ; ಧೀರ; ಶುದ್ಧ-ಸಿದ್ಧ-ಸಮೃದ್ಧ ಸಮಾಜಸ್ಥಾಪಕರು. ಶಿವತತ್ವಾನುಭವ ಸಂಸದ್ಧ, ಅವಿರಳ ಜ್ಞಾನಿ. ಅವರ ವ್ಯಕ್ತಿತ್ವದ ಔನ್ನತ್ಯ ಹಾಗೂ ಭೌಮತ್ವವನ್ನು ಬಣ್ಣಿಸಲು ಬಯಲು ಬಾಯ್ದೆರೆಯಬೇಕಾಗುತ್ತದೆ.

 • 35 ಚಂದಿಮರಸ
 • ಇಂದ್ರಿಯಂಗಳೊಡಗೂಡಿ ಬಹಿರ್ಮುಖನಾಗಿ ವಿಷಯಂಗಳಲ್ಲಿ ಆಸಕ್ತಿಯುಳ್ಳವನು ಅಂತರ್ಮುಖ ರೂಪನಪ್ಪ ಪ್ರತ್ಯಗಾತ್ಮನನೆಂತೂ ಕಾಣಲರಿಯನು. ಮೇರುಗಿರಿಯ ಕಂಡೆಹೆನೆಂದು ತೆಂಕಮುಖನಾಗಿ ನಡೆದು ಮೇರುಗಿರಿಯ ಕಾಣಲರಿಯನೆಂತಂತೆ. ಸಕಲ ವಿಷಯಾಸಕ್ತಿಯ ಬಿಟ್ಟು ನಿರ್ವಿಷಯಿಯಾಗಿ ನಿಜದಲ್ಲಿ ನಿಂದ ನಿಲವು ನೀನೇ, ಸಿಮ್ಮಲಿಗೆಯ ಚೆನ್ನರಾಮಾ. ಏನೆಂದೆನಲಿಲ್ಲದ ಮಹಾಘನವು ತನ್ನ ಲೀಲೆಯಿಂದ ತಾನೇ ಸ್ವಯಂಭುಲಿಂಗವಾಯಿತ್ತು! ಆ ಲಿಂಗದಿಂದಾಯಿತ್ತು ಶಿವಶಕ್ತ್ಯಾತ್ಮಕ, ಆ ಶಿವಶಕ್ತ್ಯಾತ್ಮಕದಿಂದಾದುದು ಆತ್ಮ, ಆತ್ಮನಿಂದಾದುದು ಆಕಾಶ, ಆಕಾಶದಿಂದಾದುದು ವಾಯು ವಾಯುವಿನಿಂದಾದುದು ಅಗ್ನಿ ಅಗ್ನಿಯಿಂದಾದುದು ಅಪ್ಪು, ಅಪ್ಪುವಿನಿಂದಾದುದು ಪೃಥ್ವಿ, ಪೃಥ್ವಿಯಿಂದಾದುದು ಸಕಲಜೀವವೆಲ್ಲಾ. ಇವೆಲ್ಲ ನಿಮ್ಮ ನೆನಹು ಮಾತ್ರದಿಂದಾದವು ಸಿಮ್ಮಲಗೆಯ ಚೆನ್ನರಾಮಾ. ಚಂದಿಮರಸರು ಬಸವಣ್ಣನವರ ಸಮಕಾಲೀನವರು. ಇವರ 160 ವಚನಗಳು ದೊರೆಕಿವೆ. ಇವರ ವಚನಾಂಕಿತ “ಸಿಮ್ಮಲಿಗೆಯ ಚೆನ್ನರಾಮಾ”. ಆತ್ಮಜ್ಞಾನದ ವಿಷಯವು ಇವರ ವಚನಗಳಲ್ಲಿ ಕಂಡುಬರುತ್ತದೆ. ಇವರ ಗುರು ನಿಜಗುಣ. ಇವರಿಂದ ದೀಕ್ಷೆ ಪಡೆದು ಬಸವ ಧರ್ಮದ ಸಂಸ್ಕಾರವನ್ನು ಪಡೆಯುತ್ತಾರೆ. ಆನಂತರ ವಚನಗಳನ್ನು ಬರೆದಿದ್ದಾರೆಂದು ತಿಳಿದುಬರುತ್ತದೆ. ಕೃಷ್ಣಾನದಿಯ ದಡದಲ್ಲಿರುವ ‘ಚಿಮ್ಮಲಿಗೆ’ ಇವರ ಊರಾಗಿದೆ. ಈಗ ಈ ಊರಿನಲ್ಲಿ ಇವರ ಸ್ಮರಣೆಗಾಗಿ ಪ್ರಾರ್ಥನಾ ಮಂದಿರವನ್ನು ಕಟ್ಟಿಸಲಾಗಿದೆ. ಅರಿವು, ಗುರು-ಶಿಷ್ಯರ ಸಂಬಂಧ, ಇಷ್ಟಲಿಂಗ ದೀಕ್ಷೆ, ದೈವ, ಮಾಯೆ, ಅಜ್ಞಾನ ಈ ಮುಂತಾದ ವಿಷಯಗಳನ್ನು ಚಂದಿಮರರು ತಮ್ಮ ವಚನಗಳಲ್ಲಿ ಪ್ರಸ್ತಾಪಿಸಿದ್ದಾರೆ. ಸರಳವಾದ ಇವರ ವಚನಗಳು ತುಂಬಾ ಪರಿಣಾಮಕಾರಿಯಾಗಿವೆ. ತಮ್ಮ ಅರಿವೇ ತಮಗೆ ಗುರು. ಈ ಅರಿವನ್ನು ಪ್ರತಿಯೊಬ್ಬರು ಜಾಗೃತಗೊಳಿಸಿ ಬಾಳಬೇಕೆಂದು ಇವರ ವಚನಗಳಲ್ಲಿ ಮೂಡಿಬರುತ್ತವೆ. ಮನುಷ್ಯನಲ್ಲೇ ದೇವರಿದ್ದಾನೆ. ಸತ್ಯವನ್ನರಿತು, ಸಾಧನೆ ಮಾಡಿದರೆ ತಾನೇ ದೇವನಾಗುವನು. ಮಾನವನು ಶಿವಯೋಗ ಸಾಧನೆ ಮಾಡುತ್ತಾ ಕೊನೆಗೆ ಮಹಾಂತವನ್ನು ಹೊಂದಬಹುದು ಎಂದು ತಮ್ಮ ವಚನದಲ್ಲಿ ತಿಳಿಸಿದ್ದಾರೆ. ಇವರು ವಾಸ್ತವವಾದಿ, ಬದುಕನ್ನು ಪ್ರೀತಿಸಿದವರು, ಇರುವಷ್ಟು ದಿನ ಚೆನ್ನಾಗಿ ಭಕ್ತಿಯಿಂದ ಗುರು ಲಿಂಗ ಜಂಗಮ ಸೇವೆ ಮಾಡುತ್ತಾ, ಅವರ ತತ್ತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಜನರಿಗೆ ಕರೆ ನೀಡಿದವರಾಗಿದ್ದಾರೆ. ಸದಾಚಾರ, ಸದ್ಗುಣಿ, ಸಂಸಾರ ಮತ್ತು ಪಾರಮಾರ್ಥ ಎರಡನ್ನು ಸಮನಾಗಿ ಸ್ವೀಕರಿಸಿದವರು. ಸಂಸಾರಿಯಾಗಿದ್ದುಕೊಂಡೇ ಶರಣರಾಗಬಹುದು, ಮುಕ್ತಿಯನ್ನು ಪಡೆಯಬಹುದೆಂದು ತಮ್ಮ ಅನೇಕ ವಚನಗಳಲ್ಲಿ ತಿಳಿಸಿದ್ದಾರೆ. ಸಮಾಜದ ಓರೆ-ಕೋರೆಗಳನ್ನು ತಮ್ಮ ವಚನಗಳಲ್ಲಿ ಸೆರೆಹಿಡಿದಿದ್ದಾರೆ. ಇವರು ಮಹಾಮಹಿಮ, ವೀರ ಶಿವಶರಣರಾಗಿದ್ದು ಶರಣ ತತ್ತ್ವದ ಧ್ರುವತಾರೆಯಾಗಿ ಮಿಂಚಿದ್ದಾರೆ.

 • 36 ಡಕ್ಕೆಯ ಮಾರಯ್ಯ (ಡಕ್ಕೆಯ ಬೊಮ್ಮಣ್ಣ)
 • ಶಿಲೆ ಭಾವ ಹಿಂಗಿ ಕುರುಹಾಯಿತ್ತು, ಕಾರುಕನ ಕೈಯಲ್ಲಿ. ಪಾಷಾಣ ಭಾವ ಹಿಂಗಿ ಕಳೆಯಾಯಿತ್ತು, ಆಚಾರ್ಯನ ಕೈಯಲ್ಲಿ. ಕಳೆ ನೆಲೆಯಾಯಿತ್ತು, ಪೂಜಿಸುವಾತನ ಚಿತ್ತದಲ್ಲಿ. ಚಿತ್ತ ವಸ್ತುವಿನಲ್ಲಿ ಬೆರೆದು ಕಾಲಾಂತಕ ಭೀಮೇಶ್ವರಲಿಂಗವಾಯಿತ್ತು. ಕೈ ಕೈದ ಹಿಡಿದು ಕಾದುವಾಗ, ಕೈದೊ ಕೈಯೊ ಮನವೊ? ಅಂಗ ಲಿಂಗ ಸಂಬಂಧದಲ್ಲಿ ಸಂಬಂಧಿಸುವಾಗ, ಅಂಗವೊ ಲಿಂಗವೊ ಆತ್ಮನೋ? ಈ ಮೂರಂಗವನರಿದಲ್ಲಿ ಕಾಲಾಂತಕ ಭೀಮೇಶ್ವರಲಿಂಗನರಿದುದು. ಢಕ್ಕೆಯ ಮಾರಯ್ಯ ಮಹಾ ಶಿವಶರಣರು. ಇವರು ಬಸವಾದಿ ಶಿವಶರಣರ ಸಮಕಾಲೀನರು. ಇವರ ಕಾಲ ಕ್ರಿ.ಶ. 1160. ಢಕ್ಕೆಯ ಮಾರಯ್ಯನವರಿಗೆ ಢಕ್ಕೆಯ ಬೊಮ್ಮಣ್ಣನೆಂಬ ಹೆಸರು ಇರುವ ಬಗ್ಗೆ ಸಾಕಷ್ಟು ಮಾಹಿತಿಗಳು ಲಭ್ಯವಾಗಿವೆ. ಇವರ ಅಂಕಿತ “ಕಾಲಾಂತಕ ಭೀಮೇಶ್ವರಲಿಂಗ”. ಇವರ 89 ವಚನಗಳು ಲಭ್ಯವಾಗಿವೆ. ಇವರ ಬಗ್ಗೆ ಪ್ರೌಢರಾಯನ ಕಾವ್ಯದಲ್ಲಿ ಸಾಕಷ್ಟು ಮಾಹಿತಿಗಳಿವೆ. ಢಕ್ಕೆಯನ್ನು ಬಾರಿಸುತ್ತಾ ಪರಮಾತ್ಮನ ಕೃಪೆಯನ್ನು ಪಡೆದರು. ಡಕ್ಕೆ ಬಾರಿಸುವುದೇ ಇವರ ಕಾಯಕವೆಂದು ತಿಳಿಯ ಬಹುದಾಗಿದೆ. ಢಕ್ಕೆಯ ಮಾರಯ್ಯ ಷಟಸ್ಥಲಗಳನ್ನರಿತ ಶಿವಶರಣರಾಗಿದ್ದು, ಇಹಪರಗಳೆರಡನ್ನೂ ಸಾಧಿಸಿ ಹೊರಟ ಶ್ರೇಷ್ಠ ಶಿವಭಕ್ತರಾಗಿದ್ದಾರೆ. ಇವರು ಮಾಯಾಗುಣವೆಂಬ ಮಾರಿಯನ್ನು ಹಿಡಿದವರು. ರಾಜಸ ತಾಮಸವೆಂಬ ಬಾಳ ಬಟ್ಟಲನ್ನು ಕೈಯಲ್ಲಿಟ್ಟುಕೊಂಡು ಪ್ರಳಯ ಸಂಹಾರವೆಂಬ ಬಳೆಯನ್ನು ಕೈಯಲ್ಲಿ ತೊಟ್ಟುಕೊಂಡು ಅಂಗದ ಮನೆಯ ಮುಂದೆ ಬಂದು ನಿಂದ ಶರಣರಾಗಿದ್ದರು. ಮಾರಿಯು ಅರಿವನ್ನು ಮರೆದವರ ಮನೆಯಲ್ಲಿ ಮಾರಿಯಾಗುತ್ತಾಳೆ. ಅರಿದವರ ಮನೆಯಲ್ಲಿ ಸ್ವಯೋ ಜ್ಯೋತಿಯಾಗಿ ಮೆರೆಯುತ್ತಾಳೆ ಎಂದು ಹೇಳಿ ಎಚ್ಚರಿಸುವ ಕಾಯಕದವರು. ಢಕ್ಕೆಯ ಮಾರಯ್ಯನವರ ಮಾತುಗಳು ನೇರವಾಗಿ ಮನಮುಟ್ಟುತ್ತವೆ. ತನ್ನ ನಿರೂಪಣೆಗೆ “ಬಣ್ಣದ ಮರೆಯ ಫಲದಂತೆ”, “ಬಣ್ಣದ ಮರೆಯ ಬಂಗಾರದಂತೆ” “ಕೈ ಕೈದ ಹಿಡಿದು ಕಾದುವಾಗ”, “ಅಲಗು ಜಾರೆ ಬರೆ ತಾಗಿದಂತೆ”, ಮೊದಲಾದ ಉಪಮೆಗಳನ್ನು ಬಳಸಿಕೊಂಡಿದ್ದಾರೆ. ಸಾಧಾರಣ ವಚನಗಳಲ್ಲದೆ ಬೆಡಗಿನ ವಚನಗಳನ್ನೂ ರಚಿಸಿ ತಮ್ಮ ಜ್ಞಾನದ ಉನ್ನತ ಮಟ್ಟವನ್ನು ತೋರ್ಪಡಿಸಿದ್ದಾರೆ. ಇವರ ವಚನಗಳಲ್ಲಿ ಬಿಗಿಯಿದೆ, ಬನಿಯಿದೆ. ಮೇಲಾಗಿ ತದಾತ್ಮ್ಯ ಭಾವವಿದೆ. ತನ್ನ ತನು ಮನಗಳನ್ನು ಷಟ್ಸ್ಥಲದಲ್ಲಿಯೇ ಸಮರ್ಪಿಸಿದ ಪೂರ್ಣತೆಯನ್ನು ಈ ವಚನಗಳಲ್ಲಿ ಕಾಣಬಹುದಾಗಿದೆ. ಮಾರಯ್ಯನವರು ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಪ್ರಯತ್ನಿಸಿರುವುದನ್ನು ಇವರ ವಚನಗಳಲ್ಲಿ ಕಾಣಬಹುದಾಗಿದೆ. “ಸತಿಯ ಗುಣವ ಪತಿ ನೋಡಬೇಕಲ್ಲದೆ, ಪತಿಯ ಗುಣವ ಸತಿ ನೋಡಬಹುದೆ ಎಂಬರು. ಸತಿಯಿಂದ ಬಂದ ಸೋಂಕು ಪತಿಗೆ ಕೇಡಲ್ಲವೇ? ಪತಿಯಿಂದ ಬಂದ ಸೋಂಕು ಸತಿಯ ಕೇಡಲ್ಲವೆ? ಒಂದಂಗದ ಕಣ್ಣು ಉಭಯದಲ್ಲಿ ಒಂದು ಹಿಂಗಲಿಕ್ಕೆ ಭಂಗವಾರಿಗೆಂಬುದ ತಿಳಿದಲ್ಲಿಯೆ ಕಾಲಾಂತಕ ಭೀಮೇಶ್ವರಲಿಂಗಕ್ಕೆ ಸಲೆ ಸಂದಿತ್ತು” ಎಂದು ಹೇಳುವಲ್ಲಿ ಸ್ತ್ರೀಯರ ಬಗೆಗೆ ಪುರುಷರು ತಾಳಿರುವ ಮನೋಭಾವವನ್ನು ಮಾರ್ಮಿಕವಾಗಿ ಮೂದಲಿಸುತ್ತಾರೆ. ಗುಣವಂತೆ ಸ್ತ್ರೀ ಆಗಬೇಕು ಎನ್ನುವ ವ್ಯಕ್ತಿ ತಾನೂ ಅಂತಹ ಗುಣವಂತನಾಗಿರಬೇಕೆಂಬ ಬಗೆಗೆ ಮೌನ ತಾಳುವುದನ್ನು ಮಾರಯ್ಯ ಸಹಿಸುವುದಿಲ್ಲ. ಯಾವ ವ್ಯಕ್ತಿಯಾದರೂ “ಸಜ್ಜನ ಶರಣರಲ್ಲಿ ಭಕ್ತಿ”ಯನ್ನು ಅಸಜ್ಜನ ಕೆಟ್ಟದಾಗಿ ನಡೆಯುವವರಿಗೆ ಧಿಕ್ಕಾರವನ್ನು ತಳೆಯಬೇಕೆಂಬುದು ಅವರ ನಿಲುವಾಗಿದೆ. “ಭಕ್ತಿಸ್ಥಲ ಬಸವಣ್ಣನವರಿಗಾಯಿತ್ತು, ಮಹೇಶ್ವರ ಸ್ಥಲ ಮಡಿವಾಳ ಮಾಚಿದೇವರಿಗಾಯಿತು. ಪ್ರಸಾದಿ ಸ್ಥಲ ಚೆನ್ನಬಸವಣ್ಣನವರಿಗಾಯಿತು, ಪ್ರಾಣಲಿಂಗಸ್ಥಲ ಚಂದಯ್ಯನವರಿಗಾಯಿತು, ಶರಣಸ್ಥಲ ಘಟ್ಟಿವಾಳಯ್ಯನವರಿಗಾಯಿತು. ಐಕ್ಯಸ್ಥಲ ಅಜಗಣ್ಣನವರಿಗಾಯಿತು” ಎಂದು ಹೇಳಿ ಆರು ಸ್ಥಲಗಳ ನಿರ್ದೇಶನವನ್ನು ಆರು ಜನ ಶಿವಶರಣರಲ್ಲಿ ಕಂಡಿದ್ದಾರೆ. ಶರಣ ಸತಿ ಲಿಂಗಪತಿಯಾಗಿ ಕಾಯಗುಣ ಪಡೆದು, ಆತ್ಮ ಸತಿ ಅರಿವು ಪುರುಷನಾಗಿ ಜೀವ ಗುಣವನ್ನು ಹೊಂದಿ, ಕಾಯಕ ಶುದ್ಧವಾಗಿ ಕಾಲಾಂತಕ ಭೀಮೇಶ್ವರ ಲಿಂಗಕ್ಕೆ ಅರ್ಪಿತರಾಗುತ್ತಾರೆ.

 • 37 ಡೋಹರ ಕಕ್ಕಯ್ಯ
 • ಎನ್ನ ಕಷ್ಟಕುಲದ ಸೂತಕ ನಿಮ್ಮ ಹಸ್ತ ಮುಟ್ಟಿದಲ್ಲಿ ಹೋಯಿತ್ತು! ಶುಕ್ಲ ಶೋಣಿತದಿಂದಲಾದ ಸೂತಕ ನಿಮ್ಮ ಮುಟ್ಟಲೊಡನೆ ಬಯಲಾಯಿತ್ತು! ತಟ್ಟಿದ ಮುಟ್ಟಿದ ಸುಖಂಗಳನೆಲ್ಲವ ಲಿಂಗಮುಖಕ್ಕೆ ಅರ್ಪಿಸಿದೆನಾಗಿ ಎನ್ನ ಪಂಚೇಂದ್ರಯಂಗಳು ಬಯಲಾದುವು! ಎನ್ನ ಅಂತರಂಗದಲ್ಲಿ ಜ್ಞಾನಜ್ಯೋತಿಯೆಡೆಗೊಂಡುದಾಗಿ ಒಳಗೂ ಬಯಲಾಯಿತ್ತು. ಸಂಸಾರ ಸಂಗದ ಅವಸ್ಥೆಯು ಮೀರಿದ ಕ್ರೀಯಲ್ಲಿ ತರಹವಾಯಿತ್ತಾಗಿ ಬಹಿರಂಗ ಬಯಲಾಯಿತ್ತು! ಅಭಿನವ ಮಲ್ಲಿಕಾರ್ಜುನಾ, ನಿಮ್ಮ ಮುಟ್ಟಿದ ಕಾರಣ ನಾನೂ ಬಯಲಾದೆ! [ಎನ್ನ ಕಷ್ಟ]ಕುಲದಲ್ಲಿ ಹುಟ್ಟಿಸಿದೆಯಯ್ಯಾ, ಎಲೆ ಲಿಂಗ ತಂದೆ. ಕೆಟ್ಟೆನಯ್ಯಾ, ನಿಮ್ಮ [ಮುಟ್ಟದಿ]ಹೆನೆಂದು. ಎನ್ನ ಕೈ ಮುಟ್ಟದಿರ್ದಡೆ ಮನ ಮುಟ್ಟಲಾಗದೆ? ಅಭಿನವ ಮಲ್ಲಿಕಾರ್ಜುನಾ. ಡೋಹರ ಎಂದರೆ ಚತುವರ್ಣಂಗಳಲ್ಲಿ ಅತೀ ಕೀಳು ಮಟ್ಟದ ಮನುಷ್ಯ ಹೊಲೆಯ ಎಂಬ ಅರ್ಥವಿದೆ. ಕಕ್ಕಯ್ಯ ಕೀಳುಜಾತಿಯವರಾದರೂ ಶಿವಶರಣನಾಗಿ ಮೇಲ್ವರ್ಗದ ಜನರಿಗಿಂತಲೂ ಮಿಗಿಲಾದ ಸಾಧನೆ ಮಾಡಿದ್ದಾರೆ. ಬಸವಣ್ಣನವರ ದಿವ್ಯಪ್ರಭೆ ಇಂತಹ ಅನೇಕ ಶರಣರನ್ನು ಪ್ರಜ್ವಲಿಸುವಂತೆ ಮಾಡಿದೆ. ಮಾಳವ ದೇಶದಲ್ಲಿ ಹುಟ್ಟಿದ ಡೋಹರ ಕಕ್ಕಯ್ಯ ಬಸವಣ್ಣನವರ ಭಕ್ತಿಮಾರ್ಗಕ್ಕೆ ಆಕರ್ಷಣೆಗೆ ಸಿಕ್ಕಿಕೊಂಡು ಕನ್ನಡನಾಡಿಗೆ ಬಂದು ಶರಣಧರ್ಮವನ್ನು ಸ್ವೀಕರಿಸಿದರು. ಶ್ರೇಷ್ಠ ಶಿವಾನುಭಾವಿಯಾಗಿ ಬಸವಣ್ಣನವರ ಪ್ರೀತಿಗೆ ಪಾತ್ರರಾದರು. ಬಸವಣ್ಣನವರೇ ತಮ್ಮ ವಚನಗಳಲ್ಲಿ ಕಕ್ಕಯ್ಯನವರ ಹಿರಿಮೆಯನ್ನು ಕೊಂಡಾಡಿದ್ದಾರೆ. ತೊಗಲನ್ನು ಹದ ಮಾಡುವ ಕಾಯಕ ಕಕ್ಕಯ್ಯನವರದು. ಕಕ್ಕಯ್ಯ ದೇವಮಾನವರಾಗಿ ಶರಣಶ್ರೇಷ್ಠರಾಗಿ ಬಾಳನ್ನು ಬೆಳಗಿಸಿಕೊಂಡವರು. ಬಿಜ್ಜಳರಾಜನ ಅಳಿಯನೊಂದಿಗೆ ನಡೆದ ಭೀಕರ ಕಾಳಗದಲ್ಲಿ ಕಕ್ಕಯ್ಯ ಉಕ್ಕಿನ ವೀರನಂತೆ ಯುದ್ಧ ಮಾಡಿ ಶಿವಶರಣರ ರಕ್ಷಾಮಣಿಯಾಗಿ ಕಾಣಿಸಿಕೊಂಡರು. ಕಕ್ಕಯ್ಯ ಕಕ್ಕೇರಿಯಲ್ಲಿ ಲಿಂಗೈಕ್ಯರಾಗಿದ್ದಿರಬಹುದೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಚೆನ್ನಬಸವಣ್ಣ, ಅಕ್ಕನಾಗಮ್ಮ ಮತ್ತು ಇತರ ಶರಣರನ್ನು ಗಂಡಾಂತರದಿಂದ ಪಾರುಮಾಡಿ ತಾವು ಮೃತ್ಯುವಿಗೆ ಎದುರಾಗಿ ನಿಂತು ಮೃತ್ಯುವನ್ನು ಗೆದ್ದ ಕಕ್ಕಯ್ಯನವರ ಕೀರ್ತಿ ಅಜರಾಮರವಾಗಿದೆ. ಇಂತಹ ಮಹಾಕಲಿ ವೀರಶರಣರನ್ನು ಕನ್ನಡ ಸಾಹಿತ್ಯ ಕ್ಷೇತ್ರದ ಅನೇಕ ಕವಿಗಳು ತುಂಬುಹೃದಯದಿಂದ ಹೊಗಳಿದ್ದಾರೆ. ಇವರ ವಚನಗಳ ಅಂಕಿತ “ಅಭಿನವ ಮಲ್ಲಿಕಾರ್ಜುನ” ಮತ್ತು “ಅಭಿನವ ಚೆನ್ನಮಲ್ಲಿಕಾರ್ಜುನ". ಕಲ್ಯಾಣದಲ್ಲಿ ಕೂಡಿದ ಮಹಾನುಭಾವಿಗಳಾದ ಶಿವಶರಣರ ಸಂದೋಹದಲ್ಲಿ ಉಜ್ವಲನ ತಾರೆಯಂತಿರುವ ಮಹಾನುಭಾವಿ ಕಕ್ಕಯ್ಯನವರಾಗಿದ್ದರು. ಈ ಡೋಹರ ಕಕ್ಕಯ್ಯನವರ ಜೀವನ ಚರಿತ್ರೆ ಗಂಗಾಜಲದಂತೆ, ಹಿಮಾಚಲದಂತೆ ಉನ್ನತವಾದುದು ಶ್ರೇಷ್ಠವಾದುದು. ಮಾನವರಲ್ಲಿ ದೇವನಾಗಿ ದೇವತ್ವಕ್ಕೇರಿದ ಹಿರಿಯಯ್ಯ ಡೋಹರಕಕ್ಕಯ್ಯ. ಭಕ್ತಿ ಬಸವಣ್ಣನೊಬ್ಬರಿಗೇ ಅಲ್ಲದೆ ಶಿವಶರಣರಿಗೆಲ್ಲರಿಗೂ ಹಿರಿಯಯ್ಯ, ದೊಡ್ಡಯ್ಯ. ಬಸವಪುರಾಣದ ಉಲ್ಲೇಖದಂತೆ, ಕಕ್ಕಯ್ಯನವರೂ ವಚನಕಾರರೆಂಬುದರಲ್ಲಿ ಸಂದೇಹವಿಲ್ಲ. “ಹಿರಿಯಯ್ಯ ಶ್ವಪಚಯ್ಯ, ಕಿರಿಯಯ್ಯ ಡೋಹಾರ ಕಕ್ಕಯ್ಯ, ಅಯ್ಯಗಳಯ್ಯನು ನಮ್ಮ ಮಾದಾರ ಚೆನ್ನಯ್ಯನು ಕೂಡಲಸಂಗಮದೇವಾ ನಿಮ್ಮ ಶರಣರೊಲಿದೆನ್ನ ಸಲುವಾಗಿ” ಎನ್ನುವ ಬಸವ ಅಪರಿಮಿತವಾದ ಭಕ್ತಿಯ ವಚನದಲ್ಲಿ ಕಕ್ಕಯ್ಯ, ಶ್ವಪಚಯ್ಯ ಮತ್ತು ಚೆನ್ನಯ್ಯರಿಗಿಂತಲೂ ಕಿರಿಯನೆಂಬುದು ತಿಳಿಯುತ್ತದೆ. ಸಂಬೋಳಿ ನಾಗಿದೇವರ ಮಹಿಮೆಯನ್ನು ಬಿಜ್ಜಳ ರಾಜನಿಗೆ ತಿಳಿಯ ಹೇಳುವ ಸಂದರ್ಭದಲ್ಲಿ ಬಸವಣ್ಣನವರು ಕಕ್ಕಯ್ಯನವರ ಕಥೆಯನ್ನು ಅವರಿಗೆ ಹೇಳಿ ಶಿವಭಕ್ತರು ಮಹಿಮಾಶಾಲಿಗಳೆಂದು ಪ್ರತಿಷ್ಠಿಸಿದಂತೆ ಪಾಲ್ಕುರಿಕೆ ಸೋಮನಾಥನವರ ಪಂಡಿತಾರಾಧ್ಯಚರಿತ್ರೆಯಿಂದ ತಿಳಿದು ಬರುತ್ತದೆ. ಶಿವಶರಣರು ವ್ಯಕ್ತಿಗಿಂತ, ಜಾತಿಗಿಂತ, ಕಾಯಕಕ್ಕೆ ಮಹತ್ವ ಕೊಟ್ಟಿದ್ದಾರೆ. ಕಾಯಕದಿಂದ ಕೈಲಾಸ ಸಾಧ್ಯವೆಂದು ತೋರಿಸಿ ಕೊಟ್ಟಿದ್ದಾರೆ. ಅಂತಹ ಶರಣರಲ್ಲಿ ಒಬ್ಬರಾದ ಡೋಹರ ಕಕ್ಕಯ್ಯ ಕಾಯಕದಲ್ಲಿಯೇ ಕೈಲಾಸವನ್ನು ಕಂಡವರಾಗಿದ್ದಾರೆ.

 • 38 ದಯಾಮೂರ್ತಿ ದಸರಯ್ಯನವರು
 • ಪೃಥ್ವಿಯ ಅಂಶಿಕ ಅಂಗವಾಗಿ, ಅಪ್ಪುವಿನ ಅಂಶಿಕ ಶುಕ್ಲ ಶೋಣಿತವಾಗಿ, ತೇಜದ ಅಂಶಿಕ ಹಸಿವಾಗಿ, ವಾಯುವಿನಂಶಿಕ ಜೀವಾತ್ಮನಾಗಿ, ಆಕಾಶದ ಅಂಶಿಕ ಬ್ರಹ್ಮರಂಧ್ರವಾಗಿ, ಇಂತೀ ಐದರ ಗುಣವುಳ್ಳನ್ನಕ್ಕ ಗೆಲ್ಲ ಸೋಲ ಬಿಡದು. ಇವನಲ್ಲಿಗಲ್ಲಿಯೆ ಇಂಬಿಟ್ಟು ಇಂತೀ ಲಲ್ಲೆಯ ಬಿಡಿಸಯ್ಯಾ. ಎನ್ನಲ್ಲಿ ನಿಮಗೆ ಖುಲ್ಲತನ ಬೇಡ. ಅದು ಎನ್ನ ಸೋಂಕಲ್ಲ, ಅದು ನಿನ್ನ ಸೋಂಕು ದಸರೇಶ್ವರಲಿಂಗಾ. ನುಡಿಯಲ್ಲಿ ಕಿಂಕರತ್ವವನರಿದು, ಕರವ ಬೀಸುವಲ್ಲಿ ತುಷಾರ ಕೀಟವನರಿದು ಅಡಿಯಿಡುವಲ್ಲಿ ಪೊಡವಿಯಲ್ಲಿ ಹೊರಹೊಮ್ಮಿದ ಜೀವನ ಚೇತನಾದಿಗಳನರಿದು ಮತ್ತೆ ಗಿಡವ ಹಿಡಿವಲ್ಲಿ, ಮತ್ತೊಂದು ಒಡಗೂಡುವಲ್ಲಿ ಒಡಗೂಡಿ ಬಿಡುವಲ್ಲಿ ಸರ್ವ ದಯಕ್ಕೆ ಪಡಿಪುಚ್ಚವಿಲ್ಲದಿರಬೇಕು! ಇಂತೀ ಸಡಗರದ ಚಿತ್ತ ದಸರೇಶ್ವರ ಲಿಂಗವನೊಡಗೂಡುವ ಭಕ್ತಿ. ಕನ್ನಡ ನಾಡಿನ ಶರಣರ ಸಮೂಹದಲ್ಲಿ ದಸರಯ್ಯನವರದು ಎದ್ದು ಕಾಣುವ ವ್ಯಕ್ತಿತ್ವ. ಬಸವಣ್ಣನವರು ನಡೆಸಿದ ಧಾರ್ಮಿಕ ಹಾಗೂ ಸಾಹಿತ್ಯ ಕಾರ್ಯಗಳಲ್ಲಿ ಭಾಗಿಯಾಗಿ ಸೇವೆ ಸಲ್ಲಿಸಿದವರು ಇವರಾಗಿದ್ದಾರೆ. ಇವರದು ದಯಾಗುಣ. ಅನೇಕ ಕವಿಗಳು ಇವರನ್ನು ತಮ್ಮ ಕಾವ್ಯದಲ್ಲಿ ಚಿತ್ರಿಸಿದ್ದಾರೆ, ಹಾಡಿ ಹೊಗಳಿದ್ದಾರೆ. ಸಿಂಗಿರಾಜ ತಮ್ಮ ‘ಅಮಲ ಬಸವ ಚರಿತೆ’ಯಲ್ಲಿ ಬಸವಣ್ಣನವರ ಸಮಕಾಲೀನರ ಹೆಸರನ್ನು ಹೇಳುವಾಗ ಇವರ ಹೆಸರನ್ನು ಹೇಳಿದ್ದಾರೆ. ಶಿವತತ್ತ್ವ ಚಿಂತಾಮಣಿಯಲ್ಲಿ ದಸರಯ್ಯನವರ ಬಗ್ಗೆ ಒಂದು ಪದ್ಯ ಬರುತ್ತದೆ. ಬಸವಪುರಾಣ, ವೃಷಭೇಂದ್ರ ಮೊದಲಾದ ಕಾವ್ಯಗಳಲ್ಲಿ ಇವರ ಕಥೆ ಬರುತ್ತದೆ. ಷಡಕ್ಷರ ಕವಿ ಇವರನ್ನು ‘ಸದ್ಗುಣಗಳ ಗಣಿ’ ಎಂದು ಕರೆದಿದ್ದಾರೆ. ದಸರಯ್ಯ ಅಹಿಂಸಾಯೋಗಿಯಾಗಿದ್ದರು. ನಡೆಯುವಾಗ ಕ್ರಿಮಿಗಳು ಸಾಯಬಹುದೆಂದು ಮೆತ್ತಗೆ ನಡೆಯುತ್ತಿದ್ದರು. ಸಸ್ಯಗಳಿಗೂ ಜೀವವಿದೆಯೆಂದು, ಅವಕ್ಕೆ ನೋವಾಗದಂತೆ ನಡೆದುಕೊಂಡ ದಯಾಪರತೆ ಇವರದು. ದಸರಯ್ಯ ಒಮ್ಮೆ ಹೂವು ಕೊಯ್ಯುವಾಗ ಮರದ ಕೊಂಬೆ ಮುರಿಯಿತು. ಅದರಲ್ಲಿ ರಕ್ತ ಸುರಿದಂತೆ ಕಂಡರು. ಮರಕ್ಕೆ ನೋವಾಯಿತೆಂದು ಮರುಗಿದರು. ಆಮೇಲೆ ಹೂಗಳನ್ನು ಕೊಯ್ಯುವುದನ್ನೇ ಬಿಟ್ಟರು. ಆದರೆ ಹೂವು ಸಂಗ್ರಹಿಸಲು ಒಂದು ಉಪಾಯ ಮಾಡಿದರು. ಮರದ ಕೆಳಗೆ ಸಗಣಿಯಲ್ಲಿ ಸಾರಿಸಿ ಸ್ವಚ್ಛಗೊಳಿಸಿದರು. ಅಲ್ಲಿ ಬಿದ್ದ ಹೂವುಗಳನ್ನು ಆರಿಸಿ ತಂದು ದಸರಯ್ಯನವರು ಲಿಂಗಪೂಜೆ ಮಾಡಿಕೊಳ್ಳುತ್ತಿದ್ದರು. ಇವರು ಅಹಿಂಸೆಯ ಅಪರಾವತಾರಿ ಎಂದು ತಿಳಿಯಬಹುದಾಗಿದೆ. ಈ ಆಚರಣೆಯ ಮೂಲಕ ದಿವ್ಯ ದರ್ಶನವನ್ನು ಕಂಡಿದ್ದಾರೆ. ಇವರು ಹೊರಗಿನ ಜೀವಿಗಳನ್ನು ಹಿಂಸಿಸದೆ ಇರಬಹುದು. ಆದರೆ ಶರೀರದಲ್ಲೇ ಹುಟ್ಟಿ, ಶರೀರ ಧರ್ಮದಿಂದ ಸಾಯುವ ಕ್ರಿಮಿಜಂತು ಹಿಂಸೆಯನ್ನು ಹೋಗಲಾಡಿಸುವ ಬಗ್ಗೆ ಕಳವಳಗೊಳ್ಳುತ್ತಾರೆ. ದಸರಯ್ಯ ವಚನಕಾರರಾಗಿ ಸಾಹಿತ್ಯ ಪ್ರಪಂಚದಲ್ಲಿ ತಮ್ಮ ಕಾಣಿಕೆ ಸಲ್ಲಿಸಿದ್ದಾರೆ. “ದಸರೇಶ್ವರ ಲಿಂಗ” ಇವರ ಅಂಕಿತವಾಗಿದೆ. ಇವರ ಪುಣ್ಯಸತಿ ವೀರಮ್ಮನವರೂ ಸಹ ಒಬ್ಬ ವಚನಕಾರ್ತಿಯಾಗಿದ್ದು, ಬಸವಣ್ಣನವರ ‘ದಯೆಯೇ ಧರ್ಮದ ಮೂಲ’ ತತ್ತ್ವವನ್ನು ಕೃತಿಯಲ್ಲಿ ಆಚರಿಸಿ ತೋರಿಸಿದ ದಸರಯ್ಯ ಶರಣ ಸಮೂಹದಲ್ಲಿ ಪ್ರಜ್ವಲಿಸಿದ್ದಾರೆ.

 • 39 ದಾಸೋಹದ ಸಂಗಣ್ಣ
 • ಕುಂಭದಲ್ಲಿ ಬೆಂದ ಅಶನಕ್ಕೆ ಒಂದಗುಳಲ್ಲದೆ ಹಿಂಗಿ ಹಿಂಗಿ ಹಿಸುಕಲುಂಟೆ? ಗುರುತಪ್ಪುಕನ ಲಿಂಗಬಾಹ್ಯನ ಜಂಗಮನಿಂದಕನ ಆಚಾರಭ್ರಷ್ಟನ ಜ್ಞಾನಹೀನನ ಅರಿತು ಕಂಡು ಕೂಡಿದಡೆ, ಖಂಡವ ಬಿಟ್ಟು ಮತ್ಸ್ಯಕ್ಕೆ ಹರಿದ ಜಂಬುಕನಂತೆ ಆಗದೆ? ಸದಾಚಾರದಲ್ಲಿ ಸಂದಿರಬೇಕು, ಕಟ್ಟಾಚಾರದಲ್ಲಿ ನಿಂದಿರಬೇಕು. ಶಂಭುವಿನಿಂದತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. ಪೃಥ್ವಿ ತತ್ತ್ವದಿಂದ ಭಕ್ತಿ ರೂಪು, ಅಪ್ಪು ತತ್ತ್ವದಿಂದ, ಮಾಹೇಶ್ವರ ರೂಪು, ತೇಜ ತತ್ತ್ವದಿಂದ ಪ್ರಾಣಲಿಂಗಿರೂಪು, ಆಕಾಶ ತತ್ತ್ವದಿಂದ ಶರಣ ರೂಪು ಇಂತೀ ಪಂಚತತ್ತ್ವವನವಗವಿಸಿ ಮಹದಾಕಾಶ ಅವಕಾಶವಾದುದು ಐಕ್ಯನ ಅಂತರಿಕ್ಷೆ ನಿರ್ಮುಕ್ತ ಸ್ವಯಸ್ವಾನುಭಾವದಿಂದ ಸಾವಧಾನವನರಿದು ಷಟ್ಕರ್ಮನಾಶನ ಸಂಬಂಧ ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ ಮಾತುಳಂಗ ಮಧುಕೇಶ್ವರನು. ದಾಸೋಹ ಸಂಗಣ್ಣನವರು ಇವರು ಮಕ್ಕಳಿಗೆ ಪಾಠ ಹೇಳಿಕೊಡುವ ಕಾಯಕ ಮಾಡುತ್ತಿದ್ದರೆಂದು ತಿಳಿದುಬರುತ್ತದೆ. ಇವರು ದಾಸೋಹಂಭಾವಿ ಎಂದು ಪ್ರಸಿದ್ಧಿಯನ್ನು ಪಡೆದಿದ್ದರು. ಇವರ ಕಾಲ ಕ್ರಿ.ಶ. 1160. ಇವರ ವಚನಗಳ ಅಂಕಿತ ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ, “ಅತಿಬಳ ನೋಡಾ ಮಾತುಳಂಗ ಮಧುಕೇಶ್ವರ”. ಪ್ರಸ್ತುತ ಇವರ 100 ವಚನಗಳು ದೊರಕಿವೆ. ಇವರ ವಚನಗಳಲ್ಲಿ ‘ಪಂಚತತ್ತ್ವ’, ಷಟಸ್ಥಲ ಮೊದಲಾದ ವಿಚಾರಗಳನ್ನು ನೋಡಬಹುದು. ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ ಎಂಬ ಪಂಚಭೂತಗಳ ಪಂಚೀಕರಣ ತತ್ವವನ್ನು ಸವಿಸ್ತಾರವಾಗಿ ಇವರ ವಚನಗಳಲ್ಲಿ ಕಾಣಬಹುದಾಗಿದೆ. ಅಲ್ಲದೇ ಗುರು-ಲಿಂಗ-ಜಂಗಮ ತತ್ವದ ಮಹತ್ವವನ್ನು ಹಾಗೂ ದಾಸೋಹದ ಬಗ್ಗೆ ಹಲವಾರು ವಚನಗಳಲ್ಲಿ ಸಂಗಣ್ಣನವರು ತುಂಬಾ ಮಹತ್ವವಾದ ವಿಚಾರವನ್ನು ತಿಳಿಸಿದ್ದಾರೆ. ಗುರು ಮೂರು ವಿಧದಲ್ಲಿ ಕಾಣಿಸಿಕೊಂಡು ಮಾನವನ ಉದ್ಧಾರ ಮಾಡುವನೆಂದು ತಮ್ಮ ವಚನದಲ್ಲಿ ತಿಳಿಸಿದ್ದಾರೆ. ಅಲ್ಲದೆ ಲೌಕಿಕ ಗುರುವಿನ ದುವ್ರ್ಯವಹಾರಗಳನ್ನು ಖಂಡಿಸಿದ್ದಾರೆ. ಶ್ರೀಗುರು ಅರಿವಿನ ಲಿಂಗವನ್ನು ಶಿಷ್ಯನ ಕೈಗೆ ಕೊಡುವ ಸನ್ನಿವೇಶವನ್ನು ದಾಸೋಹ ಸಂಗಣ್ಣನವರು ಬಹಳ ಸುಂದರವಾಗಿ ತಮ್ಮ ವಚನದಲ್ಲಿ ಚಿತ್ರಿಸಿದ್ದಾರೆ. ಭೋಗಿಸಬೇಕು, ಭೋಗಿಸದಂತಿರಬೇಕು. ಎಂಬ ತತ್ತ್ವವನ್ನು ತಮ್ಮ ವಚನದಲ್ಲಿ ಪ್ರತಿಪಾಧಿಸಿರುವುದು ಕಂಡುಬರುತ್ತದೆ. ಯೋಗದ ಸ್ವರೂಪದ ಬಗ್ಗೆ ಹಲವಾರು ವಚನಗಳಲ್ಲಿ ತಿಳಿಸಿದ್ದಾರೆ. ಹಾಗೂ ಹಲವಾರು ಸುಂದರ ಉದಾಹರಣೆಗಳ ಮೂಲಕ ವಚನಗಳನ್ನು ಬರೆದಿದ್ದಾರೆ. ಲಿಂಗವಂತ ಧರ್ಮದ ತತ್ತ್ವಜ್ಞಾನವನ್ನು ಪರಿಣಾಮಕಾರಿಯಾಗಿ ವಿವೇಚಿಸುವ ಇವರ ವಚನಗಳು ಗಮನ ಸೆಳೆಯುತ್ತವೆ. ದಾಸೋಹ ಕಾರ್ಯದ ಮೂಲಕ ಜನಮನ್ನಣೆ ಗಳಿಸಿದ ಸಂಗಣ್ಣ ಲಿಂಗವಂತ ಧರ್ಮದ ತತ್ತ್ವ ಪ್ರಸಾರಕರಾಗಿ ನಮ್ಮ ಕಣ್ಣ ಮುಂದೆ ಅಚ್ಚಳಿಯದೆ ನಿಲ್ಲುತ್ತಾರೆ.

 • 40 ತಳವಾರ ಕಾಮಿದೇವಯ್ಯ
 • ಎತ್ತಾಗಿದ್ದು ಹೆಗಲ ಕೊಡೆನೆಂದಡೆ ನಿಶ್ಚಯವೆ? ತೊತ್ತಾಗಿದ್ದು ಹೇಳಿದುದು ಕೇಳೆನೆಂದಡೆ ಮೆಚ್ಚುವರೆ? ಭಕ್ತನಾಗಿದ್ದು ಭಾರಣೆಯನಾದರಿಸದಿದ್ದಡೆ ಅದು ಅಚ್ಚಿಗವೆಂದೆ, ಕಾಮಹರಪ್ರಿಯ ರಾಮನಾಥಾ. ವ್ಯವಹಾರವ ಮಾಡಿದಲ್ಲಿ ಲಾಭವ ಕಾಣದಿರ್ದಡೆ ಆ ವ್ಯವಹಾರವೇತಕ್ಕೆ? ಗುರುಲಿಂಗಜಂಗಮಕ್ಕೆ ಖ್ಯಾತಿಗೆ ಮಾಡಿದಡೆ ಮೊದಲು ತಪ್ಪಿ ಲಾಭವನರಸುವಂತೆ, ಕಾಮಹರ ಪ್ರಿಯ ರಾಮನಾಥಾ. ತಳವಾರ ಕಾಮಿದೇವರ ಕಾಯಕ “ತಳವಾರಿಕೆ”. ‘ಕಾಮಹರ ಪ್ರಿಯ ರಾಮನಾಥ’ ಇವರ ವಚನದ ಅಂಕಿತವಾಗಿದೆ. ಭಕ್ತ, ಶರಣ, ಜಂಗಮ ಮುಂತಾದ ಸ್ಥಲಗಳ ತತ್ತ್ವಗಳು ಇವರ ವಚನದಲ್ಲಿ ಪ್ರಸ್ತಾಪವಾಗಿದೆ. ಭಕ್ತಿಯ ಆಚರಣೆಗೆ ಇವರು ಹೆಚ್ಚಿನ ಮಹತ್ವವನ್ನು ಕೊಟ್ಟಿದ್ದಾರೆ. ಭಕ್ತನಾದವನು ಹೇಗಿರಬೇಕೆಂದು ತಮ್ಮ ವಚನದಲ್ಲಿ ಇವರು ಸ್ಪಷ್ಟವಾಗಿ ನಮೂದಿಸಿದ್ದಾರೆ. ಸದಾಚಾರ, ಸದ್ಗುಣ, ಜೀವದಯೆ ಇವು ಭಕ್ತನಾದವನಲ್ಲಿ ಇರಬೇಕಾದ ಗುಣಗಳು. ಭಕ್ತಿಯ ಆಚರಣೆಯ ಮೂಲಕ ಮಾಯೆ-ಮೋಹವನ್ನು ಗೆಲ್ಲಬಹುದೆಂದು ಸಾರಿದ್ದಾರೆ. ಭಕ್ತಿಯ ಆಚರಣೆಯನ್ನು ಸ್ವಾರ್ಥಸಾಧನೆಗೆ, ವ್ಯವಹಾರ ದೃಷ್ಟಿಯಿಂದ, ಡಂಭಾಚಾರದಿಂದ ಮಾಡಬಾರದೆಂದು ಇವರು ಹೇಳುತ್ತಾರೆ. ಲೋಕಾನುಭವ ಇವರ ವಚನದ ಜೀವಾಳವಾಗಿದೆ. ಇವರ ವೃತ್ತಿ ತಳವಾರಿಕೆಯಾದರೂ ಪ್ರವೃತ್ತಿಯಿಂದ ಶರಣರು. ಇವರು ಕಾಯಕಯೋಗಿ ಮಹಾಶಿವಶರಣರು. ಭಕ್ತನಾದವನು ಹೇಗಿರಬೇಕೆಂಬುದಕ್ಕೆ ತಮ್ಮ ವಚನದಲ್ಲಿ ಈ ರೀತಿ ಹೇಳುತ್ತಾರೆ. “ಹಾದರವನಾಡುವನೆ ಸದ್ಭಕ್ತ? ಹಾದಿಯ ಕಟ್ಟುವನೆ ನಿಜಶರಣ? ಹಸುಗೊಲೆಯ ಕೊಲುವನೆ ಅಸುವಿನ ಕಲೆಯ ಬಲ್ಲವ? ಇಂತಿವರ ನೀ ಬಲ್ಲೆ, ನಾನರಿಯೆ ಕಾಮದಹನಪ್ರಿಯ ರಾಮನಾಥ.” ಸದ್ಭಕ್ತನಾದವನು ದುರಾಚಾರಿಯಾಗಲಾರ. ಹಾಗೂ ಸತ್ಪಥದಲ್ಲಿ ನಡೆಯುವವರಿಗೆ ದಿಕ್ಕು ತಪ್ಪಿಸನು. ಹಾಗೂ ಸಾತ್ವಿಕಥೆಯನ್ನು ಬಲ್ಲವನು ದುಷ್ಟನಾಗಬಲ್ಲನೇ? ಎಂದು ಪ್ರಶ್ನೆಗಳನ್ನೇ ಹಾಕುತ್ತಾ ಭಕ್ತಿಪಥದಲ್ಲಿ ತೋರ್ಪಡಿಕೆಯ ಡಾಂಭಿಕ ವೇಷವನ್ನು ತೊಟ್ಟು ದುರಾಚಾರಿಯಾಗಿ ನಡೆಯುವವರಿಗೆ ನಿದರ್ಶನವನ್ನು ನೀಡುವ ಮೂಲಕ ಸತ್ಪತದಲ್ಲಿ ನಡೆಯುವವರು ತಮ್ಮ ಪ್ರಾಣ ಹೋದರೂ ಯಾವುದೇ ಕಾರಣಕ್ಕೂ ತತ್ವಕ್ಕೆ ವಿರುದ್ಧವಾಗಿ ನಡೆಯರು ಎಂಬುದನ್ನು ಸಿದ್ಧಾಂತದೊಂದಿಗೆ ಸೂಚಿಸುತ್ತಾರೆ. ಬಿಜ್ಜಳ ಅರಸರ ಆಳ್ವಿಕೆಯಲ್ಲಿ ತಳವಾರ ಕಾಯಕವನ್ನು ಮಾಡುತ್ತಾ ಶರಣ ಧರ್ಮದ ಆಚರಣೆಯನ್ನು ತಮ್ಮ ಉಸಿರಾಗಿಸಿಕೊಂಡು ಬದುಕಿ, ಕಾಯಕ ಯಾವುದಾದರೂ ಆಗಲಿ ನೀತಿಯಿಂದ ದೊಡ್ಡವನಾಗಿರಬೇಕು, ಎಂಬ ನಿದರ್ಶನ ಇವರ ಜೀವಿತಾವಧಿಯಲ್ಲಿ ನಾವು ಕಾಣಬಹುದಾಗಿದೆ.

 • 41 ತುರುಗಾಹಿ ರಾಮಣ್ಣ
 • ಕೋಲೋಂದರಲ್ಲಿ ಹಲವು ಕುಲದ ಗೋವುಗಳ ಚಲಿಸದೆ ನಿಲಿಸುವಂತೆ ಏಕಚಿತ್ತನಾಗಿ ಸರ್ವವಿಕಾರಂಗಳ ಕಟ್ಟುವಡೆದು, ಇಂದ್ರಿಯಂಗಳ ಇಚ್ಛೆಯಲ್ಲಿ ತ್ರಿವಿಧವ ಹಿಡಿದಿರುವರ ಸಂದಿಯಲ್ಲಿ ನುಸುಳದೆ, ವಸ್ತುವಿನಂಗದಲ್ಲಿಯೆ ತನ್ನಂಗ ತಲ್ಲೀಯವಾಗಿಪ್ಪುದೆ ಗೋಪತಿನಾಥ ವಿಶ್ವೇಶ್ವರಲಿಂಗವನರಿವುದಕ್ಕೆ ಇದೆ ಬಟ್ಟೆ. “ಬಂದಿತ್ತು ದಿನ ಬಸವಣ್ಣ ಕಲ್ಲಿಗೆ ಚೆನ್ನಬಸವಣ್ಣ ಉಳುವೆಯಲ್ಲಿಗೆ ಪ್ರಭು ಅಕ್ಕ ಕದಳಿದ್ವಾರಕ್ಕೆ ಮಿಕ್ಕಾದ ಪ್ರಥಮೆಲ್ಲರೂ ತಮ್ಮ ಲಕ್ಷ್ಯಕ್ಕೆ ನಾ ತುರುವಿನ ಬೆಂಬಳಿಯಲ್ಲಿ ಹೋದ ಮರೆಯಲ್ಲಿ ಅಡಗಿಹರೆಲ್ಲೆರು ಅಡಗಿದುದ ಕೇಳಿ ನಾ ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿಯೆ ಉಡುಗುವೆನು”. ತುರುಗಾಹಿ ರಾಮಣ್ಣನವರ ಕಾಯಕ ದನ ಮೇಯಿಸುವುದು. ಇವರು ಕಲ್ಯಾಣದ ಶಿವಭಕ್ತರ ಮನೆಯ ಗೋವುಗಳನ್ನು ಕಾಯುವ ಕಾಯಕದಲ್ಲಿ ನಿರತನಾಗಿದ್ದವರು. ಇವರು ಬರೆದ ನಲವತ್ತಾರು ವಚನಗಳು ಲಭ್ಯವಾಗಿವೆ. ಇವರ ವಚನಗಳ ಅಂಕಿತ “ಗೋಪತಿನಾಥ ವಿಶ್ವೇಶ್ವರಲಿಂಗ”. ಹೆಚ್ಚಿನ ವಚನಕಾರರಂತೆ ಇವರು ಕೂಡ ಬಸವಣ್ಣನವರ, ಅಲ್ಲಮಪ್ರಭುಗಳ, ಚೆನ್ನಬಸವರ ಪ್ರಭಾವಕ್ಕೆ ಒಳಗಾಗಿದ್ದವರು. ಲಿಂಗವಂತ ಧರ್ಮದಲ್ಲಿ ಅಚಲ ವಿಶ್ವಾಸವಿಟ್ಟವರು. ಕಾಯಕನಿಷ್ಠೆಯನ್ನು ಪಾಲಿಸಿದವರು. ಇವರು ಮಾಡುವ ವೃತ್ತಿ ದನ ಕಾಯುವುದಾದರೂ ಅನುಭಾವ ಮಾತ್ರ ದೊಡ್ಡದು. ಇವರು ವಚನದ ಮೂಲಕ ಬಸವಣ್ಣ ಕೂಡಲಸಂಗಮದತ್ತ, ಚೆನ್ನಬಸವಣ್ಣ ಉಳುವಿಗೆ, ಅಕ್ಕಮಹಾದೇವಿ, ಅಲ್ಲಮಪ್ರಭುಗಳು ಶ್ರೀಶೈಲದತ್ತ ಹೋದರೆಂದು ತಿಳಿದುಬರುತ್ತದೆ. ಐತಿಹಾಸಿಕ ವಿವರಗಳನ್ನು ಒಳಗೊಂಡಿರುವ ಇವರ ವಚನ ಐತಿಹಾಸಿಕ ದಾಖಲೆ ಎಂದರೂ ತಪ್ಪಾಗಲಿಕ್ಕಿಲ್ಲ. ದನವನ್ನು ಕಾಯುವುದು, ಬೆಟ್ಟದಲ್ಲಿ ಹುಲಿ ದನದ ಮೇಲೆ ಎರಗುವುದು. ಗೋವುಗಳ ಸಂಜ್ಞೆ, ಎತ್ತುಗಳನ್ನು ಕಾಯುವ ಸಂಭಾವನೆ ಮುಂತಾದ ವಿವರಗಳು ಇವರ ವಚನಗಳಲ್ಲಿ ಕಾಣಬಹುದಾಗಿದೆ. ಗೋವು ಕಾಯುವ ತಮ್ಮ ವೃತ್ತಿಯ ಅನುಭಾವದ ಆಧಾರದ ಮೇಲೆ ವಚನಗಳಿಗೆ ಆಧ್ಯಾತ್ಮಿಕ ಲೇಖನವನ್ನು ನೀಡಿದ ತುರುಗಾಹಿ ರಾಮಣ್ಣನವರು ಎಲ್ಲರ ಗಮನ ಸೆಳೆಯುತ್ತಾರೆ. ಕಾಯಕದ ದೃಷ್ಟಿಯಿಂದ ಇವರ ವಚನಗಳು ತುಂಬಾ ಪ್ರಾಮುಖ್ಯತೆಯನ್ನು ಪಡೆದಿವೆ. ಗೋವುಗಳು ಚಲಿಸದಂತೆ ನಿಲ್ಲಿಸಿ ಹಾಗೂ ಕಾಯುವಂತೆ ನಿಲ್ಲಿಸಿ ಇಂದ್ರಿಯಂಗಳನ್ನು ನಿಲ್ಲಿಸುವುದು ಮುಖ್ಯವೆಂದು ತಮ್ಮ ವಚನದಲ್ಲಿ ತಿಳಿಸಿದ್ದಾರೆ. ದನ ಕಾಯುವ ಕಾಯಕದ ಮೂಲಕ ಲಿಂಗವಂತ ಧರ್ಮವನ್ನು ಅದರ ತತ್ತ್ವವನ್ನು ಅಳವಡಿಸಿಕೊಂಡ ತುರುಗಾಹಿ ರಾಮಣ್ಣ ಒಬ್ಬ ಶ್ರೇಷ್ಠ, ಆದರ್ಶ ಶರಣರಾಗಿದ್ದಾರೆ.

 • 42 ತೆಲುಗೇಶ ಮಸಣಯ್ಯ
 • ಕಾಮ ಸನ್ನಿಭನಾಗಿ ತಾ ಚೆಲುವನಾದಡೆ ಕಾಮಿನೀಜನವೆಲ್ಲಾ ಮೆಚ್ಚಬೇಕು. ದಾನಗುಣದವನಾಗಿ ಕರೆದೀವನಾದಡೆ ಯಾಚಕಜನವೆಲ್ಲಾ ಮೆಚ್ಚಬೇಕು. ವೀರನಾದಡೆ ವೈರಿಗಳು ಮೆಚ್ಚಬೇಕು. ಖೂಳನಾದಡೆ ತನ್ನ ತಾ ಮೆಚ್ಚಿಕೊಂಬ. ಎನ್ನ ದೇವ ತೆಲುಗೇಶ್ವರನಲ್ಲಿ ತಾನು ಭಕ್ತನಾದಡೆ, ದೇವರು ಮೆಚ್ಚಿ ಜಗವು ತಾ ಮೆಚ್ಚುವುದು. ಗುರು ಕರುಣವ ಹಡೆದುದಕ್ಕೆ ಚಿಹ್ನವಾವುದೆಂದಡೆ: ಅಂಗದ ಮೇಲೆ ಲಿಂಗ ಸ್ವಾಯತವಾಗಿರಬೇಕು. ಅಂಗದ ಮೇಲೆ ಲಿಂಗ ಸ್ವಾಯತವಿಲ್ಲದೆ ಬರಿದೆ ಗುರುಕರುಣವಾಯಿತ್ತೆಂದಡೆ ಅದೆಂತೋ? ಲಿಂಗವಿಹೀನನಾಗಿ ಗುರುಕರುಣವುಂಟೇ? ಆ ಮಾತ ಕೇಳಲಾಗದು. ಇದು ಕಾರಣ, ಲಿಂಗಧಾರಣವುಳ್ಳುದೆ ಸದಾಚಾರ, ಇಲ್ಲದಿರೆ ಅನಾಚಾರವೆಂಬೆನಯ್ಯಾ, ತೆಲುಗೇಶ್ವರಾ. ತೆಲುಗೇಶ ಮಸಣಯ್ಯ ದನ ಕಾಯುವ ಕಾಯಕ ಮಾಡುತ್ತಿದ್ದರು. ಇವರೊಬ್ಬ ಪ್ರಸಿದ್ಧ ಶಿವಭಕ್ತರು. ‘ತೆಲುಗೇಶ’ ಅಂಕಿತದಲ್ಲಿ ವಚನಗಳನ್ನು ಬರೆದಿದ್ದು, ಇವರ ಏಳು ವಚನಗಳು ಲಭ್ಯವಾಗಿವೆ. ಕಾಯಕ ಮಾಡುವವರಿಗೆ ಆ ಕೆಲಸ ಈ ಕೆಲಸ ಎಂಬ ತಾರತಮ್ಯವಿಲ್ಲ. ತಮಗಿಷ್ಟವಾದ ಕಾಯಕದ ಮೂಲಕ ಶಿವ ಮೆಚ್ಚುವ ಕೆಲಸದ ಮೂಲಕ ಕೈಲಾಸವು ಸಾಧ್ಯ ಎಂದು ವಿಶ್ವಕ್ಕೆ ಆದರ್ಶದ ದಾರಿಯನ್ನು ತೋರಿಸಿದ್ದಾರೆ. ಅಂತಹ ಶರಣರಲ್ಲಿ ತೆಲುಗೇಶ ಮಸಣಯ್ಯ ಶರಣರೂ ಒಬ್ಬರಾಗಿ ಎಲ್ಲರ ಗಮನವನ್ನು ಸೆಳೆಯುತ್ತಾರೆ. ಹಳದಿಯ ಸೀರೆಯನ್ನು ಉಟ್ಟುಕೊಂಡು, ಬಹಳದೋಲೆಯನ್ನು ಕಿವಿಗೆ ಧರಿಸಿಕೊಂಡು, ಗುಲಗಂಜಿ ದಂಡೆಯನ್ನು ಕಟ್ಟಿಕೊಂಡು ಕೊಳಲು ನುಡಿಸುವ ಗೋವಳಿಗನ ಬಗ್ಗೆ ಇವರು ತಮ್ಮ ವಚನದಲ್ಲಿ ಪ್ರಸ್ತಾಪಿಸಿದ್ದಾರೆ. ಈ ವಚನದ ಮೂಲಕ 12ನೇ ಶತಮಾನದ ದನ ಕಾಯುವ ಕಾಯಕ ಮಾಡುವವರ ಉಡುಪುಗಳು ನಮ್ಮ ಕಣ್ಣ ಮುಂದೆ ಬರುತ್ತದೆ. ಕಾಯಕದಲ್ಲಿ ಮೇಲು-ಕೀಳು ಎಂಬುದೇ ಇಲ್ಲ. ಯಾವುದೇ ಕಾಯಕ ಮಾಡಿದರೂ ಅದನ್ನು ಪ್ರೀತಿಯಿಂದ ಮಾಡಬೇಕು. ಅದರಲ್ಲಿ ತನ್ನತನ ಕಾಣಬೇಕು. ಶರಣರು ಪ್ರೀತಿಯಿಂದ ಕಾಯಕ ಮಾಡಿಕೊಂಡು ಬದುಕನ್ನು ಸಾಗಿಸಿದ್ದಾರೆ. ಇಂತಹ ಪವಿತ್ರ ಬದುಕಿನಂತೆ ನಾವುಗಳು ನಡೆಯುವುದು ಈ ಮಾನವ ಜನ್ಮಕ್ಕೆ ಕ್ಷೇಮವಾಗಿದೆ. ತೆಲುಗೇಶ ಮಸಣಯ್ಯನವರು ಸಾಮಾನ್ಯ ಶರಣರಂತೆ ಕಂಡರೂ ಇವರ ವಚನಗಳನ್ನು ಗಮನಿಸಿದಾಗ ಅನುಭಾವ ಗಳಿಕೆಯಲ್ಲಿ ಸಿರಿವಂತರೆಂದು ತಿಳಿಯಬಹುದು. ದನ ಕಾಯುವ ಕೆಲಸ ಮಾಡಿದರೂ ಲಿಂಗಾನುಭವಿಯಾಗಿರುವುದು ಕಂಡು ಬರುತ್ತದೆ. ಅಂಗದ ಮೇಲೆ ಲಿಂಗವನ್ನು ಕಟ್ಟಿಕೊಳ್ಳಬೇಕೆಂದು ಹೇಳಿದ್ದಾರೆ. ಇಷ್ಟಲಿಂಗ ಸಂಸ್ಕಾರವನ್ನು ಪಡೆಯದೆ ಗುರುಕಾರುಣ್ಯವನ್ನು ಪಡೆದಂತಾಗುವುದಿಲ್ಲ ಎಂದು ತಿಳಿಸಿದ್ದಾರೆ. ಹೀಗೆ ಇವರು ತಮ್ಮ ವಚನದಲ್ಲಿ ಲಿಂಗಧಾರಣೆಯ ಮಹತ್ವವನ್ನು ತಿಳಿಸಿದ್ದಾರೆ. ಮಸಣಯ್ಯನವರು ಶ್ರೇಷ್ಠ ಸದಾಚಾರಿ, ಶಿವಾನುಭವಿಯಾಗಿದ್ದರು. ಇವರ ವಚನಗಳು ತುಂಬಾ ಸರಳವಾಗಿದ್ದು, ಇದು ಇವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಲಿಂಗನಿಷ್ಠೆ, ಗುರುನಿಷ್ಠೆ ಹೊಂದಿದ ಇವರು ಒಬ್ಬ ಶ್ರೇಷ್ಠ ಶರಣರಾಗಿದ್ದರೆಂಬುದು ಸತ್ಯವಾಗಿದೆ.

 • 43 ನಗೆಯ ಮಾರಿತಂದೆ
 • ಗುರುವಿನಲ್ಲಿ ಗುಣವಿಲ್ಲದಿರ್ದಡೆ ಪೂಜ್ಯನಾಗಿ ಪೊಡವಡಿಸಿಕೊಳಲೇಕೆ? ಲಿಂಗದಲ್ಲಿ ಲಕ್ಷಣವಿಲ್ಲದಿರ್ದಡೆ ತ್ರಿಸಂಧ್ಯಾಕಾಲದಲ್ಲಿ ಪೂಜಿಸಿಕೊಳಲೇಕೆ? ಜಂಗಮದಲ್ಲಿ ಜಾತಿಯಿಲ್ಲದಿರ್ದಡೆ ಹಿರಿದು ಕಿರಿದೆಂದು ಹೋರಲೇಕೆ? ಇದನೇನ ಹೇಳುವೆ? ಗುರು ಭವಕ್ಕೊಳಗಾದ, ಲಿಂಗ ಲಕ್ಷಣಕ್ಕೊಳಗಾಯಿತ್ತು. ಜಂಗಮ ಜಾತಿಗೊಳಗಾದ! ಇವನೆಲ್ಲವ ಹೇಳಿ ಹೇಳಿ: ಎನಗಿದು ಒಳ್ಳಿತ್ತೊ ಹೊಲ್ಲವೊ? ಗೆಲ್ಲತನಬೇಡ. ಆತುರವೈರಿ ಮಾರೇಶ್ವರಾ. ನಡೆವ ಕಾಲು, ಆನುವ ಕೈ, ಬೇಡುವ ಬಾಯಿ, ಸರ್ವವನೊಡಗೂಡುವ ಮನವುಡಗಿ, ಘನಲಿಂಗದಲ್ಲಿ ತಲ್ಲೀಯವಾದವನಂಗ, ಮರುಳು ಕಂಡ ಕನಸಿನಂತೆ, ಮೂಗನ ಕಾವ್ಯದಂತೆ, ಜಲಲಿಪಿಯಂತೆ, ಉರಿಯ ಧೂಮದಂತೆ, ಅದಾರಿಗೂ ಅಸಾಧ್ಯ, ಆತುರವೈರಿ ಮಾರೇಶ್ವರಾ. ಜೀವನಕ್ಕೆ ನಗು ಬೇಕು. ನಗುವಿನಿಂದ ಜೀವನ ಹಗುರವಾಗುವುದು. ನಗೆ ಶ್ರೇಷ್ಠವಾದುದೆಂದು ಕಲ್ಯಾಣದ ಅನುಭವ ಮಂಟಪದಲ್ಲಿ ಕೆಲವು ನೊಂದ ಮನಸ್ಸುಗಳನ್ನು ನಕ್ಕಿ-ನಲಿಸುತ್ತಾ ನಗುವುದೇ ಸ್ವರ್ಗ, ಆ ಸುಂದರ ನಗುವಿನಲ್ಲಿ ದೇವನ ದರ್ಶನ ಮಾಡಿಸುತ್ತಿದ್ದರು ನಗೆಯ ಮಾರಿತಂದೆ. ಅಲ್ಲದೇ ನಗಿಸುವುದನ್ನೇ ಕಾಯಕವನ್ನಾಗಿಸಿಕೊಂಡು ಬದುಕನ್ನು ಪಾವನಗೊಳಿಸಿ ಸಮಾಜದ ಸ್ವಾಸ್ತ್ಯವನ್ನು ಕಾಪಾಡಿಕೊಂಡವರಾಗಿದ್ದಾರೆ. “ಹಾದರಿಗೆ” ಎಂಬುದು ನಗೆಯ ಮಾರಿತಂದೆಯ ಊರು. ಇವರ ಹುಟ್ಟಿದೂರನ್ನು ಬಿಟ್ಟು ಕಲ್ಯಾಣದಲ್ಲಿ ಬಂದು ನೆಲಸಿದರು. ಇವರು ಓಣಿಯಿಂದ ಓಣಿಗೆ ‘ಕೇರಿಯಿಂದ ಕೇರಿಗೆ’ ಮನೆಯಿಂದ ಮನೆಗೆ ಹೋಗಿ ಜನರನ್ನು ತಿಳಿಹಾಸ್ಯದಿಂದ, ಮೃದುಮಾತುಗಳಿಂದ ನಗಿಸುತ್ತಿದ್ದರು. ಅದರೊಂದಿಗೆ ಶರಣ ತತ್ತ್ವಗಳನ್ನು ಪ್ರಸಾರ ಮಾಡುತ್ತಿದ್ದರು. ಲೋಭಿಗಳಲ್ಲಿ ಔದಾರ್ಯ ಬರಿಸುವುದು ಶರಣರ ಕಾಯಕದ ಧರ್ಮ. ಆ ಕಥೆಯಲ್ಲಿ ಹಾಸ್ಯದ ಲೇಪನವಿದೆ. ಎಂತಹ ಕಷ್ಟದಲ್ಲಿದ್ದರೂ ನಗೆಗಾರರು ಜನರನ್ನು ನಗಿಸಬಲ್ಲರು ಎಂಬುದಕ್ಕೆ ಆ ಕಥೆಯು ಒಂದು ಉದಾಹರಣೆಯಾಗಿದೆ. ಒಮ್ಮೆ ಮಾರಿತಂದೆ ಕಲ್ಯಾಣದತ್ತ ಬರುತ್ತಿದ್ದರು. ಜೋರಾಗಿ ಮಳೆ ಬರುತ್ತಿತ್ತು. ಹಳ್ಳ ದಾಟಲಾಗಲಿಲ್ಲ. ಅದನ್ನು ನೋಡುತ್ತಾ ಅಲ್ಲೆ ನಿಂತರು. ಅಲ್ಲಿ ಒಬ್ಬ ಮುದುಕ, ಅವನ ಹೆಂಡತಿ, ಮುದಿಯೆತ್ತು ನಿಂತಿತ್ತು. ಆ ಮುದುಕ ಮಾರಿತಂದೆಯನ್ನು ಕುರಿತು ಎಲ್ಲಿಗೆ ಹೊರಟಿರುವೆ ಎಂದು ಪ್ರಶ್ನಿಸಿದ. ಕಲ್ಯಾಣಕ್ಕೆ ಎಂದು ಮಾರಿತಂದೆ ಉತ್ತರಿಸಿದರು. ಹಳ್ಳವನ್ನು ಹೇಗೆ ದಾಟುವಿರಿ ಎಂದು ಮಾರಿತಂದೆ ಮರುಪ್ರಶ್ನಿಸಿದ. ಅದಕ್ಕೆ ಮುದುಕ: “ಎತ್ತಿನ ಮೇಲೆ ನಾನು ಕುಳಿತುಕೊಳ್ಳತ್ತೇನೆ. ನನ್ನ ಹೆಗಲ ಮೇಲೆ ಹೆಂಡತಿ ಕುಳಿತುಕೊಳ್ಳುತ್ತಾಳೆ. ಮೆತ್ತಗೆ ಹಳ್ಳ ದಾಟುತ್ತೇನೆ” ಎಂದರು. ಅದಕ್ಕೆ ಮಾರಿತಂದೆ ಉತ್ತರವಾಗಿ; “ನಿನ್ನ ಹೆಂಡತಿಯ ಹೆಗಲ ಮೇಲೆ ನಾನು ಕುಳಿತುಕೊಳ್ಳುತ್ತೇನೆ ಹಳ್ಳ ದಾಟಲು ಸುಲಭವಾಗುತ್ತದೆ” ಎಂದಾಗ ಆ ಮುದುಕ ದಂಪತಿಗಳಿಗೆ ನಗು ತಡೆಯಲಾಗಲಿಲ್ಲ. ಬಾಯಿ ತುಂಬಾ ನಕ್ಕರು. ಆಗ ಮಾರಿತಂದೆ ನನ್ನ ಮಾತಿಗೆ ನಕ್ಕಿರಿ. ಕೊಡಿರಿ ನನಗೆ ಕಾಯಕದ ಕೂಲಿಯನ್ನ ಎಂದು ಕೇಳಿದರು. ಆಗ ಮುದುಕನಿಗೆ ಸಂತೋಷವಾಗಿ ಕಾಯಕದ ಕೂಲಿಯನ್ನು ತೆತ್ತು ಪ್ರವಾಹದ ಭಯವನ್ನು ಮರೆತು ಸಂತೋಷದಿಂದ ಸಾಗಿದರು. “ಅತುರವೈರಿ ಮಾರೇಶ್ವರ” ಎಂಬುದು ಇವರ ವಚನಾಂಕಿತ. ಇವರ ವಚನಗಳು ಸರಳ ಸುಂದರವಾಗಿವೆ. ಕಾಯಕದ ವಚನಗಳಿಂದ, ವೈಯಕ್ತಿಕ ನಿಲುವಿನ ವಿಚಾರಗಳಿಂದ ನಗೆಯ ಮಾರಿತಂದೆ ಶಿವಶರಣರಲ್ಲಿಯೇ ವಿಶಿಷ್ಟವಾದ ಅದ್ಭುತ ವ್ಯಕ್ತಿತ್ವವನ್ನು ಪಡೆದವರಾಗಿದ್ದರೆಂದು ಇವರ ಚರಿತ್ರೆಯಲ್ಲಿ ಕಾಣಬಹುದಾಗಿದೆ.

 • 44 ನಿಜಲಿಂಗ ಚಿಕ್ಕಯ್ಯ
 • ಶರಣ ಚಿಕ್ಕಯ್ಯ ಬಸವಣ್ಣರಿಗೆ ಪೂಜ್ಯನಾದ ಶಿವಶರಣನಾಗಿದ್ದಾರೆ. ಬಸವಣ್ಣ ತಮ್ಮ ವಚನದಲ್ಲಿ ಚಿಕ್ಕಯ್ಯನನ್ನು ಸ್ಮರಿಸಿದ್ದಾರೆ. ‘ಚಿಕ್ಕಯ್ಯ ಚಿಕ್ಕಯ್ಯ, ಎತ್ತಿ ಮುದ್ದಾಡಿದರೆನ್ನ ಕೂಡಲಸಂಗಯ್ಯ’ ಎಂದು ತಮ್ಮ ಒಂದು ವಚನದಲ್ಲಿ ಚಿಕ್ಕಯ್ಯನ ಹಿರಿಮೆಯನ್ನು ಸಾರಿದ್ದಾರೆ. ಚಿಕ್ಕಯ್ಯ ಶ್ರೇಷ್ಠ ವಚನಕಾರ, ಮಹಾಶಿವಶರಣರಾಗಿದ್ದರೆಂದು ಚರಿತ್ರೆಯಲ್ಲಿ ಕಾಣಬಹುದಾಗಿದೆ. ನಿಜಲಿಂಗ ಚಿಕ್ಕಯ್ಯ ಹೆಸರಾಂತ ಶಿವಾನುಭವಿಯು ಬಸವೇಶ್ವರರ ಆಜ್ಞೆಯಂತೆ ಬಿಚ್ಚೋಲೆ ಕಾಯಕವನ್ನು ಮಾಡುತ್ತಿದ್ದರು. ತಾಡ ಓಲೆಯ ಗಿಡಗಳನ್ನು ಆರಿಸುವುದು. ಅವುಗಳ ಎಲೆಗಳನ್ನು ಸಂಗ್ರಹಿಸುವುದು. ಅವುಗಳ ಎಲೆಗಳನ್ನು ಮಾರಲು ಅಂಗಡಿಯನ್ನು ಇಟ್ಟುಕೊಂಡಿದ್ದರು. ಅವುಗಳಿಂದ ಬಂದ ಹಣದಿಂದ ಜೀವನ ಸಾಗಿಸುತ್ತಿದ್ದರು. ಇದು ಪ್ರತಿನಿತ್ಯ ಇವರ ರೂಢಿಯಾಗಿತ್ತು. ಮುಂದೆ ವಚನಗಳನ್ನು ರಚಿಸಿದರು.` ಇವರ ಚರಿತ್ರೆಯನ್ನು ಲಕ್ಕಣ್ಣ ದಂಡೇಶ ತಮ್ಮ ಶಿವತತ್ತ್ವ ಚಿಂತಾಮಣಿ ಎಂಬ ಮಹಾಕಾವ್ಯದಲ್ಲಿ ಬರೆದಿದ್ದಾರೆ. ಬಸವಣ್ಣನವರ ಪ್ರೀತಿಪಾತ್ರರಾದ ನಿಜಲಿಂಗ ಚಿಕ್ಕಯ್ಯ ಶಿವಾನುಭವ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದರು. ಇವರು ಕಲ್ಯಾಣದಲ್ಲಿ ಲಿಂಗೈಕ್ಯರಾಗುತ್ತಾರೆ. ಇವರ ಪೂರ್ವಪರ ಇತಿಹಾಸ ದೊರೆತಿಲ್ಲ, ಕಾರಣ ಕಲ್ಯಾಣದ ಕ್ರಾಂತಿಯಲ್ಲಿ ಸಮಗ್ರಶರಣರ ಚರಿತ್ರೆಯನ್ನೆ ಇಲ್ಲವಾಗಿಸುವ ಕಾರ್ಯವನ್ನು ಬಿಜ್ಜಳ ರಾಜನ ಅಳಿಯ ಹಾಗೂ ಕೊಂಡಯ್ಯ ಮಂಚಣ್ಣನವರ ಕುತಂತ್ರದಿಂದ ಲಕ್ಷಾಂತರ ಶರಣರು ರಚಿಸಿಟ್ಟ ಬೆಲೆ ಕಟ್ಟಲಾಗದಂತಹ ಕೋಟ್ಯಾಂತರ ವಚನಗಳ ತಾಡೋಲೆಗಳನ್ನು ಸಮಗ್ರ ಶರಣರ ಚರಿತ್ರೆಯನ್ನು ಸುಮಾರು ಒಂಬತ್ತು ತಿಂಗಳುಗಳ ಕಾಲ ಸುಟ್ಟು ನಾಶಗೊಳಿಸುತ್ತಾ ಶರಣರ ಗುಹೆಗಳು, ಮನೆ-ಮಂಟಪಗಳನ್ನು ದ್ವಂಸ ಮಾಡುವುದಲ್ಲದೇ ಕಣ್ಣಿಗೆ ಕಂಡ ಭಸ್ಮಧಾರಿಗಳನ್ನೂ ಸಹ ಕೊಲ್ಲುತ್ತಿದ್ದರು. ಆದುದರಿಂದ ಬೆರಳೆಣಿಕೆಯಷ್ಟು ಶರಣರ ಚರಿತ್ರೆ ಲಭ್ಯವಿದ್ದು, ಮಿಕ್ಕುಳಿದ ಲಕ್ಷಾಂತರ ಶರಣರ ಚರಿತ್ರೆ ಹಾಗೂ ಹೆಸರುಗಳು ಲಭ್ಯವಿಲ್ಲ. ಆದ ಕಾರಣ ನಿಜಲಿಂಗ ಚಿಕ್ಕಯ್ಯನವರ ವಚನಗಳು ಅಪ್ರಸ್ತುತವಾಗಿವೆ ಎಂದು ತಿಳಿದು ಬರುತ್ತದೆ.

 • 45 ನುಲಿಯ ಚಂದಯ್ಯ
 • ಗುರುವಾದಡೂ ಕಾಯಕದಿಂದವೆ ಜೀವನ್ಮುಕ್ತಿ, ಲಿಂಗವಾದಡೂ ಕಾಯಕದಿಂದವೆ ಶಿಲೆಯ ಕುರುಹು ಹರಿವುದು. ಜಂಗಮವಾದಡೂ ಕಾಯಕದಿಂದವೆ ವೇಷದ ಪಾಶ ಹರಿವುದು. ಗುರುವಾದಡೂ ಚರಸೇವೆಯ ಮಾಡಬೇಕು. ಲಿಂಗವಾದಡೂ ಚರಸೇವೆಯ ಮಾಡಬೇಕು. ಜಂಗಮವಾದಡೂ ಚರಸೇವೆಯ ಮಾಡಬೇಕು. ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗದ ಅರಿವು. ಆವಾವ ಕಾಯಕದಲ್ಲಿ ಬಂದಡೂ ಭಾವಶುದ್ಧವಾಗಿ ಗುರು-ಲಿಂಗ-ಜಂಗಮಕ್ಕೆ ಮಾಡುವುದೇ ಶಿವಪೂಜೆ. ಮಾಡುವ ಮಾಟವಿಲ್ಲದೆ ಮಾತಿಂಗೆ ಮಾತಾಡುವುದು ಅದೇತರ ಪೂಜೆ? ಅದು ಚಂದೇಶ್ವರಲಿಂಗಕ್ಕೆ ಒಪ್ಪವಲ್ಲ, ಮಡಿವಾಳಯ್ಯ. ಬಸವಾದಿ ಶಿವಶರಣರು ಕಲ್ಯಾಣದಲ್ಲಿ ಸಮಾನತೆಯನ್ನು ಸಾರಿದರು. ಕಾಯಕ ತತ್ತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡರು. ನುಡಿದಂತೆ ನಡೆದರು. ಗುರು-ಲಿಂಗ-ಜಂಗಮ ತತ್ತ್ವವನ್ನು ಜಗತ್ತಿನಾದ್ಯಂತ ಪಸರಿಸಿದರು. ಅಂತಹ ಮಹಾಮಹಿಮರಲ್ಲಿ ನುಲಿಯ ಚಂದಯ್ಯನವರೂ ಒಬ್ಬರು. ಬಸವ ಪುರಾಣ, ಶೂನ್ಯಸಂಪಾದನೆ, ಶಿವತತ್ತ್ವ ಚಿಂತಾಮಣಿ ಮೊದಲಾದ ಗ್ರಂಥಗಳಲ್ಲಿ ಇವರ ಬಗ್ಗೆ ವಿಸ್ತಾರವಾದ ಮಾಹಿತಿ ಇದೆ. ಅರಣ್ಯದಿಂದ ಮೆದೆ ಹುಲ್ಲು, ಹಾಗೂ ತ್ರಿಪುರಾಂತ ಕೆರೆಯ ತಟದಲ್ಲಿ ಬೆಳೆದ ವೊಡೆ ಹುಲ್ಲಿನಿಂದ ಹಗ್ಗವನ್ನು ಹೊಸೆದು, ಅದರಿಂದ ಬಂದ ಹಣದಲ್ಲಿ ಇವರು ಜಂಗಮ ಸೇವೆ ಮಾಡುತ್ತಿದ್ದರು. ಜಂಗಮ ಭಕ್ತಿ ಇವರಲ್ಲಿ ಅಧಿಕವಾಗಿತ್ತು. ಶರಣ ತತ್ವವನ್ನು ಅಳವಡಿಸಿಕೊಂಡು. ಜಂಗಮರ ಸೇವೆಯಲ್ಲಿಯೇ ಲಿಂಗಸೇವೆ ಅಡಗಿದೆ ಎಂದು ಇವರು ತಿಳಿದಿದ್ದರು. ನುಲಿಯ ಚಂದಯ್ಯನವರು ಬಿಜಾಪುರದ ‘ಶಿವಣಿಗೆ’ಯವರು. ಇವರು ಶಿವಣಿಗೆಯಿಂದ ಕಲ್ಯಾಣಕ್ಕೆ ಬಂದು ನುಲಿಯ ಕಾಯಕ ಮಾಡುತ್ತಿದ್ದರು. ಇವರು ಕಾಯಕಕ್ಕೆ ಬಹಳ ಮಹತ್ವವನ್ನು ನೀಡುತ್ತಾರೆ. ಒಂದು ಘಟನೆ, ಇವರು ಕೆರೆಯ ತಟದಲ್ಲಿ ಹುಲ್ಲನ್ನು ಕೂಯ್ಯುವಾಗ ಕೊರಳಲ್ಲಿದ್ದ ಇಷ್ಟಲಿಂಗವು ಆಕಸ್ಮಿಕವಾಗಿ ಬಿದ್ದಾಗ ಅದನ್ನು ಮರಳಿ ಧರಿಸದೇ ತಮ್ಮ ಕಾಯಕದಲ್ಲೇ ತಲ್ಲೀನರಾಗುತ್ತಾರೆ. ಈ ವಿಚಾರವು ಅಲ್ಲಮ ಪ್ರಭುಗಳಿಗೆ ಹಾಗೂ ಚೆನ್ನಬಸವಣ್ಣನವರಿಗೆ ಮುಟ್ಟುತ್ತದೆ, ಈ ವಿಚಾರವನ್ನುತಿಳಿದ ಅವರು ಚಂದಯ್ಯನವರ ಕಾಯಕ ಕ್ಷೇತ್ರದ ಸಮೀಪಿಸಿ ಚಂದಯ್ಯನವರ ಜೊತೆ ಚರ್ಚಿಸುತ್ತಾರೆ. ಗುರುಕೊಟ್ಟ ಪರಮಾತ್ಮನ ಕುರುಹಾದ ಇಷ್ಟಲಿಂಗ ಕಾಯವಿರುವ ತನಕ ಇರಲೇಬೇಕೆಂದು, ಆತ್ಮವಿರುವ ತನಕ ದೇಹದಾಶ್ರಯ ಬೇಕು. ಗಾಳಿಪಟಕ್ಕೆ ಸೂತ್ರವಿರಲೇಬೇಕು. ಸೂತ್ರ ಹರಿದ ಗಾಳಿಪಟ ದೇಹವಿಲ್ಲದ ಆತ್ಮವಿರುವುದು ನೋಡಲು ಸಾಧ್ಯವೇ? ಅದೇ ರೀತಿ ಸಾಧಕನಿಗೆ ಇಷ್ಟಲಿಂಗವು ಪರಮಾತ್ಮನನ್ನು ಕಾಣುವ ದರ್ಪಣವಿದ್ದಂತೆ, ಎಂದು ಮನವರಿಕೆ ಮಾಡಿ ಮರಳಿ ಲಿಂಗವನ್ನು ಧರಿಸುವಂತೆ ಮಾಡುತ್ತಾರೆ. ಕಲ್ಯಾಣದ ಕ್ರಾಂತಿಯ ಸಂದರ್ಭದಲ್ಲಿ ಶಿವಶರಣರು ತಮ್ಮ ವಚನಗಳನ್ನು ಬೆನ್ನ ಮೇಲೆ ಇಟ್ಟುಕೊಂಡು ಬೇರೆ ಬೇರೆ ಕಡೆ ತೆರಳುತ್ತಾರೆ. ನುಲಿಯ ಚಂದಯ್ಯನವರು ಕೂಡ ಶಿವಶರಣರ ಜೊತೆ ಕಲ್ಯಾಣದಿಂದ ತೆರಳುತ್ತಾರೆ. ಎಣ್ಣೆಹೊಳೆ, ತರೀಕೆರೆಯ ನಂದಿಗ್ರಾಮ ಮೊದಲಾದ ಕಡೆ ಉಳಿದುಕೊಂಡಿದ್ದರೆಂದು ತಿಳಿದುಬರುತ್ತದೆ. ಬಸವಾದಿ ಶರಣರು ಇವರಿಗೆ “ಕಾಯಕ ಜ್ಯೋತಿ” ಎಂಬ ಬಿರುದನ್ನು ನೀಡಿದ್ದರು. ನುಲಿಯ ಚಂದಯ್ಯನವರು ಈಗಿನ ದೊಡ್ಡಬಳ್ಳಾಪುರ ತಾಲ್ಲೂಕಿನ ಹಿರೇನಂದಿ ಗ್ರಾಮದಲ್ಲಿ ಕೆಲವು ದಿನಗಳಿದ್ದು ನಂತರ ತರೀಕೆರೆ ಹತ್ತಿರದ ನಂದಿಗ್ರಾಮಕ್ಕೆ ಬಂದರೆಂದು ಹೇಳುವ ಪುರಾವೆಗಳಿವೆ. ದುಮ್ಮಿರಾಯನ ಪತ್ನಿ ಪದ್ಮಾವತಿಯು ನುಲಿಯ ಚಂದಯ್ಯನವರಿಂದ ಧರ್ಮೋಪದೇಶ ಪಡೆದು ಬಂದು ಕೆರೆಯನ್ನು ಕಟ್ಟುತ್ತಾಳೆ. ಈಗಲೂ ಈ ಕೆರೆ ಸರಕಾರಿ ಲೆಕ್ಕಪತ್ರದಲ್ಲಿ ಪದ್ಮಾವತಿ 146ನೆಯ ಕೆರೆ ಎಂದು ದಾಖಲಾಗಿದೆ. ಈ ಕೆರೆಯ ದಡದ ಮೇಲೆ ಮಠವನ್ನು ಕಟ್ಟಿ ಅದರಲ್ಲಿ ನುಲಿಯ ಚಂದಯ್ಯನವರು ಇದ್ದು ತಮ್ಮ ಕಾಯಕವನ್ನು ಮುಂದುವರಿಸುತ್ತಾರೆ. ಕೊನೆಗೆ ಅಲ್ಲೇ ಲಿಂಗೈಕ್ಯರಾಗುತ್ತಾರೆ. ಈ ಶರಣರು ತಮ್ಮ ಕಾಯಕ ತತ್ತ್ವದ ಮೂಲಕ, ಶಿವಶರಣರಲ್ಲಿ ಅಗ್ರಮಾನ್ಯನಾಗಿದ್ದಾರೆ. ಇಂತಹ ಶರಣರನ್ನು ಪಡೆದ ಕನ್ನಡ ನಾಡು ಧನ್ಯವಾಗಿದೆ.

 • 46 ಪಾಲ್ಕುರಿಕೆ ಸೋಮನಾಥ
 • ‘ಶರಣ ಸಾಹಿತ್ಯಕ್ಕೆ ಪಾಲ್ಕುರಿಕೆ ಸೋಮನಾಥನ ಕೊಡುಗೆ ಅಪಾರ. ಆತ ರಚಿಸಿದ ‘ಬಸವ ಪುರಾಣ’ ಕೃತಿಯು ಶರಣ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಮಹತ್ವದ ಕೃತಿ ಎನಿಸಿದೆ’ ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಹೇಳಿದರು. ಪಾಲ್ಕುರಿಕೆ ಸೋಮನಾಥ ಮಹಾಕವಿಯು ಅರವತ್ತನಾಲ್ಕು ಶೀಲಗಳನ್ನು ಅನುಸರಿಸುತ್ತಿದ್ದ ಶಿವಶರಣ. ಐದು ಭಾಷೆಗಳಲ್ಲಿ ಪಾಂಡಿತ್ಯವನ್ನು ಪಡೆದ ಮಹಾವಿದ್ವಾಂಸರಾಗಿದ್ದುರು. ಆಂದ್ರಪ್ರದೇಶದಲ್ಲಿ ಹುಟ್ಟಿಬೆಳೆದು ಕರ್ನಾಟಕದ ಮಾಗಡಿಯಲ್ಲಿ ಲಿಂಗೈಕ್ಯರಾಗುತ್ತಾರೆ. ತೋಂಟದ ಸಿದ್ಧಲಿಂಗ ಶಿವಯೋಗೀಂದ್ರರ ಸೂಚನೆ ಮೇರೆಗೆ “ಪಾಲ್ಕುರಿಕೆ ಸೋಮನಾಥ ಪುರಾಣ” ವನ್ನು ರಚಿಸುತ್ತಾರೆ. ಇದು ವಾರ್ಧಿಕ ಷಟ್ಪದಿಯಲ್ಲಿದೆ. 1456 ಪದ್ಯಗಳಿಂದ ಕೂಡಿದೆ. ಇವರ ಕಾಲ ಕ್ರಿ.ಶ.1190. ಇವರು ಲಿಂಗವಂತ ಧರ್ಮದ ಕವಿ. ಇವರು ಮೊದಲು ಬ್ರಾಹ್ಮಣರಾಗಿದ್ದು ಬಸವಣ್ಣನವರ ಧರ್ಮಕ್ಕೆ ಮಾರು ಹೋಗಿ ಇಷ್ಟಲಿಂಗ ದೀಕ್ಷೆಯನ್ನು ಪಡೆದರೆಂದು ಪ್ರತೀತಿ ಇದೆ. ವಿಷ್ಣುರಾಮಿದೇವ ಮತ್ತು ಮಾದೇವಿಯವರು ಇವರ ತಂದೆ ತಾಯಿಗಳು. ಭೃಂಗರಿಟಿ ಗೋತ್ರ ಇವರದ್ದು. ಇವರ ಹೆಂಡತಿ ಮಂಗಳಾಂಬಿಕೆ. ಚತುರ್ಮುಖ ಪರಮೇಶ್ವರ ಇವರ ಮಗ. ಇವರು ಅನೇಕ ದೇಶಗಳನ್ನು ಸುತ್ತಿದವರು. ಕನ್ನಡ, ತೆಲುಗು, ತಮಿಳು, ಸಂಸ್ಕೃತ, ಮರಾಠಿ ಭಾಷೆಗಳಲ್ಲಿ ಪಾಂಡಿತ್ಯವನ್ನು ಪಡೆದವರಾಗಿದ್ದು. ಬಸವ ಧರ್ಮ ಮತ್ತು ವಚನ ಸಾಹಿತ್ಯದ ಪ್ರಚಾರವನ್ನು ಮಾಡಿದರು. ಬಸವಣ್ಣನವರ ಮಹಿಮೆಯನ್ನು ಎತ್ತಿಹಿಡಿದ ಮಹಾಮಹಿಮ ಇವರಾಗಿದ್ದಾರೆ. ಇವರು ತೆಲುಗಿನಲ್ಲಿ 17, ಸಂಸ್ಕೃತದಲ್ಲಿ 7, ಕನ್ನಡದಲ್ಲಿ 6 ಕೃತಿಗಳನ್ನೊಳಗೊಂಡಂತೆ 30 ಕೃತಿಗಳನ್ನು ರಚಿಸಿರುತ್ತಾರೆ. ‘ಅನುಭವಸಾರಂ’ ಇದು ಇವರ ಮೊದಲ ಕೃತಿಯಾಗಿದೆ. ಇದು ತೆಲುಗಿನಲ್ಲಿದೆ. ತೆಲುಗಿನಲ್ಲಿ ಮೊದಲು ಬಸವ ಪುರಾಣವನ್ನು ರಚಿಸಿದ ಕೀರ್ತಿ ಇವರದ್ದಾಗಿದೆ. 13ನೇ ಶತಮಾನದ ಮಹಾಶಿವಶರಣ ಇವರಾಗಿದ್ದು, ಬಸವೇಶ್ವರರು ಇವರ ಆರಾಧ್ಯ ಗುರುವಾಗಿದ್ದಾರೆ. “ತತ್ತ್ವವಿದ್ಯಾಕೊಡ, ಕವಿತಾಸಾರ” ಎಂಬ ಬಿರುದುಗಳು ಇವರಿಗಿದೆ.

 • 47 ಬಳ್ಳೇಶ ಮಲ್ಲಯ್ಯ
 • ಆವಪ್ರಾಣಿಗೆಯೂನೋವಮಾಡಬೇಡ. ಪರನಾರಿಯರಸಂಗಬೇಡ. ಪರಧನಕ್ಕಳುಪಬೇಡ, ಪರದೈವಕ್ಕೆರಗಬೇಡ. ಈ ಚತುರ್ವಿಧತವಕವ ಮಾಡುವಾಗ ಪರರುಕಂಡಾರು, ಕಾಣರುಎಂದೆನಬೇಡ. ಬಳ್ಳೇಶ್ವರಲಿಂಗಕ್ಕಾರುಮರೆಮಾಡಬಾರದಾಗಿ ಅಘೋರನರಕದಲ್ಲಿಕ್ಕುವ. ಅಪಾರಮಹಿಮನೆಂಬುದುನಿಮ್ಮಭೇರಿ. ಬೇಡಿತ್ತನೀವನೆಂಬುದುನಿಮ್ಮತಮ್ಮಟ. ಜಗವಂದಿತಲೋಕದೊಡೆಯನೆಂಬುದುನಿಮ್ಮಶಂಖ. ಪರದೈವವಿಲ್ಲವೆಂಬುದುನಿಮ್ಮಡಮರುಗ. ಶಿವಕಾಡನೆಂಬವರಬಾಯತ್ರಿಶೂಲದಲ್ಲಿರಿವ ಬಳ್ಳೇಶ್ವರಲಿಂಗದಡಂಗುರಮೂಜಗದೊಳಗಯ್ಯಾ. ಧರೆಯೊಳಗೆಚೋದ್ಯವನೋಡಿರೆ : ಒಂದುಹರಿಣಿಯಮೃಗವುಓದುಬಲ್ಲುದಾ ? ಚೆಲುವಗಿಳಿಯಲ್ಲಿವಿಪರೀತಕೊಂಬುಕೊಂಬುಗಳುಂಟು. ಇಂಬುಕಾಲಲ್ಲಿಮುಖವು. ಜಂಬುದ್ವೀಪದಬೆಳಗಿನುದಯದಾಹಾರವದಕೆ. ಸಂಭ್ರಮವನುಡಿವಕವಿಗಳಮುಖವಝಳಪಿಸಿತ್ತು ಶಂಭುಬಳ್ಳೇಶ್ವರನಕೊರಳಹಾರವನೋಡಿನಗುತ. ಬಳ್ಳೇಶ ಮಲ್ಲಯ್ಯನವರು ಮೊದಲು ಬರೀ ಮಲ್ಲಯ್ಯ, ಮಲ್ಲಶೆಟ್ಟಿ ಮಾತ್ರ ಆಗಿದ್ದರು. ಇವರ ತೀರ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಮಾಹಿತಿಗಳು ಲಭ್ಯ ಇಲ್ಲ. ಶರಣನಾಗುವ ಮುಂಚೆ ಜೈನಧರ್ಮೀಯರಾಗಿದ್ದರು. ಮಲ್ಲಯ್ಯನವರ ಕಾಯಕ ವ್ಯಾಪಾರವಾಗಿತ್ತು. ‘ಬಳ್ಳೇಶ್ವರ ಲಿಂಗ’ ಎಂಬ ಅಂಕಿತವಿರುವ ಇವರ ಒಂಬತ್ತು ವಚನಗಳು ಮಾತ್ರ ದೊರೆತಿವೆ. ಬಸವಲಿಂಗದೇವರ ಕಥಾಸಾಗರ, ಸೋಮೇಶ್ವರ ಪುರಾಣ, ಬಸವಪುರಾಣ-ಮೊದಲಾದ ಕಾವ್ಯಗಳಲ್ಲಿ ಇವರ ಬಗ್ಗೆ ಮಾಹಿತಿ ಸಿಗುತ್ತದೆ. ಜೈನಕುಲದಲ್ಲಿ ಹುಟ್ಟಿ, ಜೈನ ಸ್ತ್ರೀಯನ್ನು ಮದುವೆಯಾದ ಇವರು “ಹೇರಿನ ವ್ಯಾಪಾರ” ಮಾಡುತ್ತಿದ್ದರು. ಬಸವ ಧರ್ಮದ ಮೇಲೆ ಅನುರಕ್ತಿ ಹುಟ್ಟಿ ಶಿವಭಕ್ತರಾಗುತ್ತಾರೆ. ಅಂತರಂಗ ಮತ್ತು ಬಹಿರಂಗದ ಸರ್ವತೋಮುಖ ವಿಕಾಸಕ್ಕಾಗಿ ಮಾನಸಿಕ ಸ್ವಾಸ್ಥ್ಯ ಮುಖ್ಯ ಎನ್ನುತ್ತಾರೆ. ಇವರು ಶಿವಜ್ಞಾನವನ್ನು ಜಾಗ್ರತೆಯಿಂದ ಕಾಪಾಡಿಕೊಳ್ಳುವುದು ಹೇಗೆಂದು ತಿಳಿಸಿದ್ದಾರೆ. ಇಷ್ಟಲಿಂಗದ ಅರಿವನ್ನು ಸಂಪಾದಿಸುವ ತಾತ್ತ್ವಿಕ ಪರಿಯನ್ನು ಮಲ್ಲಯ್ಯನವರು ಪ್ರತಿಪಾದಿಸಿದ್ದಾರೆ. ಉತ್ತರದೇಶದ ಬಸವಲಿಂಗದೇವರ ಕಥಾಸಾಗರ, ಪಾಲ್ಕುರಿಕೆ ಸೋಮನಾಥನ ಪುರಾಣ, ಹರಿಹರದೇವನ ಸೌಂದರ ಪುರಾಣ, ಭೀಮಕವಿಯ ಬಸವ ಪುರಾಣ, ಶಾಂತಲಿಂಗ ದೇಶಿಕನ ‘ಭೈರವೇಶ್ವರ ಕಥಾಸೂತ್ರರತ್ನಾಕರ’, ಪರ್ವತೇಶನ ‘ಚತುರಾಚಾರ್ಯ ಪುರಾಣ, ಭೀಮಕವಿಯ ‘ಅಮರ ಗಣಾಧೀಶ್ವರ ಚರಿತ್ರೆಗಳು, ಶಿವಶರಣರ ಚರಿತ್ರೆಗಳು’; ಚೆನ್ನಣ್ಣ ಅವರ ‘ದೀಪದ ಕಲಿಯಾರ ಕಾವ್ಯ’ಗಳಲ್ಲಿ ಬಳ್ಳೇಶ ಮಲ್ಲಯ್ಯನವರ ಜೀವನಕ್ಕೆ ಸಂಬಂಧಿಸಿದ ಕೆಲವು ಸಂಗತಿಗಳು ಸಿಗುತ್ತವೆ. ಎಳೆತನದಲ್ಲಿ ತಮಗೆ ಸಿಕ್ಕ ಜೈನ ಧರ್ಮದ ಸಂಸ್ಕಾರದಿಂದ ಸಂಪೂರ್ಣವಾಗಿ ಬಿಡಿಸಿಕೊಳ್ಳಲು ಮಲ್ಲಯ್ಯನವರಿಗೆ ಸಾಧ್ಯವಾದಂತಿಲ್ಲ. ತಾವು ಲೋಕಕ್ಕೆ ನೀತಿಯನ್ನು ಹೇಳುವ ಸಂದರ್ಭದಲ್ಲಿ ಆ ಅಂಶಗಳನ್ನೇ ಪ್ರಮುಖವಾಗಿ ಗಮನಿಸಿದಂತಿದೆ. ಹೇಗೆ ಬಸವಣ್ಣನವರು ‘ಸಕಲ ಜೀವಾತ್ಮರಿಗೆ ಲೇಸನ್ನು ಹಾರೈಸಿದರೋ ಹಾಗೆ ಮಲ್ಲಯ್ಯನವರೂ ‘ಆವ ಪ್ರಾಣಿಗೆಯೂ ನೋವ ಮಾಡಬೇಡ’ ಎಂದು ಕರೆ ಕೊಡುತ್ತಾರೆ. ಜೀವನಮೌಲ್ಯವನ್ನು ಎಚ್ಚರದಿಂದ ನಮ್ಮದಾಗಿಸಿಕೊಳ್ಳಬೇಕೆಂದರೆ, ಸಮಾಜದಲ್ಲಿ ನೈತಿಕ ಪ್ರಜ್ಞೆಯನ್ನು ಮೂಡಿಸಬೇಕೆಂದರೆ ಏನು ಮಾಡಬೇಕು? ಎಂಬ ಅರಿವನ್ನು ಜನಮನದಲ್ಲಿ ಬಿಂಬಿಸಲು ಪ್ರಯತ್ನಿಸಿದ್ದಾರೆ. ‘ಪರ ನಾರಿಯರ ಸಂಗ’ದಿಂದ ದೂರವಿರಬೇಕು. ‘ಪರಧನ’ಕ್ಕೆ ಆಶಿಸಬಾರದು. ‘ಪರದೈವಕ್ಕೆ ಎರಗಬಾರದು. ಈ ಎಲ್ಲ ಸಂದರ್ಭದಲ್ಲಿ ಪ್ರಾಮಾಣಿಕ ಕ್ರಿಯೆ ನೆರವೇರಬೇಕು. ಪರರು ತನ್ನನ್ನು ಸದಾ ನೋಡುತ್ತಿರಬೇಕು ಎಂಬುದರ ಕಡೆಗಾಗಲಿ ಅಥವಾ ಅವರು ತನ್ನನ್ನು ಗಮನಿಸಲೇ ಇಲ್ಲ ಎನ್ನುವುದರ ಬಗ್ಗೆಯಾಗಲಿ ತಲೆಕೆಡಿಸಿಕೊಳ್ಳದೆ ಇರುವುದೇ ಪ್ರತಿಯೊಬ್ಬರಿಗೂ ಶ್ರೇಯಸ್ಸು, ನಂಬಿದ ಲಿಂಗಕ್ಕೆ ಮರೆಮಾಡದೇ ನಡೆಯುವುದರಲ್ಲಿ ಉನ್ನತಿ ಇದೆ ಎನ್ನುತ್ತಾರೆ. ಸಂಸ್ಕೃತ ಭಾಷೆಯ ಪ್ರಭಾವ, ಪ್ರಾಶಸ್ತ್ಯ ಹೆಚ್ಚಿದ್ದ ಅಂದಿನ ಕಾಲದಲ್ಲಿ ಕನ್ನಡತನವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದವರಲ್ಲಿ ಬಳ್ಳೇಶ ಮಲ್ಲಯ್ಯ ಒಬ್ಬರು. ಪಾಂಡಿತ್ಯ ಪ್ರದರ್ಶನಕ್ಕಿಂತ ಸಹೃದಯರಿಗೆ ಸಂವಹನವಾಗುವ ಭಾಷೆಯಲ್ಲಿ ಅಭಿವ್ಯಕ್ತಗೊಳಿಸುವಲ್ಲಿಯೇ ಸಾಹಿತ್ಯದ ನಿಜವಾದ ಸಾರ್ಥಕ ಅಡಗಿದೆ ಎಂಬ ಅರಿವಿನ ಹಿನ್ನೆಲೆಯಲ್ಲಿ ಕನ್ನಡತನಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡುತ್ತಾರೆ. ಬಳ್ಳೇಶ ಮಲ್ಲಯ್ಯನವರು ‘ಬೆಡಗಿನ ವಚನ’ಗಳನ್ನು ಬರೆದಿದ್ದಾರೆ. ಬೆಡಗಿಗೆ ಕಥಾತಂತ್ರದ ನಿರೂಪಣೆಯನ್ನು ಬಳಸಿಕೊಂಡಿದ್ದಾರೆ. ಶಿವಜ್ಞಾನವನ್ನು ಜಾಗ್ರತೆಯಿಂದ ಕಾಪಾಡಿಕೊಳ್ಳುವ ಪಥವನ್ನು, ಇಷ್ಟಲಿಂಗದ ಅರಿವನ್ನು ಸಂಪಾದಿಸಿಕೊಳ್ಳುವ ತಾತ್ತ್ವಿಕಪರಿಯನ್ನು ಬಳ್ಳೇಶ ಮಲ್ಲಯ್ಯನವರು ಪ್ರತಿಪಾದಿಸುತ್ತಾರೆ.

 • 48 ಹೆಂಡದ ಮಾರಯ್ಯ
 • ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಬಸವತತ್ವವನ್ನರಿತ ಹೆಂಡದ ಮಾರಯ್ಯ, ಹೆಂಡ ಮಾರಾಟ ಮಾಡುವ ಕುಲಕಸುಬನ್ನು ಬಿಡಬೇಕೆಂದು ತೀರ್ಮಾನಿಸಿದರು. ಬಿಡುವುದಕ್ಕೆ ಮುಂಚೆ ಹೆಂಡವನ್ನು ಕುಡಿಯಲು ಬರುವವರನ್ನು ಪರಿವರ್ತಿಸಬೇಕೆಂದು ತೀರ್ಮಾನಿಸಿ, ಒಂದು ಶೇರೆ ಕುಡಿಯುವವರಿಗೆ ಅರ್ಧ ಶೇರೆ, ಅರ್ಧ ಶೇರೆಯಿಂದ ಕಾಲು ಶೇರೆಗಿಳಿಸಿ, ಶೇರಿ (ಹೆಂಡ) ಕುಡಿತದಿಂದಾಗುವ ದುಷ್ಪರಿಣಾಮಗಳನ್ನು ತಿಳಿಸಿ ಅವರನ್ನೆಲ್ಲಾ ವ್ಯಸನಮುಕ್ತರನ್ನಾಗಿ ಪರಿವರ್ತಿಸಿ, ಪರಿವರ್ತಿತಗೊಂಡ ರೀತಿಯನ್ನು ಈ ವಚನದಲ್ಲಿ ಹಂಚಿಕೊಂಡಿದ್ದಾರೆ. “ನಾ ಮಾರ ಬಂದ ಸುರೆಯ ಕೊಂಬವರಾರೂ ಇಲ್ಲ ಹೊರಗಣ ಭಾಜನಕ್ಕೆ, ಒಳಗಣ ಇಂದ್ರಿಯಕ್ಕೆ ಉಂಡು ದಣಿದು, ಕಂಡು ದಣಿದು, ಸಂದೇಹ ಬಿಟ್ಟು ದಣಿದು ಕಂಡುದ ಕಾಣದೆ, ಸಂದೇಹದಲ್ಲಿ ಮರೆಯದೆ ಆನಂದವೆಂಬುದ ಆಲಿಂಗನವಂ ಮಾಡಿ ಕಂಗಳಂ ಮುಚ್ಚಿ ಮತ್ತಮಾ ಕಂಗಳಂ ತೆರೆದು ನೋಡಲಾಗಿ ಧರ್ಮೇಶ್ವರ ಲಿಂಗವು ಕಾಣ ಬಂದಿತ್ತು!” ಮಧ್ಯಪಾನ ಮಾಡಿದಾಗ ಆಗುವ ಅನುಭವಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅವುಗಳನ್ನು ಇಲ್ಲಿ ಬಳಸಿ ಶಿವಾನುಭಾವವೆಂಬ ಅಮೃತವನ್ನು ಕುಡಿದಾಗ ಆಗುವ ಭಗವಂತನ ಸಾಕ್ಷಾತ್ಕಾರದ ಆನಂದದ ಬಗೆಗೆ ಮೇಲಿನ ವಚನದಲ್ಲಿ ಮಾರಯ್ಯ ಹೇಳಿದ್ದಾರೆ. ಇವರ ದೃಷ್ಟಿಯಲ್ಲಿ ಮಧ್ಯವೆಂದರೆ ಕೇವಲ ಹೆಂಡ, ಸಾರಾಯಿಗಳಂತಹ ಮಾದಕ ಪದಾರ್ಥಗಳು ಮಾತ್ರವೇ ಅಲ್ಲ. ಐಹಿಕ ಸುಖ ಭೋಗಗಳು ಅಹಂಕಾರ ಮುಂತಾದವೂ ಮಧ್ಯಗಳೇ. ಅದರಿಂದಾಗಿ ಶಿವಾನುಭವವು ಮಧ್ಯಪಾನ ಮಾಡುವವರಿಗೆ ಅಲಭ್ಯ ಎಂದು.. “ಕರಣ ನಾಲ್ಕು ಮದವೆಂಟು ವ್ಯಸನಗಳು ಅರಿಷಡ್ವರ್ಗಂಗಳಲ್ಲಿ ಇಂತೀ ಉರವಣೆಗೊಳಗಾಗುತ್ತ ಅಣವ ಮಾಯಾ ಕಾರ್ಮಿಕ ಮೂರು ಸುರೆಯಲ್ಲಿ ಮುದುಡುತ್ತ ನಾ ತಂದ ಸುಧೆ ನಿಮಗಿಲ್ಲ ಎಂದೆ ಅದು ಧರ್ಮೇಶ್ವರ ಲಿಂಗದ ಅರ್ಪಣೆ! ಮೇಲಿನ ವಚನದಲ್ಲಿ ಭವಿಗಳನ್ನು ಕುರಿತು ಹೇಳಿದ್ದಾರೆ. ಭವಿಗಳು ಸುರಾಪಾನಿಗಳು, ಅವರು ಕುಡಿದಿರುವ ಸೆರೆ ಎಂದರೆ ಅಣವ ಮಾಯಾ ಕಾರ್ಮಿಕ ಮಲಗಳು. ಇವಲ್ಲದೆ ನಾಲ್ಕು ಕರಣಂಗಳು, ಅಷ್ಟಮದಗಳು, ಸಪ್ತವ್ಯಸನಗಳು ಮತ್ತು ಅರಿಷಡ್ವರ್ಗಗಳು ಇವುಗಳ ಉರವಣೆಗೆ ಸಿಲುಹಿಸಿದ್ದಾರೆ. ಇಂತಹವರಿಗೆ ಲಿಂಗಾಂಗ ಸಾಮರಸ್ಯ ಸಾಧ್ಯವಿಲ್ಲ. ಈ ಮಾಯಾ ಮೋಹ ಜಾಲವನ್ನೆಲ್ಲ ಕಿತ್ತು ಬಿಸುಟಿದಾಗಲೆ ಆತ್ಮಜ್ಞಾನವನ್ನು ಪಡೆಯಲು ಸಾಧ್ಯ ಎಂದಿದ್ದಾರೆ. ಹೆಣ್ಣು ಮಣ್ಣುಗಳ ಜಾಲದಲ್ಲಿ ಸಿಕ್ಕಿ ಐಹಿಕ ಸುಖದಲ್ಲಿ ಮುಳುಗಿರುವವರು ಅವುಗಳಿಂದ ಉನ್ಮತ್ತರಾದ್ದರಿಂದ ಜ್ಞಾನದಿಂದ ಹೊರಗೆ ಉಳಿಯುತ್ತಾರೆ. ಅದರಿಂದಾಗಿ ಭಕ್ತಿ ವಿರಕ್ತಿಗಳು ಅವರ ಹತ್ತಿರ ಸುಳಿಯುವುದಿಲ್ಲ. ಆದ್ದರಿಂದ ಅವರು ಭಗವಂತನ ಸಾಮರಸ್ಯವನ್ನು ಹೊಂದುವುದು ದೂರದ ಮಾತೇ ಸರಿ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಕಲ್ಯಾಣಕ್ಕೆ ಬಂದ ಮಾರಯ್ಯನವರು ತಂಪಾದ ಪಾನೀಯ ಹಾಗೂ ಕಬ್ಬಿನ ಪಾನಕ ಮಾರುವ ಕಾಯಕವನ್ನು ಕೈಗೊಂಡು ಬಿಡುವಿನ ವೇಳೆಯಲ್ಲಿ ಅರವಟಿಗೆಯಿಟ್ಟುಕೊಂಡು ದಾರಿಹೋಕರಿಗೆ ನೀರೆರೆಯುವ ದಾಸೋಹ ಸೇವೆಯನ್ನು ಮಾಡಿ, ಅನೇಕ ಪವಾಡಗಳನ್ನು ಮೆರೆದು ಹೆಂಡವನ್ನು ಮಾರುವುದನ್ನು ಬಿಟ್ಟರೂ, ಇವರ ಚರಿತ್ರೆ ಜಗತ್ತಿಗೆ ಮಾರ್ಗದರ್ಶನ ಹಾಗೂ ದಾರಿದೀಪವಾಗಲೆಂದು ‘ಹೆಂಡದ ಮಾರಯ್ಯ’ ಎಂಬ ಹೆಸರನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ. ಈಗಿನ ಸಮಾಜಕ್ಕೆ ಸತ್ಯ ಕಾಯಕದ ಸಂದೇಶವನ್ನು ಸಾರಿದ್ದಾರೆ ಹೆಂಡದ ಮಾರಯ್ಯನವರು. ಸಮಾಜದ ಸ್ವಸ್ತ್ಯವನ್ನೇ ತಮ್ಮ ಪ್ರಾಣ ಜೀವಾಳವಾಗಿಸಿಕೊಂಡು ಬದುಕಿ ಬಾಳಿ ಎಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ.

 • 49 ಸಿದ್ಧರಾಮೇಶ್ವರ
 • ಅರಲುಗೊಂಡ ಕೆರೆಗೆ ತೊರೆ ಬಂದು ಹಾಯ್ದಂತೆ, ಎಲೆ ಅಯ್ಯಾ, ನಿಮ್ಮ ಕಂಡು ಕಂಗಳು ಕಡೆಗೋಡಿವರಿದುವಯ್ಯಾ ಎನ್ನ ಮನಕ್ಕೆ ಮನ ವೇದ್ಯಾವಾದಡೆ ಕೈಮರೆದೆನೆಲೆ ಆಹಾ, ಕಪಿಲಸಿದ್ಧಮಲ್ಲಿನಾಥನ ಕಂಡ ಸುಖವು ಆರಿಗೆಯೂ ಇಲ್ಲ!!! ಎಂತೆಂತು ನೋಡಿದಡೀ ಮನವು ಸಂತವಿಡಲೀಯದಯ್ಯ ನಿಮ್ಮಯ್ಯ ಚಿಂತೆಗೆ ಒಳಗಾಗದೆ ದೆಸೆದೆಸೆವರಿವುದು ಕಾಮ ಕಿಚ್ಚೈಸೂದು, ಕ್ರೋಧ ಆಮಿಷ ತಾಮಸಕ್ಕೆ ತಾನೇ ಮುಂದಾಗಿಪ್ಪುದು, ಇದ ಮೂಲ ನಾಶವ ಮಾಡೇ ನೀ ಮುಂದಾಗಯ್ಯ ತಂದೆ ಕಪಿಲಸಿದ್ಧ ಮಲ್ಲಿಕಾರ್ಜುನ... ಸಿದ್ಧರಾಮೇಶ್ವರರವರ ಹುಟ್ಟೂರು ಸೊನ್ನಲಿಗೆ. (ಈಗಿನ ಮಹಾರಾಷ್ಟ್ರದ ಸೊಲ್ಲಾಪುರ) ಇವರು ಬಸವಣ್ಣನವರ ಸಮಕಾಲೀನರು. ಅತ್ಯಂತ ಪ್ರಮುಖ ವಚನಕಾರರು ಹಾಗೂ ಮಹಾಶರಣರು. ‘ಕಪಿಲಸಿದ್ಧ ಮಲ್ಲಿಕಾರ್ಜುನ’ ಎಂಬುದು ಇವರ ವಚನಗಳ ಅಂಕಿತವಾಗಿದೆ. ಅರವತ್ತೆಂಟು ಸಾವಿರಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದಾರೆ ಎಂಬುದು ಪ್ರತೀತ. ರಾಘವಾಂಕನವರ ‘ಸಿದ್ಧರಾಮ ಚಾರಿತ್ರ’ ಕಾವ್ಯದ ಮೂಲಕ ಸಿದ್ಧರಾಮನವರ ಜೀವನ ವಿವರಗಳನ್ನು ತಿಳಿಯಬಹುದಾಗಿದೆ. ಸಿದ್ಧರಾಮೇಶ್ವರರ ವಚನಗಳಲ್ಲಿ ‘ಯೋಗಿಗೆ ಕೋಪವೇ ಮಾಯೆ, ರೋಗಿಗೆ ಪಥ್ಯವೇ ಮಾಯೆ, ಜ್ಞಾನಿಗೆ ಮಿಥ್ಯೆಯೇ ಮಾಯೆ, ಅರಿದವನೆಂಬುವಗೆ ನಾನು ನೀನು ಎಂಬುದೆ ಮಾಯೆ’ ಎಂಬ ಭಾವನೆ ಇರುತ್ತದೆ. ಇಂತಹ ಮಾಯಾ ಭಾವನೆಯನ್ನು ಕಳೆದುಕೊಂಡವನು ಶರಣನಾಗಲು ಸಾಧ್ಯವೆಂದಿದ್ದಾರೆ. ಸಿದ್ಧರಾಮಯ್ಯನವರು, ಅಲ್ಲಮಪ್ರಭು, ಬಸವಣ್ಣ, ಚೆನ್ನಬಸವಣ್ಣನವರ ಬಗ್ಗೆ ಅಪಾರ ಗೌರವವನ್ನು ಇರಿಸಿಕೊಂಡಿದ್ದರು. ಅವರ ಸಹವಾಸಕ್ಕೆ ಬಂದ ಮೇಲೆ ತಮ್ಮ ಅನುಭಾವದ ತಾತ್ವಿಕತೆಯ ಆಲೋಚನೆಯಲ್ಲಿ ಬಹಳಷ್ಟು ಬದಲಾಗುತ್ತಾರೆ. ಸಮಾಜದ ಎಲ್ಲಾ ಜನರಿಗೆ ಮೋಕ್ಷ ಲಭ್ಯವಾಗಬೇಕೆಂದು ಬಯಸಿದವರು ಇವರಾಗಿದ್ದಾರೆ. ಇವರು ಜಗತ್ತಿಗೆ ಕರ್ಮಯೋಗದ ದೃಷ್ಟಿಯಿಂದ, ಸಮತಾ ಚಿಂತನೆಯಿಂದ ಅನನ್ಯವಾಗಿ ಕಾಣುತ್ತಾರೆ. ಕೋಪತಾಪಗಳಿಂದ ಕಾವೇರದೆ, ಸ್ತುತಿಯಿಂದ ಉಬ್ಬದೆ, ನಿಂದೆಯಿಂದ ಕುಗ್ಗದೆ ಸಮಾಧಾನ ತಳೆದುಕೊಂಡು ಸಮತೆಯಿಂದ ಇರಬೇಕೆಂಬುದೆ ಇವರ ಮಹತ್ವದ ಸಂದೇಶವಾಗಿದೆ. ನಿರ್ವಿಕಲ್ಪ- ಅದ್ವೈತ, ಬೆಳಗಿನ ಬೆಳಗು, ಜ್ಯೋತಿಯಿಲ್ಲದ ಬೆಳಗಿನ ಪ್ರಭೆ, ಮಹಾಘನ ಎಂಬ ವಿಶೇಷ ಬಿರುದುಗಳಿಂದ ಇವರನ್ನು ಅಲ್ಲಮಪ್ರಭುಗಳು ಶ್ಲಾಘಿಸಿದ್ದಾರೆ. ವಚನಕಾರರಲ್ಲಿ ಇವರಿಗೆ ಮಹತ್ವದ ಸ್ಥಾನವಿದೆ. ‘ಬಸವಯೋಗಿ’ ಎಂಬ ವಿಶಿಷ್ಟ ಸ್ಥಾನ ಇವರದ್ದಾಗಿದೆ.

 • 50 ಬಾಚಿಕಾಯಕದ ಬಸವಣ್ಣ
 • ಕುಲಗೋತ್ರಜಾತಿಸೂತಕದಿಂದ ಕೆಟ್ಟವರೊಂದು ಕೋಟ್ಯನುಕೋಟಿ. ಆನನಸೂತಕದಿಂದ ಕೆಟ್ಟವರು ಅನಂತಕೋಟಿ. ಮಾತಿನ ಸೂತಕದಿಂದ ಮೋಸವಾದವರು ಮನು ಮುನಿಸ್ತೋಮ ಅಗಣಿತಕೋಟಿ. ಆತ್ಮಸೂತಕದಿಂದ ಅಹಂಕರಿಸಿ ಕೆಟ್ಟವರು ಹರಿಹರ ಬ್ರಹ್ಮಾದಿಗಳೆಲ್ಲರು. ‘ಯದ್ರಷ್ಟ ತನ್ನಷ್ಟಂ’ ಎಂಬುದನರಿಯದೆ ಹದಿನಾಲ್ಕು ಲೋಕವೂ ಸಂಚಿತಾಗಾಮಿಯಾಗಿ ಮರಳಿ ಮರಳಿ ಹುಟ್ಟುತ್ತಿಪ್ಪರಯ್ಯ. ಇಂತೀ ಸೂತಕದ ಪ್ರಪಂಚ ಬಿಡಲಾರದ ಪಾಷಂಡಿ ಮರುಳುಗಳಿಗೆ ಪರಬ್ರಹ್ಮ ದೊರಕುವದೆ ಅಯ್ಯಾ? ಇದು ಕಾರಣ, ನಾಮರೂಪಕ್ರೀಗಳಿಗೆ ಸಿಲ್ಕುವನಲ್ಲವಯ್ಯ. ಅಗಮ್ಯ ಅಪ್ರಮಾಣ ಅಗೋಚರವಯ್ಯ. ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವಲ್ಲದೆ ಉಳಿದವರಿಗಿಲ್ಲವೆಂಬೆನು. ಪೃಥ್ವಿಯ ಮರೆಯ ಸುವರ್ಣದಂತೆ ಚಿಪ್ಪಿನ ಮರೆಯ ಮುತ್ತಿನಂತೆ ಅಪ್ಪುವಿನ ಮರೆಯ ಅಗ್ನಿಯಂತೆ ಒಪ್ಪದೊಳಗಣ ಮಹಾಪ್ರಕಾಶದಂತೆಯಿಪ್ಪ ಘನಲಿಂಗವನರಿಯೆ. ರುದ್ರ ಬ್ರಹ್ಮ ವಿಷ್ಣ್ವಾದಿಗಳು ತಮ್ಮ ಆತ್ಮಜ್ಞಾನ (ನಿಶ್ಚಿಂ)ತೆಯೆಂಬ ನಿಜವ ನೀಗಾಡಿಕೊಂಡರು. ಇದನರಿಯದೆ ಆಚರಿಸುವರು, ಆರಿಗೂ ಅಳವಲ್ಲವಯ್ಯಾ. ಇಷ್ಟಪ್ರಾಣಭಾವಸಂಬಂಧಿಗಳಪ್ಪ ಸದ್ಭಾವಾಚಾರವೆಡೆಗೊಂಡ ಶರಣಂಗಲ್ಲದೆ ಮಿಕ್ಕಿನ ದುರಾಚಾರಿಗಳಿಗೆ ಸಾಧ್ಯವಲ್ಲ, ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು. ಬಾಚಿ ಕಾಯಕದ ಬಸವಣ್ಣ 12ನೇ ಶತಮಾನದವರು. ಬಸವಣ್ಣನವರ ನೇರಪ್ರಭಾವಕ್ಕೆ ಒಳಗಾದವರು. ಇವರ ಹೆಂಡತಿ ಕಾಳವ್ವೆ. ದಂಪತಿಗಳಿಬ್ಬರೂ ವಚನಗಳನ್ನು ರಚಿಸಿದ್ದಾರೆ. ಬಾಚಿಕಾಯಕದ ಬಸವಣ್ಣನವರ ವಚನಗಳ ಅಂಕಿತ ‘ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗ'. ಇವರ ಹೆಂಡತಿ ಶಿವಶರಣೆ ಕಾಳವ್ವೆಯ ವಚನದ ಅಂಕಿತ ‘ಕರ್ಮಹರ ಕಾಳೇಶ್ವರ’ವಾಗಿದೆ. ಬಾಚಿಕಾಯಕದ ಬಸವಣ್ಣ ದಂಪತಿಗಳು ಆದರ್ಶ ಜೀವನವನ್ನು ನಡೆಸಿದವರಾಗಿದ್ದಾರೆ. ಕಾಯಕ ಮಾಡುವವರ ಮನಸ್ಸು ಸಂಪೂರ್ಣವಾಗಿ ಅದರಲ್ಲಿ ಕೇಂದ್ರೀಕೃತವಾಗಿರಬೇಕು. ಕಾಯಕ ಮತ್ತು ವ್ರತ ತಪ್ಪಿದರೆ ಸೈರಿಸಿಕೊಳ್ಳಬಾರದು ಎಂಬುದು ಈ ಶರಣರ ಸಂದೇಶವಾಗಿದೆ. ಇವರ ವೃತ್ತಿಸಾಧನಗಳಾದ ಬಾಚಿ, ಉಳಿ, ಕೊಡತಿಗಳಲ್ಲಿ ಇವರು ದೇವರನ್ನು ಕಾಣಬಯಸಿದವರು. ಪರಿಶುದ್ಧ, ಪ್ರಮಾಣಿಕ ಕಾಯಕವನ್ನು ಬಸವಣ್ಣನವರು ತನಗೆ ಕರುಣಿಸಿದರೆಂದು ಕೃತಜ್ಞತೆಯನ್ನು ಅರ್ಪಿಸಿದ್ದಾರೆ. ಲಿಂಗ ಧರಿಸಿದರೂ ರೋಗರುಜಿನ ಬಂದರೆ ಹೆದರಬಾರದು. ಅವುಗಳನ್ನು ಎದುರಿಸಿ ನಿಲ್ಲಬೇಕು. ಈ ದೇಹ ನಶ್ವರ. ಶಿವಾನುಭಾವದಲ್ಲಿ ಸದ್ಗತಿಯನ್ನು ಕಾಣಬಹುದೆಂದು ಸಂದೇಶ ಸಾರಿದ್ದಾರೆ. ಇವರು ಇಷ್ಟಲಿಂಗದಲ್ಲಿ ನಿಷ್ಠೆಯುಳ್ಳ ಶರಣರು. ಷಟ್ಸ್ಥಲದ ಮಹಾಸ್ಥಲದಲ್ಲಿ ಒಡಗೂಡಿ ನಿಲ್ಲುವುದು ಶರಣರಿಗಲ್ಲದೆ ಬೇರೆ ಯಾರಿಗೂ ಸಾಧ್ಯವಿಲ್ಲ. ಯಾವ ಜೀವಕ್ಕೂ ನೋವು ಉಂಟು ಮಾಡಬಾರದು ಎನ್ನುವ ಬಾಚಿಕಾಯಕ ಬಸವಣ್ಣ ನಮ್ಮ ಮುಂದೆ ಒಬ್ಬ ಆದರ್ಶ ಶರಣರಾಗಿ ನಿಲ್ಲುತ್ತಾರೆ.

 • 51 ಬಾಲಬೊಮ್ಮಣ್ಣ
 • ಹಾವಿನ ಬಿಲದಲ್ಲಿ ಕೋಲನಿಕ್ಕಲಾಗಿ ಕೋಲ ಬೆಂಬಳಿಯಲ್ಲಿ ಹಾಯ್ವ ಹಾವಿನ ತೆರದಂತೆ ನಿಶ್ಚಯ ವಸ್ತು. ಇದನರಿವುತ್ತಲೆ ನಿಜವಸ್ತುವಿನ ಗುಣ ಮೋಹದಲ್ಲಿ ಅಚ್ಚೊತ್ತಿದಂತೆ ಎರಡಳಿಯಬೇಕು, ವೀರಶೂರ ರಾಮೇಶ್ವರಲಿಂಗದಲ್ಲಿ. ಈ ಮಹಾ ಶಿವಶರಣರ ಕಾಲ ಹನ್ನೆರಡನೆಯ ಶತಮಾನ. ಗಣಸಹಸ್ರ ನಾಮದಲ್ಲಿ ಈ ಶರಣನ ಹೆಸರು ಬರುತ್ತದೆ. ‘ವೀರಶೂರ ರಾಮೇಶ್ವರಲಿಂಗ’ಎಂಬ ಅಂಕಿತದಲ್ಲಿ ವಚನಗಳನ್ನು ಬರೆದಿರುತ್ತಾರೆ. ಭೈರವೇಶ್ವರ ಕಾವ್ಯದ ಕಥಾಸೂತ್ರ ರತ್ನಾಕರದಲ್ಲಿ ಇವರ ಕಥೆಯ ಉಲ್ಲೇಖವಿದೆ. ಬಾಲಬೊಮ್ಮಣ್ಣನವರ ಲಿಂಗನಿಷ್ಠೆ ಅನುಕರಣೀಯವಾದುದು. ಸಿದ್ಧರಾಮಯ್ಯನವರು ಸೊನ್ನಲಾಪುರದಲ್ಲಿ ಗುಡಿಯನ್ನು ಕಟ್ಟಿಸಿ, ಲಿಂಗಪೂಜೆ ಮಾಡುತ್ತಿದ್ದರು. ಆಗ ಬಾಲ ಬೊಮ್ಮಣ್ಣ ಪ್ರತಿಷ್ಡೆ ಮಾಡಿದ ಲಿಂಗಕ್ಕೆ ಪೂಜೆ ಮಾಡಲು ಹಣವಿಲ್ಲದೆ ಮರುಗುತ್ತಿದ್ದರು. ಇದನ್ನು ಗಮನಿಸಿದ ಸಿದ್ಧರಾಮಯ್ಯನವರು ಹಾರೆ, ಗುದ್ದಲಿ ಕೊಟ್ಟು ಅಂಗಳದಲ್ಲಿ ಅಗೆಯಲು ಹೇಳಿದರು. ಬೊಮ್ಮಣ್ಣನವರು ಅಂಗಳ ಅಗೆಯುವಾಗ ಅವರಿಗೆ ಕೊಪ್ಪರಿಗೆಯಷ್ಟು ಬಂಗಾರ ಸಿಕ್ಕಿತು. ಈ ಸಂಪತ್ತಿನಿಂದ ಬಾಲಬೊಮ್ಮಣ್ಣನವರು ಗುಡಿಯನ್ನು ಕಟ್ಟಿ ಲಿಂಗಪೂಜೆ ಮಾಡುತ್ತಾ ಸುಖವಾಗಿದ್ದರು. ರಾಘವಾಂಕನ ಸಿದ್ಧರಾಮ ಚರಿತ್ರೆಯಲ್ಲೂ ಇವರ ಬಗ್ಗೆ ವಿವರಗಳಿವೆ. ಆ ಕಥೆಯಲ್ಲಿ 17 ದೇವಾಲಯಗಳನ್ನು, 17 ಯೋಗಲಿಂಗಗಳನ್ನು ಪ್ರತಿಷ್ಠೆ ಮಾಡಿ ಪೂಜಿಸಿದರೆಂಬ ವಿವರಗಳಿವೆ. ಸಿದ್ಧರಾಮ ಶರಣರು ಬಾಲಬೊಮ್ಮಣ್ಣವರನ್ನು ತಮ್ಮ ಅಣ್ಣನಂತೆ ಕಾಣುತ್ತಿದ್ದರು, ವಿಡಂಬನೆಯು ಬಾಲಬೊಮ್ಮಣ್ಣನವರ ವಚನದ ಜೀವಾಳವಾಗಿದೆ. ಸರ್ವಸಂಗ ಪರಿತ್ಯಾಗ ಮಾಡಿ ಏಕಾಂಗಿಯಾಗಿ ಸಾಧನೆ ಮಾಡಬೇಕು. ಅರಿವಿನ ಕುರುಹಾದ ಇಷ್ಟಲಿಂಗವನ್ನು ಉಭಯ ಭೇದವಿಲ್ಲದೆ ನಂಬಬೇಕು. ಗುರುಲಿಂಗ, ಶಿವಲಿಂಗ, ಜಂಗಮಲಿಂಗದ ಒಳಗನರಿದು ಸಮರಸವಾದ ಗುಣವನ್ನು ಸಂಪಾದಿಸಿಕೊಳ್ಳಬೇಕು ಎಂದಿದ್ದಾರೆ ಬಾಲಬೊಮ್ಮಣ್ಣ. ಇವರು ಅಷ್ಟಾವರಣದ ತತ್ತ್ವಾನು ಬಾವವನ್ನು ನೋಡು ನೋಡುತ್ತಲೆ ಅನುಭವಿಸಿದ್ದಾರೆ. ಸಾಮಾಜಿಕ ಬದುಕಿಗಿಂತ ಒಂದರ್ಥದಲ್ಲಿ ಇಂತಹ ಶರಣರಿಗೆ ಧಾರ್ಮಿಕಾಚರಣೆಯ ಬದುಕೆ ಹೆಚ್ಚು ಪ್ರಿಯವಾಗಿದೆ. ಇಂಥವರ ಆದರ್ಶಗುಣಗಳನ್ನು ಎಲ್ಲರೂ ಅಳವಡಿಸಿಕೊಳ್ಳುವುದರಿಂದ ಶಿವಾರ್ಚನೆ ಮಾಡಿದಷ್ಟೇ ಪುಣ್ಯ ಬರುತ್ತದೆ.

 • 52 ಬಾಲಸಂಗಣ್ಣ
 • ಬಂಗಾರಕ್ಕೆ ಒಳಹೊರಗುಂಟೆ? ಕರ್ಪುರ ಚಂದನ ಅಗರು ಇರವಂತಿ ಶಾವಂತಿ ಮೊಲ್ಲೆ ಮಲ್ಲಿಗೆ ಅದಿರ್ಗಂತಿ ಮರುಗ ದವನ ಪಚ್ಚೆ ಮುಡಿವಾಳ ಕೇತಕಿ ಮುಂತಾದ ಸಕಲ ಪತ್ರಪುಷ್ಪಗಳಿಗೆ ಒಳಹೊರಗುಂಟೆ? ಅವರಂದವುಳ್ಳನ್ನಕ್ಕ ಸರ್ವಾಂಗದಲ್ಲಿ ಗಂಧಪರಿಪೂರ್ಣಮಾಗಿರ್ಪುದದರಂತೆ ಕಮಠೇಶ್ವರಲಿಂಗದಲ್ಲಿ ಉಭಯ ಮುಟ್ಟಳಿದ ಶರಣ ನಿರವು. ಬಾಲ ಸಂಗಣ್ಣನವರು 12ನೇ ಶತಮಾನದ ಶಿವಶರಣರು. ಇವರು ‘ಕಮರೇಶ್ವರಲಿಂಗ’ ಎಂಬ ಅಂಕಿತದಲ್ಲಿ ವಚನಗಳನ್ನು ಬರೆದಿದ್ದಾರೆ. ಬಸವಣ್ಣನವರೇ ತಮಗೆ ಗುರು ಲಿಂಗ ಜಂಗಮ ಎಂದು ನಂಬಿದವರು ಇವರಾಗಿದ್ದಾರೆ. ಬಾಲಸಂಗಯ್ಯ ಬಾಲ್ಯದಲ್ಲಿಯೇ ಸಂಗಯ್ಯನಲ್ಲಿ ಬೆರೆತಿದ್ದಾರೆ. ಇವರು ಪ್ರಬುದ್ಧ ವಚನಕಾರರಾಗಿದ್ದಾರೆ. ಶರಣರ ಮನವಿದ್ದಂತೆ ಅಲ್ಲಿಯೆ ಇರಬಲ್ಲ ಪರಮನೇ ಲಿಂಗ. ಗುರುಲಿಂಗ ಜಂಗಮ ಭಕ್ತರು ಹೇಗಿರಬೇಕೆಂದು ತಮ್ಮ ವಚನದಲ್ಲಿ ತಿಳಿಸಿದ್ದಾರೆ. ಊರೊಳಗಣ ಹೊಲೆಯ ಊರ ಹೊರಗಣ ಕುಲಜ, ಶರಣ ತಾನೇ ತಾನಾಗಿಬೇಕು, ಸಂದೇಹವನಳಿದವನಾಗಿರಬೇಕು. ಲಿಂಗವನೊಡಗೂಡಿದವನಾಗಿರಬೇಕು, ಉಭಯ ಮುಟ್ಟಳಿದವನಾಗಿರಬೇಕು, ಶರಣ ಒಳ್ಳೆಯ ಮನಸ್ಸಿನವನಾಗಿರಬೇಕೆಂಬುದೇ ಬಾಲಸಂಗಣ್ಣನವರ ಆಸೆಯಾಗಿದೆ. ಈ ಆಸೆಯನ್ನು ಶಿವಭಕ್ತರೆಲ್ಲರೂ ನನಸು ಮಾಡಲು ಕಂಕಣಬದ್ಧರಾಗಬೇಕಾಗಿದೆ.

 • 53 ಬಾಹೂರ ಬೊಮ್ಮಣ್ಣ
 • ಆವ ಸ್ಥಲ ಸಾಧಿಸಿ ಬಂದು ನಿಂದಡೂ ಭಾವಶುದ್ಧಾತ್ಮವಾಗಿ ವೇಧಿಸುವುದೊಂದೆ ವಸ್ತು. ಅದು ಭಕ್ತಿಯ ಬೇರು, ಸದಾಶ್ರದ್ಧೆಯ ಶಾಖೆ, ವಿಶ್ವಾಸದ ಫಲ, ನಿಜತತ್ವದ ರಸ, ಸ್ವಯದ ಸ್ವಾದು. ಅದು ಸಂಗನಬಸವಣ್ಣನಿಂದ ಬಂದ ಬೆಳೆ, ಬ್ರಹ್ಮೇಶ್ವರಲಿಂಗದಲ್ಲಿ ಐಕ್ಯವಾಯಿತ್ತು. ಕಾದ ಲೋಹದ ಮೇಲೆ ನೀರನೆರೆದಡೆ ನೀರ ಕುಡಿದುದು ಕಾಹೊ, ಕಬ್ಬುನವೊ? ಎಂಬುದನರಿತಲ್ಲಿ ಅಂಗಲಿಂಗಸಂಬಂಧಿ. ಕ್ಷೀರ ಉಕ್ಕುವಲ್ಲಿ ಆರೈದು ನೀರನೆರೆದಡೆ ಆ ನೀರ ಕುಡಿದುದು ಹಾಲೊ, ಹಂಚೊ? ಎಂಬುದು ಕಡೆಗಾಣಿಸಿದಲ್ಲಿ ಕ್ರೀ ಜ್ಞಾನ ಆತ್ಮಲಿಂಗಸಂಬಂಧಿ. ಇಂತೀ ಉಭಯದ ಒಳಗನರಿತಲ್ಲಿ ಕ್ರೀಗೆ ವರ್ತನೆ, ಅರಿವಿಂಗೆ ಕೂಟ. ಈ ಗುಣ ಸಂಗನಬಸವಣ್ಣನ ಆಟ. ಬ್ರಹ್ಮೇಶ್ವರಲಿಂಗದ ಒಳಗನರಿದವರಾಟ. ಬಾಹೂರ ಬೊಮ್ಮಣ್ಣನವರು 12 ನೇ ಶತಮಾನದ ಶಿವಶರಣ. ಇವರ ಊರು ಬಾಹೂರ. ಇದು ಕಲ್ಯಾಣದ ಸಮೀಪದ ಊರಾಗಿದೆ. ಇವರ ವಚನಗಳನ್ನು ರಚಿಸಿದ್ದು “ಸಂಗನ ಬಸವಣ್ಣ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗ”. ಇದು ಇವರ ವಚನಾಂಕಿತವಾಗಿದೆ. ಕಥೆ, ಪುರಾಣ, ಕಾವ್ಯಗಳಲ್ಲಿ ಇವರು ಪವಾಡ ಪುರುಷರಾಗಿ ಗೋಚರಿಸುತ್ತಾರೆ. ಬಸವಲಿಂಗ ದೇವರ ಕಥಾಸಾಗರ, ಕಥಾ ಸೂತ್ರರತ್ನಾಕರ, ಶಿವತತ್ತ್ವಚಿಂತಾಮಣಿ, ಬೊಮ್ಮಯ್ಯನ ರಗಳೆ ಮುಂತಾದ ಎಲ್ಲಾ ಕೃತಿಗಳಲ್ಲಿ ಇವರು ಪವಾಡಪುರುಷರಾಗಿ ಚಿತ್ರಿತರಾಗಿದ್ದಾರೆ. ಸಂಗನ ಬಸವಣ್ಣನಲ್ಲಿ ಬಾಹೂರ ಬೊಮ್ಮಣ್ಣನವರಿಗೆ ಅಚಲವಾದ ವಿಶ್ವಾಸ. ನುಡಿದ ಮಾತಿಂಗೆ ನಡೆ ಶುದ್ಧವಾಗಿರಬೇಕು. ನಡೆವ ನಡೆಗೆ ಕ್ರಿಯೆ ಶುದ್ಧವಾಗಬೇಕೆಂದು ಇವರು ತಮ್ಮ ವಚನದಲ್ಲಿ ತಿಳಿಸಿದ್ದಾರೆ. ಷಟ್ಸ್ಥಲದಲ್ಲಿ ಭಾವಶುದ್ಧವಾಗಿರಬೇಕೆಂದು ಇವರು ಸಾರಿರುತ್ತಾರೆ. ಸದ್ಭಾವವನ್ನು ಬೆಳೆಸಿಕೊಂಡು ಬದುಕಿದ ಮಹಾಶಿವಶರಣ ಇವರಾಗಿದ್ದಾರೆ.

 • 54 ಭಿಕಾರಿ ಭೀಮಯ್ಯ
 • ಕಾಳಗವೆಂಬ ಕಟ್ಟಿದಿರಾದಡೆ, ಸೋಂಕಿದಡೆ ಬಿಡೆ, ಕರೆದರೆಂದು ಬಿಡೆ. ವ್ರತ ಹೋದವರು ಸುಳಿಯದಿರಿ. ಕಂಡಡೆ ಕೊಲುವ ಬಿರಿದು, ಭಿಕಾರಿ ಭೀಮೇಶ್ವರಲಿಂಗವೆ. ಭಿಕಾರಿ ಭಿಕಾರಕ್ಕೆಳಸ. ಉಣ್ಣಲು ಉಡಲು ಕಾಣದಾತ ಭಿಕಾರಿ. ತನು ಮೀಸಲು, ಮನ ಮೀಸಲು, ಬಾಯಿ ಬೋರು ಬೋರು. ಮರಣವಳಿದುಳಿದಾತ ಭಿಕಾರಿ. ಸಂಚಲದ ಪಂಚಕರಣಗಳ ತೆಗೆದುಂಡು, ರುಂಡಮಾಲೆಯ ರಣಮಾಲೆಯ ಹೆಣಮಾಲೆಯ ಚಾರುಚ್ಚಿದಲ್ಲದೆ ಭಿಕಾರಿ ಭೀಮೇಶ್ವರಲಿಂಗಕ್ಕೆ ದೂರ ಕಾಣಾ,ಕರುತಿರುವ ಗೊರವಾ ಭಿಕಾರಿ ಭೀಮಯ್ಯ ಬಸವಣ್ಣನವರ ಸಮಕಾಲೀನ ಶಿವಶರಣರು ಹಾಗೂ ವಚನಕಾರರು. ಹೆಸರೇ ಸೂಚಿಸುವಂತೆ ಭಿಕಾರಿ ಅನ್ವರ್ಥನಾಮವಾಗಿದೆ. ಭಿಕಾರಿ ಎಂದರೆ ದಿಕ್ಕಿಲ್ಲದವನು ಎಂದು ಅರ್ಥ. ಯಾರಿಗೆ ತಂದೆ-ತಾಯಿ, ಬಂಧು-ಬಳಗ ಯಾರೂ ಇಲ್ಲವೋ ಅವನು ಭಿಕಾರಿ ಎನಿಸಿಕೊಳ್ಳುತ್ತಾನೆ. ಯಾವನು ಹುಟ್ಟಿಲ್ಲವೋ ಯಾವನು ಸತ್ತಿಲ್ಲವೋ ಅವನು ಭಿಕಾರಿ ಎನಿಸಿಕೊಳ್ಳುತ್ತಾನೆ. ಪರಮಾತ್ಮನನ್ನು ತುಂಬಿಕೊಂಡಿರುವ ಇವರು ಎಲೆಮರೆಯ ಶರಣರು. ಬೇರೆ ಶರಣರಿಗೆ ಸಿಕ್ಕಿದಷ್ಟು ಪ್ರಚಾರ ಇವರಿಗೆ ಸಿಕ್ಕಿಲ್ಲ. ಭಿಕಾರಿಯಾದ ಇವರಿಗೆ ಲೋಕದ ಚಿಂತೆ ಎಲ್ಲಿಂದ ಬರಬೇಕು? ಎಲೆಯ ಮರೆಯ ಕಾಯಿಯಂತಿರುವ ಇವರು ಬಸವಾದಿ ಶಿವಶರಣರ ಗಮನಕ್ಕೆ ಬಾರದೆ ಇರಬಹುದು. ತಲೆಗೆ ಎಣ್ಣೆಯಿಲ್ಲ, ಹೊದ್ದಿರುವುದು ಹುಲಿಯ ಚರ್ಮ. ಇದು ಭಿಕಾರಿ ಭೀಮಯ್ಯನವರ ಪ್ರತಿರೂಪವಾಗಿದೆ. ಇವರ ಎರಡು ವಚನಗಳು ಲಭ್ಯವಾಗಿವೆ. ಲಭ್ಯವಾದ ಎರಡು ವಚನಗಳು ತುಂಬಾ ಪ್ರಭುತ್ವಮಟ್ಟದ್ದಾಗಿದೆ. ‘ಭಿಕಾರಿ ಭೀಮೇಶ್ವರಲಿಂಗ’ ಇವರ ವಚನಗಗಳ ಅಂಕಿತವಾಗಿದೆ. ಶಿವಭಕ್ತರಿಗೆ ಆಚಾರವೇ ಮುಖ್ಯ. ಅಂತರಂಗದಲ್ಲಿ ವ್ರತ, ಬಹಿರಂಗದಲ್ಲಿ ಆಚರಣೆ ಇದು ಆಗಬೇಕು. ಇವರು ಶಿವಾನಂದದ ಅನುಭಾವವನ್ನು ತನ್ನ ಎರಡೇ ವಚನದಲ್ಲಿ ಮನಮುಟ್ಟುವ ಹಾಗೆ ಚಿತ್ರಣ ಮಾಡಿದ್ದಾರೆ. ಭಕ್ತಿಜ್ಞಾನ ವೈರಾಗ್ಯಗಳು ಪ್ರಸಾದದಿಂದ ಅಳವಡದೆ ತಾನು ಅರಿತುಕೊಂಡಾಗ ಮಾತ್ರ ಅನುಭವಾಗುವುದು ಎನ್ನುವುದು ಇವರ ನಿಲುವಾಗಿದೆ. ಈ ನಿಷ್ಠಾವಂತ ಶರಣ, ಮಹೇಶ್ವರಸ್ಥಲ ಗುಣಸ್ವರೂಪ ಹೊಂದಿದ ಇವರ ವಚನಗಳು ಶಿವನ ಸರ್ವೊತ್ತಮತ್ವವನ್ನು ಸಾರುತ್ತವೆ. ಭಿಕಾರಿಭೀಮಯ್ಯನ ವಚನಗಳನ್ನು ಅರಿತು ಬಾಳುವುದೇ ನಾವು ಅವರಿಗೆ ಕೊಟ್ಟ ಗೌರವವಾಗಿರುತ್ತದೆ ಹಾಗೂ ಬಾಳಾಗುತ್ತದೆ.

 • 55 ಬಿಬ್ಬಿ ಬಾಚಯ್ಯ
 • ಅಗ್ನಿ ಲೋಹದಂತೆ, ಫಲ ರಸದಂತೆ ಕಾಯ ಜೀವದ ಪರಿಯಂತೆ, ಅಂಗ ನೆರಳಿನಂತೆ ಅಂಗಲಿಂಗಸಂಬಂಧವಾಗಬೇಕು, ಏಣಾಂಕಧರ ಸೋಮೇಶ್ವರಲಿಂಗದಲ್ಲಿ. ಇಕ್ಷುದಂಡಕ್ಕೆ ಹಣ್ಣುಂಟೆ? ಕಾಮಧೇನುವಿಂಗೆ ಕರುವುಂಟೆ? ಕಲ್ಪತರುವಿಂಗೆ ಕರುವುಂಟೆ? ಸರ್ವಜ್ಞಂಗೆ ಇಷ್ಟಪ್ರಾಣಜ್ಞಾನಭಿನ್ನನಾಸ್ತಿ. ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಪ್ರಾಣಲಿಂಗಿಯ ಸ್ಥಲ. ಬಸವಾದಿ ಶಿವಶರಣರ ಸಮೂಹದಲ್ಲಿ ಬಾಳಿದ ಅಸಂಖ್ಯಾತ ಮಹಾ ಶಿವಶರಣರಲ್ಲಿ ಬಿಬ್ಬಿ ಬಾಚಯ್ಯನವರು ಒಬ್ಬರು. ಇವರನ್ನು ಬಿಬ್ಬಿ ಬಾಚಯ್ಯ, ಗೊಬ್ಬೂರು ಬಾಚಯ್ಯ ಎಂದೂ ಗುರುತಿಸಿದ್ದಾರೆ. ಕಲರ್ಬುಗಿ ಜಿಲ್ಲೆಯ ಗೊಬ್ಬೂರು ಇವರ ಊರಾಗಿದೆ. ಶರಣಗಣದಲ್ಲಿ ಅನುಭಾವಿಯೂ, ಪ್ರಸಿದ್ಧನೂ ಆದ ಇವರ 102 ವಚನಗಳ ಮೂಲಕ ತಿಳಿಯಬಹುದು. ಒಮ್ಮೆ ಬಿಬ್ಬಿ ಬಾಚಯ್ಯ ಬಂಡಿಯಲ್ಲಿ ಹೋಗುತ್ತಿದ್ದಾಗ ವಿಪ್ರರು ಇವರನ್ನು ಹೀಯಾಳಿಸಿದರು. ಬಂಡಿಯನ್ನು ತಡೆದರು. ಆದರೂ ಇವರು ತಾಳ್ಮೆಯಿಂದ ಇದ್ದರು. ಇವರನ್ನು ವಿಪ್ರರೆಲ್ಲರೂ ಮುತ್ತಿಗೆ ಹಾಕಿದರು. ಆಗ ಇವರನ್ನು ಶಿವಪ್ರಸಾದದ ಮೇಲೋದಿಕೆಯನ್ನು ತೆರೆದರು. ಕೊಡಲೇ ಅದು ಕಾಲ ಕೆಂಡವಾಗಿ ಗೊಬ್ಬೂರ ಕುಟಿಲ ವಿಪ್ರರನ್ನೂ ಅವರ ಮನೆಯನ್ನು ಸುಟ್ಟುಹಾಕಿತು. ಆಗ ಉಳಿದವರೆಲ್ಲರೂ ‘ಅಯ್ಯೋ ಕೆಟ್ಟೆವು’ ಎಂದು ಬಿಬ್ಬಿ ಬಾಚಯ್ಯನಿಗೆ ಶರಣಾಗತರಾದರು. ಆದರಿಸಿ ಬೆಳಗುವ ತತ್ಪ್ರಸಾದಕ್ಕೆ ಮುಗಿಯಿರಿ ಎಂದಾಗ ವಿಪ್ರರೆಲ್ಲರು ಕೈ ಮುಗಿದರು. ಬೆಂಕಿ ಶಾಂತವಾಯಿತು. ಇದು ಬಿಬ್ಬಿ ಬಾಚಯ್ಯನವರನ್ನು ಕುರಿತು ಪುರಾಣದಲ್ಲಿ ಬಂದ ಅವರ ಮಹಿಮೆಯಾಗಿದೆ. ಇವರು ಕೂಡ ವಿಪ್ರಕುಲದಲ್ಲಿ ಹುಟ್ಟಿದರೂ ಬಸವಣ್ಣನವರಂತೆ ಅದನ್ನು ತ್ಯಜಿಸಿ ಭಕ್ತರಾದವರು. ತಂದೆಯ ಹೆಸರು ಆದಿತ್ಯದೇವ. ಇವರು ಬಸವಣ್ಣನವರ ಹಿರಿಯ ಸಮಕಾಲೀನರೆಂದು ತಿಳಿದುಬರುತ್ತದೆ. ಇವರ ಕಾಲ ಕ್ರಿ.ಶ.1150. ನಿಷ್ಠರವಾದ ಭಕ್ತಿಜೀವನವನ್ನು ಅಪ್ಪಿಕೊಂಡವರು, ಸತ್ಯಶುದ್ಧ ಕಾಯಕವನ್ನು ಮಾಡಿದವರು. ಅನುಭಾವಕ್ಕೆ ವಚನ ಆಕಾರವನ್ನು ಕೊಟ್ಟ ಬಿಬ್ಬಿಬಾಚಯ್ಯ ನಿರಾಕಾರ ಏಣಾಂಕಧರ ಸೋಮೇಶ್ವರ ಲಿಂಗದಲ್ಲಿ ಬೆರೆತು ಬಯಲಾಗುತ್ತಾರೆ.

 • 56 ಬೊಕ್ಕಸದ ಚಿಕ್ಕಣ್ಣ
 • ಗಾಂಧರ್ವಕ್ಕೆ ರಾಗದ ಹೆಸರಿಟ್ಟಂತೆ, ಸ್ವರವೊಂದು, ಸಂಚಾರದ ಪರಿ ಬಣ್ಣ ಬೇರಾದಂತೆ, ಗೋವರ್ಣ ಹಲವು, ಕ್ಷೀರ ಏಕವರ್ಣವಾದಂತೆ, ಕಾಯಕ ಹಲವಾದಲ್ಲಿ ಮಾಡುವ ಮಾಟ, ಶರಣರೊಳಗಾಟ, ಲಿಂಗವ ಕೂಡುವ ಕೂಟ ಏಕವಾಗಿರಬೇಕು, ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿವುದಕ್ಕೆ. ಶೀತವುಳ್ಳನ್ನಕ್ಕ ಉಷ್ಣವ ಪ್ರತಿಪಾದಿಸಬೇಕು. ಉಷ್ಣವುಳ್ಳನ್ನಕ್ಕ ಶೀತವ ಪ್ರತಿಪಾದಿಸಬೇಕು. ದಿನದಲ್ಲಿ ಎದ್ದು, ರಾತ್ರಿಯಲ್ಲಿ ಒರಗುವನ್ನಕ್ಕರ ಅದ್ವೈತ ಅಸತ್ಯ ನೋಡಾ. ಇದು ಕಾರಣ, ಕ್ರಿಯೆ ಮರೆಯಲಿಲ್ಲ, ಅರಿವು ಶೂನ್ಯವೆಂದು ಬಿಡಲಿಲ್ಲ. ಅದು ಶಿಲೆಯ ಮರೆಯ ಪಾವಕ, ತಿಲದೊಳಗಣ ತೈಲ. ಅವರ ಒಲವರದಲ್ಲಿ ಕುಲವ ಕಾಣಬೇಕು, ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿವುದಕ್ಕೆ. ಬೊಕ್ಕಸದ ಚಿಕ್ಕಣ್ಣ 12ನೇ ಶತಮಾನದ ಶಿವಶರಣರು. ಇವರ ಕಾಯಕ ಬೊಕ್ಕಸದ ಮೇಲ್ವೀಚಾರಣೆ, ಬಿಜ್ಜಳನ ಬೊಕ್ಕಸದ ಅಧಿಕಾರಿಯಾಗಿದ್ದರೆಂದು ತಿಳಿಯುತ್ತದೆ. ‘ಬಸವಣ್ಣಪ್ರಿಯ ನಾಗೇಶ್ವರಲಿಂಗ’ ಎಂಬ ಅಂಕಿತದಲ್ಲಿ ವಚನಗಳನ್ನು ಬರೆದಿದ್ದಾರೆ. ಇವರ 10 ವಚನಗಳು ದೊರಕಿವೆ. ಉಪಜೀವನಕ್ಕಾಗಿ ಬಿಜ್ಜಳನ ಆಸ್ಥಾನದಲ್ಲಿ ಬೊಕ್ಕಸದ ಕಾಯಕ ಮಾಡಿದ ಇವರಿಗೆ ಅಂಗದ ಬೊಕ್ಕಸದ ಮಂದಿರಕ್ಕೆ ಎಂತಹ ಬೀಗ ಹಾಕಬೇಕೆಂದು ಚೆನ್ನಾಗಿ ಗೊತ್ತಿತ್ತು. ಇದು ಇವರ ವಚನಗಳನ್ನು ಓದಿದಾಗ ತಿಳಿಯುತ್ತದೆ. ಲಿಂಗಕ್ಕೆ ಉಭಯವಿಲ್ಲ. ಹಸುಗಳು ಹಲವಾರು ಬಣ್ಣಗಳಿಂದ ಕಂಗೊಳಿಸಿದರೂ ಅದರ ಹಾಲು ಬಿಳಿಯಾಗಿರುತ್ತದೆ. ಹಾಗೆಯೇ ಮಾಡುವ ಕಾಯಕ ಹಲವಾದರೇನಂತೆ ಮಾಡುವ ಮಾಟ, ಲಿಂಗವ ಕೂಡುವ ಕೂಟ ಒಂದೇ ಆಗಿರಬೇಕೆಂದು ಚಿಕ್ಕಣ್ಣ ಅಭಿಪ್ರಾಯ ಪಡುತ್ತಾರೆ. ಚಿಕ್ಕಣ್ಣ ಶರಣರಿಗೆ ಅವರ ಕಾಯಕದ ಮೇಲೆ ವಿಶೇಷ ಪ್ರೀತಿ. ಚೆನ್ನಬಸವಣ್ಣ, ಬಸವಣ್ಣನವರು ಈ ಕಾಯಕವನ್ನು ಕೊಟ್ಟಿದ್ದಾರೆ ಎಂದು ಸಂತೋಷದಿಂದ ಹೇಳಿಕೊಂಡಿದ್ದಾರೆ. ಹಲವಾರು ಭಾವನೆಗಳನ್ನು ಒಳಗೊಂಡ ಮನಸ್ಸನ್ನು ಅರಿಯುವುದು ಮುಖ್ಯ. ಚಿನ್ನ ಒಂದೇ ಆದರೂ ಮಾಡುವ ಬಂಗಾರದ ಆಭರಣಗಳು ಹಲವಾರು ಎನ್ನುತ್ತಾರೆ ಚಿಕ್ಕಣ್ಣ. ಕ್ರಿಯಾಜ್ಞಾನ ಸಮನ್ವಯತೆಯಿಂದ ಪರಿಶುದ್ಧ ಅರಿವಿನ ಬೆಳಕನ್ನು ಪಡೆದಾಗಲೇ ಬೊಕ್ಕಸದ ಕಾಯಕದ ಲೆಕ್ಕ ಒಪ್ಪಿಸಬಹುದು ಎಂಬುದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇವರು ಅಪರೂಪದ ಪರಿಶುದ್ಧ ಶರಣರಾಗಿದ್ದಾರೆ.

 • 57 ಮಡಿವಾಳ ಮಾಚಿದೇವ
 • ಗಾಂಧರ್ವಕ್ಕೆ ರಾಗದ ಹೆಸರಿಟ್ಟಂತೆ, ಸ್ವರವೊಂದು, ಸಂಚಾರದ ಪರಿ ಬಣ್ಣ ಬೇರಾದಂತೆ, ಗೋವರ್ಣ ಹಲವು, ಕ್ಷೀರ ಏಕವರ್ಣವಾದಂತೆ, ಕಾಯಕ ಹಲವಾದಲ್ಲಿ ಮಾಡುವ ಮಾಟ, ಶರಣರೊಳಗಾಟ, ಲಿಂಗವ ಕೂಡುವ ಕೂಟ ಏಕವಾಗಿರಬೇಕು, ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿವುದಕ್ಕೆ. ಶೀತವುಳ್ಳನ್ನಕ್ಕ ಉಷ್ಣವ ಪ್ರತಿಪಾದಿಸಬೇಕು. ಉಷ್ಣವುಳ್ಳನ್ನಕ್ಕ ಶೀತವ ಪ್ರತಿಪಾದಿಸಬೇಕು. ದಿನದಲ್ಲಿ ಎದ್ದು, ರಾತ್ರಿಯಲ್ಲಿ ಒರಗುವನ್ನಕ್ಕರ ಅದ್ವೈತ ಅಸತ್ಯ ನೋಡಾ. ಇದು ಕಾರಣ, ಕ್ರಿಯೆ ಮರೆಯಲಿಲ್ಲ, ಅರಿವು ಶೂನ್ಯವೆಂದು ಬಿಡಲಿಲ್ಲ. ಅದು ಶಿಲೆಯ ಮರೆಯ ಪಾವಕ, ತಿಲದೊಳಗಣ ತೈಲ. ಅವರ ಒಲವರದಲ್ಲಿ ಕುಲವ ಕಾಣಬೇಕು, ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿವುದಕ್ಕೆ. ಬೊಕ್ಕಸದ ಚಿಕ್ಕಣ್ಣ 12ನೇ ಶತಮಾನದ ಶಿವಶರಣರು. ಇವರ ಕಾಯಕ ಬೊಕ್ಕಸದ ಮೇಲ್ವೀಚಾರಣೆ, ಬಿಜ್ಜಳನ ಬೊಕ್ಕಸದ ಅಧಿಕಾರಿಯಾಗಿದ್ದರೆಂದು ತಿಳಿಯುತ್ತದೆ. ‘ಬಸವಣ್ಣಪ್ರಿಯ ನಾಗೇಶ್ವರಲಿಂಗ’ ಎಂಬ ಅಂಕಿತದಲ್ಲಿ ವಚನಗಳನ್ನು ಬರೆದಿದ್ದಾರೆ. ಇವರ 10 ವಚನಗಳು ದೊರಕಿವೆ. ಉಪಜೀವನಕ್ಕಾಗಿ ಬಿಜ್ಜಳನ ಆಸ್ಥಾನದಲ್ಲಿ ಬೊಕ್ಕಸದ ಕಾಯಕ ಮಾಡಿದ ಇವರಿಗೆ ಅಂಗದ ಬೊಕ್ಕಸದ ಮಂದಿರಕ್ಕೆ ಎಂತಹ ಬೀಗ ಹಾಕಬೇಕೆಂದು ಚೆನ್ನಾಗಿ ಗೊತ್ತಿತ್ತು. ಇದು ಇವರ ವಚನಗಳನ್ನು ಓದಿದಾಗ ತಿಳಿಯುತ್ತದೆ. ಲಿಂಗಕ್ಕೆ ಉಭಯವಿಲ್ಲ. ಹಸುಗಳು ಹಲವಾರು ಬಣ್ಣಗಳಿಂದ ಕಂಗೊಳಿಸಿದರೂ ಅದರ ಹಾಲು ಬಿಳಿಯಾಗಿರುತ್ತದೆ. ಹಾಗೆಯೇ ಮಾಡುವ ಕಾಯಕ ಹಲವಾದರೇನಂತೆ ಮಾಡುವ ಮಾಟ, ಲಿಂಗವ ಕೂಡುವ ಕೂಟ ಒಂದೇ ಆಗಿರಬೇಕೆಂದು ಚಿಕ್ಕಣ್ಣ ಅಭಿಪ್ರಾಯ ಪಡುತ್ತಾರೆ. ಚಿಕ್ಕಣ್ಣ ಶರಣರಿಗೆ ಅವರ ಕಾಯಕದ ಮೇಲೆ ವಿಶೇಷ ಪ್ರೀತಿ. ಚೆನ್ನಬಸವಣ್ಣ, ಬಸವಣ್ಣನವರು ಈ ಕಾಯಕವನ್ನು ಕೊಟ್ಟಿದ್ದಾರೆ ಎಂದು ಸಂತೋಷದಿಂದ ಹೇಳಿಕೊಂಡಿದ್ದಾರೆ. ಹಲವಾರು ಭಾವನೆಗಳನ್ನು ಒಳಗೊಂಡ ಮನಸ್ಸನ್ನು ಅರಿಯುವುದು ಮುಖ್ಯ. ಚಿನ್ನ ಒಂದೇ ಆದರೂ ಮಾಡುವ ಬಂಗಾರದ ಆಭರಣಗಳು ಹಲವಾರು ಎನ್ನುತ್ತಾರೆ ಚಿಕ್ಕಣ್ಣ. ಕ್ರಿಯಾಜ್ಞಾನ ಸಮನ್ವಯತೆಯಿಂದ ಪರಿಶುದ್ಧ ಅರಿವಿನ ಬೆಳಕನ್ನು ಪಡೆದಾಗಲೇ ಬೊಕ್ಕಸದ ಕಾಯಕದ ಲೆಕ್ಕ ಒಪ್ಪಿಸಬಹುದು ಎಂಬುದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇವರು ಅಪರೂಪದ ಪರಿಶುದ್ಧ ಶರಣರಾಗಿದ್ದಾರೆ.

 • 58 ಮನಸಂದ ಮಾರಿತಂದೆ
 • ಗೋವಧೆಯ ಮಾಡಿ, ಗೋದಾನವ ಮಾಡಿದಡೆ, ಕೊಂದ ಕೊಲೆಗೂ ಮಾಡಿದ ದಾನಕ್ಕೂ ಸರಿಯೆ? ಆಚಾರಕ್ಕೂ ಅನಾಚಾರಕ್ಕೂ ಪಡಿಪುಚ್ಚವುಂಟೆ? ನೇಮಕ್ಕೆ ಹಾನಿಯಾದಲ್ಲಿ ಭಂಗಕ್ಕೆ ಮೊದಲೆ, ಮನಸಂದಿತ್ತು ಮಾರೇಶ್ವರಾ. ಖ್ಯಾತಿಲಾಭದ ಪೂಜೆ, ದ್ರವ್ಯವ ಕೆಡಿಸುವುದಕ್ಕೆ ಮೊದಲಾಯಿತ್ತು. ವೈರಾಗ್ಯದ ವಿರಕ್ತಿ ಮೂರಕ್ಕೆ ಒಡಲುಗೊಳಿಸಿತ್ತು. ವಾಗದ್ವೈತದ ಕೇಣಸರ ಗೆಲ್ಲ ಸೋಲಕ್ಕೆ ಕಲ್ಲೆದೆಯ ಮಾಡಿತ್ತು. ಇವೆಲ್ಲವ ತಿಳಿದು, ಇಲ್ಲ ಉಂಟು ಎಂಬಲ್ಲಿಯೆ ಮನಸಂದಿತ್ತು ಮಾರೇಶ್ವರಾ. ಹನ್ನೆರಡನೆಯ ಶತಮಾನದ ವಚನಕಾರ, ಮಹಾಶಿವಶರಣ. ಬಸವಾದಿ ಶಿವಶರಣರ ಸಮಕಾಲೀನವರು. ಅನೇಕ ಜನ ಈ ಶತಮಾನದಲ್ಲಿ ವಚನಗಳನ್ನು ಬರೆದಿದ್ದಾರೆ. ಶಿವನನ್ನು ಹಾಡಿ ಹೊಗಳಿದ್ದಾರೆ. ಆದರೆ ಕೆಲವರ ಅಂಕಿತ ಮಾತ್ರ ಸಿಕ್ಕಿದೆ. ಇನ್ನು ಕೆಲವರ ವಚನಗಳು ಲಭ್ಯವಾಗಿವೆ. ಆದರೆ ಅವರ ವಿವರಗಳು ಲಭ್ಯವಾಗಿರುವುದಿಲ್ಲ. ಅಂತವರಲ್ಲಿ ಮನಸಂದ ಮಾರಿತಂದೆ ಒಬ್ಬನು. ಇವರ ಬಗ್ಗೆ ಹೆಚ್ಚಿನ ವಿವರ ಸಿಗದಿದ್ದರೂ ‘ಮನಸಂದಿತ್ತು ಮಾರೇಶ್ವರಾ’ ಅಂಕಿತದಲ್ಲಿ 101 ವಚನಗಳು ಲಭ್ಯವಾಗಿವೆ. ಇವರ ವಚನಗಳು ಗಾತ್ರದಲ್ಲಿ ಚಿಕ್ಕದಾದರೂ ಅವುಗಳು ಹೇಳುವ ಸಂದೇಶ ಅಪಾರವಾಗಿದೆ. ವಚನಗಳಲ್ಲಿ ಮನೋಲಯದ ಸ್ಪಷ್ಟ ಸೂಚನೆಯನ್ನು ಕಾಣುತ್ತೇವೆ. ಅದ್ವೈತ ತತ್ವಕ್ಕೆ ಇವರ ವಚನಗಳು ಹತ್ತಿರವಾಗಿವೆ. ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗದ ಮಹತ್ವವನ್ನು ತಮ್ಮ ವಚನದಲ್ಲಿ ಸಾರಿದ ಶಿವಶರಣರಿವರು. ಇವರ ಆಧ್ಯಾತ್ಮ ಎತ್ತರವು ಅನನ್ಯವಾಗಿದೆ. ಭವಿ-ಭಕ್ತ, ಭಕ್ತ-ಜಂಗಮ ಇತ್ಯಾದಿ ಬಾಹ್ಯಭೇದಗಳಿಗೆ ಇವರು ಗಮನ ಕೊಡುವುದಿಲ್ಲ. ಅರ್ಚನೆ, ಅರ್ಪಣೆ ಮತ್ತು ಅನುಭಾವಗಳು ಶರಣರ ವರ್ತನೆಯಾಗಿವೆ. ಇದನ್ನು ಅಳವಡಿಸಿಕೊಂಡು ಬೆಟ್ಟದೆತ್ತರಕ್ಕೆ ಬೆಳೆದು ಪ್ರಜ್ವಲಿಸಿದವರು ಇವರಾಗಿದ್ದಾರೆ. ಡಾಂಭಿಕರನ್ನು, ಹೊಟ್ಟೆಹೊರಕರನ್ನು ಮಡಕೆಯ ಕೊಳಕಿಗೆ ಇವರು ಹೋಲಿಸಿದ್ದಾರೆ. ಹೊಟ್ಟೆ-ಬಟ್ಟೆಗೆ ಸೋಲುವವನು, ನಿಜಜಂಗಮನಾಗಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಸಾರಿದವರು ಇವರಾಗಿದ್ದಾರೆ. ಹೂವು ಶರೀರವಾಗಿದೆ, ವಾಸನೆಯ ಪ್ರಾಣವಾಗಿದೆ. ಹಾಗೆಯೇ ಲಿಂಗವು ಶರೀರವಾಗಿದೆ, ಅರಿವು ಪ್ರಾಣವಾಗಿದೆ. ದೇಹವು ಸಾಧನೆಗೆ ಮಾರ್ಗವಾಗಿದೆ. ಆದರೆ ಗುರಿ ಪ್ರಾಣಸ್ವರೂಪವೆಂದು ಇವರು ವಚನದಲ್ಲಿ ಹೇಳಿದ್ದಾರೆ.

 • 59 ಮನುಮುನಿ ಗುಮ್ಮಟದೇವ
 • ಉತ್ಪತ್ಯ ಗುರುವಿನಲ್ಲಿ, ಸ್ಥಿತಿ ಲಿಂಗದಲ್ಲಿ, ಲಯ ಜಂಗಮದಲ್ಲಿ. ಮೂರನರಿತು ಮೀರಿದ ಘನಕೂಟ ವಸ್ತುವಿನಲ್ಲಿ. ಇದ ಸಾರಿದೆ, ಗೂಡಿನ ಒಳಗನರಿತು ಕೂಡು, ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವ. ಅಮೃತದ ಗುಟಿಕೆಯ ಮರೆದು ಅಂಬಲಿಯನರಸುವನಂತೆ, ಶಂಬರವೈರಿ ತನ್ನಲ್ಲಿ ಇದ್ದು ಕುಜಾತಿಯ ಬೆಂಬಳಿಯಲ್ಲಿ ಹೋಹವಂಗೆ ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗ, ಅವರಿಗೆ ಇಲ್ಲಾ ಎಂದೆ. ಮನುಮುನಿ ಗುಮ್ಮಟದೇವನು ಮೊದಲು ಜೈನನಾಗಿದ್ದು; ನಂತರ ಲಿಂಗವಂತ ಧರ್ಮಕ್ಕೆ ಪರಿವರ್ತನೆ ಹೊಂದಿದ್ದಾರೆಂದು ತಿಳಿದುಬರುತ್ತದೆ. ಇವರು 12ನೇ ಶತಮಾನದ ವಚನಕಾರ ಬಸವಾದಿ ಶಿವಶರಣರ ಸಮಕಾಲೀನರು. ‘ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರ’, ‘ಲಿಂಗಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರ ಲಿಂಗ’ ಎಂಬ ಎರಡು ಅಂಕಿತದಲ್ಲಿ ಇವರ ವಚನಗಳನ್ನು ಬರೆದಿದ್ದಾರೆ. ಮನುಮುನಿ ಗುಮ್ಮಟದೇವನ 100 ವಚನಗಳು ಲಭ್ಯವಾಗಿವೆ. “ಜಿನವಾಸ ಬಿಟ್ಟು ದಿನ ನಾಶನ ವಾಸವಾಯಿತ್ತು” ಎಂಬ ನುಡಿಯಿಂದ ಇವರು ಜೈನಧರ್ಮದಿಂದ ಬಸವ ಧರ್ಮಕ್ಕೆ ಬಂದಿರುವುದು ತಿಳಿಯುತ್ತದೆ. ಅಲ್ಲಮಪ್ರಭುಗಳನ್ನು ತಮ್ಮ ವಚನವೊಂದರಲ್ಲಿ ಇವರು ಸ್ಮರಿಸಿರುವುದರಿಂದ ಇವರ ಕಾಲ 1160 ಎಂದು ತಿಳಿಯುತ್ತದೆ. ಇವರ ವಚನಗಳಲ್ಲಿ ಭಕ್ತಸ್ಥಲ ಹಾಗೂ ಐಕ್ಯಸ್ಥಲದ ಬಗ್ಗೆ ವಿವರವಾದ ಮಾಹಿತಿಗಳು ಸಿಗುತ್ತವೆ. ಮನುಮುನಿಯ ಹೆಚ್ಚಿನ ವಚನಗಳು ಬೆಡಗಿನ ವಚನಗಳಾಗಿವೆ. ಇವರ ವಚನಗಳಲ್ಲಿ ಸೌಂದರ್ಯದ ಜೊತೆಗೆ ಭಾವವೂ ಕೇಂದ್ರೀಕೃತವಾಗಿರುವುದನ್ನು ಕಾಣಬಹುದು. ದೇವರು ಒಬ್ಬನೇ. ಜ್ಞಾನಗುರು ಕೊಟ್ಟ ಭಾವದ ಲಿಂಗವಿರಲು ಮತ್ತೇನು ಬೇಕು? ಎಂದು ಇವರು ಪ್ರಶ್ನಿಸುತ್ತಾರೆ. ಗಾದೆ, ವಚನ, ನಾಣ್ಣುಡಿಗಳು ಸಂದರ್ಭೋಚಿತವಾಗಿ ಇವರ ವಚನದಲ್ಲಿ ಮೂಡಿಬಂದಿವೆ. ತಾವು ಹೇಳಬೇಕಾದ ತತ್ತ್ವಗಳನ್ನು ಹಲವಾರು ಉದಾಹರಣೆ ಕೊಟ್ಟು ಇವರು ವಚನಗಳಲ್ಲಿ ವಿವರಿಸಿದ್ದಾರೆ. ಇವರು ತಾವು ಪಡೆದ ಆಧ್ಯಾತ್ಮಜ್ಞಾನವನ್ನು ತಮ್ಮ ಲೌಕಿಕ ಜ್ಞಾನದೊಂದಿಗೆ ಸಮ್ಮಿಳಿತಗೊಳಿಸಿ ಸರಳ ಸುಂದರ ವಚನಗಳನ್ನು ರಚಿಸಿದ್ದಾರೆ.

 • 60 ಮರುಳು ಶಂಕರದೇವ
 • ಸಂಸಾರವೆಂಬ ಸಾಗರವ ದಾಂಟುವಡೆ, ಅರಿವೆಂಬ ಅಂಬಿಗ ಹರುಗೋಲನಿಕ್ಕಿ, ಜ್ಞಾನವೆಂಬ ಅಂಬಿಗ ಹರುಗೋಲದಲ್ಲಿ ಕುಳ್ಳಿರ್ದು, ಸುಜ್ಞಾನವೆಂಬ ಘಾತದ ಗಳೆಯ ಪಿಡಿದು, ನಾನೀ ಹೊಳೆಯ ಕಂಡು, ಅಂಬಿಗನ ಕೇಳಿದಡೆ, ನಾನು ಹಾ[ಯಿ]ಸಿಕೊಟ್ಟೆಹೆನೆಂದನು. ನಾನು ನಿನ್ನ ನಂಬಿ ಹರುಗೋಲನೇರಿದೆನು ಕಾಣಾ, ಅಂಬಿಗರಣ್ಣಯೆಂದು ನಾನು ಹರುಗೋಲದಲ್ಲಿ ಕುಳ್ಳಿರ್ದು ಹೊಳೆಯೊಳಗೆ ಹೋಗಲಿಕೆ, ಕಾಮವೆಂಬ ಕೊರಡು ಅಡ್ಡಬಿದ್ದಿತ್ತು. ಕ್ರೋಧವೆಂಬ ಸುಳುಹಿನೊಳಗೆ ಅಹಂಕಾರವೆಂಬ ಮೀನು ಬಂದು ನಿಂದಿತ್ತು. ಮಾಯೆಯೆಂಬ ಮೊಸಳೆ ಬಂದು ಬಾಯಬಿಡುತ್ತಿದ್ದಿತ್ತು. ಮೋಹವೆಂಬ ನೂರೆತೆರೆಗಳು ಹೆಚ್ಚಿ ಬರುತ್ತಿದ್ದಿತ್ತು. ಲೋಭವೆಂಬ ಕಾಳ್ಗಡಲು ಎಳೆದೊಯ್ವತ್ತಿದ್ದಿತ್ತು. ಮರವೆ[ಯೆ]0ಬ ಮೊರಹು ನೂಕುತ್ತಲಿದ್ದಿತ್ತು. ಮತ್ಸರವೆಂಬ ಗಾಳಿ ತಲೆಕೆಳಗು ಮಾಡುತ್ತಿದ್ದಿತ್ತು. ಇವೆಲ್ಲವನೂ ಪರಿಹರಿಸಿ, ಎನ್ನ ಹೊಳೆಯ ದಾಂಟಿಸಿದನು, ಅಂಬಿಗರಣ್ಣನು. ಈ ಹೊಳೆಯ ದಾಂಟಿಸಿದ ಅಂಬಿಗರಣ್ಣನು ಕೂಲಿಯ ನನ್ನ ಬೇಡಿದಡೆ, ಕೂಲಿಯ ಕೊಡುವಡೇನೂ ಇಲ್ಲೆಂದಡೆ, ಕೈಸೆರೆಯಾಗಿ ಎನ್ನನೆಳೆದೊಯ್ದನಯ್ಯಾ. ಅರುವೆಯ ಕೊಟ್ಟ ಕೂಲಿಗೆ ತನ್ನ ಕರುವ ಕಾಯಿಸಿಕೊಂಡನಯ್ಯಾ. ಅರಿಯದೆ ಹರುಗೋಲವ ನೆರೆತೊರೆಯ ದಾಂಟಿಸಿದ ಕೂಲಿಗೆ ಕರುವ ಕಾಯಿದೆನು ಕಾಣಾ. ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತ ಚೆನ್ನಮಲ್ಲಿಕಾರ್ಜುನ ದೇವಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ. ಸಿಂಬೆಗೆ ರಂಭೆತನವುಂಟೆ? ಸಂಭ್ರಮವಳಿದುದಕ್ಕೆ ನವರಸದಂಗದ ಕಳೆಯುಂಟೆ? ಡಿಂಗರಿಗಂಗೆ ಸಮಯವೆಂಬ ಸಂಭ್ರಮವುಂಟೆ? ಪರುಷದ ದೆಸೆಯಿಂದ ಪಾಷಾಣದ ಕುಲ ಹರಿವಂತೆ, ನೀ ಬಂದೆಯಲ್ಲಾ. ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ, ಶಾಂತ ಚೆನ್ನಮಲ್ಲಿಕಾರ್ಜುನದೇವಯ್ಯಾ, ಪ್ರಭುದೇವರ ಕಾರುಣ್ಯದಿಂದ ಬದುಕಿದೆ. ಮರುಳು ಶಂಕರದೇವರು ಮುಖ್ಯವಾಗಿ ಪ್ರಸಾದಿಗಳು. ಇವರ ಅಂಕಿತ ‘ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೇ ಶಾಂತ ಚೆನ್ನಮಲ್ಲಿಕಾರ್ಜುನ ದೇವ’. ಇವರು ಸರ್ವವಿಧ ಪ್ರಸಾದವನ್ನು ಸಾಧಿಸಿ ಶಿವಪ್ರಸನ್ನತೆಯನ್ನು ಪಡೆದಿರುತ್ತಾರೆ. ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ, ಪ್ರಭುಲಿಂಗಲೀಲೆ, ಶೂನ್ಯಸಂಪಾದನೆಯಲ್ಲಿ ಈ ಶರಣರ ಸಾಧನೆ, ಅನುಭಾವಗಳ ಚಿತ್ರಣವಿದೆ. ತನ್ನನ್ನು ಇಲ್ಲದಂತೆ ಮಾಡಿಕೊಂಡ, ಎಂದರೆ ತನ್ನ ಸರ್ವಸ್ವವನ್ನು ಶಿವನಿಗರ್ಪಿಸಿದರು ಎಂಬ ಮಾತಿನಿಂದ ಮರುಳು ಶಂಕರದೇವರ ವ್ಯಕ್ತಿತ್ವದ ಅರಿವಾಗುತ್ತದೆ. ಇವರು ಬಸವಣ್ಣನವರಿಂದ ‘ಮಹಾಪ್ರಸಾದಿ’ ಎನಿಸಿಕೊಂಡರು. ಇದರಿಂದ ಇವರ ಮಹತ್ವ ತಿಳಿಯಬಹುದು. ಪ್ರಸಾದ ವಿಚಾರದಲ್ಲಿ ಬಸವಣ್ಣನವರಿಗಿಂತ ಹೆಚ್ಚಾದವರು ಮರುಳುಶಂಕರದೇವರೆಂದು ತಿಳಿಯುತ್ತದೆ. ಮರುಳು ಶಂಕರರ ಜೀವನ ಪರಿಶುದ್ಧವಾದುದು. ಇದು ಯಾರಿಂದಲೂ ತಿದ್ದಲ್ಪಟ್ಟಿಲ್ಲ. ಸ್ವತಃ ರೂಪಿಸಿಕೊಂಡದ್ದಾಗಿದೆ. ಕಾಯಕದಲ್ಲಿ ನಿರತನಾದರೆ ಗುರುದರ್ಶನವಾದರೂ ಮರೆಯಬೇಕೆಂದು ಸಾರಿದವರು ಇವರಾಗಿದ್ದಾರೆ. ಇವರ ಗುಪ್ತಭಕ್ತಿ ಅಗಾಧವಾದುದು. ಅದನ್ನು ಯಾರಿಂದಲೂ ಭೇದಿಸಲು ಸಾಧ್ಯವಾಗಲಿಲ್ಲ. ಬಸವಣ್ಣನವರಿಗೂ ಕೂಡ ಮರುಳ ಶಂಕರದೇವರನ್ನು ಅರಿಯಲು ಸಾಧ್ಯವಾಗಲಿಲ್ಲ. ಸರ್ವರ ಕಣ್ಣಿಗೆ ಇವರು ಮರುಳನಂತಿದ್ದರು. ಮರುಳ ವೇಷದಲ್ಲಿ ಸಾಕಾರ ಶಂಕರನನ್ನು ಯಾರಿಗೂ ಅರಿಯಲಾಗಲಿಲ್ಲ ಎಂದ ಮೇಲೆ ಇವರ ವ್ಯಕ್ತಿತ್ವ ಎಂತಹುದೆಂದು ನಾವೇ ಅರಿಯ ಬಹುದಾಗಿದೆ. ಇವರು ಅಪಘಾನಿಸ್ತಾನದಿಂದ ಬಂದು ಬಸವಣ್ಣನವರ ಮಹಾಮನೆಯಲ್ಲಿದ್ದ ಪ್ರಸಾದ ಗುಂಡದಲ್ಲಿ ಯಾರಿಗೂ ತಿಳಿಯದಂತೆ ಇದ್ದು ಸಾಧನೆ ಮಾಡಿದರು. ಎಲ್ಲರಿಗೂ ಮಾದರಿಯಾದ ಮಹಾ ಶಿವಶರಣ ಇವರಾಗಿದ್ದಾರೆ.

 • 61 ಮಲಹರ ಕಾಯಕದ ಚಿಕ್ಕದೇವಯ್ಯ
 • ಪರಮನಿಂದಮನ, ಮನದಿಂದಬುದ್ಧಿ, ಬುದ್ಧಿಯಿಂದಚಿತ್ತ, ಚಿತ್ತದಿಂದಅಹಂಕಾರ, ಅಹಂಕಾರದಿಂದವೆಸರ್ವಕರಣೇಂದ್ರಿಯಂಗಳಮೊತ್ತದಬಳಗ, ಇಂತೀಗುಣವಚಿತ್ತುವಿನಿಂದವಿಚಾರಿಸಿ, ಪರಮನಪ್ರಕಾರವಬಂಧಿಸಿ, ನಿಂದಿಸಿದವಂಗಲ್ಲದೆ ಹಿಂದಣಮುಂದಣಬಂಧಬಿಡದು. ಆನಂದಹಿಂಗೆ, ಅಶ್ರುಜಲನಿಂದು, ಚಿತ್ತುಚಿದಾದಿತ್ಯದಲ್ಲಿ ನಷ್ಟವನೆಯ್ದಿದಮತ್ತೆ, ಹಸುಬೆಯವ್ಯವಹಾರಬಟ್ಟಬಯಲು, ಊಧ್ರ್ವರೇತೋಮೂರ್ತಿಶ್ವೇತಸ್ವಯಂಭುಕಪಿಲೇಶ್ವರಲಿಂಗವಕೂಡಿದಮತ್ತೆ. ಒಂದುವರ್ಣದಿಂದ, ಭೇದಕ್ರಮದಿಂದಕೂಡಲಾಗಿ, ಪಂಚವರ್ಣವಾಯಿತ್ತು. ಶ್ವೇತವರ್ಣಮೊದಲುಪರಿಕ್ರಮದಿಂದಷಡುವರ್ಣವಾಯಿತ್ತು. ಆವರ್ಣದಭೇದಬಿಳುಹಿನಸ್ವಾಯತ್ತೆಯಲ್ಲಡಗಿತ್ತು. ಇಂತೀಪರಮನಿಂದಇಂದ್ರಿಯವಿಕಾರವಾದುದನರಿಯದೆ, ಆತ್ಮಂಗೆಪರಿಭ್ರಮಣವೆಂದುಸಂದೇಹವಮಾಡುವ ಬಂಧಮೋಕ್ಷಕರ್ಮಂಗಳಿಗೆಪರಮಸಂದಹರಿದಲ್ಲದೆ, ಊಧ್ರ್ವರೇತೋಮೂರ್ತಿಶ್ವೇತಸ್ವಯಂಭುಕಪಿಲೇಶ್ವರಲಿಂಗವುಸಾಧ್ಯವಲ್ಲ ಕಂಚುತಾಮ್ರಹಿತ್ತಾಳಿಈಮೂರುಸೀಸದಂಗನಭೇದ. ಮನಬುದ್ಧಿಚಿತ್ತಈಮೂರುಅಹಂಕಾರದಂಗದೊಡಲು. ಅರಿದುದಮರೆದುದಮತ್ತರಿದೆನೆಂಬುದು ಆಗುಣಕ್ಷಣಿಕಾತ್ಮನಒಡಲು. ಇಂತಿವನರಿದುಬಿಡಲು, ಹಿರಿಯಹಸುಬೆಯೊಳಗಡಗಿದನಾನಾವ್ಯವಹಾರದೊಡಲು. ಇಂತೀಗುಣವಡಗಿ, ಊಧ್ರ್ವರೇತೋಮೂರ್ತಿಶ್ವೇತ ಸ್ವಯಂಭುಕಪಿಲೇಶ್ವರಲಿಂಗವ ಕೂಡಬಲ್ಲಡೆ. ಮಲಹರ ಕಾಯಕದ ಚಿಕ್ಕದೇವಯ್ಯ ಮಹತ್ವದ ವಚನಕಾರ, ಮಹಾಶಿವಶರಣ. ಬಸವಣ್ಣನವರ ಸಮಕಾಲೀನವರು. 12ನೇ ಶತಮಾನದಲ್ಲಿ ಶರಣ ಸಮೂಹದಲ್ಲಿ ಪ್ರಜ್ವಲಿಸಿದ ಮಹಾಮಹಿಮ ಇವರಾಗಿದ್ದಾರೆ. ‘ಈಶಾನ್ಯಮೂರ್ತಿ ಕಪಿಲೇಶ್ವರ ಲಿಂಗ’ ಚಿಕ್ಕದೇವನ ಅಂಕಿತವಾಗಿದೆ. ಚಿಕ್ಕದೇವಯ್ಯನವರ ವಚನಗಳಲ್ಲಿ ಅರಿವಿನ ಮಹತ್ವ, ವಿರಕ್ತ ಸ್ಥಿತಿ, ಸತ್ಪಥ, ಸದ್ಭಕ್ತಿಗಳ ಬಗ್ಗೆ ವಿವರಗಳಿವೆ. ಲೋಹಕಾರ್ಯ ಇವರ ಕಾಯಕವಾಗಿದೆ. ಈ ಕಾಯಕದೊಂದಿಗೆ ಜ್ಞಾನಸಂಪಾದನೆ ಮಾಡಿಕೊಂಡಿದ್ದಾರೆ. ಈ ಮೂಲಕ ವಚನಗಳನ್ನು ರಚಿಸಿದ್ದಾರೆ. ಕಂಚು, ತೊಳೆಯದ ಮಡಿಕೆ, ತವರ, ಹಿತ್ತಾಳೆ, ತಾಮ್ರ ಇವು ಇವರು ಹೇಳುವ ಅಂದಿನ ಲೋಹದ ವೃತ್ತಿ. ಅಂದು ಬಳಕೆಯಲ್ಲಿದ್ದ ನಾಣ್ಯಗಳು, ಕಳ್ಳವಣ ಮತ್ತು ಕುಂದುವೆಳ್ಳಿ ಲೋಹವೃತ್ತಿಯೊಂದಿಗೆ ಇವರು ಸಾಂಬಾರ ಪದಾರ್ಥಗಳನ್ನು ಮಾರುತ್ತಿದ್ದರು. ಜೀವನಕ್ಕೆ ಸಂಬಂಧಿಸಿದಂತೆ ‘ಹಸುಬೆಯ ವ್ಯವಹಾರ’ ಕೂಡ ಚಿಕ್ಕದೇವಯ್ಯನವರ ವಚನದಲ್ಲಿ ಬಂದಿರುತ್ತವೆ. ಲೋಹದ ವ್ಯಾಪಾರ ಮಾಡುತ್ತಾ ಶರಣನಾದ ಮಲಹರ ಕಾಯಕದ ಚಿಕ್ಕದೇವಯ್ಯನವರು ಗಮನ ಸೆಳೆಯುತ್ತಾರೆ. ಅಜ್ಞಾನ, ಅಂಧಶ್ರದ್ಧೆಗಳು ಕಳಚಿಬಿದ್ದಾಗ ಸುಜ್ಞಾನ ತನ್ನಷ್ಟಕ್ಕೆ ತಾನೇ ಸ್ಪುರಿಸುತ್ತದೆ. ಇವರು ಒಂದು ವಚನವು ಈ ರೀತಿ ಇದೆ., ಆತ್ಮಂಗೆ ಪರಿಭ್ರಮಣವೆಂದು ಸಂದೇಹವ ಮಾಡುವ ಬಂಧಮೋಕ್ಷ ಕರ್ಮಂಗಳಿಗೆ ಪರಮನಂದ ಹರಿದಲ್ಲದೆ ಊಧ್ರ್ವದೇವತೋಮೂರ್ತಿ ಶ್ವೇತಸ್ವಯಂಭು ಕಪಿಲೇಶ್ವರ ಲಿಂಗವು ಸಾಧ್ಯವಿಲ್ಲ.

 • 62 ಮಲ್ಲಿಕಾರ್ಜುನ ಪಂಡಿತಾರಾಧ್ಯ
 • ಧನ ಜವ್ವನವುಳ್ಳಲ್ಲಿ ಶೀವ ಶರಣೆ[ನ್ನೆ] ಮಾನವಾ, ನೆನೆ ನೆನೆಯೋ, ನೀ ಕೆಡದ ಮುನ್ನ. ಧನ ನಿಲ್ಲದು, ಜವ್ವನ ನಿಲ್ಲದು, ನಿನ್ನ ಪ್ರಾಣ ನಿಲ್ಲದು. ಇದನರಿದು, ಶ್ರೀ ಮಲ್ಲಿಕಾರ್ಜುನನ ನೆನೆಯೋ, ನೀ ಕೆಡದ ಮುನ್ನ. ಮಲ್ಲಿಕಾರ್ಜುನ ಪಂಡಿತಾರಾಧ್ಯರೊಬ್ಬ ಶ್ರೇಷ್ಠ ವಚನಕಾರರು. ‘ಶ್ರೀ ಮಲ್ಲಿಕಾರ್ಜುನ’ ಎಂಬುದು ಇವರ ವಚವನದ ಅಂಕಿತವಾಗಿದೆ. ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ಕಲ್ಯಾಣಕ್ಕೆ ನೆರೆಯ ಆಂಧ್ರ, ಕಾಶ್ಮೀರ ಮೊದಲಾದ ಕಡೆಯಿಂದ ಶರಣರು ಬಂದು ನೆಲೆಸಿ ತಮ್ಮ ಕಾಯಕದಿಂದ ಶರಣರ ಸಮೂಹದಲ್ಲಿ ಸ್ಥಾನ ಪಡೆದಿದ್ದಾರೆ. ಆಂಧ್ರ ಪ್ರದೇಶದಿಂದ ಸಕಲೇಶ ಮಾದರಸ, ಮಲ್ಲಿಕಾರ್ಜುನ ಪಂಡಿತಾರಾಧ್ಯ, ಶಿವಲೆಂಕ ಮಂಚಣ್ಣ ಮತ್ತು ಶ್ರೀಪತಿ ಪಂಡಿತರು ಮೊದಲಾದವರು ಕಲ್ಯಾಣಕ್ಕೆ ಬಂದವರಲ್ಲಿ ಮುಖ್ಯರಾಗಿದ್ದಾರೆ. ಬಸವಣ್ಣರವರ ಕೀರ್ತಿಯನ್ನು ಕಂಡು ಅವರನ್ನು ನೋಡಲು ಬಂದವರು ಮಲ್ಲಿಕಾರ್ಜುನ ಪಂಡಿತಾರಾಧ್ಯ. ಅವರು ಬರುವಷ್ಟರಲ್ಲಿ ಕಲ್ಯಾಣ ಕ್ರಾಂತಿಯಾಗಿದ್ದು ಬಸವಣ್ಣರವರು ಕೂಡಲಸಂಗಮದಲ್ಲಿ ಬಯಲಾದ ಸುದ್ದಿ ಕೇಳಿ ತುಂಬಾ ಮರುಗಿದರು. ಆಗಲೆ ಬಸವಣ್ಣರವರನ್ನು ಸ್ಮರಿಸಿ ವಚನ ರಚಿಸಿದ ಮಹಾಶಿವಶರಣ ಇವರಾಗಿದ್ದಾರೆ. ತೆಲುಗು ಪಂಡಿತಾರಾಧ್ಯರು ಬಸವಣ್ಣನವರು ಮತ್ತು ಮಲ್ಲಿಕಾರ್ಜುನ ಪಂಡಿತಾರಾಧ್ಯರು ಸಮಕಾಲೀನರು ಮತ್ತು ಸಮವಯಸ್ಕರೆಂದು ಸಾರಿದೆ. ಕ್ರಿ.ಶ.1185ರ ಸಂಗಮೇಶ್ವರ ಶಾಸನ (ತೆಲುಗು) ಮಹಾಮಂಡಲೇಶ್ವರ ಕನ್ನಾಟ ಗೋಕರ್ಣದೇವ ಮಹಾರಾಜನು ಮಲ್ಲಿಕಾರ್ಜುನ ಪಂಡಿತಾರಾಧ್ಯರಿಗೆ ದಾನ ಮಾಡಿದ ವಿಷಯ ತಿಳಿಸಿದೆ. ಬಸವಣ್ಣರವರು ಲಿಂಗೈಕ್ಯರಾದ ಒಂದು ಶಿವರಾತ್ರಿಯ ನಂತರ ಮಲ್ಲಿಕಾರ್ಜುನ ಪಂಡಿತಾರಾಧ್ಯರು ಲಿಂಗೈಕ್ಯರಾದರೆಂದು ತಿಳಿದು ಬರುತ್ತದೆ. ಇವರು ತಮ್ಮ ವಚನಗಳ ಮೂಲಕ ಲೋಕದ ಆಟ ಚೆಲ್ಲಾಟಗಳನ್ನು ಮನದುಂಬಿ ವರ್ಣಿಸಿದ್ದಾರೆ. ಆರಾಧ್ಯಮತಕ್ಕೆ ಅಡಿಪಾಯ ಹಾಕಿದವರು. ಆಂಧ್ರವನ್ನು ಆರಾಧ್ಯಮಯವಾಗಿಸಿದ ಇವರು ಪ್ರಾತಃಸ್ಮರಣೀಯರಾಗಿದ್ದಾರೆ.

 • 63 ಮಾದಾರ ಧೂಳಯ್ಯ
 • ಸತ್ಯಶುದ್ಧಕಾಯಕವ ಮಾಡಿ ತಂದು, ವಂಚನೆಯಿಲ್ಲದೆ ಪ್ರಪಂಚಳಿದು, ನಿಚ್ಚಜಂಗಮಕ್ಕೆ ದಾಸೋಹವ ಮಾಡುವ ಸದ್ಭಕ್ತನ ಹೃದಯದೊಳಗೆ ಅಚ್ಚೊತ್ತಿದಂತಿಪ್ಪ, ಕಾಮಧೂಮ ಧೂಳೇಶ್ವರ. ತಿಲದೊಳಗಣ ತೈಲ, ಫಲದೊಳಗಣ ರಸ, ಹೇಮದೊಳಗಣ ಬಣ್ಣ, ಮಾಂಸದೊಳಗಣ ಕ್ಷೀರ, ಇಕ್ಷುದಂಡದ ಸಾರದ ಸವಿ, ಒಳಗು ಹೊರಗಾಗಿಯಲ್ಲದೆ ಕುಲದ ಸೂತಕ ಬಿಡದು. ಇಷ್ಟದಲ್ಲಿ ತೋರುವ ವಿಶ್ವಾಸ ದೃಷ್ಟವಾಗಿಯಲ್ಲದೆ, ಶಿಲೆಕುಲದ ಸೂತಕ ಬಿಡದು. ಬಿಡುವನ್ನಕ್ಕ ಜ್ಞಾನಶೂನ್ಯವಿಲ್ಲ, ಕಾಮಧೂಮ ಧೂಳೇಶ್ವರಾ. ಮದ ಶಬ್ದದಿಂದ ಮಾದ, ಮಾದಿಗ ಶಬ್ದಗಳು ಉತ್ಪತ್ತಿಯಾಗಿವೆ. ನಶೆಯಲ್ಲಿರುವವರು, ಅಮಲಿನಲ್ಲಿರುವವರೂ ಎಂಬುದಾಗುತ್ತದೆ. ಧೂಳಯ್ಯರಿಗೆ ಶಿವಭಕ್ತಿಯೇ ಅಮಲಾಗಿದೆ. ಈ ಅಮಲಿನ ವೈಚಾರಿಕ ನೆಲೆಗಟ್ಟಿನಲ್ಲೇ ಇವರ ವಚನ ಬರೆದಿದ್ದಾರೆ. ಇವರದು ವಿಶಿಷ್ಟ ಕಾಯಕವಲ್ಲ. ಇವರು ಮಾಡಿರುವುದೆಲ್ಲಾ ಕಾಯಕವೇ ಆಗಿದೆ. ಕಟ್ಟಿಗೆ ಸೀಳುವುದು, ಕಣ ಮಾಡುವುದು, ಕೃಷಿ ಕೆಲಸ, ಬಿಡುವಿನ ವೇಳೆಯಲ್ಲಿ ಸತ್ತ ಪ್ರಾಣಿಗಳನ್ನು ಎತ್ತುವುದು, ಅದರ ಚರ್ಮ ಬೇರ್ಪಡಿಸುವುದು. ಚರ್ಮ ಹದ ಮಾಡುವುದು, ಚಪ್ಪಲಿ ಹೊಲಿಯುವುದು ಇವರ ಉಪಜೀವನವಾಗಿರುತ್ತಿತ್ತು. ಮುಖ್ಯವಾಗಿ ಚಪ್ಪಲಿ ತಯಾರಿಸುವ ಕಾಯಕದಲ್ಲಿದ್ದರೆಂದು ವಚನಗಳಿಂದ ತಿಳಿದು ಬರುತ್ತದೆ. ಮಾದಾರ ಧೂಳಯ್ಯನವರು ಸ್ನಾನ ಮಾಡಿದ ನೀರು ಹರಿದು ತಿಪ್ಪಗೆ ಹೋಗಿ ಕೆಸರಾಗಿತ್ತು. ಒಮ್ಮೆ ಕಲ್ಯಾಣದ ಬ್ರಾಹ್ಮಣ ಕೃಷ್ಣ ಪೆದ್ದಿಯ ಆಕಳು ಆ ತಿಪ್ಪೆಯ ಹತ್ತಿರ ಬಂದು ನಿಂತಿತ್ತು. ರಾತ್ರಿಯಾದರೂ ಆಕಳು ಬಾರದಿರುವುದನ್ನು ಕಂಡು ಪೆದ್ದಿ ಹೊಲಗೇರಿಗೆ ಬರುತ್ತಾರೆ. ಕತ್ತಲೆಯಾದುದರಿಂದ ಕೆಸರಿನಲ್ಲೇ ಕಾಲಿಟ್ಟು ಹಸುವನ್ನು ಮನೆಗೆ ಕರೆದು ತರುತ್ತಾರೆ. ಕೆಸರಿನಿಂದ ಆವೃತವಾದ ಅವರು ಕಾಲು ತೊಳೆದ ಕೂಡಲೇ ಅವರಿಗೆ ಆಶ್ಚರ್ಯ ಕಾದಿತ್ತು. ಶಿವಶರಣರ ಮೈತೊಳೆದ ನೀರಿನಿಂದ ಕುಷ್ಠರೋಗ ಮಾಯವಾಗಿತ್ತು. ಈ ವಿಷಯವನ್ನು ಓಣಿಯ ಬ್ರಾಹ್ಮಣರಿಗೆ ತಿಳಿಸಿದನು. ಆ ಕೆಸರನ್ನು ಹಚ್ಚಿಕೊಂಡ 300ಕ್ಕೂ ಹೆಚ್ಚು ಜನರಿಗೆ ತಮ್ಮ ತೊನ್ನು ಹಾಗೂ ಕುಷ್ಠರೋಗವನ್ನು ಕಳೆದುಕೊಂಡರೆಂದು ಕಥೆ ಬರುತ್ತದೆ. ಇವರು 116ಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದಾರೆ. ಇವರ ವಚನಗಳ ಅಂಕಿತ ‘ಕಾಮಧೂಮ ಧೂಳೇಶ್ವರ’. ಇವರ ವಚನಗಳಲ್ಲಿ ಕಾವ್ಯದ ಸತ್ವವಿದೆ. ಇವರು ಪವಾಡ ಪುರುಷ, ಮಹಾಮಹಿಮ ಶರಣ ಮಾದರ ಧೂಳಯ್ಯನವರಾಗಿದ್ದಾರೆ.

 • 64 ಮಾದರ ಚೆನ್ನಯ್ಯ
 • ವೇದ ಶಾಸ್ತ್ರಕ್ಕೆ ಹಾರುವನಾಗಿ, ವೀರ ವಿತರಣಕ್ಕೆ ಕ್ಷತ್ರಿಯನಾಗಿ, ಸರ್ವವನಾರೈದು ನೋಡುವಲ್ಲಿ ವೈಶ್ಯನಾಗಿ ವ್ಯಾಪಾರದೊಳಗಾಗಿ, ಕೃಷಿಯ ಮಾಡುವುದಕ್ಕೆ ಶೂದ್ರನಾಗಿ. ಇಂತೀ ಜಾತಿಗೋತ್ರದೊಳಗಾದ ನೀಚ ಶ್ರೇಷ್ಠವೆಂಬ ಎರಡು ಕುಲವಲ್ಲದೆ, ಹೊಲೆ ಹದಿನೆಂಟು ಜಾತಿಯೆಂಬ ಕುಲವಿಲ್ಲ. ಬ್ರಹ್ಮವನರಿದಲ್ಲಿ ಬ್ರಾಹ್ಮಣ, ಸರ್ವಜೀವಹತ ಕರ್ಮಕ್ಕೊಳಗಾಗಿದ್ದಲ್ಲಿ ಸಮಗಾರ. ಈ ಉಭಯವನರಿದು ಮರೆಯಲಿಲ್ಲ. ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ, ಅರಿ ನಿಜಾತ್ಮಾರಾಮ ರಾಮನಾ. ನಡೆನುಡಿ ಸಿದ್ಧಾಂತವಾದಲ್ಲಿ, ಕುಲ ಹೊಲೆ ಸೂತಕವಿಲ್ಲ. ನುಡಿ ಲೇಸು, ನಡೆಯಧಮವಾದಲ್ಲಿ, ಅದೆ ಬಿಡುಗಡೆಯಿಲ್ಲದ ಹೊಲೆ. ಕಳವು ಪಾರದ್ವಾರಂಗಳಲ್ಲಿ ಹೊಲಬನರಿಯದೆ, ಕೆಟ್ಟು ನಡೆವುತ್ತ, ಮತ್ತೆ ಕುಲಜರೆಂಬ ಒಡಲವರುಂಟೆ? ಆಚಾರವೆ ಕುಲ, ಅನಾಚಾರವೆ ಹೊಲೆ. ಇಂತೀ ಉಭಯವ ತಿಳಿದರಿಯಬೇಕು. ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ, ಅರಿ ನಿಜಾತ್ಮಾ ರಾಮ ರಾಮನಾ. ಕಾಂಚಿನಗರವನ್ನು ತಮಿಳು ದೊರೆ ಶಿವಭಕ್ತ ಕರಿಕಾಲಚೋಳ ಭೂಪತಿ ಆಳುತ್ತಿದ್ದನು. ಆ ರಾಜನ ಕುದುರೆ ಲಾಯಕ್ಕೆ ಹುಲ್ಲು ಹೊರುವ ಕಾಯಕ ಮಾಡಿಕೊಂಡಿದ್ದವರು ಮಾದರ ಚೆನ್ನಯ್ಯ. ಕಲ್ಯಾಣಕ್ಕೆ ಬಂದು ಶಿವಶರಣರಾಗುತ್ತಾರೆ. ಸುಂದರವಾದ ಕನ್ನಡದಲ್ಲಿ ವಚನಗಳನ್ನು ಬರೆದಿದ್ದಾರೆ. ಮಾದರ ಚೆನ್ನಯ್ಯನವರು ಗುಪ್ತಭಕ್ತರಾಗಿದ್ದುದರಿಂದ ಇವರು ತಮ್ಮ ವಚನಗಳಲ್ಲಿ ಅಂಕಿತವನ್ನು ಬಳಸಿಲ್ಲ. ಕೆಲವು ವಚನಗಳಲ್ಲಿ “ಕೈಯುಳಿಗತ್ತಿ, ಅಡಿಗೂಂಟಕ್ಕಡಿಯಾಗಬೇಡ ಅರಿ ನಿಜಾತ್ಮ ರಾಮ ರಾಮನ” ಎಂಬ ಅಂಕಿತವಿದೆ. ಗುರು-ಲಿಂಗ-ಜಂಗಮರ ಪಾದೋದಕಕ್ಕಾಗಿ ಮಾಡಿದ ಸಜ್ಜೆಯ ಲಿಂಗಕ್ಕೂ ಮಜ್ಜನ ಮಾಡಿಸುತ್ತಿದ್ದರು. ಇದು ಯಾರಿಗೂ ಕಾಣದಂತೆ ನಡೆಯುತ್ತಿತ್ತು. ಮನೆಗೆ ಬಂದ ಮೇಲೆ ಆತ್ಮಲಿಂಗಕ್ಕೆ ಅಂಬಲಿಯ ನೈವೇದ್ಯ ಅರ್ಪಿಸುತ್ತಿದ್ದರು. ಕಾಯಕ ದೇವರ ಸಾಕ್ಷಾತ್ಕಾರಕ್ಕೆ ಪೂರಕವಾಗಿರಬೇಕೆಂಬುದು ಮಾದರ ಚೆನ್ನಯ್ಯನವರ ಅಭಿಮತವಾಗಿದೆ. ಶರಣ ಸಮೂಹದಲ್ಲಿ ಚೆನ್ನಯ್ಯವರ ಅಂಬಲಿ ಪ್ರಸಿದ್ಧವಾಗಿದೆ. ಇದು ಚೆನ್ನಯ್ಯವರ ಕುರಿತಂತಹ ಮಹಾತ್ಮೆಯಾಗಿದೆ. ಚೆನ್ನಯ್ಯನವರು ಜೇಡರ ದಾಸಿಮಯ್ಯನವರಿಗಿಂತ ಪೂರ್ವದಲ್ಲಿದ್ದರು, ಹಗಲೊಂದು ರಾತ್ರಿಯೊಂದು, ಹೆಣ್ಣೊಂದು ಗಂಡೊಂದು ಎರಡೇ ಭೇದವಲ್ಲದೆ ನೂರೆಂಟು ಭೇದವಿಲ್ಲವೆಂಬುದು ಮಾದರ ಚೆನ್ನಯ್ಯನವರ ಅಭಿಮತವಾಗಿದೆ. ವಾಸ್ತವಿಕವಾಗಿ ಚೆನ್ನಯ್ಯನವರು ತಮಿಳುನಾಡಿನವರಾದರೂ ನಮ್ಮ ಆದಿಪುರುಷರಾಗಿದ್ದಾರೆ.

 • 65 ಮುಸುಟೆಯ ಚೌಡಯ್ಯ
 • ಮುಸುಟೆಯ ಚೌಡಯ್ಯ ಬಸವಣ್ಣನವರ ಸಮಕಾಲೀನ ಶಿವಶರಣರು. ಗಣಸಹಸ್ರ ನಾಮಾವಳಿಯಲ್ಲಿ ಅಮರಗಣಗಳ ಪಟ್ಟಿಯಲ್ಲಿ ಇವರ ಹೆಸರು ಬಂದಿದೆ. ಹರಿಹರನು ಮುಸುಟೆ ಚೌಡಯ್ಯನವರ ಬಗ್ಗೆ ತಮ್ಮ ರಗಳೆಯಲ್ಲಿ ತಿಳಿಸಿದ್ದಾರೆ. ಇಷ್ಟಲಿಂಗ ಪೂಜೆಗೆ ಅಗ್ಘವಣಿ ಹೂ ತರುವುದು ಇವರ ಕಾಯಕವಾಗಿತ್ತು. ಇವರು ಇಟ್ಟಿ ಹಣ್ಣುಗಳನ್ನು ಅಮೃತಫಲವನ್ನಾಗಿ ಮಾಡುತ್ತಾರೆ. ತಮಗೆ ವಂದಿಸಿದ ಸತ್ತ ಕನ್ಯೆಗೆ ಪ್ರಾಣ ಬರುವಂತೆ ಮಾಡುವುದು. ಈ ಮೊದಲಾದ ಪವಾಡಗಳು ಪಂಡಿತಾರಾಧ್ಯ ಚರಿತ್ರೆಯಲ್ಲಿ ಬರುತ್ತದೆ. ವಿರೂಪಾಕ್ಷ ಪಂಡಿತರು ಚೆನ್ನಬಸವ ಪುರಣದಲ್ಲಿ ಇದೇ ಪವಾಡವನ್ನು ಹೇಳುತ್ತಾರೆ. ನದಿ ದಾರಿ ಬಿಟ್ಟುಕೊಡುವುದು, ವಿಷದ ಫಲವನ್ನು ಅಮೃತಫಲವನ್ನಾಗಿ ಜಂಗಮನಿಗೆ ಕೊಟ್ಟಿರುವುದು, ತಾವು ಆಶೀರ್ವದಿಸಿದ್ದ ಹೆಣ್ಣೊಬ್ಬಳು ಮರುದಿನವೇ ಪ್ರಾಣಬಿಡಲು ಅವಳನ್ನು ಬದುಕಿಸಿದ್ದು, ಕೃತಕ ಜಂಗಮನ ಹೆಣಕ್ಕೆ ಜೀವ ಕೊಟ್ಟದ್ದು ಈ ಮುಂತಾದ ಪವಾಡಗಳು ಶಾಂತಲಿಂಗ ದೇಶಿಕನ ಭೈರವೇಶ್ವರ ಕಾವ್ಯ ಕಥಾಮಣಿ ಸೂತ್ರರತ್ನಾಕರದಲ್ಲಿ ಬರುತ್ತದೆ. ಹೀಗಾಗಿ ಮುಸುಟೆ ಚೌಡಯ್ಯ ಪುರಾಣಪುರುಷರೆಂದು ತಿಳಿದುಬರುತ್ತದೆ. ಇವರ ಬಗ್ಗೆ ಸಾಕಷ್ಟು ಕಾವ್ಯಗಳಲ್ಲಿ ವಿವರವಾದ ಕಥೆಗಳಿವೆ. ಚೌಡಯ್ಯನವರ ಬದುಕು ಪವಾಡಗಳಿಂದ ತುಂಬಿಕೊಂಡಿದೆ. ಹರಿಹರ ಮೊದಲಾದವರ ಕಾವ್ಯಗಳಲ್ಲಿ ಇವರ ಪವಾಡಗಳನ್ನು ಗಮನಿಸಿದಾಗ ಇವರು ಬಸವಣ್ಣನವರ ಕಾಲದ ಮಹಾಮಹಿಮರೆಂದು ತಿಳಿಯಬಹುದಾಗಿದೆ.

 • 66 ಮೈದುನ ರಾಮಯ್ಯ
 • ಆಲಿಕಲ್ಲ, ನೀರೊಳಗೆ ಬೆರಸಿದಂತೆ, ಉಪ್ಪಿನ ಹರಳ, ಉದಕದೊಳಗೆ ಹಾಕಿದಂತೆ, ಕರ್ಪೂರದ ಹಣತೆಯಲ್ಲಿ ಜ್ಯೋತಿಯ ಬೆಳಗ ಬೆರಸಿದಂತೆ, ಮಹಾಲಿಂಗ ಚೆನ್ನರಾಮೇಶ್ವರಲಿಂಗದಲ್ಲಿ ಬೆರಸಿ, ಎರಡಳಿದಡಗಿದ ನಿಜಲಿಂಗೈಕ್ಯನು. ಶಿವಶರಣರ ಬರವ ಕಂಡು, ಶಿರಬಾಗಿ, ಕರಮುಗಿದಂಜಲೇಬೇಕು. ಶರಣೆನ್ನಲೊಲ್ಲದೀ ಮನವು. ಆಗಿನ ಸಧ್ಯಫಲದ ಲಾಭದ ಭಕ್ತಿಯನರಿಯದಾಗಿ, ಶರಣೆನ್ನಲೊಲ್ಲದೀ ಮನವು. ಆಳ್ದರೆಂದು ನಂಬಿಯೂ ನಂಬಲೊಲ್ಲದಾಗಿ, ಮಹಾಲಿಂಗ ಚೆನ್ನರಾಮೇಶ್ವರನೆನ್ನ ಕಡೆಗೆ ನೋಡಿ, ನಗು[ತ್ತಲೈದಾನೆ]. ಮೈದುನ ರಾಮಯ್ಯನವರ ಹೆಸರು ಗಣಸಹಸ್ರ ನಾಮದಲ್ಲಿ ಉಲ್ಲೇಖವಾಗಿದೆ. ಶಂಕರಲಿಂಗ ಕವಿಯ ಪ್ರಕಾರ ಇವರು ಆಂಧ್ರ ಪ್ರದೇಶದವರೆಂದು ತಿಳಿದುಬರುತ್ತದೆ. ಚಿಕ್ಕವಯಸ್ಸಿನಲ್ಲಿಯೇ ಮೈದುನ ರಾಮಯ್ಯರವರು ನಿರಾಕಾರ ಶಿವನಲ್ಲಿ ಸಾಕ್ಷಾತ್ಕಾರವನ್ನು ಹೊಂದುತ್ತಾರೆ. ಭಕ್ತಾದೈಕ್ಯದಿಂದ ಶಿವನಿಗೆ ಮೈದುನರಾಗಿ, ಮೈದುನ ರಾಮಯ್ಯನೆಂಬ ಖ್ಯಾತಿ ಪಡೆಯುತ್ತಾರೆ. ವಚನ ಪ್ರಕಾರಗಳಲ್ಲಿ ಇವರ ಎರಡು ವಚನಗಳು ಸಿಕ್ಕಿವೆ. ಇವರ ವಚನಗಳ ಅಂಕಿತ ‘ಮಹಾಲಿಂಗ ಚೆನ್ನರಾಮ’. ಇವರ ವಚನದಲ್ಲಿ ಬಸವಣ್ಣ, ಚೆನ್ನಬಸವಣ್ಣನವರ ಉಲ್ಲೇಖವಿರುವುದರಿಂದ ಇವರು ಬಸವಾದಿ ಶರಣರ ಸಮಕಾಲೀನರೆಂದು ತಿಳಿದುಬರುತ್ತದೆ. ಶಿವಯೋಗಿ ಸಿದ್ಧರಾಮರಂತೆ ಚಿಕ್ಕಂದಿನಲ್ಲಿಯೇ ಶಿವಕೃಪೆಗೆ ಪಾತ್ರರಾಗಿ ಲಿಂಗವಂತ ಧರ್ಮಕ್ಕೆ ದುಡಿದ ಶರಣರಿವರು. ಶಂಕರಲಿಂಗ ಹಾಗೂ ಅಜ್ಞಾತ ಕವಿಯಿಂದ ರಚಿತವಾಗಿರುವ ತ್ರಿಪದಿ ಕಾವ್ಯಗಳಲ್ಲಿ ಇವರ ವಿವರಗಳು ಕಥಾ ರೂಪದಲ್ಲಿವೆ. ಶೈವೀಬ್ರಾಹ್ಮಣ ಸೋಮಯ್ಯ, ಮಹಾದೇವಿಯವರ ಮಗನಾಗಿ ರಾಮಯ್ಯ ಜನಿಸಿದರು. ರಾಮಯ್ಯ ಶಿವದೀಕ್ಷೆಯನ್ನು ಪಡೆದು ಶಿವಾನುಭವಿಯಾಗುತ್ತಾರೆ. ‘ಮೈದುನ ರಾಮಯ್ಯ ಸುವ್ವಿ’ ತುಂಬಾ ಸುಂದರವಾದ ಕಾವ್ಯ. ಇದರಲ್ಲಿ ಈ ಶರಣರ ಬಾಳನ್ನು ಸೂಕ್ಷ್ಮವಾಗಿ ವಿವರಿಸಿರುತ್ತಾರೆ.

 • 67 ಮೋಳಿಗೆ ಮಾರಯ್ಯ
 • ಅನುಪಮ ಲಿಂಗವೆ, ಎನ್ನ ನೆನಹಿಂಗೆ ಬಾರೆಯಾ, ಅಯ್ಯಾ? ಎನ್ನ ತನುಮನ ಶುದ್ಧವಿಲ್ಲೆಂದು, ಎನ್ನ ನೆನಹಿನಲ್ಲಿ ನೀ ನಿಲ್ಲೆಯಾ ಅಯ್ಯಾ? ಎನ್ನ ಪಾತಕದ ಪುಂಜವ ನೀ ಅತಿಗಳೆಯಾ. ಎನ್ನ ಹಸಿವಿಂಗೆ ಅಸು ನೀನೆ, ವಿಷಯಕ್ಕೆ ಮನ ನೀನೆ. ಸ್ಫಟಿಕದ ಘಟದೊಳಗಣ ಬಹುರಂಗಿನಂತೆ, ಎನ್ನ ಅಂಗಮಯ ನೀನಾಗಿ, ಹಿಂಗಲೇಕೆ ನಿಃಕಳಂಕ ಮಲ್ಲಿಕಾರ್ಜುನಾ? ಆಗಮವನರಿದಲ್ಲಿ ಆಗುಚೇಗೆಯನರಿಯಬೇಕು. ಶಾಸ್ತ್ರವನರಿದಲ್ಲಿ ಸಾವನರಿಯಬೇಕು. ಪುರಾಣವನರಿದಲ್ಲಿ ಪುಂಡರ ಸಂಗವ ಹರಿಯಬೇಕು. ಇಂತಿವನರಿದ ಚಿತ್ತಶುದ್ಧಂಗಲ್ಲದೆ ಸನ್ಮತವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ. ಮೋಳಿಗೆ ಮಾರಯ್ಯ ಹಾಗೂ ಮಹಾದೇವಿಯಮ್ಮ ದಂಪತಿಗಳು ರಾಜವಂಶಕ್ಕೆ ಸೇರಿದವರು. ಮೋಳಿಗೆ ಮಾರಯ್ಯ ಕಾಶ್ಮೀರದ ದೊರೆ. ಇವರ ಮೂಲ ಹೆಸರು ಮಹದೇವ ಭೂಪಾಲ. ಮಹದೇವಿಯಮ್ಮನ ಮೂಲ ಹೆಸರು ಗಂಗಾದೇವಿ. ಶರಣ ಚಳುವಳಿಯಲ್ಲಿ ಕಾಣಿಸಿಕೊಳ್ಳುವ ಅಪರೂಪದ ದಂಪತಿಗಳು ಇವರಾಗಿದ್ದಾರೆ. ಮೋಳಿಗೆ ಮಾರಯ್ಯ ಅಪ್ಪಟ ಶಿವಭಕ್ತ. ಇವರಿಗೆ ಶರಣರೆಂದರೆ ಬಹುಭಕ್ತಿ. ಪ್ರತಿದಿನ ಆರು ಸಾವಿರ ಜಂಗಮರ ಸೇವೆಯನ್ನು ಮಾಡಿ ನಂತರ ತಾವು ಪ್ರಸಾದ ಸ್ವೀಕರಿಸುತ್ತಿದ್ದರು. ಬಸವಣ್ಣನವರು ಇದನ್ನು ತಿಳಿದು ತಾವೇ ಕಾಶ್ಮೀರಕ್ಕೆ ಬಂದು ಜಂಗಮರಿಗೆ ಪ್ರಸಾದ ನೀಡಿ ಅವರನ್ನು ಕಲ್ಯಾಣಕ್ಕೆ ಕರೆದೊಯ್ಯುತ್ತಾರೆ. ಮಹದೇವ ಭೂಪಾಲ ಕಲ್ಯಾಣಕ್ಕೆ ಹೋಗಿ ಕಲ್ಯಾಣದ ಬಸವಣ್ಣನ ಕೊಂದು ಜಂಗಮರ ಕರೆತನ್ನಿ ಎಂದು ಆಜ್ಞಾಪಿಸುತ್ತಾರೆ. ಅವರು ಹೋಗಿ ಶರಣರಾಗುತ್ತಾರೆ. ಬಸವಣ್ಣನವರ ವ್ಯಕ್ತಿತ್ವ ಅರಿತ ರಾಜ-ರಾಣಿ ಇಬ್ಬರೂ ಕಲ್ಯಾಣಕ್ಕೆ ಹೊರಟು ಸೌದೆ ಮಾರುವ ಕಾಯಕ ಮಾಡಿ ಅದರಿಂದ ಬಂದ ಹಣದಿಂದ ದಾಸೋಹ ಮಾಡತೊಡಗುತ್ತಾರೆ. ರಾಜ-ರಾಣಿಯಾಗಿದ್ದ ದಂಪತಿಗಳು ಬಸವಣ್ಣನವರಿಂದ ದೀಕ್ಷೆ ಪಡೆದು ಮೋಳಿಗೆ ಮಾರಯ್ಯ ಮತ್ತು ಮೋಳಿಗೆ ಮಹದೇವಮ್ಮರಾದರು. ಪ್ರತಿದಿನ ಸೂರ್ಯೋದಯಕ್ಕೆ ಮೊದಲೇ ಎದ್ದು ನಿತ್ಯವಿಧಿಗಳನ್ನು ಪೂರೈಸಿ ಶಿವಾರ್ಚನೆ ಹಾಗೂ ಜಂಗಮ ಸೇವೆ ಮಾಡುವುದು. ನಂತರ ದೇವರ ಪ್ರಸಾದ ಸ್ವೀಕರಿಸಿ ಕಾಡಿಗೆ ತೆರಳುವುದು, ಅಲ್ಲಿ ಕಟ್ಟಿಗೆ ಕಡಿದು ತಂದು ಊರಿನಲ್ಲಿ ಮಾರಿಬಂದ ಹಣದಲ್ಲಿ ದಾಸೋಹ ಮಾಡುವುದು, ಇವರ ಕಾಯಕವಾಯಿತು. ಮಹಾರಾಜನಾದರೂ ಶ್ರೀಸಾಮಾನ್ಯನಂತೆ ಶರಣರ ಸೇವೆ ಮಾಡುತ್ತಾ ಮಾರಯ್ಯ ದಂಪತಿಗಳು ಮಹಾಶಿವಶರಣರಾಗಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುತ್ತಾರೆ. ಬಸವಣ್ಣನವರ ಪ್ರಭಾವದಿಂದ ಮಹಾರಾಜನೊಬ್ಬ ಶಿವಶರಣನಾದ. ಅವರು ಎಲ್ಲಾ ಶರಣರಿಗೂ ಮಾದರಿಯಾದರು. ಈ ಮಾರಯ್ಯನವರ ಗವಿ ಬೀದರ ಜಿಲ್ಲೆಯ ಬಸವ ಕಲ್ಯಾಣದಿಂದ 12 ಕಿ.ಮೀ. ದೂರದಲ್ಲಿರುವ ಮೋಳಕೇರಿ ಎಂಬ ಗ್ರಾಮದಲ್ಲಿದೆ. ಇವರು ಶತಾಯುಷಿಗಳಾಗಿ ಬದುಕಿದ್ದರು ಎಂದು ಅವರ ವಚನವೊಂದು ಹೇಳುತ್ತದೆ. ಇವರ ಅರ್ಥಗರ್ಭಿತ ವಚನಗಳು ಇಂದು ಸಹ ನಮಗೆ ಸ್ಫೂರ್ತಿಯನ್ನು ತುಂಬುತ್ತವೆ. ಶಿವಶರಣರಲ್ಲಿ ಅಗ್ರಮಾನ್ಯನಾಗಿದ್ದರು. ಇವರ ಆದರ್ಶದ ಬೆಳಕು ಇಡೀ ಮಾನವ ಕುಲಕ್ಕೆ ದಾರಿ ದೀಪವಾಗಿದೆ.

 • 68 ಸಮಯಾಚಾರದ ಮಲ್ಲಿಕಾರ್ಜುನದೇವ
 • ಕರಸ್ಥಲದ ಲಿಂಗವ ಬಿಟ್ಟು, ಧರೆಯ ಮೇಲಣ ಪ್ರತಿಮೆಗೆರಗುವ ನರಕಿ ನಾಯಿಗಳನೇನೆಂಬೆನಯ್ಯಾ, ಪರಮಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನಾ. ಸತಿಯ ನೋಡಿ ಸಂತೋಷವ ಮಾಡಿ, ಸುತರ ನೋಡಿ ಸುಮ್ಮಾನವ ಮಾಡಿ, ಮತಿಯ ಹೆಚ್ಚುವಿನಿಂದ ಮೈಮರೆದೊರಗಿ, ಸತಿಸುತರೆಂಬ ಸಂಸಾರದಲ್ಲಿ ಮತಿಗೆಟ್ಟು, ಮರುಳಾದುದನೇನೆಂಬೆ, ಎನ್ನ ಪರಮಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನಾ. ಇವರು ಬಸವಯುಗದ ವಚನಕಾರರು. ಇವರ ಹೆಸರಿನ ಮುಂದೆ ಮಡಿವಾಳಯ್ಯಗಳ ಸಮಯಾಚಾರದ ಎಂಬ ವಿಶ್ಲೇಷಣೆಯನ್ನು ಗಮನಿಸಿದಾಗ ಇವರು ಮಡಿವಾಳ ಮಾಚಿದೇವರ ನಿಕಟವರ್ತಿ ಎಂದು ತಿಳಿದುಬರುತ್ತದೆ. ಇವರ ಕಾಲ 1160. ಇವರು ಪರಮಗುರು ಶಾಂತಮಲ್ಲಿಕಾರ್ಜುನ ಹಾಗೂ “ಪರಮ ಪಂಚಾಕ್ಷರ ಮೂರ್ತಿ ಶಾಂತಮಲ್ಲಿಕಾರ್ಜುನ” ಅಂಕಿತದಲ್ಲಿ ವಚನಗಳನ್ನು ಬರೆದಿದ್ದಾರೆ. ಶರಣರು ನುಡಿದುದೆ ಸಿದ್ಧಾಂತ. ನೋಡಿದುದೆ ಅರ್ಪಿತ. ಮುಟ್ಟಿದುದೆ ಪ್ರಸಾದ ಮಲ್ಲಿಕಾರ್ಜುನದೇವ ಎಂದು ಹೇಳುತ್ತಾರೆ. ಇವರು ಶರಣರ ಬಗೆಗೆ ಧನ್ಯತಾಭಾವವನ್ನು ತಮ್ಮ ವಚನಗಳಲ್ಲಿ ವ್ಯಕ್ತಪಡಿಸಿದ್ದಾರೆ. ಲೌಕಿಕ ಜೀವನದಲ್ಲಿ ಮುಳುಗಿರುವವರನ್ನು ಕುರಿತು ಅದರಿಂದ ಆಗುವ ತೊಂದರೆ ಏನೆಂದು ಇವರು ವಿವರಿಸಿದ್ದಾರೆ. ಸತಿಸುತರೆಂಬ ಸಂಸಾರದಲ್ಲಿ ಮತಿಗೆಟ್ಟು ಮರುಳಾದೆ ಎಂದು ಪರಿತಪಿಸಿದ್ದಾರೆ. ಕರಸ್ಥಲದ ಲಿಂಗವ ಬಿಟ್ಟು ಧರೆಯ ಮೇಲಿರುವ ಪ್ರತಿಮೆಗಳನ್ನು ಪೂಜಿಸುವವರು ನರಕದ ನಾಯಿಗಳೆಂದು ಸ್ಥಾವರಲಿಂಗಪೂಜೆಯನ್ನು ವಿಡಂಬಿಸಿದ್ದಾರೆ. ಕೆಲವು ವಚನಗಳನ್ನು ಗಮನಿಸಿದಾಗ, ಇವರ ಮೇಲೆ ಅಲ್ಲಮನ ಪ್ರಭಾವ ದಟ್ಟವಾಗಿ ಬಿದ್ದಿದೆ ಎಂದು ತಿಳಿಯುತ್ತದೆ. ತಮ್ಮ ವಚನಗಳಲ್ಲಿ ದೈನಂದಿನ ಜೀವನದ ಹೋಲಿಕೆಯನ್ನು ಬಳಸಿದ್ದಾರೆ. ಇವರ ವಚನಗಳು ಗದ್ಯದ ಲಯದಲ್ಲಿವೆ. ಮಡಿವಾಳ ಮಾಚಿದೇವರ ಸಹವರ್ತಿಯಾದ ಮಲ್ಲಿಕಾರ್ಜುನ ದೇವರು ಮಹಾಶಿವಶರಣರಾಗಿ ನಮ್ಮ ಕಣ್ಣ ಮುಂದೆ ನಿಲ್ಲುತ್ತಾರೆ.

ಬಸವಕಾಲೀನ  ಶಿವಶರಣೆಯರು


 • 1ಅಕ್ಕಮಹಾದೇವಿ
 • ಅಕ್ಕಮಹಾದೇವಿ ಹನ್ನೆರಡನೆಯ ಶತಮಾನದ ಶಿವಶರಣೆಯರಲ್ಲಿ ಅಕ್ಕ ಮಹಾದೇವಿಗೆ ಅಗ್ರಸ್ಥಾನವಿದೆ. ಶಿವಮೊಗ್ಗ ಜಿಲ್ಲೆಯ ಉಡುತಡಿ ಗ್ರಾಮದಲ್ಲಿ ಓಂಕಾರಶೆಟ್ಟಿ-ಲಿಂಗಮ್ಮ ದಂಪತಿಗಳ ಉದರದಲ್ಲಿ ಜನಿಸಿದ ಅಕ್ಕಮಹಾದೇವಿ ಬಾಲ್ಯದಿಂದಲೇ ಶಿವಭಕ್ತಿಯನ್ನು ಮೈಗೂಡಿಸಿಕೊಂಡು ಬೆಳೆದು ಹತ್ತನೆಯ ವರ್ಷದಲ್ಲೇ ಗುರುಕರುಣೆಗೆ ಪಾತ್ರರಾದರಲ್ಲದೆ ಆ ಮಲ್ಲಿಕಾರ್ಜುನನೇ ತನ್ನ ಪತಿಯೆಂಬ ಭಾವ ತಾಳಿ ಐಹಿಕ ಪ್ರಪಂಚದ ಮೋಹವನ್ನೇ ಕಳೆದುಕೊಂಡು ವಿರಕ್ತೆಯಾದರು. ಆದರೆ ರಾಜತ್ವದ ಒತ್ತಾಯಕ್ಕೆ ಮಣಿದು ದೊರೆ ಕೌಶಿಕನನ್ನು ವಿವಾಹವಾದರು. ಅಲ್ಪಕಾಲದಲ್ಲೇ ಸಾಂಸಾರಿಕ ಬಂಧನ ಕಡಿದುಕೊಂಡು ಉಡಿಗೆ-ತೊಡಿಗೆಗಳನ್ನೆಲ್ಲ ಕಿತ್ತೆಸೆದು ಶಿವಶರಣರ ನೆಲೆವೀಡಾದ ಕಲ್ಯಾಣದತ್ತ ತೆರಳುತ್ತಾರೆ. ಅನುಭವ ಮಂಟಪದಲ್ಲಿ ಹಿರಿಯ ಶರಣರು ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಆ ವೇದಿಕೆಯಲ್ಲಿ ಸ್ಥಿರವಾದ ಸ್ಥಾನ ಪಡೆಯುತ್ತಾರೆ ಅಲ್ಲಮಪ್ರಭು, ಬಸವಣ್ಣ, ಸಿದ್ಧರಾಮಯ್ಯ, ಚೆನ್ನಬಸವಣ್ಣ ಮೊದಲಾದವರ ಅನುಗ್ರಹಕ್ಕೆ ಪಾತ್ರರಾಗುತ್ತಾರೆ. ಕೆಲ ಸಮಯದ ನಂತರ ಅಲ್ಲಮಪ್ರಭುಗಳು ಸಲಹೆಯಂತೆ ಶ್ರೀಶೈಲ-ತ್ರಿಕೂಟ ಗಿರಿಯತ್ತ ತೆರಳಿ ಅಲ್ಲಿ ಕದಳೀಬನದಲ್ಲಿ ಸರ್ವಾರ್ಪಣ ಭಾವದಿಂದ ಶ್ರೀ ಮಲ್ಲಿಕಾರ್ಜುನನನ್ನು ಆರಾಧಿಸುತ್ತ ಅಮೂಲ್ಯವಾದ ವಚನಗಳನ್ನು ರಚಿಸುತ್ತ, ತ್ಯಾಗ ವೈರಾಗ್ಯದ ಮೂರ್ತಿಯಾಗಿ ಕಂಗೊಳಿಸುತ್ತಾರೆ. ಲೋಕಾಪವಾದಕ್ಕೆ ಅಂಜದೆ, ಮಲ್ಲಿಕಾರ್ಜುನನ್ನನ್ನೇ ಸರ್ವಸ್ವವೆಂದು ತಿಳಿದು ತನ್ನ ಬದುಕನ್ನು ಅರ್ಪಿಸಿದ ಅಕ್ಕಮಹಾದೇವಿ ಆಧ್ಯಾತ್ಮ ಪ್ರಪಂಚದ ಚೇತನವಾಗಿ, ವಚನ ಸಾಹಿತ್ಯದ ನಿಧಿಯಾಗಿ ಅಮರಳೆನಿಸಿದ್ದಾರೆ. ಆಕೆಯ ಒಂದು ವಚನ- ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯಾ ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆತೆರೆಗಳಿಗಂಜಿದಡೆಂತಯ್ಯ? ಸಂತೆಯೊಳಗೊಂದು ಮನೆಯ ಮಾಡಿ ಶಬ್ಧಕ್ಕೆ ನಾಚಿದಡೆಂತಯ್ಯ ಕೇಳಯ್ಯ. ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ ಮನದಲ್ಲಿ ಕೋಪದ ತಾಳದೆ ಸಮಾಧಾನಿಯಾಗಿರಬೇಕು. ಹೊಳೆವ ಕೆಂಜೆಡೆಯ ಮೇಲೆ ಎಳೆವೆಳುದಿಂಗಳು, ಫಣಿಮಣಿ ಕರ್ಣಕುಂಡಲ ನೋಡವ್ವಾ; ರುಂಡಮಾಲೆಯ ಕೊರಳವನ ಕಂಡಡೆ ಒಮ್ಮೆ ಬರಹೇಳವ್ವಾ! ಗೋವಿಂದನ ನಯನ ಉಂಗುಟದ ಮೇಲಿಪ್ಪುದು, ಚೆನ್ನಮಲ್ಲಿಕಾರ್ಜುನದೇವನ ಕುರುಹವ್ವಾ.

 • 2ಅಕ್ಕನಾಗಮ್ಮ (ನೂತನರು)
 • ಅಕ್ಕನಾಗಮ್ಮ ಬಸವಣ್ಣನವರ ಅಕ್ಕನಾಗಿ ಅವರ ಬದುಕಿನ ಸುಖದುಃಖಗಳಲ್ಲೊಂದುಗೂಡಿ ಬಾಳಿದವರು. ಬಾಗೇವಾಡಿಯಲ್ಲಿ ಜನಿಸಿದ ಅಕ್ಕನಾಗಮ್ಮ ಬಾಲ್ಯದಲ್ಲೇ ತನ್ನ ತಂದೆ- ತಾಯಿಯರನ್ನು ಬಿಟ್ಟುಹೊರಟ ಬಸವಣ್ಣನಿಗೆ ಆಸರೆಯಾಗಿ ಅವರನ್ನು ಬೆಳೆಸಿದವರು. ಉಪನಯನಾದಿ ಸಂಸ್ಕಾರಗಳನ್ನು ತಿರಸ್ಕರಿಸಿ ಬಸವಣ್ಣ ಕಲ್ಯಾಣದತ್ತ ಹೊರಟಾಗ ಅಕ್ಕನಾಗಮ್ಮ ಅವರನ್ನು ಹಿಂಬಾಲಿಸುತ್ತಾರೆ. ಕೂಡಲಸಂಗಮದಲ್ಲಿಯೂ ಬಸವಣ್ಣನ ಜೊತೆಯಲ್ಲಿ ವಾಸವಾಗಿರುತ್ತಾರೆ. ಬಾಗೇವಾಡಿಯ ಹತ್ತಿರದ ಇಂಗಳೇಶ್ವರದಲ್ಲಿ ಅಕ್ಕನಾಗಮ್ಮನ ಪ್ರತಿಮೆಯಿರುವ ಒಂದು ಗುಹೆಯಿದ್ದು, ಅಲ್ಲಿಯೇ ಅವರು ಶಿವಯೋಗ ಸಾಧನೆ ಮಾಡಿದರೆಂದು ತಿಳಿದುಬರುತ್ತದೆ. "ಸಿಂಗಿರಾಜ ಪುರಾಣ" ರಚಿಸಿದ ಕವಿಯ ಪ್ರಕಾರ ಅಕ್ಕನಾಗಮ್ಮನ-ಶಿವಸ್ವಾಮಿ ದಂಪತಿಗಳಿಗೆ ಹುಟ್ಟಿದವರೇ ಮಹಾಜ್ಞಾನಿ ಚೆನ್ನಬಸವಣ್ಣ. ಅಕ್ಕನಾಗಮ್ಮ ಅನುಭವ ಮಂಟಪದಲ್ಲಿ ದಿನನಿತ್ಯ ನಡೆಯುತ್ತಿದ್ದ ತತ್ವಾರ್ಥ ಚಿಂತನ ಗೋಷ್ಠಿಗಳಲ್ಲಿಯೂ ಪಾಲ್ಗೊಳ್ಳುತ್ತಿದ್ದರು ಮತ್ತು ಚೆನ್ನಸಂಗಯ್ಯ" ಎಂಬ ಅಂಕಿತದಲ್ಲಿ ಅನೇಕ ಅರ್ಥಗರ್ಭಿತ ವಚನಗಳನ್ನು ರಚಿಸಿದ್ದಾರೆ. ತ್ರಿಪುರಾಂತಕೇಶ್ವರ ಕೆರೆಯ ಬಳಿ ಗುಹೆಯಲ್ಲಿ ಶಿವಯೋಗ ಸಾಧನೆ ಕೈಕೊಂಡ ಅಕ್ಕನಾಗಮ್ಮ ಮುಂದೆ ಕಲ್ಯಾಣ ಕ್ರಾಂತಿ ನಡೆದಾಗ ಶಿವಶರಣೆಯರನ್ನೆಲ್ಲ ಒಂದುಗೂಡಿಸಿ ಧರ್ಮರಕ್ಷಣೆಗೆ ಟೊಂಕ ಕಟ್ಟಿ ನಿಂತರು. ಶಿವಶರಣರ ಸೇನೆ ಬಿಜ್ಜಳನ ಸೇನೆಯವಿರುದ್ಧ ನಡೆಸಿದ ಯುದ್ಧದ ಸಂದಂರ್ಭದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಕಾದರವಳ್ಳಿ ಕಾಳಗದ ನಂತರ ಶರಣರು ಉಳುವೆಗೆ ಹೋದಾಗ ಅಲ್ಲಿಗೆ ತೆರಳಿದ ಅಕ್ಕನಾಗಮ್ಮ ಮುಂದೆ ತರೀಕೆರೆಯ ಬಳಿ ಎಣ್ಣೆಹೊಳೆ ಎಂಬಲ್ಲಿ ನೆಲೆಸಿ ಧರ್ಮರಕ್ಷಣೆಯ ಮಹಾತ್ಕಾರ್ಯ ಕೈಗೊಂಡು ಅಲ್ಲಿಯೇ ಲಿಂಗೈಕ್ಯರಾದರು. ಅಲ್ಲಿ ಇಂದಿಗೂ ಅಕ್ಕನಾಗಮ್ಮನ ಸಮಾಧಿ ಇದೆ. ಆಕೆಯ ಒಂದು ವಚನ- ಮನದೊಡೆಯ ಮಹಾದೇವ ಮನವ ನೋಡಿಹೆನೆಂದು ಮನುಜರ ಕೈಯಿಂದ ಒಂದೊಂದ ನುಡಿಸುವವನು ಇದಕ್ಕೆ ಕಳವಳಿಸದಿರು ಕಂಡಾ, ನಿಶ್ಚಿಂತನಾಗಿರು ಮನವೆ ಬಸವಣ್ಣಪ್ರಿಯ ಚೆನ್ನಸಂಗಯ್ಯನು ಬೆಟ್ಟದನಿತಪರಾಧವನು ಒಂದು ಬೊಟ್ಟಿನಲ್ಲಿ ತೊಡೆವನು.

 • 3ಅಕ್ಕಮ್ಮ
 • ಶಿವಶರಣೆಯರಲ್ಲಿ ಅಕ್ಕಮಹಾದೇವಿಯ ನಂತರ ಅತಿ ಹೆಚ್ಚು ವಚನಗಳನ್ನು ರಚಿಸಿದ ಅಕ್ಕಮ್ಮನ, ಜೀವಿತ ಕಾಲ 1160 ಎಂದು ಚರಿತ್ರೆಕಾರರು ಊಹಿಸಿದ್ದಾರೆ. ಅವರು ಬರೆದ 154 ವಚನಗಳು ದೊರಕಿದ್ದರೂ ಅವರ ಜೀವನ ಕುರಿತಾದ ಹಿಚ್ಚಿನ ವಿವರಗಳು ಲಭ್ಯವಾಗಿಲ್ಲ. ‘ಆಚಾರವೇ ಪ್ರಾಣವಾದ ರಾಮೇಶ್ವರ ಲಿಂಗ' ಎಂದು ಅಕ್ಕಮ್ಮ ತಮ್ಮ ವಚನಗಳ ಅಂಕಿತವಾಗಿ ಬಳಸಿದ್ದಾರೆ. ಶರಣೆ ಅಕ್ಕಮ್ಮ ಗುರುಲಿಂಗ ಜಂಗಮವನ್ನೇ ತನ್ನ ಬದುಕಿನ ಮೂಲಮಂತ್ರವಾಗಿ ಸ್ವೀಕರಿಸಿದವರು ನಿಷ್ಠಾವಂತ ಜೀವನವನ್ನು ನಡೆಸಿದರು. ಸಾಮಾನ್ಯ ಜನವರ್ಗಕ್ಕೆ ಸೇರಿದ ಅಕ್ಕಮ್ಮನ ವಚನಗಳಲ್ಲಿ ಜನಸಾಮಾನ್ಯರ ದಿನನಿತ್ಯದ ಬಳಕೆಯ ವಸ್ತುಗಳ ಹೆಸರನ್ನು ಉಲ್ಲೇಖಿಸುತ್ತಾರಲ್ಲದೇ ಮನೋವಿಕಾರಕ್ಕೆಡೆ ಮಾಡಿಕೊಡುವ ಆಹಾರ ಸೇವಿಸದೇ ಸಾತ್ವಿಕ ಆಹಾರ ಸೇವಿಸಬೇಕೆಂದೂ ಸೂಚಿಸುತ್ತಾರೆ. ಏಕನಿಷ್ಠೆ, ವ್ರತೋಪವಾಸ, ಆಚಾರ-ವಿಚಾರಗಳ ಕುರಿತು ಅನೇಕ ವಚನಗಳನ್ನು ಬರೆದಿರುವ ಅಕ್ಕಮ್ಮ ಸತ್ಯಶುದ್ಧ ಕಾಯಕದ ಮಹತ್ವ, ಜ್ಞಾನ ಮತ್ತು ಕ್ರಿಯೆಗಳ ಒಂದುಗೂಡುವಿಕೆಯ ಅಗತ್ಯ, ನೈತಿಕ ನಿಷ್ಠೆ, ಭಕ್ತನ ಅಂತರಂಗಶುದ್ಧಿ ಮೊದಲಾದ ವಿಷಯಗಳ ಕುರಿತು ತನ್ನ ಅನಿಸಿಕೆಯನ್ನು ಅತ್ಯಂತ ಸ್ಪಷ್ಟ ನುಡಿಗಳಲ್ಲಿ ತಿಳಿಸಿದ್ದಾರೆ. ಅಕ್ಕಮ್ಮ ಹೇಳುವಂತೆ 64 ವ್ರತಗಳು, 56 ಬಗೆಯ ಶೀಲಗಳು ಹಾಗೂ 32 ಬಗೆಯ ನಿಯಮಗಳಿದ್ದು, ಅವುಗಳನ್ನೆಲ್ಲ ಭಕ್ತಿಶ್ರದ್ಧೆಯಿಂದ ಅನುಸರಿಸಬೇಕೆಂದು ಅಭಿಪ್ರಾಯಪಡುತ್ತಾರೆ. ಇದರಿಂದಾಗಿ ಅಕ್ಕಮ್ಮ ತನ್ನ ಬದುಕಿನಲ್ಲಿ ಈ ಎಲ್ಲಾ ನಿಯಮ ಶೀಲಗಳನ್ನು ಅರಿತು ಆಚರಿಸುತ್ತಿದ್ದರೆಂಬುದು ಸ್ಪಷ್ಟವಾಗುತ್ತದೆ. ವೈಚಾರಿಕ ಶ್ರೇಷ್ಠತೆಯಿಂದ ಕೂಡಿದ ವಚನಗಳಿಂದಾಗಿ ಶರಣೆ ಅಕ್ಕಮ್ಮನ ಹೆಸರು ವಚನಲೋಕದಲ್ಲಿ ಚಿರಸ್ಥಾಯಿಯಾಗಿದೆ. ಆಕೆಯ ಒಂದು ವಚನ- ಬತ್ತಲೆಯಿದ್ದವರೆಲ್ಲ ಕತ್ತೆಯ ಮಕ್ಕಳು ತಲೆ ಬೋಳಾದವರೆಲ್ಲ ಮುಂಡೆಯ ಮಕ್ಕಳು ತಲೆ ಜಡೆಗಟಟಿದವರೆಲ್ಲ ಹೊಲೆಯರ ಸಂತಾನ ಆವ ಪ್ರಕಾರವಾದರೇನು? ಅರಿವೆ ಮುಖವಯ್ಯ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಬತ್ತಲೆ ಇದ್ದವರೆಲ್ಲ ಕತ್ತೆಯ ಮಕ್ಕಳು. ಸದ್ಭಕ್ತಂಗೆ ಮಿಥ್ಯ ಉಂಟೆ? ಕರ್ತೃ ಭೃತ್ಯನಾದ ಠಾವಿನಲ್ಲಿ ಪ್ರತ್ಯುತ್ತರಂಗೆಯ್ದುಡೆ ಸತ್ಯಸದಾಚಾರಕ್ಕೆ ಹೊರಗು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಮಸ್ತಕ.

 • 4ಅಮುಗೆ ರಾಯಮ್ಮ
 • ರಾಯಮ್ಮನು ಶರಣಶ್ರೇಷ್ಠ ಅಮುಗಿದೇವಯ್ಯನ ಪತ್ನಿ, ದಂಪತಿಗಳು ಸೊನ್ನಲಿಗೆಯಲ್ಲಿ ನೆಯ್ಗೆ ಕಾಯಕ ಮಾಡಿ ಜೀವಿಸುತ್ತಿದ್ದರು. ಅಮುಗಿದೇವನು ಇಷ್ಟಲಿಂಗದ ನಿಷ್ಠೆಯ ಭಕ್ತ. "ಲಿಂಗಧಾರಿಯಲ್ಲದವರ ಸೇವೆ ಮಾಡೆನು" ಎಂಬ ವ್ರತ ಆತನದು. ಸಿದ್ಧರಾಮನು ಸೊನ್ನಲಿಗೆಯಲ್ಲಿ ತಾನು ಪ್ರತಿಷ್ಠಾನಾಥನ ಪರ್ವವನ್ನು ಅದ್ಧೂರಿಯಾಗಿ ಮಾಡಲು ನಿರ್ಧರಿಸಿ, ಆ ಪುರದಲ್ಲಿರುವ ಎಲ್ಲ ಮನೆಯವರೂ ಅದರಲ್ಲಿ ಭಾಗಿಯಾಗಲು ತಿಳಿಸಿದನು. ಅಲ್ಲದೆ ದಾಸೋಹಕ್ಕೆ ಬೇಕಾದ ಅಕ್ಕಿಗಾಗಿ ಕೊಟ್ಟಣ ಕುಟ್ಟಿ ಕೊಡಲು ಎಲ್ಲರಿಗೂ ಹೇಳಿದರು. ಸಿದ್ಧರಾಮನ ಆಜ್ಞೆಯಂತೆ ಅಮುಗಿದೇವನ ಮನೆಗೂ ಕೊಟ್ಟಣ ಕುಟ್ಟಿಕೊಡಲು ಆಜ್ಞೆ ಬಂತು. ಆದರೆ ಅಮುಗಿದೇವ ಲಿಂಗವಿರಹಿತ ಸಿದ್ಧರಾಮನ ಸೇವೆ ಮಾಡೆನೆಂದು ಹೇಳಿ ಕಳಿಸಿದರು. ಕೊಟ್ಟಣ ಕುಟ್ಟದ ಅಗಡುಭಕ್ತ ಊರು ಬೀಡಬೇಕೆಂದು ಸಿದ್ಧರಾಮ ಆಜ್ಞೆ ಮಾಡಿದಾಗ ಆ ದಂಪತಿಗಳು ಕಲ್ಯಾಣದತ್ತ ಸಾಗಿದರು. ರಾಯಮ್ಮನು ಇಂಥ ಉಜ್ವಲ ಶಿವಭಕ್ತನ ಮಡದಿಯಾಗಿ ನಿಷ್ಠೆಯಿಂದ, ನಡೆದುಕೊಂಡವರ ಪತಿಯಂತೆ ಆಕೆಯೂ ಸ್ವಾಭಿಮಾನಿ, ಇಷ್ಟಲಿಂಗದ ನಿಷ್ಠೆಯ ಭಕ್ತೆ. ಕಾಯಕದಲ್ಲಿ ಸಹಕಾರಿಯಾಗಿ, ಗಂಡನು ಅನುಸರಿಸುತ್ತಿದ್ದ ಶರಣಜೀವನದ ನಿಯಮಗಳಿಗೆ ಬದ್ಧರಾಗಿ ನಡೆದ ಮಹಾಶರಣೆ ಆಕೆ. ಅನಂತರ ದಂಪತಿಗಳು ಕಲ್ಯಾಣಕ್ಕೆ ಬಂದು ಬಸವಣ್ಣನೇ ಮೊದಲಾದ ಶಿವಶರಣರ ಗುಂಪಿನಲ್ಲಿ ಸೇರಿದರು. ಅನುಭವ ಮಂಟಪದಲ್ಲಿ ಶರಣರೊಡಗೂಡಿ ಅನುಭಾವಿಗಳಾದವರು. ಅಮುಗೆ ರಾಯಮ್ಮನೂ ಸಹ ಒಳ್ಳೆಯ ವಚನಕಾರ್ತಿಯಾದರು. ಆಕೆಯ ನೂರಕ್ಕೂ ಹೆಚ್ಚಿನ ವಚನಗಳು ದೊರಕಿವೆ. "ಅಮುಗೇಶ್ವರ ಲಿಂಗ" ಎಂಬುದು ಅವರ ವಚನಗಳ ಅಂಕಿತ. ಅರಿವನ್ನೆ ಗುರುವಾಗಿ ಮಾಡಿಕೊಂಡ ಆಕೆ ನಿರ್ಭಿಡೆಯಿಂದ ತನ್ನ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ್ದಾರೆ. ವೇಷಧಾರಿ ವಿರಕ್ತರನ್ನು, ಡೋಂಗಿ ಭಕ್ತರನ್ನು ನಿಷ್ಠುರವಾದಿಯಾದ ರಾಯಮ್ಮ ವಿಶೇಷವಾಗಿ ಟೀಕಿಸಿದ್ದಾರೆ. ಅವರ ವಚನಗಳಲ್ಲಿ ಕಟೂಕ್ತಿ, ವ್ಯಂಗ್ಯ ತುಂಬಿವೆ. ಆದರೆ ಆ ಒರಟು ಮಾತಿನ ಹಿಂದೆ ಇರುವ ಆಕೆಯ ಮಾನವೀಯತೆನ್ನು ನಾವು ಮನಗಾಣಬೇಕು. ತನ್ನಲ್ಲಿರುವ ದುರ್ಗುಣಗಳನ್ನು ನಾವೇ ನಿವಾರಿಸಿಕೊಳ್ಳಬೇಕು. ಹೇಗೆಂದರೆ ನಮ್ಮ ಕಾಲೊಳಗಣ ಮುಳ್ಳ ನಾವೇ ತೆಗೆಯಬೇಕು. ನಮ್ಮ ಕಣ್ಣೊಳಗೆ ಬಿದ್ದ ಕಸವನ್ನು ನಾವೇ ತೆಗೆಯಬೇಕು. ಅಲ್ಲವೆ? ಎನ್ನುತ್ತಾರೆ - ಅಮುಗೆ ರಾಯಮ್ಮ. ಅವಳ ಒಂದು ವಚನ: ಅಂಗಕ್ಕಾಚಾರ ಮನಕ್ಕೆ ಜ್ಞಾನ ಸಮರಸಾದ್ವೈತವಾದ ಮತ್ತೆ ಪುನರಪಿ ಪುನರ್ದೀಕ್ಷೆಯುಂಟೆ? ಗರುಡಿಯಲ್ಲಿ ಕೋಲಲ್ಲದೆ, ಕಾಳಗದಲ್ಲಿ ಉಂಟೆ ಕೋಲು? ಭವಿಗೆ ಮೇಲು ವ್ರತ ಪುನರ್ದೀಕ್ಷೆಯಲ್ಲದೆ, ಭಕ್ತರಿಗುಂಟೆ? ವ್ರತ ತಪ್ಪಿ ಅನುಗ್ರಹವಿಡಿದ ನರಕಿಗಳಿಗೆ ಮುಕ್ತಿ ಇಲ್ಲ ಎಂದೆ ಅಮುಗೇಶ್ವರಲಿಂಗದಲ್ಲಿ. ಅರಿಯಬಲ್ಲಡೆ ವಿರಕ್ತನೆಂಬೆನು. ಆಚಾರವನರಿದಡೆ ಅಭೇದ್ಯನೆಂಬೆನು. ಸ್ತುತಿ ನಿಂದೆಗೆ ಹೊರಗಾದಡೆ ಸುಮ್ಮಾನಿ ಎಂಬೆನು. ಘನತತ್ವವನರಿದು ಶಿಶುಕಂಡ ಕನಸಿನಂತೆ ಇದ್ದಡೆ ಶಿವಜ್ಞಾನಿ ಎಂಬೆನಯ್ಯಾ ಅಮುಗೇಶ್ವರಾ.

 • 5ಆಯ್ದಕ್ಕಿ ಲಕ್ಕಮ್ಮ
 • ಶಿವಶರಣರಲ್ಲಿ ತಮ್ಮ ಕಾಯಕ ನಿಷ್ಠೆಯಿಂದ ಪ್ರಾಮುಖ್ಯರೆನಿಸಿದವರು ಆಯ್ದಕ್ಕಿ ಮಾರಯ್ಯ ಮತ್ತು ಲಕ್ಕಮ್ಮ ದಂಪತಿಗಳು. ಅವರದು ಚೆಲ್ಲಿದ್ದ ಅಕ್ಕಿ ಆಯ್ದು ತರುವ ಅಪರೂಪದ ಕಾಯಕವಾಗಿತ್ತು. ರಾಯಚೂರು ಜಿಲ್ಲೆಯ ಅಮರೇಶ್ವರಾದ ಈ ದಂಪತಿಗಳು ಮನೆದೈವವಾದ "ಅಮರೇಶ್ವರ" ನ ಅಂಕಿತದೊಂದಿಗೆ ವಚನಗಳನ್ನು ರಚಿಸಿದ್ದಾರೆ. ಲಿಖಿತ ವರ್ಗಕ್ಕೆ ಸೇರಿದ ಅವರು ಕಲ್ಯಾಣಕ್ಕೆ ಹೋಗಿ ಶರಣರ ಬಳಗವನ್ನು ಸೇರಿಕೊಳ್ಳುತ್ತಾರೆ. ಯಾವುದಾದರೊಂದು ಕಾಯಕದೊಂದಿಗೆ ಬದುಕುವುದು ಅಂದಿನ ಶರಣ ಸಂಪ್ರದಾಯ. ಮಾರಯ್ಯ ಇತರರು ಬೀಸುವಾಗ, ಕಟ್ಟುವಾಗ, ಅಂಗಡಿಗಳಲ್ಲಿ ಅಳೆದು ಕೊಡುವಾಗ ಅಲ್ಲಿ ಚೆಲ್ಲಿಬಿದ್ದ ಅಕ್ಕಿ ಕಾಳನ್ನು ಆಯ್ದು ತಂದು ದಾಸೋಹಕ್ಕೆ ಬಳಸುತ್ತಿದ್ದ. ಒಮ್ಮೆ ಮಾರಯ್ಯನಿಗೆ ತನ್ನ ಕಾಯಕಕ್ಕೆ ಹೋಗಲು ತಡವಾಯಿತು. ಆಗ ಆತನ ಪತ್ನಿ ಲಕ್ಕಮ್ಮ ಬಂದು ಅವನ ಕರ್ತವ್ಯ ನೆನಪಿಸುತ್ತಾರೆ. ಹೊರಟ ಆತ ಅವಸರದಲ್ಲಿ ಅಂದು ಪ್ರತಿದಿನಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ಸಂಗ್ರಹಿಸಿದ್ದ, ಮನೆಗೆ ಬಂದು ಪತ್ನಿಗೆ ಅದನ್ನು ಕೊಟ್ಟಾಗ ಲಕ್ಕಮ್ಮ ಕೋಪದಿಂದ ತನ್ನಪತಿಗೆ 'ನೀವು ಅಗತ್ಯಕ್ಕಿಂತ ಹೆಚ್ಚು ಅಕ್ಕಿ ತಂದಿದ್ದಿರಿ. ಒಮ್ಮನದಿಂದ ಕಾಯಕ ಮಾಡಿಲ್ಲ. ಶಿವ ಇದನ್ನು ಮೆಚ್ಚುವುದಿಲ್ಲ. ಕಾರಣ ನೀವು ಹೆಚ್ಚಿನ ಅಕ್ಕಿಯನ್ನು ತಂದ ಸ್ಥಳಕ್ಕೆ ಒಯ್ದು ಸುರಿದು ಬನ್ನಿ' ಎಂದು ಹೇಳುತ್ತಾರೆ. ಆಗ ಮಾರಯ್ಯನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಆತ ತನ್ನ ಪತ್ನಿ ಹೇಳಿದಂತೆಯೇ ಮಾಡುತ್ತಾನೆ. ಮನುಷ್ಯ ಅಗತ್ಯಕ್ಕಿಂತ ಹೆಚ್ಚು ಸಂಗ್ರಹಿಸುವುದು ಕಾಯಕ ತತ್ವಕ್ಕೆ ವಿರೋಧ ಎಂಬ ಭಾವನೆ ಇದರಲ್ಲಿದೆ. ಇನ್ನೊಮ್ಮೆ ಜಂಗಮ ಬಂದು ಭಿಕ್ಷೆ ಕೇಳಿದಾಗ ಲಕ್ಕಮ್ಮ ಆತ ಚಳಿಯಿಂದ ಗಡಗಡ ನಡುಗುತ್ತಿರುವುದನ್ನು ಕಂಡು ತಾನುಟ್ಟ ಸೀರೆಯನ್ನೇ ಆತನಿಗೆ ಕೊಟ್ಟು ಒಳಗೆ ಕತ್ತಲಲ್ಲಿರುತ್ತಾರೆ. ಮಾರಯ್ಯನವರು ಸಹ ಅದೇ ರೀತಿ ಕರುಣಾಮೂರ್ತಿಯಾಗಿದ್ದರು. ತನ್ನ ಪತಿ ತಪ್ಪಿ ನಡೆದಾಗಲೆಲ್ಲಾ ಲಕ್ಕಮ್ಮ ಆತನನ್ನು ಎಚ್ಚರಿಸಿ ಸರಿದಾರಿಗೆ ತರುತ್ತಿದ್ದರು. ಅವರಿಬ್ಬರದೂ ಆದರ್ಶ ದಾಂಪತ್ಯವಾಗಿತ್ತು. ಕಾಯಕತತ್ವವನ್ನು ನಿಜಾರ್ಥದಲ್ಲಿ ಅರಿತು ಆಚರಿಸಿದ ಅವರು ಅಂದಿನ ಶರಣ ಸಮೂಹದಲ್ಲಿ ಗೌರವಾನ್ವಿತರೆನಿಸಿದರು. ಲಕ್ಕಮ್ಮ ಸಹ ಅನೇಕ ವಿಚಾರಪೂರ್ಣ ವಚನಗಳನ್ನು ರಚಿಸಿ ಸ್ತ್ರೀ ಕುಲಕ್ಕೆ ಹೆಮ್ಮೆ ತಂದಿದ್ದಾರೆ. ಆಕೆಯ ಒಂದು ವಚನ- ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ? ಬೆಟ್ಟ ಬಲ್ಲಿತ್ತೆಂದಡೆ ಉಳಿಯ ಮೊನೆಯಲ್ಲಿ ಬಡತನವಿದ್ದಡೆ ಒಡೆಯದೆ? ಘನ ಶಿವಭಕ್ತರಿಗೆ ಬಡತನವಿಲ್ಲ. ಸತ್ಯನಿಗೆ ದುಷ್ಕರ್ಮವಿಲ್ಲ ಎನಗೆ ಮಾರಯ್ಯಪ್ರಿಯ ಅಮರೇಶ್ವರ ಲಿಂಗವುಳ್ಳನ್ನಕ್ಕ ಆರ ಹಂಗಿಲ್ಲ ಮಾರಯ್ಯ.

 • 6ಗಂಗಾಂಬಿಕೆ
 • ಭಕ್ತಿ ಭಂಡಾರಿ ಬಸವಣ್ಣನವರ ಇಬ್ಬರು ಧರ್ಮಪತ್ನಿಯರಲ್ಲಿ ಒಬ್ಬರಾದ ಗಂಗಾಂಬಿಕೆ ಬಿಜ್ಜಳನ ಮಂತ್ರಿ ಬಲದೇವನ ಪುತ್ರಿ. ಬಲದೇವನ ಮರಣದ ನಂತರ ಬಿಜ್ಜಳನು ಬಸವಣ್ಣನವರಿಗೆ ಆ ಮಂತ್ರಿ ಸ್ಥಾನ ನೀಡುತ್ತಾರೆ. ಗಂಗಾಂಬಿಕೆ ಸಾಹಿತ್ಯ, ಸಂಗೀತದಲ್ಲಿ ಬಲ್ಲಿದರಿದ್ದಂತೆ, ಕತ್ತಿವರಸೆಯನ್ನೂ ಬಲ್ಲವರಾಗಿದ್ದರು. ಬಲದೇವ ಮಂತ್ರಿ ತನ್ನ ಮಗಳಿಗೆ ಯೋಗ್ಯವರನೆಂದು ಬಸವಣ್ಣನವರನ್ನು ಸಂಗಮದಿಂದ ಕಲ್ಯಾಣಕ್ಕೆ ಕರೆಯಿಸಿಕೊಂಡು ಅವರ ವಿವಾಹ ನೆರವೇರಿಸುತ್ತಾರೆ. ಪತಿಗೆ ತಕ್ಕ ಸತಿಯಾಗಿ ಗಂಗಾಂಬಿಕೆ ಬಸವಣ್ಣನವರ ನವಸಮಾಜ ರಚನೆಯ ಕಾರ್ಯದಲ್ಲಿ ಸಹಕಾರಿಯೆನಿಸಿ ಮಹಾಮನೆಯ ಅನ್ನ- ಜ್ಞಾನ ದಾಸೋಹಗಳಲ್ಲಿ ನೆರವಾದರು. ಘನಲಿಂಗಿ ರುದ್ರಮುನಿಗಳ ಶಿಷ್ಯರಾಗಿದ್ದ ಗಂಗಾಂಬಿಕೆಯದು ಸುಸಂಸ್ಕೃತ ವ್ಯಕ್ತಿತ್ವವಾಗಿತ್ತು. ಬಸವಣ್ಣನವರ ಪ್ರತಿಯೊಂದು ಕೆಲಸದಲ್ಲೂ ಅವರ ಹೆಗಲಿಗೆ ಹೆಗಲು ಕೊಟ್ಟು ಅವರ ಆದರ್ಶ, ಧ್ಯೇಯೋದ್ದೇಶಗಳ ಈಡೇರಿಕೆಗೆ ಸ್ಪೂರ್ತಿಯಾಗಿ ನಿಂತ ಗಂಗಾಂಬಿಕೆ ತನಗೆ ಸಂತಾನ ಭಾಗ್ಯವಿಲ್ಲದಿದ್ದರೂ ಚೆನ್ನಬಸವಣ್ಣನನ್ನೇ ಸ್ವಂತ ಮಗನಂತೆ ಪ್ರೀತಿ ವಾತ್ಸಲ್ಯದಿಂದ ಬೆಳೆಸುತ್ತಾರೆ. ಮುಂದೆ ಕಲ್ಯಾಣ ಕ್ರಾಂತಿ ನಡೆದು ಅರಸು ಬಿಜ್ಜಳನ ಕೊಲೆಯಾಗಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾದಾಗ ಶರಣರ ರಕ್ಷಣೆಯ ಹೊಣೆ ಹೊತ್ತು ಕಲ್ಯಾಣದಿಂದ ಉಳಿವೆಯತ್ತ ಸಾಗುತ್ತಾರೆ. ಮಲಪ್ರಭಾ ನದಿತೀರದ ಕಾದರವಳ್ಳಿ ಬಳಿ ನಡೆದ ಯುದ್ಧದಲ್ಲಿ ಕಾದು ಗಂಗಾಂಬಿಕೆಯೂ ಮಡಿಯುತ್ತಾರೆ. ಈಗಲೂ ಅಲ್ಲಿ ಅವರ ಸಮಾಧಿಯಿರುವುದನ್ನು ಕಾಣಬಹುದು. "ಗಂಗಾಪ್ರಿಯ ಕೂಡಲಸಂಗಮದೇವಾ" ಎಂಬ ಅಂಕಿತದೊಡನೆ ವಚನಗಳನ್ನು ರಚಿಸಿರುವ ಗಂಗಾಂಬಿಕೆ ಧೈರ್ಯ ಸಾಹಸಗಳ ಪ್ರತಿಮೂರ್ತಿಯಾಗಿ, ಆದರ್ಶಸತಿಯಾಗಿ, ಕಾಯಕನಿಷ್ಠರಾಗಿ ಜಗಜ್ಯೋತಿ ಬಸವಣ್ಣನವರಿಗೆ ಸಾತ್ವಿಕವಾದ, ನೈತಿಕವಾದ ಬೆಂಬಲ ನೀಡಿದ ಅಪೂರ್ವ ಮಹಿಳೆ. ಆಕೆಯ ಒಂದು ವಚನ- ಪತಿಯಾಜ್ಞೆಯಲ್ಲಿ ಚರಿಪ ಸತಿಗ್ಯಾಕೆ ಪ್ರತಿಜ್ಞೆಯು? ಪ್ರತಿಜ್ಞೆಯ ಪತಿಕರದಲ್ಲಿ ಪೋಪದಿರೆ ಯಾತನೆಯಲ್ಲವೆ? ಇವರ ಲಿಂಗನಿಷ್ಟೆ ಇವರಿಗೆ, ನಮ್ಮ ನಿಷ್ಠೆ ಪತಿಯಾಜ್ಞೆಯಲ್ಲಿ ಕಾಣಾ ಗಂಗಾಪ್ರಿಯ ಕೂಡಲ ಸಂಗಮದೇವಾ.

 • 7ನೀಲಾಂಬಿಕೆ
 • ಕಲ್ಯಾಣದ ದೊರೆ ಬಿಜ್ಜಳನು ತನ್ನ ಸಾಕುತಂಗಿ ನೀಲಾಂಬಿಕೆಯನ್ನ ಬಸವಣ್ಣನಿಗೆ ಇತ್ತು ವಿವಾಹ ಮಾಡುತ್ತಾನೆ. ಅವರು ಸಿದ್ಧರಸ ದಣ್ಣಾಯಕರ ಮಗಳು. ಸಿದ್ಧರಸ ಮತ್ತು ಬಲದೇವ ಮಂತ್ರಿಗಳು ಬಸವಣ್ಣನವರ ತಾಯಿ ಮಾದಾಲಾಂಬಿಕೆ ಸಹೋದರರು. ಬಾಲ್ಯದಲ್ಲೇ ತನ್ನ ತಂದೆ ತಾಯಿಗಳನ್ನು ಕಳೆದುಕೊಂಡ ನಿಲಾಂಬಿಕೆ (ನೀಲಲೋಚನೆ) ಬಿಜ್ಜಳನ ಅರಮನೆಯಲ್ಲೇ ಬೆಳೆದರು. ಆಸ್ಥಾನದಲ್ಲಿ ಕರಣಿಕನಾಗಿದ್ದ ಬಸವಣ್ಣನವರು ರಹಸ್ಯ ಲಿಪಿಯನ್ನು ಓದಿ ಬಿಜ್ಜಳನ ಸಿಂಹಾಸನದಡಿ ಹೂತಿಡಲಾಗಿದ್ದ ನಿಧಿಯನ್ನು ಕಂಡುಹಿಡಿಯಲು ಕಾರಣರಾದಾಗ ಬಿಜ್ಜಳನು ನೀಲಾಂಬಿಕೆಯ ವಿವಾಹವನ್ನು ಬಸವಣ್ಣನವರೊಡನೆ ನೆರವೇರಿಸಿ ಮಂತ್ರಿಪದವಿಯನ್ನು ನೀಡುತ್ತಾನೆ. ಬಿಜ್ಜಳನ ಅರಮನೆಯಲ್ಲೇ ಬೆಳೆದ ನೀಲಾಂಬಿಕೆ ಸಾಹಿತ್ಯ, ಸಂಗೀತಗಳನ್ನು ಬಲ್ಲವರಾಗಿದ್ದರು. ವಿವಾಹಾನಂತರ ಅವರು ಪತಿಯ ಇಚ್ಛೆಯಂತೆ ಮಹಾಮನೆಯ ದಾಸೋಹದ ಕಾರ್ಯಭಾರ ನಿರ್ವಹಿಸಿದರು. ಜೊತೆಗೆ ಶಿವಯೋಗದಲ್ಲಿಯೂ ತೊಡಗಿಸಿಕೊಂಡು ನಿಜಭಕ್ತೆ ನೀಲಾಂಬಿಕೆ ಎಂದು ಪ್ರಸಿದ್ದಿಪಡೆಯುತ್ತಾರೆ. ಆಕೆಯ ಏಕಮಾತ್ರ ಪುತ್ರ ಬಾಲ ಸಂಗಯ್ಯ ಅಕಾಲ ಮೃತ್ಯುವಿಗೀಡಾದರೂ ಶಿವನಿಚ್ಛೆಗೆ ಮೀರಿದ್ದು ಇಲ್ಲವೆಂಬ ನಿರ್ಲಿಪ್ತಭಾವದಿಂದ ನೀಲಾಂಬಿಕೆ ಶರಣಸೇವೆಯಲ್ಲಿ ನಿರತರಾಗುತ್ತಾರೆ. ಗುಡ್ಡಾಪುರ ದಾನಮ್ಮ, ಅಕ್ಕಮಹಾದೇವಿ ಮೊದಲಾದವರಿಗೆಲ್ಲ ಮಾತೃಹೃದಯದ ಮಮತೆಯುಣಿಸುತ್ತಾರೆ. ಬಸವಣ್ಣನವರ ವಚನಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದ ನೀಲಾಂಬಿಕೆ ಸ್ವತಃ 288 ವಚನಗಳನ್ನೂ ರಚಿಸಿದ್ದಾರೆ. ಕಲ್ಯಾಣದ ಕ್ರಾಂತಿಯ ಕಾಲಕ್ಕೆ ಬಸವಣ್ಣನವರು ಕೂಡಲಸಂಗಮಕ್ಕೆ ತೆರಳಿದಾಗ ಅಲ್ಲಿಗೆ ಬರಬೇಕೆಂದು ಅವರು ಕರೆ ಕಳಿಸಿದಾಗ ನೀಲಾಂಬಿಕ ತಾಯಿಯವರು ಮಹಾಮನೆಯಿಂದ ತಂಗಡಗಿ ಎಂಬ ಊರಿಗೆ ಬರುವ ಸಮಯಕ್ಕೆ ನದಿಯು ಉಕ್ಕಿ ಹರಿಯುತ್ತಿದ್ದುದರಿಂದ ಬಸವಣ್ಣನವರಲ್ಲಿಗೆ ಬರಲಾಗದೆ ಧ್ಯಾನಾಸಕ್ತರಾಗಿ ನೀಲಮ್ಮ ತಾಯಿಯವರು ಇಚ್ಛಾಮರಣದೊಂದಿಗೆ ಲಿಂಗೈಕ್ಯರಾಗುತ್ತಾರೆ. ಅವರ ಒಂದು ವಚನ- ಎದೆ ಬಿರಿವನ್ನಕ್ಕರ, ಮನ ದಣಿವನ್ನಕ್ಕರ, ನಾಲಗೆ ನಲಿನಲಿದೋಲಾಡುವನ್ನಕ್ಕರ, ನಿಮ್ಮ ನಾಮಾಮೃತವ ತಂದೆರೆಸು ಕಂಡಯ್ಯ ಶಿವ ನಾಮಾಮೃತವ ತಂದೆರಸು ಕಂಡೆಲೆ ಹರನೆ, ಬಿರಿಮುಗುಳಂದದ ಶರೀರ ನಿಮ್ಮ ಚರಣದ ಮೇಲೆ ಬಿದ್ದುರುಳುಗೆ ಸಂಗಯ್ಯ.

 • 8ದುಗ್ಗಳೆ
 • ಅಕ್ಕಮಹಾದೇವಿಗಿಂತ 150 ವರ್ಷ ಮೊದಲೇ ಬಾಳಿದ ದುಗ್ಗಳೆ ಶರಣ ದೇವರ ದಾಸಿಮಯ್ಯನ ಧರ್ಮಪತ್ನಿ, ಶಿವಪುರದ ಮಲ್ಲಿನಾಥ-ಮಹಾದೇವಿ ದಂಪತಿಗಳ ಮಗಳು. ಗುಣವಂತೆ, ಶಿವಭಕ್ತೆ ಆದರ್ಶ ಗೃಹಿಣಿ & ದಾಸೋಹ ಪ್ರಿಯೆ. ಅವರ ಕ್ರಿಯಾಶಕ್ತಿ ಅವರ ಮನೆಯನ್ನೇ ಮಂದಿರವಾಗಿಸಿತ್ತು. ಅತಿಥಿ ಸತ್ಕಾರದಲ್ಲಿ ಎತ್ತಿದ ಕೈ, ಬಡತನದಲ್ಲೇ ಬಾಳಿದರೂ, ಹೃದಯ ಶ್ರೀಮಂತಿಕೆ ಹೊಂದಿದ್ದ ದುಗ್ಗಳೆಯವರು ತಾವು ಬಾಳಿದ ಮುದನೂರನ್ನು ಕ್ರಿಯಾಮಂಟಪವನ್ನಾಗಿ ಮಾಡಿ ಜ್ಞಾನ ದಾಸೋಹವನ್ನು ಕೈಗೊಂಡಿದ್ದರು. ಕಲ್ಯಾಣದ ಅನುಭವ ಮಂಟಪಕ್ಕಿಂತ ಮೊದಲೇ ಈ ಮುದನೂರು ದಾಸಿಮಯ್ಯ-ದುಗ್ಗಳೆಯರಿಂದ ‘ಅಭಿನವ ಕೈಲಾಸ’ವೆನಿಸಿತ್ತು. ಇವರ ಶಿವಭಕ್ತಿಯ ಕುರಿತು ಅನೇಕ ಕಥೆಗಳು ಪ್ರಚಲಿತದಲ್ಲಿವೆ. ದಾಸಿಮಯ್ಯನೊಡನೆ ದುಗ್ಗಳೆಯೂ ನೇಯ್ಗೆಯ ಕೆಲಸ ಮಾಡಿ ಆ ಹಣದಿಂದ ಜಂಗಮ ಸೇವೆ ಹಾಗೂ ಉಪಜೀವನ ನಡೆಸುತ್ತಿದ್ದರು. ಸಮಾಜಜೀವಿಯಾಗಿ ಬಾಳಿದ ದುಗ್ಗಳೆ ಆದರ್ಶಸತಿಯಾಗಿ, ಶಿವಶರಣೆಯಾಗಿ ಅಮರರಾಗಿದ್ದಾರೆ. ಭಕ್ತನಾದಡೆ ಬಸವಣ್ಣನಂತಾಗಬೇಕು. ಜಂಗಮವಾದಡೆ ಪ್ರಭುದೇವರಂತಾಗಬೇಕು. ಯೋಗಿಯಾದಡೆ ಸಿದ್ಧರಾಮಯ್ಯನಂತಾಗಬೇಕು. ಭೋಗಿಯಾದಡೆ ಚೆನ್ನಬಸವಣ್ಣನಂತಾಗಬೇಕು. ಐಕ್ಯನಾದಡೆ ಅಜಗಣ್ಣನಂತಾಗಬೇಕು. ಇಂತಿವರ ಕಾರುಣ್ಯಪ್ರಸಾದವ ಕೊಂಡು ಸತ್ತಹಾಗಿರಬೇಕಲ್ಲದೆ ತತ್ವದ ಮಾತು ಎನಗೇಕಯ್ಯಾ ದಾಸಯ್ಯಪ್ರಿಯ ರಾಮನಾಥ?

 • 9ಬೊಂತಾದೇವಿ
 • ಶರಣೆ ಬೊಂತಾದೇವಿ ಕಾಶ್ಮೀರದ ಮಾಂಡವ್ಯ ರಾಜಕುಮಾರಿಯೆಂದೂ, ಮೋಳಿಗೆ ಮಾರಯ್ಯನವರ ಕಿರಿಯ ಸಹೋದರಿಯೆಂದೂ ತಿಳಿದುಬಂದಿದೆ. “ಬಿಡಾಡಿ” ಎಂಬ ಅಚ್ಚಗನ್ನಡ ಅಂಕಿತದಿಂದ ಅನೇಕ ವಚನಗಳನ್ನು ಬರೆದ ಬೊಂತಾದೇವಿಯ ಮೊದಲಿನ ಹೆಸರು ನಿಜದೇವಿ. ಕಾಶ್ಮೀರದಿಂದ ಕಲ್ಯಾಣಕ್ಕೆ ಬಂದ ನಂತರ ಅವರು ಕೌದಿಯನ್ನೇ ಹೊದೆಯುತ್ತಿದ್ದುದರಿಂದ ಅವರಿಗೆ "ಬೊಂತಾದೇವಿ" ಎಂಬ ಹೆಸರು ಬಂತೆನ್ನಲಾಗಿದೆ. ಬಾಲ್ಯದಿಂದಲೇ ವೈರಾಗ್ಯಮೂರ್ತಿಯೆನಿಸಿದ್ದ ಬೊಂತಾದೇವಿ ಅಕ್ಕಮಹಾದೇವಿಯಂತೆ ವಿವಾಹ ಬಂಧನಕ್ಕೆ ಸಿಲುಕದೆ ಶರಣ ದೀಕ್ಷೆ ಸ್ವೀಕರಿಸಿದರು. ಕಾಶ್ಮೀರದಲ್ಲಿದ್ದಾಗ ವಿಪರೀತ ಚಳಿಯಿಂದ ನಡುಗುತ್ತಿದ್ದ ವೃದ್ಧೆಗೆ ತಾನುಟ್ಟ ಬಟ್ಟೆಯನ್ನೇ ಬಿಚ್ಚಿಕೊಟ್ಟ ಬೊಂತಾದೇವಿ ಬಡಜನರ ಸೇವೆಯಲ್ಲಿ ತತ್ವರರಾಗಿದ್ದವರು. ಧನಕನಕದ ಮೋಹದಿಂದ ಹೊರಬಂದವರು. ಕಲ್ಯಾಣದಲ್ಲಿ ಕೌದಿ ಹೊಲಿದು ಮಾರುವ ಕಾಯಕ ಕೈಕೊಂಡ ಆಕೆ ರೋಗಗ್ರಸ್ತ ಬಡವರಿಗೆ ತಾನೇ ಔಷಧೋಪಚಾರ ಸೇವೆ ಮಾಡುತ್ತಿದ್ದರು. ಕಲ್ಯಾಣದಲ್ಲಿ ಕ್ರಾಂತಿಯಾದಾಗ ಹೆಚ್ಚಿನ ಎಲ್ಲ ಶರಣ-ಶರಣೆಯರು ಅಲ್ಲಿಂದ ತೆರಳಿದರಾದರೂ ಬೊಂತಾದೇವಿ ಮಾತ್ರ ಅಲ್ಲಿಯೇ ಇದ್ದು ತನ್ನ ಸೇವಾಕಾರ್ಯ ಮುಂದುವರಿಸಿ ಅಲ್ಲಿಯೇ ಲಿಂಗೈಕ್ಯರಾಗುವ ಮೂಲಕ ಆದರ್ಶಶರಣೆಯೆನಿಸಿದ್ದಾರೆ. ಪರಮಾತ್ಮನು ಯಾವ ನಿರ್ಬಂಧಕ್ಕೊಳಗಾಗದ “ಸರ್ವತಂತ್ರ ಸ್ವತಂತ್ರ’’ ಎಂಬರ್ಥದಲ್ಲಿ ಆತನನ್ನು ಬಿಡಾಡಿ ಎಂದು ಕರೆದಿದ್ದಾರೆ ಬೊಂತಾದೇವಿ. ಅವರ ಒಂದು ವಚನ: ಅಂತಾಯಿತ್ತಿಂತಾಯಿತ್ತೆಂತಾಯಿತ್ತೆನ ಬೇಡ ಅನಂತನಿಂತಾತನೆಂದರಿಯಾ ಬಿಡಾಡಿ ಕರೆದಡೆ ಓ ಎಂಬುದು ನಾದವೊ ಪ್ರಣವೊ ಇದಾವುದು?ಬಲ್ಲಡೆ ನೀ ಹೇಳಾ, ಬಿಡಾಡಿ. ಊರೊಳಗಣ ಬಯಲು, ಊರ ಹೊರಗಣ ಬಯಲೆಂದುಂಟೆ? ಊರೊಳಗಣ ಬ್ರಹ್ಮಾಣ ಬಯಲು ಊರ ಹೊರಗಣ ಹೊಲೆಯ ಬಯಲೆಂದುಂಟೆ? ಎಲ್ಲಿ ನೋಡಿದಡೆ ಬಯಲೊಂದೇ, ಭಿತ್ತಿಯಿಂದೊಳಹೊರಗೆಂಬ ನಾಮವೈಸೆ. ಎಲ್ಲಿನೋಡಿ ಕರೆವಡೆ ಓ ಎಂಬಾತನೆ ಬಿಡಾಡಿ.

 • 10ಮುಕ್ತಾಯಕ್ಕ
 • ಗದಗಿನ ಹತ್ತಿರವಿರುವ ಲಕ್ಕುಂಡಿ ಕ್ಷೇತ್ರದಲ್ಲಿ ಒಂದು ಶಿವಶರಣ ಕುಟುಂಬದಲ್ಲಿ ಹುಟ್ಟಿಬಂದ ಮುಕ್ತಾಯಕ್ಕನಿಗೆ ಅಜಗಣ್ಣನೆಂಬ ಸಹೋದರನಿದ್ದ. ಇಬ್ಬರ ಸಹೋದರ ಪ್ರೇಮ ಆದರ್ಶಮಯವಾದುದಾಗಿತ್ತು. ಲೋಕಾರೂಡಿಯಂತೆ ಮದುವೆಯಾಗಿ ಮುಕ್ತಾಯಕ್ಕ ಮೊಸಳಿಕಲ್ಲಿನ ತನ್ನ ಪತಿಗೃಹಕ್ಕೆ ತೆರಳಿದ ನಂತರವೂ ಅವರ ಸೋದರ ಪ್ರೇಮಕ್ಕೇನೂ ಕುಂದುಂಟಾಗಿರಲಿಲ್ಲ. ಈ ಮಧ್ಯೆ ಅದೊಂದು ವಿಶಿಷ್ಟ ಘಟನೆಯ ಪರಿಣಾಮವಾಗಿ ಅಜಗಣ್ಣ ಆಧ್ಯಾತ್ಮಿಕ ಸೆಳೆತಕ್ಕೆ ಒಳಗಾಗಿ ಸಂಸಾರದಿಂದ ವಿಮುಖನಾಗಿ ತಪಸ್ಸಾದನೆಯಲ್ಲಿ ನಿರತನಾಗಿ ಕೆಲಕಾಲದ ನಂತರ ಲಿಂಗೈಕರಾದರು. ಈ ಸುದ್ದಿ ತಿಳಿದು ಸೋದರಿ ಮುಕ್ತಾಯಕ್ಕ ತೀವ್ರ ಆಘಾತಕ್ಕೊಳಗಾಗುತ್ತಾರೆ. ಅವರು ದಿಕ್ಕುಗೆಟ್ಟಂತೆ ಎಲ್ಲ ಆಸಕ್ತಿಗಳನ್ನು ಕಳೆದುಕೊಂಡು ಶೋಕಸಾಗರದಲ್ಲಿ ಮುಳುಗುತ್ತಾರೆ. ಆಗ ಅಲ್ಲಮ ಪ್ರಭುದೇವರು ಆಕೆಯನ್ನು ಸಂತೈಸಿ ಈ ಬಗೆಯ ಮೋಹದಿಂದ ಹೊರಬರಲು ಮಾರ್ಗದರ್ಶನವೀಯುತ್ತಾರೆ. ಚಾಮರಸ ಕವಿಯ ‘ಪ್ರಭುಲಿಂಗ ಲೀಲೆ' ಹಾಗೂ ಶಾಂತಲಿಂ ದೇಶಿಕರ ‘ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ'ದಲ್ಲಿ ಶರಣೆ ಮುಕ್ತಾಯಕ್ಕನ ಸೋದರ ಪ್ರೇಮ ಹಾಗೂ ಅಲ್ಲಮನೊಡನೆ ನಡೆದ ಸಂಭಾಷಣೆಗಳು ಉಲ್ಲೇಖಿತವಾಗಿವೆ. ಮುಕ್ತಾಯಕ್ಕನ ಆಧ್ಯಾತ್ಮಿಕ ನಿಷ್ಠೆ, ಅನುಭಾವದರಿವು ಅವರಿಗೆ ಶರಣಸಮುದಾಯದಲ್ಲಿ ಬಹಳ ಪ್ರಮುಖವಾದ ಸ್ಥಾನ ಕಲ್ಪಿಸಿಕೊಟ್ಟಿದೆ. ಪ್ರಭುದೇವರೊಡನೆ ಅವರು ಬೌದ್ಧಿಕ ಹಾಗೂ ವೈಚಾರಿಕ ಶ್ರೇಷ್ಠತೆಯನ್ನು ಎತ್ತಿ ತೋರುತ್ತದೆ. ಅಲ್ಲಮರ ಉಪದೇಶದ ನಂತರ ಮುಕ್ತಾಯಕ್ಕ ಸಾಣೆ ಹಿಡಿದ ವಜ್ರದಂತೆ ಕಂಗೊಳಿಸುತ್ತಾರೆ. ಪುಟ್ಟಕಿಟ್ಟ ಚಿನ್ನದಂತೆ ಹೊಳೆಯುತ್ತಾರೆ. ಅವರ ವ್ಯಕ್ತಿತ್ವವು ಅಕ್ಕಮಹಾದೇವಿ, ಚೆನ್ನಬಸವಣ್ಣನವರಂತಹ ಮೇಲ್ಮಟ್ಟ ವಚನಕಾರರಲ್ಲಿ ಮುಕ್ತಾಯಕ್ಕ ಸಹ ತನ್ನ ಮೌಲಿಕ ವಿಚಾರಗಳಿಂದ ಮಿಂಚುತ್ತಾರೆ. ಅವರ ಒಂದು ವಚನ- ತನ್ನ ತಾನರಿದವಂಗೆ ಅರಿವೆ ಗುರು ಅರಿವರತು ಮರುಹು ನಷ್ಟವಾದಲ್ಲಿ, ದೃಷ್ಟಿನಷ್ಟವೆ ಗುರು. ದೃಷ್ಟಿನಷ್ಟವೆ ಗುರು ತಾನಾದಲ್ಲಿ ಮುಟ್ಟಿ ತೋರಿದವರಿಲ್ಲದಡೇನು? ಸಹಜವ ನೆಲೆಗೊಳಿಸುವ ನಿರ್ಣಯ ನಿಷ್ಪತ್ತಿಯೇ ಗುರು ನೋಡಾ. ಗುರು ತಾನಾದಡೂ ಕುರುವಿಡಿದಿರಬೇಕು ಎನ್ನ ಅಜಗಣ್ಣನಂತೆ. ನುಡಿಯಲುಬಾರದು ಕೆಟ್ಟ ನುಡಿಗಳ. ನಡೆಯಲುಬಾರದು ಕೆಟ್ಟ ನಡೆಗಳ. ನುಡಿದಡೇನು, ನುಡಿಡಿಯದಿರ್ದಡೇನು? ಹಿಡಿದ ವ್ರತ ಬಿಡದಿರಲು, ಅದೆ ಮಹಾಜ್ಞಾನದಾಚರಣೆ ಎಂಬೆನು ಅಜಗಣ್ಣತಂದೆ.

 • 11ಮೋಳಿಗೆ ಮಹಾದೇವಿಯಮ್ಮ
 • ಮಹಾದೇವಮ್ಮ ಕಾಶ್ಮೀರದ ಅರಸನ ಧರ್ಮಪತ್ನಿ ಮಹಾದೇವಿ ಭೂಪಾಲರೆಂಬ ದೊರೆಯ ರಾಣಿಯಾಗಿ ವೈಭವದ ಬದುಕು ಸಾಗಿಸುತ್ತಿದ್ದ ಮಹಾದೇವಿ ತನ್ನ ಪತಿಯೊಡನೆ ಕಲ್ಯಾಣಕ್ಕೆ ಬಂದು ಸಂಪತ್ತು ಅಧಿಕಾರಗಳನ್ನು ತೊರೆದು ಅನುಭವ ಮಂಟಪದ ಶರಣೆಯಾಗಿ ಬದುಕಿದ ಮಹಾ ತ್ಯಾಗಜೀವಿ. ಮಹಾದೇವ ಭೂಪಾಲ ಅರಸನಾಗಿದ್ದವನು ಕಟ್ಟಿಗೆ ಮಾರುವ ಕಾಯಕ ಕೈಗೊಂಡ . ಬಡತನದಲ್ಲೇ ಆ ದಂಪತಿಗಳು ತೃಪ್ತಿಯಿಂದ ಬದುಕಿರುತ್ತಾರೆ. ಮಹಾದೇವಮ್ಮ ಬರೆದ 69 ವಚನಗಳು ದೊರಕಿದ್ದು ಅವುಗಳಿಂದ ಆಕೆ ಆಳವಾದ ಅಧ್ಯಯನಶೀಲೆಯಾಗಿದ್ದರೆಂಬುದು ಸ್ಪಷ್ಟವಾಗುತ್ತದೆ. ಆದರೆ ಕಾಶ್ಮೀರದವರಾದ ಅವರು ಅಚ್ಚಗನ್ನಡದಲ್ಲಿ ವಚನ ಬರೆದವರೆಂಬುದು ಸೋಜಿಗದ ಸಂಗತಿಯಾಗಿದೆ. ಅಂದು ಕಾಶ್ಮೀರದ ತನಕ ಕನ್ನಡ ಭಾಷೆ ಹಬ್ಬಿರಬಹುದು ಅಥವಾ ಇಲ್ಲಿಗೆ ಬಂದ ನಂತರ ಅವರು ಕನ್ನಡ ಕಲಿತಿರಲೂಬಹುದು. ರಾಜಕುಮಾರಿ ಬೊಂತಾದೇವಿ ಸಹ ಇದೇ ರೀತಿ ಕಾಶ್ಮೀರದಿಂದಲೇ ಬಂದವರೆನ್ನುವುದನ್ನು ನಾವಿಲ್ಲಿ ಸ್ಮರಿಸಬಹುದು. ಕಟ್ಟಿಗೆ ಮಾರುವ ಕಾಯಕ ಮಾಡುತ್ತಿದ್ದುದರಿಂದ ಮಹಾದೇವ ಭೂಪಾಲನಿಗೆ ಮೋಳಿಗೆ ಮಾರಯ್ಯ ಎಂಬ ಆಭಿದಾನ ಬಂತು. ಕಲ್ಯಾಣದ ಸಮೀಪ ಮೋಳಿಕೇರಿ ಎಂಬಲ್ಲಿದ್ದ ಒಂದು ಗವಿಯಲ್ಲಿ ಇವರಿಬ್ಬರೂ ನಿತ್ಯದಾಸೋಹ ನಡೆಸುತ್ತಿದ್ದರೆಂದು ಹೇಳಲಾಗುತ್ತದೆ. ರಾಜವೈಭವದಿಂದ ವೈರಾಗ್ಯಪಥಕ್ಕೆ ಬಂದ ಈ ದಂಪತಿಗಳ ಬದುಕು, ವ್ಯಕ್ತಿತ್ವ ಪ್ರಶಂಸನೀಯವೇ ಸರಿ. ಕಲ್ಯಾಣ ಕ್ರಾಂತಿಯ ನಂತರ ಶರಣರೆಲ್ಲ ಶಿವೈಕ್ಯರಾಗ ತೊಡಗಿದಾಗ ಮೋಳಿಗೆ ಮಾರಯ್ಯನಿಗೆ ತಾನೂ ಆ ರೀತಿ ಮಾಡಬೇಕೆಂದು ಭಾವನೆ ಉಂಟಾಗುತ್ತದೆ. ಆಗ ಮಹಾದೇವಿಯವರು ತನ್ನ ಪತಿಗೆ ನಿಜವಾದ ಅರ್ಥವೇನೆಂದು ತಿಳಿಸಿಕೊಡುತ್ತ ಭಕ್ತನಿಗೆ ಮತ್ರ್ಯ-ಕೈಲಾಸವೆಂಬ ಭೇದವಿಲ್ಲ. ಶಿವೈಕ್ಯನಾಗಬೇಕೆಂಬ ಹಲುಬಾಟ ಸಲ್ಲದು. "ಕಾಯಕವನ್ನು ಬಿಟ್ಟು ಕೈಲಾಸಕ್ಕೆ ಹೋಗುವದು ಕ್ರಮವಲ್ಲ - ಘನಲಿಂಗ ಕರಸ್ಥಲದೊಳಗಿಪ್ಪ ಅನುವನರಿಯದೆ" ಎಂದು ಐಕ್ಯತತ್ವದ ಅರಿವು ಮಾಡಿಕೊಡುತ್ತಾರೆ. ಅವರ ಒಂದು ವಚನ- ಕಲ್ಲ ಬಿತ್ತಿ ನೀರನೆರೆದಲ್ಲಿ ಪಲ್ಲವಿಸುವುದೆ ದಿಟದ ಬೀಜದ ವೃಕ್ಷದಂತೆ? ಶ್ರದ್ಧೆ ಸನ್ಮಾರ್ಗ ಭಕ್ತಿ ಇಲ್ಲದಲ್ಲಿ ಗುರುಭಕ್ತಿ ಶಿವಲಿಂಗಪೂಜೆ, ಚಿರಸೇವೆ ತ್ರಿವಿಧ ಇತ್ತವೆ ಉಳಿಯುತ್ತು ಮತ್ತೆ ನಿಜವಸ್ತುವಿನ ಸುದ್ದಿ ನಿಮಗೆತ್ತಣದೊ? ಎನ್ನಯ್ಯ ಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನಲ್ಲಿ ವಿಶ್ವಾಸಿ ಬೇಕು.

 • 12ಕೊಟ್ಟಣದ ಸೋಮವ್ವೆ
 • ಭತ್ತ ಕುಟ್ಟುವ ಕಾಯಕದ ಸೋಮವ್ವೆಯದು ನಿಷ್ಠಾವಂತ ಬದುಕು. ನಸುಕಿನಲ್ಲಿ ಎದ್ದು ಸ್ನಾನ ಮಾಡಿ ವಿಭೂತಿ ಧರಿಸಿ ಭತ್ತ ಕುಟ್ಟುವ ಕೆಲಸ ಆರಂಭಿಸುವ ಕೊಟ್ಟಣದ ಸೋಮವ್ವೆ ತಾನು ಪಡೆದ ಕೂಲಿಯಿಂದ ದಾಸೋಹ ಮಾಡಿ, ಉಪಜೀವನ ನಡೆಸುತ್ತಿದ್ದರು. ಮಹಾ ಮನೆಯಲ್ಲೂ ಅದೇ ಅವರ ಸೇವೆ. ಸಂಜೆ ಅನುಭವ ಮಂಟಪದಲ್ಲಿ ಪಾಲ್ಗೊಳ್ಳುತ್ತಿದ್ದರು. ಅಕ್ಕನಾಗಮ್ಮನಿಗೆ ಸೋಮವ್ವೆಯೆಂದರೆ ಬಲು ಪ್ರೀತಿ. ಸೋಮವ್ವೆಯ ಮಗ ಜಗದೇವ ಕಲಚೂರ್ಯ ಸಾಮ್ರಾಜ್ಯದಲ್ಲಿ ಕುಸ್ತಿಪಟು. ಅವರ ಗುರು ನಿರ್ಲಜ್ಜ ಶಾಂತಯ್ಯನವರ ಹೆಸರಿನ ಅಂಕಿತದಲ್ಲಿ ಸೋಮವ್ವೆ ವಚನಗಳನ್ನು ಬರೆದಿದ್ದಾರೆ. ಅನುಭವ ಮಂಟಪದಲ್ಲಿ ಗಣಾಚಾರ ತತ್ವ ಅನುಸರಿಸಿದ ಗುಂಪಿನಲ್ಲಿ ಸೋಮವ್ವೆ ಒಬ್ಬರಾಗಿದ್ದರು. ಆ ಗುಂಪಿನಲ್ಲಿ ಚನ್ನಬಸವಣ್ಣ, ದಾನಮ್ಮ, ಅಕ್ಕನಾಗಮ್ಮ, ಮಡಿವಾಳ ಮಾಚಯ್ಯ, ಡೋಹರ ಕಕ್ಕಯ್ಯ ಮೊದಲಾದವರೂ ಇದ್ದರು. ಕಲ್ಯಾಣದಲ್ಲಿ ಹಿಂಸಾತ್ಮಕ ವಾತಾವರಣ ನಿರ್ಮಾಣವಾದಾಗ ತನ್ನ ಗುರುವಿನೊಡನೆಯೇ ವಾದಕ್ಕೆ ನಿಂತು ಸತ್ಯಾಗ್ರಹಕ್ಕಿಂತ ಹೋರಾಟವೇ ಉತ್ತಮವೆಂದು ವಾದಿಸುತ್ತಾರೆ. ಕೊನೆಗೆ ತನ್ನ ಮಕ್ಕಳಿಗೆ ಬಿಜ್ಜಳನನ್ನು ಹತ್ಯೆಗೈಯಲು ಪ್ರೇರೇಪಿಸುತ್ತಾರೆ. ಆ ಪ್ರಕಾರ ಜಗದೇವ, ಮಲ್ಲ ಬೊಮ್ಮರು ಬಿಜ್ಜಳನ ಸಿರಚ್ಛೇದನ ಮಾಡುತ್ತಾರೆ. ಕೊಟ್ಟಣದ ಸೋಮವ್ವೆ ತನ್ನ ಭತ್ತ ಕುಟ್ಟುವ ಒನಕೆಯನ್ನೇ ಹಿಡಿದು ಕಾದುತ್ತ ಕಲ್ಯಾಣದ ರಣರಂಗದಲ್ಲಿ ವೀರಮರಣವನ್ನಪ್ಪುತ್ತಾರೆ. ಅದೊಂದು ಅದ್ಭುತ ಸಾಹಸಮಯ ಜೀವನ ಅವರದು. ಅವರ ದೊರಕಿರುವ ಒಂದು ವಚನವಿದು: ಹದ ತಪ್ಪಿ ಕುಟ್ಟುವ ನುಚ್ಚಲ್ಲದೆ ಅಕ್ಕಿಯಿಲ್ಲ ವ್ರತಹೀನನ ನೆರೆಯೆ ನರಕವಲ್ಲದೆ ಮುಕ್ತಿಯಿಲ್ಲ ಅರಿಯದುದು ಹೋಗಲಿ, ಅರಿದು ಬೆರೆದನಾದಡೆ ಕಾದ ಕತ್ತಿಯಲ್ಲಿ ಕಿವಿಯ ಕೊಯ್ವರಯ್ಯ ಒಲ್ಲೆ ಬಲ್ಲೆನಾಗಿ ನಿಮ್ಮಾಣೆ ನಿರ್ಲಜ್ಜೇಶ್ವರಾ.

 • 13ಸತ್ಯಕ್ಕ
 • ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದ ಬಳಿ ಇರುವ ಹಿರೇಜಂಬೂರು ಎಂಬ ಊರಿನವರಾದ ಸತ್ಯಕ್ಕ ಭಕ್ತರ ಮನೆಯಂಗಳದ ಕಸಗುಡಿಸುವ ಕಾಯಕಮಾಡಿ ಬದುಕಿದವರು. ‘ಶಂಭುಜಕ್ಕೇಶ್ವರ' ಎಂಬ ಅಂಕಿತದಿಂದ ವಚನಗಳನ್ನು ಬರೆದಿರುವ ಸತ್ಯಕ್ಕ ಸತ್ಯುಳ್ಳ ಶರಣೆ ಎಂದೇ ಹೆಸರಾಗಿದ್ದಾರೆ. ನಿರ್ಭೀತ ಮನಸ್ಸಿನವರಾದ ಸತ್ಯಕ್ಕ ನಿರಾಕರ ಶಿವನನ್ನಾಗಲಿ, ಬಸವಣ್ಣನವರನ್ನಾಗಲಿ ನಿಂದಿಸಿದವರನ್ನು ಹಾಗೇ ಬಿಟ್ಟವರಲ್ಲ, ತೀವ್ರ ಪ್ರತಿರೋಧ ತೋರಿಸಿದವರು. ಅವರು ಬರೆದ 29 ವಚನಗಳು ಮಾತ್ರ ದೊರಕಿವೆ. ಒಮ್ಮೆ ಗುಡಿಯ ಪೂಜಾರಿಯೊಬ್ಬರು ಅವರನ್ನೂ ಬಸವಣ್ಣನನ್ನೂ ಹೀಯಾಳಿಸಿ ಮಾತನಾಡಿದಾಗ ಅವರಿಗೆ ಬಸವಣ್ಣನ ಕಾಯಕದ ಮಹತ್ವದ ತಿಳಿಹೇಳಿ ನಮ್ಮ ನಮ್ಮ ಕಾಯಕದಲ್ಲಿ ನಾವು ದೊಡ್ಡವರೇ ಎಂದು ದಿಟ್ಟತನದ ಉತ್ತರ ನೀಡುತ್ತಾರೆ. ಕಸಗುಡಿಸುವ ಕಾಯಕದಲ್ಲೂ ಆತ್ಮಾಭಿಮಾನದಿಂದ ಸತ್ಯಕ್ಕ ನಡೆದುಕೊಂಡ ರೀತಿ ಶರಣರ ಅನುಭವ ಮಂಟಪದ ಹಿರಿಮೆಗೆ ತಕ್ಕುದ್ದಾಗಿದೆ. ಹಿರೇಜಂಬೂರಿನಲ್ಲಿ ಈಗಲೂ ಸತ್ಯಕ್ಕನ ಚಿಕ್ಕ ಗುಡಿಯಿದೆ. ಕಾಯಕತತ್ವ ಕುರಿತು ಅವರು ಬರೆದ ಒಂದು ವಚನ ಹೀಗಿದೆ. ಶಿವಶರಣೆಂದು ಪೂರ್ವಾರ್ಜಿತವ ಉಂಡೊಂಡೆ ಭಂಗ ಪುಣ್ಯಪಾಪಂಗಳ ಎಣಿಸಬಾರದ ಭಾಷೆ! ಲಂಚವಂಚನಕ್ಕೆ ಕೈಯಾನದ ಭಾಷೆ, ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಡೆ ಕೈ ಮುಟ್ಟಿ ಎತ್ತಿದೆನಾದೊಡೆ ನಿಮ್ಮಾಣೆ ನೀವಿಕ್ಕಿದ ಅಕ್ಷಯದೊಳಗಿಪ್ಪೆನಯ್ಯಾ ಶಂಭುಜಕ್ಕೇಶ್ವರ! ಆಕೆಯ ಆತ್ಮನಿವೇದನೆಯ ವಚನವಿದು: ಏಕೆನ್ನ ಬಾರದ ಭವಂಗಳಲ್ಲಿ ಬರಿಸಿದೆ? ಏಕೆನ್ನ ಘೋರ ಸಂಸಾರದಲ್ಲಿರಿಸಿದೆ? ಏಕೆನಗೆ ಕರುಣಿಸಲೊಲ್ಲದೆ ಕಾಡಿಹೆ? ಏಕೆ ಹೇಳಾ ಎನ್ನ ಲಿಂಗವೆ? ಆನು ಮಾಡಿದ ತಪ್ಪೇನು? ಸಾಕಲಾಗದೆಂದು ಅಕ್ಕೊತ್ತಿ ನೂಕಿದಡೆ ಏಕೆ ನಾ ನಿಮ್ಮ ಬಿಡುವೆ ಶಂಭುಜಕ್ಕೇಶ್ವರಾ. ಅರ್ಚನೆ ಪೂಜನೆ ನೇಮವಲ್ಲ; ಮಂತ್ರತಂತ್ರ ನೇಮವಲ್ಲ; ಧೂಪ ದೀಪಾರತಿ ನೇಮವಲ್ಲ; ಪರಧನ ಪರಸ್ತ್ರೀ ಪರದೈವಂಗಳಿಗೆರದಿಪ್ಪುದೆ ನೇಮ. ಶಂಭುಜಕ್ಕೇಶ್ವರನಲ್ಲಿ ಇವು ಕಾಣಿರಣ್ಣಾ, ನಿತ್ಯನೇಮ.

 • 14ಸುಗ್ಗಲೆ
 • ಕಲ್ಯಾಣ ಚಾಲುಕ್ಯರರಸು ಇಮ್ಮಡಿ ಜಯಸಿಂಹನ ಮಡದಿ ಸುಗ್ಗಲದೇವಿ. ಅವರ ಗುರು ದೇವರ ದಾಸಿಮಯ್ಯ, ಜಯಸಿಂಹ ಜೈನಧರ್ಮಕ್ಕೆ ಸೇರಿದವನಾಗಿದ್ದ. ಮುಂದೆ ಸುಗ್ಗಲೆ ತನ್ನ ಪತಿಯನ್ನು ಶೈವಧರ್ಮಕ್ಕೆ ಪರಿವರ್ತಿಸಿ ಲಿಂಗದೀಕ್ಷೆ ಕೊಡಿಸುತ್ತಾರೆ. ಪೊಟ್ಟಲಕೆರೆ ಎಂಬ ನಗರದಲ್ಲಿ ಅವರು ವಾಸವಾಗಿದ್ದರು. ಗುರುವಿನ ಕುರಿತು ಪರಮಭಕ್ತಿ ಹೊಂದಿದ ಸುಗ್ಗಲೆ ಸ್ವಾಭಿಮಾನದ ಪ್ರತೀಕವೆನಿಸಿದ್ದರು. ರಾಜಧಾನಿ ಪೊಟ್ಟಲಕೆರೆಯಲ್ಲಿ 20 ಸಾವಿರಕ್ಕೂ ಹೆಚ್ಚು ಜಿನಮುನಿಗಳು ವಾಸಿಸುತ್ತಿದ್ದರು. ರಾಜನಾದ ಜಯಸಿಂಹನಿಗೂ ಜೈನಮುನಿ ಪುಡ್ಡಸೇನ ಎಂಬಾತ ಗುರುವಾಗಿದ್ದನು. ಜೈನರ ಈ ಪ್ರಾಬಲ್ಯವನ್ನು ತಗ್ಗಿಸುವ ಉದ್ದೇಶದೊಡನೆ ರಾಣಿ ಸುಗ್ಗಲೆ ತನ್ನ ಗುರುವಾದ ದೇವರ(ಜೇಡರ) ದಾಸಿಮಯ್ಯನನ್ನು ರಾಜಧಾನಿಗೆ ಬರಮಾಡಿಕೊಳ್ಳುತ್ತಾರೆ ಹಾಗೂ ತನ್ನ ಅರಮನೆಯ ಉದ್ಯಾನದಲ್ಲೇ ಆತನ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಟ್ಟರು. ಇದನ್ನು ಸಹಿಸದೇ ಜೈನರು ದೊರೆಗೆ ದೂರು ಸಲ್ಲಿಸುತ್ತಾರೆ. ಆಗ ದೊರೆಯು ರಾಣಿಗೆ ಅವರ ಗುರು ದಾಸಿಮಯ್ಯನನ್ನು ಮರಳಿ ಕಳಿಸುವಂತೆ ತಿಳಿಸುತ್ತಾರೆ. ಆದರೆ ಸುಗ್ಗಲೆ ಅದಕ್ಕೆ ಒಪ್ಪದೇ ಪತಿಯ ವಿರುದ್ಧ ಸಿಡಿದು ನಿಲ್ಲುತ್ತಾರೆ. ಆಸ್ಥಾನದಲ್ಲೇ ದಾಸಿಮಯ್ಯನಿಗೂ ಜೈನಗುರುಗಳಿಗೂ ಆಗಮ ಶಾಸ್ತ್ರ ಪುರಾಣಾದಿ ಸ್ಪರ್ಧೆ ಏರ್ಪಡುತ್ತದೆ. ಸ್ಪರ್ಧೆಯಲ್ಲಿ ದಾಸಿಮಯ್ಯವರು ವಿಜೇತರಾಗುತ್ತಾರೆ, ಆಗ ಗುರುಗಳಿಗೆ ಮನ ಸೋತ ಅರಸನೂ ಲಿಂಗದೀಕ್ಷೆ ಸ್ವೀಕರಿಸುತ್ತಾರೆ. ಮದುವೆಯಾದ ಪತ್ನಿ ಗಂಡನ ಗುಲಾಮರಂತೆ ಬದುಕಬೇಕಿಲ್ಲ. ಅವರಿಗೂ ಆತ್ಮಾಭಿಮಾನ, ಸ್ವಾತಂತ್ರ್ಯ ಇರಬೇಕೆಂದು ಸುಗ್ಗಲೆ ಪ್ರತಿಪಾದಿಸಿದವರು. ಪ್ರಭುಶಕ್ತಿ, ಸಮಾಜ ವ್ಯವಸ್ಥೆಗಳ ವಿರುದ್ಧ ಬಂಡಾಯವೆದ್ದು, ಶಿವಶಕ್ತಿಯನ್ನು ಜಗತ್ತಿಗೆ ತೋರಿಸಿದ ಈಕೆ ಆದರ್ಶ ಮಹಿಳೆ. ಅಂಗದ ಮೇಲೆ ಲಿಂಗ ಬರಲಾಗಿ, ಕಾಯದ ಗುಣವಳಿದು ಪ್ರಸಾದಕಾಯವಾಯಿತ್ತು. ಲಿಂಗದ ನೆನಹು ನೆಲೆಗೊಂಡು ಮನ ಹಿಂಗದಿರಲು ಮನದ ಮೇಲೆ ಪ್ರಸಾದ ನೆಲೆಗೊಂಡಿತ್ತು. ಲಿಂಗದಲ್ಲಿ ಪ್ರಾಣರತಿಸುಖವಾವರಿಸಿತ್ತಾಗಿ ಪ್ರಾಣದಲ್ಲಿ ಪ್ರಸಾದ ನೆಲೆಗೊಂಡಿತ್ತು. ಸರ್ವೇಂದ್ರಿಯಂಗಳು ಲಿಂಗದಲ್ಲಿ ಸಾವಧಾನಿಗಳಾದ ಕಾರಣ ಇಂದ್ರಿಯಂಗಳಲ್ಲಿಯೂ ಪ್ರಸಾದವೇ ನೆಲೆಗೊಂಡಿತ್ತು., ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣಂಗೆ.

 • 15ಗಂಗಮ್ಮ(ಹಾದರ ಕಾಯಕದ ಮಾರಯ್ಯಗಳ ಪುಣ್ಯಶ್ತ್ರೀ)
 • ಹಾದರ ಕಾಯಕದ ಮಾರಯ್ಯನ ಪುಣ್ಯಸ್ತ್ರೀ ಗಂಗವ್ವೆ, ಸೂಳೆ ಸಂಕವ್ವೆಯಂತೆ ಮೊದಲು ವೇಶ್ಯಾ ಜೀವನ ಸಾಗಿಸುತ್ತಿದ್ದರು. ಅನಂತರದ ಬಸವಾದಿ ಶಿವಶರಣ ಸಾಮಾಜಿಕ ಕ್ರಾಂತಿಯ ವಿಚಾರಗಳಿಂದ ಪ್ರಭಾವಿತಗೊಂಡು ಶರಣ ಜೀವನದತ್ತ ಒಲವು ಹೊಂದಿದರು. "ಗಂಗೇಶ್ವರ" ಎಂಬ ಅಂಕಿತದೊಡನೆ ಈಕೆ ರಚಿಸಿದ ಒಂದು ವಚನ ಮಾತ್ರ ಲಭಿಸಿದ್ದು, ಕಾಯಕಗಳಲ್ಲಿ ಮೇಲುಕೀಳಿಲ್ಲ. ಎಲ್ಲ ಕಾಯಕಗಳೂ ಒಂದೇ ಎಂಬ ಭಾವವನ್ನು ಆ ವಚನದಲ್ಲಿ ವ್ಯಕ್ತಪಡಿಸಿದ್ದಾರೆ. ಸೂಳೆ ಸಂಕೆವ್ವೆಯಂತೆಯೇ ಗಂಗಮ್ಮನೂ ವ್ರತ ನಿಯಮಗಳ ಕುರಿತು ಪ್ರಸ್ತಾಪಿಸಿದ್ದಾರೆ. ಆವ ಕಾಯಕ ಮಾಡಿದಡೂ ಒಂದೆ ಕಾಯಕವಯ್ಯಾ ಆವ ವ್ರತವಾದಡೂ ಒಂದೆ ವ್ರತವಯ್ಯಾ ಆಯ ತಪ್ಪಿದಡೆ ಸಾವಿಲ್ಲ ವ್ರತ ತಪ್ಪಿದಡೆ ಕೂಡಲಿಲ್ಲ ಕಾಕ ಪಿಕದಡೆ ಕೂಡಲು ನಾಯಕನರಕ ಗಂಗೇಶ್ವರಲಿಂಗದಲ್ಲಿ. ಇದು ಹಾದರ ಕಾಯಕದ ಗಂಗಮ್ಮನ ವಚನವಾಗಿದೆ.

 • 16ಗೊಗ್ಗವ್ವೆ
 • ಕೇರಳದ ಅಮೂರು ಎಂಬ ಊರಿನ ಶಿವಭಕ್ತ ದಂಪತಿಗಳ ಮಗಳಾದ ಗೊಗ್ಗವ್ವೆ ಬಾಲ್ಯದಿಂದಲೇ ಶಿವಭಕ್ತೆಯಾಗಿ ವೈರಾಗ್ಯ ಭಾವದಿಂದ ಬಾಳುವೆ ಸಾಗಿಸಿದ ಶರಣೆ. ಆಕೆ ಯೌವನಕ್ಕೆ ಕಾಲಿರಿಸಿದಾಗ ಹಿರಿಯರು ಆಕೆಯ ಮದುವೆಗಾಗಿ ಗಂಡು ಹುಡುಕುವ ಪ್ರಯತ್ನ ಆರಂಭಿಸುತ್ತಾರೆ. ಇದನ್ನು ತಿಳಿದ ಗೊಗ್ಗವ್ವೆ ಮನೆಯಿಂದ ಓಡಿಹೋಗಿ ಶಿವಾಲಯದಲ್ಲಿ ಯಾರಿಗೂ ಕಾಣದಂತೆ ಅಡಗಿ ಕೊಳ್ಳುತ್ತಾರೆ. ವಿವಾಹ ಬಂಧನದಲ್ಲಿ ಸಿಲುಕುವ ಆಸಕ್ತಿ ಅವರಿಗಿಲ್ಲವೆಂಬುದನ್ನು ಅರಿತ ಹಿರಿಯರು ಮಗಳ ಮನ ನೋಯಿಸಲಿಚ್ಛಿಸದೆ ಅವರನ್ನು ಅವರ ಪಾಡಿಗೆ ಇರಲು ಬಿಟ್ಟುಬಿಡುತ್ತಾರೆ. ಗೊಗ್ಗವ್ವೆ ಸಂತೋಷಪಟ್ಟು ಶಿವನ ಆರಾಧನೆಯಲ್ಲಿ ಕಾಲ ಕಳೆಯುತ್ತಾರೆ. ಶಿವಮಂದಿರದಲ್ಲಿ ಧೂಪ ಹಾಕುವ ಕೆಲಸ ಮಾಡುತ್ತಾರೆ. ಅಂತೆಯೇ ಅವರು ಧೂಪದ ಗೊಗ್ಗವ್ವೆ ಎಂದು ಹೆಸರಾಗಿದ್ದಾರೆ. ಶಿವನ ಹೊರತಾಗಿ ಜಗತ್ತಿನಲ್ಲಿ ತನಗೆ ಇನ್ನಾರೂ ಇಲ್ಲವೆಂಬ ಸರ್ವಾರ್ಪಣ ಭಾವ ತಾಳುತ್ತಾರೆ. ಗೊಗ್ಗವ್ವೆ ತನ್ನ ವಚನದಲ್ಲಿ ಸ್ತ್ರೀ-ಪುರುಷರ ಸಮಾತೆಯನ್ನು ಬೋಧಿಸಿದ್ದಾರೆ. ಜಂಗಮ ಸೇವೆಗೆ ಪೂರ್ತಿಯಾಗಿ ತನ್ನ ಬದುಕು ಅರ್ಪಿಸಿಕೊಂಡು ಧೂಪದ ಗೊಗ್ಗವ್ವೆ ವೈರಾಗ್ಯನಿಧಿಯಾಗಿ ಕಂಗೊಳಿಸಿದ್ದಾರೆ. ಅವರ ಒಂದು ವಚನ- ಗಂಡು ಮೋಹಿಸಿ ಹೆಣ್ಣ ಹಿಡಿದಡೆ ಅದು ಒಬ್ಬರ ಒಡವೆ ಎಂದು ಅರಿಯಬೇಕು ಹೆಣ್ಣು ಮೋಹಿಸಿ ಗಂಡ ಹಿಡಿದಡೆ ಉತ್ತರವಾದವುದೆಂದರಿಯಬೇಕು. ಈ ಎರಡರ ಉಭಯವ ಕಳೆದು ಸುಖಿ ತಾನಾಗಬಲ್ಲಡೆ ನಾಸ್ತಿನಾಥನು ಪರಿಪೂರ್ಣನೆಂಬೆ.

 • 17ಲಕ್ಷ್ಮಮ್ಮ- ಕೊಂಡೆಮಂಚಣ್ಣನ ಪುಣ್ಯಶ್ತ್ರೀ
 • ಬಿಜ್ಜಳ ದೊರೆಯ ಆಸ್ಥಾನದಲ್ಲಿ ಹಿರಿಯ ಅಧಿಕಾರಿಯಾಗಿದ್ದ ಕೊಂಡೆ ಮಂಚಣ್ಣನ ಧರ್ಮಪತ್ನಿಯೇ ಲಕ್ಷ್ಮಮ್ಮ. ಮೂಲತಃ ವೈದಿಕ ಸಂಪ್ರದಾಯವರಾಗಿದ್ದ ಮಂಚಣ್ಣನ ಪತ್ನಿ ತಂದೆಯ ಮನೆಯಲ್ಲೇ ಧಾರ್ಮಿಕ ಶಿಕ್ಷಣ ಪಡೆದರು. ಉತ್ತಮ ಶಿಕ್ಷಣ, ಸಂಸ್ಕಾರ ಪಡೆದ ಧರ್ಮನಿಷ್ಠ ಹೆಣ್ಣು. ಆಕೆಯ ಮೇಲೆ ವಚನಗಳು ಬೀರಿದ ಪ್ರಭಾವ ಅಪಾರ, ಶರಣೆ ರೇಕಮ್ಮನಿಂದ ವಚನಗಳನ್ನು ಪಡೆದು ಓದುತ್ತಾರೆ. ಕಾಯಕಕ್ಕೆ ಬರುವ ಶರಣೆಯರೊಡನೆ ಚರ್ಚಿಸಿ ಶರಣ ಧರ್ಮದ ಬಗ್ಗೆ ತಿಳಿಸಿಕೊಳ್ಳುತ್ತಾರೆ. ವೈದಿಕ ಸಂಪ್ರದಾಯದ ಅನೇಕ ರೂಢಿ-ರಿವಾಜುಗಳು ಸರಿಯಲ್ಲವೆಂದು ಇದರಿಂದ ಅವರಿಗೆ ಮನವರಿಕೆಯಾಗುತ್ತದೆ. ಶರಣರು ಸಾರಿದ ಕುಲಜಾತಿರಹಿತ ಸಮಾಜದ ಕಲ್ಪನೆ, ಸ್ತ್ರೀಯರಿಗೂ ಪುರುಷ ಸಮಾನ ಅಧಿಕಾರ, ಇವೆಲ್ಲ ವಿಚಾರಗಳನ್ನು ಲಕ್ಷ್ಮಮ್ಮ ಒಪ್ಪಿಕೊಳ್ಳುತ್ತಾರೆ. ಮಂಚಣ್ಣ ಬಿಜ್ಜಳನ ನಿಷ್ಠಾವಂತ ಅಧಿಕಾರಿಯಾಗಿ ಬಸವಣ್ಣನವರ ಕ್ರಾಂತಿಯನ್ನು ಹತ್ತಿಕ್ಕುವ ಕೆಲಸದಲ್ಲಿ ತೊಡಗಿದ್ದರೂ ಕ್ರಮೇಣ ಶರಣರ ಸಹವಾಸದಿಂದ ಸ್ತ್ರೀ ಸ್ವಾತಂತ್ರ್ಯದಂತಹ ವಿಚಾರಗಳನ್ನು ಪ್ರತಿಪಾದಿಸಿದ್ದಾರೆ. ಲಕ್ಷ್ಮಮ್ಮ-ಕೊಂಡೆಮಂಚಣ್ಣನ ಪುಣ್ಯಶ್ತ್ರೀಯ ಒಂದು ವಚನ- ಆಯುಷ್ಯ ತೀರಲು ಮರಣ ವ್ರತ ತಪ್ಪಲು ಶರೀರ ಕಡೆ. ಮೇಲುವ್ರತವೆಂಬ ತೂತರ ಮೆಚ್ಚ ನಮ್ಮ ಅಗಜೇಶ್ವರಲಿಂಗವು.

 • 18ಲಿಂಗಮ್ಮ(ಹಡಪದ ಅಪ್ಪಣ್ಣಗಳ ಪುಣ್ಯಸ್ತ್ರೀ)
 • ಬಸವಣ್ಣನವರ ಆಪ್ತಸೇವಕನಾಗಿ, ಒಡನಾಡಿಯಾಗಿ ಬದುಕಿದ ಹಡಪದ ಅಪ್ಪಣ್ಣನ ಧರ್ಮಪತ್ನಿಯೇ ಲಿಂಗಮ್ಮ ಮಹಾಶರಣೆ, ಶ್ರೇಷ್ಠ ಅನುಭಾವಿ. ಮಹಾಮನೆಯಲ್ಲಿ ಎಲ್ಲರೂ ಅವರನ್ನು 'ನಿಜಮುಕ್ತೆ ಲಿಂಗಮ್ಮ, ಎನ್ನುತ್ತಿದ್ದರು. ಲಿಂಗಮ್ಮ ವಚನಮೂರ್ತಿಯೂ ಹೌದು. ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ, ಎಂಬ ಅಂಕಿತದಲ್ಲಿ ಶ್ರೇಷ್ಠ ವಚನಗಳನ್ನು ಬರೆದಿದ್ದಾರೆ. ನೇರ ಮತ್ತು ನಿರ್ದಾಕ್ಷಿಣ್ಯ ವಿಚಾರಧಾರೆಯ ಲಿಂಗಮ್ಮ ಪತಿಗೆ ತಕ್ಕ ಸತಿಯಾಗಿ ಬಾಳಿದವಳು. ಅವರು ತಮ್ಮ ವಚನಗಳಲ್ಲಿ ತಮ್ಮ ಬದುಕನ್ನು ಕುರಿತಾಗಿಯೂ ಹೇಳಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಅವರ ಮದುವೆಯಾಗಿತ್ತು. ಹೆತ್ತ ತಾಯಿಯೆಂಬ ಗುರುಸ್ವಾಮಿ ಎನ್ನ ಕೊರಳಿಗೆ ಗಂಡನೆಂಬ ಲಿಂಗವ ಕಟ್ಟಿದರು. ನಿಜ ನೆಮ್ಮಿ ನೋಡುವನ್ನಕ್ಕ ಎನ್ನ ಅತ್ತೆ ಮಾವರು ಅರತು ಹೊದರು ಅತ್ತಿಗೆ ನಾದಿನಿಯರು ಎತ್ತಲೋ ಓಡಿಹೋದರು ಸುತ್ತಲಿರುವ ಬಂಧುಗಳೆಲ್ಲ ಬಯಲಾದರು. ಇದು ಲಿಂಗಮ್ಮನ ಒಂದು ವಚನದ ತುಣುಕು. ಬಸವಣ್ಣನವರಿಗೆ ಆಪ್ತ ಸಲಹೆ ನೀಡಬಲ್ಲಂತಹ ಮಹಾಜ್ಞಾನಿಯಾಗಿದ್ದ ಹಡಪದ ಅಪ್ಪಣನವರಿಗೆ ಸರಿಸಮನಾಗಿ ಬಾಳಿ ಬದುಕಿದ ಲಿಂಗಮ್ಮನು ಬರೆದ ವಚನಗಳು ಬದುಕಿನ ಅನುಭವ - ಅನುಭಾವಗಳ ಅರ್ಥಪೂರ್ಣ ಸಂಗಮವೆನಿಸಿವೆ.

 • 19ವೀರಮ್ಮ(ದಸರಯ್ಯಗಳ ಪುಣ್ಯಸ್ತ್ರೀ)
 • ಶರಣ ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ ಅನೇಕ ವಚನಗಳನ್ನು ರಚಿಸಿದ್ದು ಅವು ಈ ಶರಣೆಯ ಅನುಭವ-ಅನುಭಾವಗಳೆರಡರ ಪ್ರತೀಕವೂ ಆಗಿದೆ. ರಾಮಗೊಂಡೆಯವರಾದ ದಾಸರಯ್ಯ ಮಹಾನ್ ಶರಣರಾಗಿ ಗೌರವ ಪಡೆದವರು. ಅವರ ಧರ್ಮಪತ್ನಿಯಾಗಿ ವೀರಮ್ಮ ಸಾತ್ವಿಕಶಿರೋಮಣಿಯಾಗಿ ಬದುಕಿ ಬಾಳಿದವರು. "ಗುರು ಶಾಂತೇಶ್ವರಾ' ಎಂಬ ಅಂಕಿತದಲ್ಲಿ ವಚನಗಳನ್ನು ರಚಿಸಿರುವ ವೀರಮ್ಮನಿಗೆ ಶಾಂತೇಶ್ವರರೇ ಗುರುವಾಗಿದ್ದರೆಂದು ಹೇಳಲಾಗುತ್ತಿದೆ. ಶಿವತಂತ್ರ ಸಾಧಕಿಯೆಂದೇ ಹೆಸರು ಪಡೆದ ವೀರಮ್ಮ ವಚನದ ಮೂಲಕ ತನ್ನ ಸಾಧನೆಯ ಒಳರಹಸ್ಯಗಳನ್ನು ವಿವರಿಸಿ ಹೇಳುವಂತೆ ನಡೆ-ನುಡಿ ಒಂದಾಗಬೇಕೆಂದು ಹೇಳುತ್ತ "ದುರುಳ ಕಾಮಿನಿಯರಿಗೆ ಎರಗುವ ಹೊಲೆ ಮನಸ್ಸನ್ನು" ಖಂಡಿಸುತ್ತಾರೆ. ಮನವೇ ಲಿಂಗ, ಬುದ್ದಿಯೇ ಶಿವಜ್ಞಾನ ಚಿತ್ತವೇ ಶಿವದಾಸೋಹ ಅಹಂಕಾರದಲ್ಲಿ ಶಿವಚಿಂತನೆಯುಳ್ಳಾತರಾಗಿ ಸಲ್ಲಿಸಿದ್ದೇ ಅಂತಃಕರಣ ವಿರಹಿತ ಪ್ರಸಾದ ಎಂಬುದು ವೀರಮ್ಮನ ಒಂದು ಮಾರ್ಮಿಕ ವಚನ.

 • 20ಸೂಳೆ ಸಂಕವ್ವೆ
 • 12ನೇ ಶತಮಾನದಲ್ಲಿ ಯಾವುದೇ ವೃತ್ತಿಯ ತಾರತಮ್ಯವಿಲ್ಲದೇ ಅನುಭವ ಮಂಟಪದಲ್ಲಿ ಸೇರಲು ಅವಕಾಶವಿತ್ತು. ಜಾತಿ ಮತ್ತು ವೃತ್ತಿಯಲ್ಲಿನ ಮೇಲು ಕೀಳು ಭಾವನೆ ಹೋಗಲಾಡಿಸಿ ಸಮಾನತೆಯ ಸಮಾಜ ನಿರ್ಮಿಸಲು ಬಸವ ಅಲ್ಲಮಾದಿ ಶಿವಶರಣರು ಅನುಸರಿಸಿದ ಮಾರ್ಗ ಇದು. ಬದುಕಿನ ಹೊಟ್ಟೆಪಾಡಿಗಾಗಿ ಅನಿವಾರ್ಯವಾಗಿ ವೇಶ್ಯಾವೃತ್ತಿಯನ್ನು ಮಾಡುತ್ತಿದ್ದ ಸೂಳೆ ಸಂಕವ್ವೆ ನಂತರ ಶರಣರ ಚಳವಳಿ ಪ್ರಭಾವಕ್ಕೊಳಗಾಗಿ ಸಾತ್ವಿಕ ಬದುಕಿನತ್ತ ಆಕರ್ಷಿತರಾದರೆಂದು ತಿಳಿದುಬರುತ್ತದೆ. ಸಂಕವ್ವೆ ರಚಿಸಿದ ಒಂದೇ ಒಂದು ವಚನ ದೊರಕಿದ್ದು ಅದರಲ್ಲಿ ಇವಳೊಬ್ಬ ಸ್ವಾಭಿಮಾನ ಬೆಳೆಸಿಕೊಂಡು ಪ್ರಾಮಾಣಿಕವಾಗಿ ಬದುಕಿದ ದಿಟ್ಟ ಮಹಿಳೆಯೆಂಬುದು ಸ್ಪಷ್ಟವಾಗುತ್ತದೆ. "ನಿರ್ಲಜ್ಜೇಶ್ವರ" ಎಂಬ ಅಂಕಿತವನ್ನು ಬಳಸಿದ ಸಂಕವ್ವೆ ತನ್ನದೇ ವೃತ್ತಿಯ ಅನುಭವದ ಹಿನ್ನಲೆಯಲ್ಲಿ ವ್ರತಹೀನರ ಸಂಗ ಸಲ್ಲದು ಎಂಬ ಮಾತು ಹೇಳಿದ್ದಾರೆ. ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ ಹಿಡಿದಡೆ ಬತ್ತಲೆ ನಿಲಿಸಿ ಕೊಲುವರಯ್ಯಾ ವ್ರತಹೀನನನರಿದು ಬೆರೆದಡೆ ಕಾದ ಕತ್ತಿಯಲ್ಲಿ ಕೈ ಕಿವಿ ಕೊಯ್ವರಯ್ಯಾ ಒಲ್ಲೆನೊಲ್ಲೆ ಬಲ್ಲೆನಾಗಿ ನಿಮ್ಮಾಣೆ ನಿರ್ಲಜ್ಜೇಶ್ವರಾ. -ಇದು ಸೂಳೆ ಸಂಕವ್ವೆಯ ದೊರಕಿರುವ ಏಕೈಕ ವಚನ.

 • 21ಕದಿರ ರೆಮ್ಮವ್ವೆ
 • ಶರಣ ಕದಿರ ರೆಮ್ಮಯ್ಯನ ಪುಣ್ಯಸ್ತ್ರೀ ಕದಿರ ರೆಮ್ಮವ್ವೆ ರಾಟೆಯಿಂದ ನೂಲು ತೆಗೆಯುವ ಕಾಯಕ ಮಾಡುತ್ತಿದ್ದರು. ಈಕೆಯ ಕಾಲ ಹನ್ನೇರಡನೆಯ ಶತಮಾನವೆಂದು ಚರಿತ್ರಕಾರರು ಹೇಳಿದ್ದಾರೆ. ಹರಿಜರ ಕವಿಯ ರಗಳೆಯಲ್ಲಿ ರೆಮ್ಮವ್ವೆಯ ಹೆಸರೂ ಉಲ್ಲೇಖಿತವಾಗಿದ್ದು ಪಾಲ್ಕುರಿಕೆ ಸೋಮನಾಥನ ‘ಪಂಡಿತಾರಾಧ್ಯ ಚಾರಿತ್ರ್ಯ'ದಲ್ಲೂ ಹೆಸರು ಕಂಡುಬರುತ್ತದೆ. ರೆಮ್ಮವ್ವೆಯಿಂದ ರಚಿತವಾದ ನಾಲ್ಕು ವಚನಗಳು ದೊರಕಿವೆ. "ಕದಿರ ರೆಮ್ಮಿಯೊಡಯ ಗುಮೇಶ್ವರ" ಎಂಬ ಅಂಕಿತದಲ್ಲಿ ಬರೆದಿದ್ದಾರೆ. ಕದಿರ ರೆಮ್ಮವ್ವೆ ಶಿವಭಕ್ತೆಯಾದದಂತೆ ಕಾಯಕಜೀವಿಯೂ ಆಗಿದ್ದರು. ತನ್ನ ವಚನದಲ್ಲೂ ಆಕೆ ರಾಟೆ ವೃತ್ತಿ ಸಂಬಂಧಿತ ವಿಚಾರಗಳ ಕುರಿತು ಬರೆದಿದ್ದಾರೆ. “ನಾ ತಿರುಹುವ ರಾಟೆಯ ಕುಲಜಾತಿ ಹೇಳರಣ್ಣಾ” ಎನ್ನುವ ಮೂಲಕ ರೆಮ್ಮವ್ವೆ ಸಮಾಜದ ಕುಲಜಾತಿಗಳ ಅಸ್ಪೃಶ್ಯತೆಯ ಅನಿಷ್ಠ ಪದ್ದತಿಯನ್ನು ಪ್ರಶ್ನಿಸುತ್ತಾರೆ. ತನ್ನ ಇನ್ನೊಂದು ವಚನದಲ್ಲಿ ರೆಮ್ಮವ್ವೆಬಸವಣ್ಣ, ಅಲ್ಲಮಪ್ರಭು ಮೊದಲಾದವರ ಕರುಣೆಯಿಂದ ತಾನು ಬದುಕಿರುದಾಗಿ ವಿನಮ್ರವಾಗಿ ಹೇಳಿಕೊಂಡಿದ್ದಾರೆ. ತನ್ನ ವೃತ್ತಿಯನ್ನೇ ಆಧ್ಯಾತ್ಮಿಕ ಸ್ವರೂಪದಲ್ಲಿ ಕಂಡಿರುವ ರೆಮವ್ವೆ" ಅರಿವೆಂಬ ಕದಿರು ಭಕ್ತಿಯೆಂಬ ಕೈಯಲ್ಲಿ ತಿರುಹಲಾಗಿ ಸುತ್ತಿತ್ತು ನೂಲು, ಕದಿಕಿ ತುಂಬಿತ್ತು" ಎಂದು ಹೇಳುವ ಮೂಲಕ ತನ್ನ ಕಾಯಕಕ್ಕೆ ಪಾವಿತ್ರ್ಯ ತಂದು ಕೊಟ್ಟಿದ್ದಾರೆ. ಹನ್ನೆರಡನೆಯ ಶತಮಾನದ ಶಿವಶರಣರು ಎಲ್ಲ ಬಗೆಯ ಕಾಯಕಗಳಿಗೂ ನೀಡಿರುವ ಮಹತ್ವಕ್ಕೆ ಕದಿರ ರೆಮ್ಮವ್ವೆಯ ಬದುಕೇ ಉತ್ತಮ ಉದಾಹರಣೆಯಾಗಿದೆ. ಅವರ ಒಂದು ವಚನ- ನಾ ತಿರುಹುವ ರಾಟೆಯ ಕುಲಜಾತಿಯ ಕೇಳಿರಣ್ಣಾ ಅಡಿಯ ಹಲಗೆ ಬ್ರಹ್ಮ, ತೋರಣ ವಿಷ್ಣು' ನಿಂದ ಬೊಂಬೆ ಮಹಾರುದ್ರ. ರುದ್ರನ ಬೆಂಬಳಿಯವೆರಡು ಸೂತ್ರ ಕರ್ಣ ಅರಿವೆಂಬ ಕದಿರು, ಭಕ್ತಿಯೆಂಬ ಕೈಯಲ್ಲಿ ತಿರುಹಲಾಗಿ ಸುತ್ತಿತ್ತು ನೂಲು, ಕದಿರು ತುಂಬಿತ್ತು ರಾಟೆಯ ತಿರುಹಲಾರೆ. ಎನ್ನ ಗಂಡ ಕುಟ್ಟಿಹ, ಇನ್ನೇವೆ. ಕದಿರ ರೆಮ್ಮೆಯೊಡೆಯ ಗುಮ್ಮೇಶ್ವರಾ.

 • 22ಕಾಳವ್ವೆ(ಬಾಚಿಕಾಯಕದ ಬಸವಣ್ಣಗಳ ಪುಣ್ಯಸ್ತ್ರೀ)
 • ಬಾಚಿ ಕಾಯಕದ ಬಸವಣ್ಣ ಎಂಬ ಶರಣನ ಪತ್ನಿ ಕಾಳವ್ವೆ ಗಂಧದ ಕೆತ್ತನೆ ಕುಶಲ ಕೆಲಸದಲ್ಲಿ ಪರಿಣಿತೆ. ಶರಣನ ಪತ್ನಿ ಕಾಳವ್ವೆ ಲಿಂಗದ ಕರಡಿಗೆಗಳನ್ನು ಅವರು ತಯಾರಿಸುತ್ತಿದ್ದರು. ಅವರು ತಯಾರಿಸಿದ ಕಟ್ಟಿಗೆಯ ವಸ್ತುಗಳು ಬೇರೆ ಊರಲ್ಲೂ ಮಾರಾಟವಾಗುತ್ತಿದ್ದವು. ಅವರ ಬಳಿ ಮರಗೆಲಸದ ಕೆಲಸ ಕಲಿಯಲು ಹಲವು ಹೆಣ್ಣುಮಕ್ಕಳು ಬರುತ್ತಿದ್ದರು. ತಮ್ಮ ಈ ಉದ್ಯೋಗದಿಂದ ಬಂದ ಹಣದಲ್ಲಿ ಉಳಿದದ್ದನ್ನು ದಾಸೋಹಕ್ಕೆ ಸಲ್ಲಿಸುತ್ತಿದ್ದರು. ಕಾಳವ್ವೆ ಹಾಗೂ ಬಾಚಿ ಕಾಯಕದ ಬಸವಣ್ಣ ಇಬ್ಬರೂ ವಚನಗಳನ್ನು ರಚಿಸಿದ್ದಾರೆ. ಕಾಳವ್ವೆ ತನ್ನ ವಚನಗಳಿಗೆ "ಕರ್ಮಹರ ಕಾಳೇಶ್ವರ' ಎಂಬ ಅಂಕಿತ ಬಳಸಿದ್ದಾಳೆ. ಕೈ ತಪ್ಪಿ ಕೆತ್ತಲು ಕಾಲಿಗೆ ಮೂಲ ಮಾತು ತಪ್ಪಿ ನುಡಿಯಲು ಬಾಯಿಗೆ ಮೂಲ ವ್ರತಹೀನನ ನೆರೆಯಲು ನರಕಕ್ಕೆ ಮೂಲ ಕರ್ಮಹರ ಕಾಳೇಶ್ವರ. ತಮ್ಮ ಉದ್ಯೋಗವನ್ನು ನಿಷ್ಠೆಯಿಂದ ಮಾಡಿ ಸ್ವಾಭಿಮಾನದ ಬದುಕನ್ನು ಮಹಿಳೆಯರು ಬದುಕುವಂತೆ ಮಾಡಿದ್ದೇ ಬಸವಕಾಲದ ಬಹುದೊಡ್ಡ ಸಾಧನೆ. ಅನಕ್ಷರಸ್ಥರು, ಸಮಾಜದಿಂದ ಅಂದು ತಿರಸ್ಕೃತಗೊಂಡ ಕೆಳಜಾತಿಯವರು ಅನುಭವ ಮಂಟಪದಲ್ಲಿ ಆಶ್ರಯ ಪಡೆದು ತಲೆಯೆತ್ತಿ ಬಾಳುವುದರೊಡನೆ ಅರ್ಥಪೂರ್ಣ ವಚನಗಳನ್ನು ರಚಿಸಿದ್ದು ನಿಜಕ್ಕೂ ಅಪೂರ್ವ ಸಂಗತಿಯೇ ಸರಿ.

 • 23ಕಾಳವ್ವೆ(ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ)
 • ಕಳ್ಳತನ, ದರೋಡೆ ಮಾಡಿ ಜೀವನ ನಡೆಸುತ್ತಿದ್ದ ಪೆದ್ದಣ್ಣ ಎಂಬಾತನ ಪತ್ನಿ ಕಾಳಮ್ಮ. ಅವರದು ನಾಂದೇಡ ಜಿಲ್ಲೆಯ ಕಂದಾಹಾರ ಎಂಬ ಊರು. ಜಾತಿಯಿಂದ ಅಂತ್ಯಜರು. ಮುಂದೆ ಉರಿಲಿಂಗ ಸ್ವಾಮಿಗಳ ಪ್ರಭಾವಕ್ಕೊಳಗಾಗಿ ಪೆದ್ದಣ್ಣ ತನ್ನ ದುಷ್ಟವೃತ್ತಿ ತೊರೆದು ಉರಿಲಿಂಗ ಪೆದ್ದಿಯಾಗಿ ಸನ್ಮಾರ್ಗದಲ್ಲಿ ನಡೆಯುತ್ತಾರೆ. ಪತ್ನಿ ಕಾಳಮ್ಮ ಕಟ್ಟಿಗೆಯನ್ನು ಮಾರಿ ಉಪಜೀವನ ನಡೆಸುತ್ತ ದಾಸೋಹ ನಿರತರಾಗುತ್ತಾರೆ. ಅವರು ನೂರಾರು ವಚನಗಳನ್ನು ಬರೆದಿದ್ದಾರೆನ್ನಲಾಗುತ್ತಿದ್ದರೂ ದೊರಕಿರುವುದು ಹದಿಮೂರು ಮಾತ್ರ. ಅವರು ತನ್ನ ವಚನಗಳಲ್ಲಿ ಬಳಸುವ ಕನ್ನಡ-ಸಂಸ್ಕೃತ ಶಬ್ದಗಳು ಅಚ್ಚರಿಗೊಳಿಸುವಂತಿವೆ. "ಉರಿಲಿಂಗ ಪೆದ್ದಿಗಳರಸ" ಎಂಬ ಅಂಕಿತದಿಂದ ಕಾಳಮ್ಮನವರು ವಚನಗಳನ್ನು ಬರೆದಿದ್ದಾರೆ. ಉರಿಲಿಂಗ ದೇವರು ಪೆದ್ದಣ್ಣನ ಮನಃಪರಿವರ್ತನೆ ಮಾಡಿ ಅವರಿಗೆ ಜ್ಞಾನಸಂಸ್ಕಾರ ನೀಡುತ್ತಾರಲ್ಲದೇ ಮುಂದೆ ಕಂದಹಾರದ ಮಠದ ಪೀಠಾಧಿಕಾರಿಯನ್ನಾಗಿ ನೇಮಿಸುತ್ತಾರೆ. ಇದು ನಿಜಕ್ಕೂ ಆ ಕಾಲದಲ್ಲಿ ಒಂದು ಮಹಾಕ್ರಾಂತಿಯೇ ಸರಿ. ಕಾಳವ್ವೆ ಅವರಿಗೆ ತಕ್ಕ ಸತಿಯಾಗಿ ಸಾತ್ವಿಕಜೀವನ ನಡೆಸಿ ಶರಣ ಸಮೂಹದಲ್ಲಿ ಪ್ರಮುಖಸ್ಥಾನ ಪಡೆಯುತ್ತಾರೆ. ಯಾವುದೇ ಕುಲದಲ್ಲಿ ಹುಟ್ಟಿರಲಿ, ಸೂಕ್ತಸಂಸ್ಕಾರ ದೊರಕಿದಲ್ಲಿ ಅವರು ಹೇಗೆ ಮೇಲಿನ ಹಂತಕ್ಕೇರಬಲ್ಲರು ಎಂಬುದಕ್ಕೆ ಪೆದ್ದಿ-ಕಾಳವ್ವೆಯರ ಬದುಕೇ ಅತ್ಯುತ್ತಮ ಉದಾಹರಣೆ ಆಗಿದೆ. ಆಶೆಯೆಂಬುದು ಭವದ ಬೀಜ ನಿರಾಶೆಯೆಂಬುದು ನಿತ್ಯ ಮುಕ್ತಿ ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವ! -ಇದು ಕಾಳವ್ವೆಯ ವಿಚಾರಪೂರ್ವ ವಚನಗಳಲ್ಲೊಂದು.

 • 24ಸೇವಕಿ ಗೌರಮ್ಮ
 • ಕಲ್ಯಾಣದ ಅನುಭವ ಮಂಟಪದ ಅವಧಿಯಲ್ಲಿ ಶರಣ - ಶರಣೆಯರು ಎಂತೆಂತಹ ಕಾಯಕಗಳನ್ನು ಹಮ್ಮಿಕೊಂಡರು ಎನ್ನುವುದನ್ನು ಗಮನಿಸಿದರೆ ಅಚ್ಚರಿಯಾಗದೇ ಇರದು. ಗೌರಮ್ಮ (ಗೌರವ್ವೆ) ಅನುಭವ ಮಂಟಪದ ಸೇವಾದಳದ ಮುಖ್ಯಸ್ಥರು. ಸದಾಕಾಲ ಅವರ ಕೈಯಲೊಂದು ಬೆತ್ತ, ಅವರ ಕೈಕೆಳಗೆ ನೂರಾರು ಹೆಣ್ಣು ಮಕ್ಕಳು ಸ್ವಯಂ ಸೇವಕಿಯರಾಗಿ ತರಬೇತಿ ಪಡೆಯುತ್ತಿದ್ದರು. ಸಾವಿರಾರು ಜನ ಸೇರಿದ ದಾಸೋಹವಿರಲಿ, ಮೆರವಣಿಗೆ ಹೊರಟಿರಲಿ, ಅಲ್ಲಿ ಬೆತ್ತಧಾರಿ ಗೌರಮ್ಮ ಜನಸಂದಣಿಯನ್ನು ನಿಯಂತ್ರಿಸಿ ಎಲ್ಲರೂ ಶಿಸ್ತಿನಿಂದ ವರ್ತಿಸುವಂತೆ ನೋಡಿಕೊಳ್ಳುತ್ತಿದ್ದರು. ಸಿರಿವಂತರ ಮನೆಗಳಲ್ಲಿ ದೊಡ್ಡ ದೊಡ್ಡ ಸಮಾರಂಭ ನಡೆದರೂ ಅಲ್ಲಿಗೆ ಗೌರಮ್ಮನನ್ನು ಕರೆಸುತ್ತಿದ್ದರು. ಸ್ವಯಂಸೇವಕಿಯರೊಡನೆ ಹೋಗಿ ಗೌರಮ್ಮ ಆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳುತ್ತಿದ್ದರು. ಅದಕ್ಕೆ ಪ್ರತಿಯಾಗಿ ಕಾಳುಕಡ್ಡಿ, ದಾನ್ಯ ಸೀರೆ ವಸ್ತ್ರಾದಿಗಳು ದೊರಕುತ್ತಿದ್ದವು. ಅದರಿಂದಲೇ ಅವರ ಉಪಜೀವನ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವುದು. ಯಾವ ಕೆಲಸವೂ ಗೌರಮ್ಮನಿಗೆ ಕಿರಿದಾಗಿರಲಿಲ್ಲ. ಶವಸಂಸ್ಕಾರ ಸಿದ್ಧತೆಗಳಿಗೂ ಅವರು ಹೋಗುತ್ತಿದ್ದರು. ಅದೊಂದು ಉತ್ತಮ ಸೇವೆಯಾಗಿತ್ತು. ಎತ್ತರ ನಿಲುವಿನ, ಸದೃಢ ಮೈಕಟ್ಟಿನ ಗೌರಮ್ಮನವರನ್ನು ಕಂಡಾಕ್ಷಣ ಗೌರವ ಮೂಡುವಂತಿತ್ತು. ತನ್ನ ಈ ಕಾಯಕವನ್ನು ನಿಷ್ಠೆ ಶ್ರದ್ಧೆಗಳಿಂದ ಮಾಡಿಯೇ ಗೌರಮ್ಮ ಅಮರರಾಗಿದ್ದಾರೆ. ಅವರನ್ನು "ಸೇವಿಕೆ ಗೌರವ್ವೆ" ಎಂದೂ ಕರೆಯಲಾಗುತ್ತಿತ್ತು.

 • 25ವರದಾನಿ ಗುಡ್ಡೆವ್ವೆ (ದಾನಮ್ಮ)
 • ವಿಜಾಪುರ ಬಳಿಯ ಜತ್ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಜನಿಸಿದ ಗುಡ್ಡವ್ವೆಯ ಮೊದಲ ಹೆಸರು ಲಿಂಗಮ್ಮ. ತಂದೆ ಅನಂತರಾಯ ಶೀಲವಂತ; ತಾಯಿ ಸಿರಸಮ್ಮ. ಮನೆಯಲ್ಲೇ ಶಿವಾನುಭವದ ಪರಿಚಯವಾದರೂ ಬಸವಣ್ಣನಿಂದಲೇ ಉಪದೇಶ ಪಡೆಯಲು ಏಕಾಂಗಿಯಾಗಿ ಕಲ್ಯಾಣಕ್ಕೆ ನಡೆದುಕೊಂಡು ತೆರಳಿದ ಲಿಂಗಮ್ಮ ಅಲ್ಲಿ ಮಹದೇವಿಯೆಂಬ ಬಡವಿಯ ಮನೆಯಲ್ಲಿದ್ದು ಶಿವಯೋಗದಲ್ಲಿ ನಿರತರಾದರು. ಇದನ್ನರಿತ ಬಸವಣ್ಣನು ಪತ್ನಿ ನೀಲಾಂಬಿಕೆಯೊಡನೆ ಗುಡ್ಡೆವ್ವೆಯು ಇರುವಲ್ಲಿಗೆ ಬಂದು ದಾನಮ್ಮ' ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆಯುವುದಾಗಿ ಅವರಿಗೆ ತಿಳಿಸಿ ಆಶೀರ್ವದಿಸುತ್ತಾರೆ. ಹಾಗೂ ಅನುಭವ ಮಂಟಪಕ್ಕೆ ಕರೆದೊಯ್ದು ಅಲ್ಲಿ ಶರಣಿಗೆ ದಾನಮ್ಮನ ಶಿವಯೋಗಾಚರಣೆ ಕುರಿತು ಪ್ರಶಂಸಿಸುತ್ತಾರೆ. ಶರಣ ಸಮುದಾಯವನ್ನು ಕಂಡು ತನ್ನ ಜನ್ಮ ಸಾರ್ಥಕವಾಯಿತೆಂದು ಹಿಗ್ಗಿದ ದಾನಮ್ಮ ಬಡವರ ಸೇವೆಗೆ ತನ್ನ ಮುಂದಿನ ಬದುಕನ್ನು ಅರ್ಪಿಸಿಕೊಳ್ಳುತ್ತಾರೆ. ಮುಂದೆ ಕಲ್ಯಾಣದಲ್ಲಿ ಕ್ರಾಂತಿಯಾಗಿ ಬಸವಣ್ಣ ಸಂಗಮಕ್ಕೆ ತೆರಳಿದ ನಂತರ ದಾನಮ್ಮ ತನ್ನ ಸ್ವಗ್ರಾಮಕ್ಕೆ ಮರಳಿ ಸಂಗಮನಾಥನೆಂಬ ಶರಣನೊಂದಿಗೆ ವಿವಾಹವಾಗಿ ಗುಡ್ಡಾಪುರವೆಂಬ ಗ್ರಾಮಕ್ಕೆ ಹೋಗಿ ವಾಸ ಮಾಡುತ್ತಾರೆ. ಅಲ್ಲಿಯೇ ಪತಿಯೊಡನೆ ಶಿವಯೋಗದಲ್ಲಿ ನಿರತರಾದರು. ಕಲ್ಯಾಣ ಕ್ರಾಂತಿಯ ಕಾಲದಲ್ಲಿ ಇಬ್ಬರೂ ಆದವಾನಿಗೆ ಹೋಗಿ ಅಲ್ಲಿ ಅನೇಕರಿಗೆ ಲಿಂಗದೀಕ್ಷೆ ನೀಡಿದರು. ರಾಯಚೂರು, ಬಳ್ಳಾರಿ, ಅನಂತಪುರ ಮೊದಲಾದೆಡೆಗಳಲ್ಲಿ ಜನರು ದಾನಮ್ಮನಿಂದ ಲಿಂಗದೀಕ್ಷೆ ಪಡೆದರು. ಮೈಸೂರು, ತಮಿಳುನಾಡು, ಕೇರಳಗಳಲ್ಲೂ ಅವರ ಕೀರ್ತಿ ಪಸರಿಸಿತು. ದಾನಮ್ಮ ಪತಿಯೊಡನೆ ಕಪಿಲಾ-ಕಾವೇರಿ ಸಂಗಮದಲ್ಲಿ ಕೆಲಕಾಲವಿದ್ದು ದೀನರ ಸೇವೆಗೈದರು. ಕಾಶಿ, ರಾಮೆಶ್ವರ, ಉತ್ತರ ಭಾರತದ ಹಲವೆಡೆ ಸಂಚಾರಗೈದ ದಾನಮ್ಮ ಕೊನೆಗೆ ಗುಡ್ಡಾಪುರದಲ್ಲಿ ಲಿಂಗೈಕ್ಯರಾದರು. ದೇವಗಿರಿ ಯಾದವ ವಂಶದ ಸಾಯಿದೇವನು ಗುಡ್ಡವ್ವೆಯ ಮೇಲಿನ ಭಕ್ತಿಯಿಂದ ವಾತಾಖ್ಯಪುರವೆಂಬಲ್ಲಿ ಅವರಿಗಾಗಿ ದೇವಾಲಯ ಕಟ್ಟಿಸಿದರು. ಆ ವಾತಾಖ್ಯಪುರವೇ ಇಂದಿನ ‘ವಾಡಪುರಿ' ಇದು ಭೀಮಾನದಿ ದಂಡೆಯಲ್ಲಿದ್ದು, ಗುಡ್ಡಾಪುರದ ದಾನಮ್ಮ ವರದಾನಿ ಗುಡ್ಡವ್ವೆಯ ಬಹುದೊಡ್ಡ ಭಕ್ತಸ್ತೋಮ ನಾಡಿನೆಲ್ಲೆಡೆಗೂ ಇದೆ.

 • 26ಅಮರಗುಂಡದ ಮಲ್ಲಿಕಾರ್ಜುನ ತಂದೆsdfsf
 • ಕಾಯವೆಂಬ ಪಟ್ಟಣಕ್ಕೆ ಸತ್ಯವೆಂಬ ಕೋಟೆಯನಿಕ್ಕಿ, ಧರ್ಮಾರ್ಥಕಾಮಮೋಕ್ಷಂಗಳೆಂಬ ಉಕ್ಕಡದವರೆಚ್ಚತ್ತಿರಿ ! ಎಚ್ಚತ್ತಿರಿ ! ಭಯ ಘನ ! ಭಯ ಘನ ! ಅಜ್ಞಾನವೆಂಬ ತೀವ್ರ ಕತ್ತಲೆ ಕರ ಘನ! ಕರ ಘನ ! ಒಂಬತ್ತು ಬಾಗಿಲ ಜತನವ ಮಾಡಿ ! ಜತನವ ಮಾಡಿ! ಜ್ಞಾನಜ್ಯೋತಿಯ ಪ್ರಬಲವ ಮಾಡಿ! ಪ್ರಬಲವ ಮಾಡಿ! ಐವರು ಕಳ್ಳರು ಕನ್ನವ ಕೊರೆವುತೈದಾರೆ, ಸುವಿಧಾನವಾಗಿರಿ ! ಸುವಿಧಾನವಾಗಿರಿ! ಜೀವಧನವ ಜತನವ ಮಾಡಿ! ಜತನವ ಮಾಡಿ! ಭಳಿರೆಲಾ! ಭಳಿರೆಲಾ! ಆ ಪಟ್ಟಣದ ಮೂಲಸ್ಥಾನದ ಶಿಖರದ ಮೇಲಣ ಬಾಗಿಲ ತೆರೆದು, ನಡೆವುದೆ ಸುಪಥ ಸ್ವಯಂಭುನಾಥನಲ್ಲಿಗೆ, ಇದನರಿತು ಮಹಾಮಹಿಮ ಮಾಗುಡದ ಮಲ್ಲಿಕಾರ್ಜುನದೇವರಲ್ಲಿ ಎಚ್ಚರಿಕೆಗುಂದದಿರಿ ! ಎಚ್ಚರಿಕೆಗುಂದದಿರಿ! ಅಮರಗುಂಡದ ಮಲ್ಲಿಕಾರ್ಜುನ ತಂದೆಯವರು ಮೂಲತಃ ಆಂಧ್ರ ಪ್ರದೇಶದ ಅಮರಗುಂಡದವರು. ಆನಂತರ ಕರ್ನಾಟಕಕ್ಕೆ ಬಂದಿರಬಹುದೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಈಗಿನ ತುಮಕೂರು ಜಿಲ್ಲೆಯ ಗುಬ್ಬಿ ಇವರ ಊರು. ಮರಗುಂಡವು ಗುಬ್ಬಿ ಹೆಸರನ್ನು ಪಡೆದ ಬಗ್ಗೆ ಕಥೆ ಇದೆ. ಕಥಾಸಾಗರ, ಚತುರಾಚಾರ್ಯ ಪುರಾಣ, ಅಮರಗಣಾಧೀಶ್ವರ ಚರಿತ್ರೆಗಳಲ್ಲಿ ಈ ಶರಣರ ಪವಾಡದ ಕಥೆಗಳ ವಿವರಗಳು ಬರುತ್ತವೆ, ಶರಣರ ಕಾವ್ಯಗಳಲ್ಲಿ ಇವರ ಶಿಷ್ಯ ಗುರುಭಕ್ತನೆಂಬವರ ಹೆಸರು ಬರುತ್ತದೆ. ಮಲ್ಲಿಕಾರ್ಜುನನವರು ತನ್ನ ಶಿಷ್ಯನನ್ನು ಪರೀಕ್ಷಿಸಲು ಶೂಲವೇರು ಎನ್ನುತ್ತಾನೆ. ಅದರಂತೆ ಗುರುಭಕ್ತ ಶೂಲವನ್ನು ಏರುತ್ತಾರೆ. ಹಾಗೇ ಶಿವಪದವನ್ನು ಪಡೆಯುತ್ತಾರೆ, ಎನ್ನುವುದು ಕಾವ್ಯಗಳಿಂದ ತಿಳಿದುಬರುತ್ತದೆ. ಇವರು ಹಲವಾರು ವಚನಗಳನ್ನು ಬರೆದಿದ್ದರೂ, ಕೇವಲ ಎರಡು ಮಾತ್ರ ಲಭ್ಯವಾಗಿದೆ. ಬಸವ ಧರ್ಮದ ಉದ್ಧಾರಕ್ಕಾಗಿ ತನ್ನನ್ನು ತಾನೇ ಮುಡುಪಾಗಿಟ್ಟ ಇವರು, ಮಹಾ ಶರಣರಾಗಿ ಮೆರೆದಿದ್ದಾರೆ. ಬಸವ ಧರ್ಮದ ಪುರಾಣಗಳಲ್ಲಿ, ಕಥೆಗಳಲ್ಲಿ, ಕಾವ್ಯಗಳಲ್ಲಿ ಉಲ್ಲೇಖವಾಗಿರುವ ಇವರು, ಭವಿತನದಲ್ಲಿ ಶಿವನ ಪರಮಭಕ್ತರಾಗಿದ್ದು, ಕಲ್ಯಾಣದ ಶರಣರ ಸಮೂಹದಲ್ಲಿ ಸೇರಿ ಲಿಂಗವಂತಧರ್ಮದ ಸಂಸ್ಕಾರವನ್ನು ಪಡೆದು, ನಿರಾಕಾರ ಶಿವನನ್ನು ತಮ್ಮ ಹೃದಯದಲ್ಲಿ ಪ್ರತಿಷ್ಠಾಪಿಸಿಕೊಳ್ಳುತ್ತಾರೆ. "ಮಾಗುಡದ ಮಲ್ಲಿಕಾರ್ಜುನ" ಇವರ ವಚನದ ಅಂಕಿತವಾಗಿದೆ. ಇಷ್ಟಲಿಂಗದ ಮೂಲಕವಾಗಿ ಸಾಧಕನು ತನ್ನ ಆತ್ಮದಲ್ಲಿನ ಮಹಾಲಿಂಗದ ದರ್ಶನ ಪಡೆದು "ಮಹಾಲಿಂಗ"ವೇ ಆಗುತ್ತಾನೆ ಎಂದು ಇವರು ವಚನದಲ್ಲಿ ಉಲ್ಲೇಖಿಸಿದ್ದಾರೆ. ಕಲ್ಯಾಣದ ಶರಣ ಸಮೂಹದಲ್ಲಿದ್ದಂತಹ ಶರಣರು ತಮ್ಮ ಅಂಗವನ್ನೇ, ಲಿಂಗವಾಗಿಸಿಕೊಂಡು ಮರಣದ ಭಯವಿಲ್ಲದೆ, ನಿತ್ಯ ನೂರು ವರುಷ ತುಂಬಿದವರಂತೆ, ಬಯಲು ಮೂರ್ತಿಗಳಾಗಿ ರೂಪುಗೊಂಡಿದ್ದರು. 12 ನೇ ಶತಮಾನವನ್ನು ಕಲ್ಪಿಸಿಕೊಳ್ಳಲು ನಮ್ಮಿಂದ ಅಸಾಧ್ಯ, ಅಷ್ಟೊಂದು ಎತ್ತರಕ್ಕೇರಿದ್ದರು ಶರಣರು. ಅಂತಹ ಶರಣರಲ್ಲಿ ಅಮರಗುಂಡದ ಮಲ್ಲಿಕಾರ್ಜುನ ತಂದೆಯವರು ಒಬ್ಬರಾಗಿದ್ದಾರೆ.sdfs